November 14, 2024

Newsnap Kannada

The World at your finger tips!

food

ಲಲಿತ ಪ್ರಬಂಧ

Spread the love

ರಾಯರ ಪೇಚಿನ ಪಾಕ ಪ್ರಸಂಗ

ಆ ತಿಳೀಸಾರಿನ ಸುವಾಸನೆ ಅಡುಗೆಮನೆ ಮಾತ್ರವಲ್ಲದೆ ಇಡೀ ರಸ್ತೆಯನ್ನೇ ಆವರಿಸಿತ್ತು. ಮಧ್ಯಕುದಿ ಬೀಳುತ್ತಿದ್ದ ಸಾರನ್ನೇ ನೋಡುತ್ತ ಅನ್ಯಮನಸ್ಕತೆಯಿಂದ ನಿಂತಿದ್ದ ಸುದೇಶರಾಯರನ್ನು ಅವರ ಸಹಾಯಕ ವಿನಾಯಕ ಭಟ್ಟನ ‘ಗುರುಗಳೇ ಏನು ನೋಡ್ತಾ ನಿಂತ್ರಿ? ಸಾರು ಮಧ್ಯಕುದಿ ಬೀಳ್ತಿದೆ. ಅಂದ್ರೆ ಉಪ್ಪು ಹುಳಿ ಸಿಹಿ ಖಾರ ಎಲ್ಲವೂ ಹದವಾಗಿವೆ ಅಂತ ತಾನೇ ? ಇನ್ನೇಕೆ ಹೀಗೆ ಗರ ಬಡಿದವರ ಹಾಗೆ ನಿಂತ್ರಿ?’ ಎನ್ನುವ ಮಾತುಗಳೇ ಎಚ್ಚರಿಸಿದವು. “ಆ” ಎನ್ನುತ್ತ ಎಚ್ಚರಗೊಂಡವರೇ ಪಕ್ಕದ ಒಲೆಯ ಮೇಲೆ ಕಬ್ಬಿಣದ ಬಾಣಲೆಯಿಟ್ಟು ಅದಕ್ಕೆ ಮೂರು ದೊಡ್ಡ ಸೌಟಿನ ತುಪ್ಪ ಸುರಿದು, ತುಪ್ಪ ಕರಗುತ್ತಲೇ ಹಿಡಿ ಸಣ್ಣ ಸಾಸಿವೆ, ನಾಲ್ಕು ಚಮಚ ಜೀರಿಗೆ, ಐದು ಹುಣಸೇ ಪಚ್ಚಿಯಷ್ಟು ಹಾಲಿಂಗನ್ನು ಹಾಕಿ ಹದಕ್ಕೆ ಬಂದ ಕೂಡಲೇ ಹಂಡೆ ತುಂಬಿ ನಿಂತಿದ್ದ ಸಾರಿನ ತಲೆಯ ಮೇಲೆ ಸುರಿದರು. ಸಾರು ಚರ‍್ರ್ ಅಂತ ದೊಡ್ಡ ಸದ್ದಿನೊಂದಿಗೆ ಕುಣಿದು ಕುಳಿತಿತು.
ಸುದೇಶರಾಯರು ಇನ್ನೂ ಕೋಸಂಬರಿ ಕಲೆಸಬೇಕಿತ್ತು. ಸೀಮೇಬದನೇಕಾಯಿ ಬಜ್ಜಿ ಕರಿಯಬೇಕಿತ್ತು. ತರಕಾರಿ ಹುಳಿ, ಪಾಯಸ, ಹಪ್ಪಳ ಸಂಡಿಗೆ, ಚಿತ್ರಾನ್ನ, ಪಲ್ಯ, ಲಾಡು, ಖಾರಾ ಬೂಂದಿ, ಬಾದಾಮ್‌ಪೂರಿ ಎಲ್ಲವೂ ಎಲೆಗೆ ಬೀಳಲು ತಯಾರಾಗಿ ಕಾಯುತ್ತಿದ್ದವು. ಸುಮಾರು ಒಂದು ಸಾವಿರ ಜನರ ಊಟ. ತಪ್ಪಲೆಗಟ್ಟಲೆ ಅನ್ನ ಸಿದ್ಧವಾಗಿತ್ತು. ಕೊನೆಯ ಗಳಿಗೆಯ ಆತುರ ಇದ್ದದ್ದೇ. ಮಧ್ಯ ಮಧ್ಯ ಸುದೇಶರಾಯರು ಟವಲಿನಿಂದ ಮುಖ ಒರೆಸಿಕೊಂಡು ಒಮ್ಮೆ ಸಾರನ್ನೂ, ಒಮ್ಮೆ ಹುಳಿಯನ್ನೂ, ಮತ್ತೊಮ್ಮೆ ಪಾಯಸವನ್ನೂ, ಮಗದೊಮ್ಮೆ ಚಿತ್ರಾನ್ನವನ್ನು ಬಾಯಿಗೆ ಎಸೆದುಕೊಳ್ಳುತ್ತಿದ್ದರು.
ವಿನಾಯಕನಿಗೆ ಅದೇನೋ ಅಚ್ಚರಿ. ಸುದೇಶರಾಯರು ಎಂದೂ ಹೀಗೆ ಆಡಿದವರಲ್ಲ. ಒಮ್ಮೆ ರುಚಿ ನೋಡಿ ಹದ ಮಾಡಿದರಾಯಿತು. ಮತ್ತೆ ಮತ್ತೆ ನೋಡುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ಇಂದೇಕೆ ಹೀಗೆ ಹಸಿದು ಬಸವಳಿದ ಹೊಟ್ಟೆಗೆ ತೂತುಕಾಸಿನ ಸಾಂಬಾರ್ ಎನ್ನುವ ಹಾಗೆ ಆಗ್ಗಗ್ಗೆ ತಿನ್ನುತ್ತಿದ್ದಾರಲ್ಲಾ ಎಂದು ಕುತೂಹಲ. ತಡೆಯಲಾರದೆ ‘ಗುರುಗಳೇ ಇವತ್ಯಾಕೆ ಹೀಗೆ ವಿಚಿತ್ರವಾಗಿ ಆಡ್ತಿದೀರ? ಎಂದೂ ಅಡುಗೆ ತಿಂಡಿ ಕಾಣದವರ ಹಾಗೆ?’ ಎಂದು ಕೇಳಿದ. ಇದು ವಿನಾಯಕನಿಗೆ ಮಾತ್ರವಲ್ಲ, ಸುದೇಶರಾಯರ ಅಡುಗೆ ಸಹಾಯಕರಾದ ಸುಬ್ಬ, ಗುಂಡ, ಪುಟ್ಟನಿಗೂ ಅಚ್ಚರಿಯೇ. ಅವರೆಲ್ಲ ಬಿಟ್ಟಕಣ್ಣು ಬಿಟ್ಟ ಹಾಗೆ ನಿಂತು ನೋಡುತ್ತಿದ್ದರು. ವಿನಾಯಕ ಕೇಳಿಯೇಬಿಟ್ಟ.
ಸುದೇಶರಾಯರ ಕಣ್ಮುಂದೆ ಈಗ್ಗೆ ಮೂರು ದಿನಗಳ ಹಿಂದೆ ನಡೆದ ಚಿತ್ರ ಹಾದುಹೋಯಿತು. ಒಂದು ತಿಂಗಳ ಹಿಂದೆ ಅವರ ವಠಾರದ ಮನೆಗೆ ಕೈಗೆ ಕಡಗ, ಕತ್ತಿನಲ್ಲಿ ಬಾವಿ ಹಗ್ಗದಂಥ ಚಿನ್ನದ ಚೈನು, ಕೈಯಲ್ಲಿ ಸೈಕಲ್ ಚೈನಿನಂಥ ಬಂಗಾರದ ಬ್ರೇಸ್‌ಲೇಟ್, ಎಂಟು ಬೆರಳಿಗೆ ಉಂಗುರ ಹಾಕಿದ್ದ ಒಬ್ಬ ಭಾರೀ ಆಳು ಬಂದ. ‘ಸುದೇಶರಾಯರ ಮನೆ ಇದೇನಾ? ಅವುö್ರ ಮನೇಲಿ ಇದಾರಾ?’ ಅಂತ ಜಬರ್‌ದಸ್ತಿನಿಂದ ಕೇಳಿದ. ರಾಯರ ಪತ್ನಿ ಜಾನಕಮ್ಮನವರು ನೋಡಿಯೇ ಬೆದರಿ ‘ಹೂಂ ಇದಾರೆ ಕೂತ್ಕೊಳಿ ಕರೀತೀನಿ’ ಅಂತ ಇದ್ದ ಮೂರು ಮರದ ಚೇರುಗಳಲ್ಲಿ ಒಂದನ್ನು ತೋರಿಸಿದರು.
ಸುದೇಶರಾಯರು ಬಂದವರೇ ಕೈ ಮುಗಿದು ‘ಹೇಳಿ ಯಜಮಾನ್ರೇ ಏನಾಗ್ಬೇಕಿತ್ತು?’ ಎಂದರು. ಅದಕ್ಕೆ ಆ ಆಸಾಮಿ ‘ನನ್ನ ಹೆಸರು ಮಹದೇವ. ಮುಂದಿನ ತಿಂಗಳು ಐದನೇ ತಾರೀಖು ನಮ್ಮ ಗೃಹಪ್ರವೇಶ. ಸಾವಿರ ಜನಕ್ಕೆ ಊಟ ಆಗ್ಬೇಕು. ನಿಮ್ಮ ಕೈರುಚಿ ಚೆನ್ನಾಗಿದ್ಯಂತೆ. ಅದಕ್ಕೇ ದೊಡ್ಡ ದೊಡ್ಡ ಕಾಂಟ್ರಾಕ್ಟರುಗಳನ್ನು ಬಿಟ್ಟು ನಿಮ್ಮ ಮನೆಗೆ ಬಂದಿದೀನಿ. ನೋಡೋಣ ಅಂತ. ಅಡುಗೆ ಚೆನ್ನಾಗಿರ್ಬೇಕು. ಡೇಟ್ ಗುರುತು ಮಾಡಿಕೊಳ್ಳಿ. ಕೊಳ್ಳಿ ಅಡ್ವಾನ್ಸ್. ನಮ್ಮನೆಗೆ ಬನ್ನಿ ನನ್ನ ಹೆಂಡ್ತಿ ಏನೇನು ಅಡುಗೆ ಬೇಕು ಅಂತ ಹೇಳ್ತಾಳೆ’ ಅಂತ ಹೇಳಿ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಹೊರಟ.
ಸುದೇಶರಾಯರಿಗೂ ಖುಷಿ. ಸದಾ ನೂರಿನ್ನೂರು ಜನ ಅಥವಾ ಐನೂರು ಜನರಿಗೆ ಅಡುಗೆ ಮಾಡುತ್ತಿದ್ದ ಅವರಿಗೆ ಸಾವಿರ ಜನರ ಊಟ ಎಂದರೆ ಸ್ವಲ್ಪ ಹಣ ಉಳಿಯುತ್ತಲ್ಲಾ ಮಗನ ಓದಿಗೆ ಅಂತ. ಇದಾಗಿ ಮತ್ತೆ ರಾಯರು ಅವರ ಮನೆಗೆ ಹೋಗಿ ಬಂದದ್ದಾಯ್ತು. ಮೆನು ಸಿದ್ಧವಾಯ್ತು. ರಾಯರು ಸಾಮಾನೆಲ್ಲವನ್ನೂ ಮನೆಗೆ ತಂದು ಇಳಿಸಿಕೊಂಡಿದ್ದಾಯ್ತು. ಗೃಹಪ್ರವೇಶ ಇನ್ನು ಮೂರು ದಿನ ಇದೆ ಎನ್ನುವಾಗ ರಾಯರ ಮನೆಯ ಓನರ್ ಅವರ ಸ್ನೇಹಿತ ರಾಮಣ್ಣನವರು ಓನರ್ ಮನೆಗೆ ಬಂದಿದ್ದರು. ರಾಯರಿಗೆ ತಮ್ಮನ್ನು ತಾವು ಹೆಚ್ಚುಗಾರಿಕೆ ಎಂದು ಹೊಗಳಿಕೊಳ್ಳುವ ಖಯಾಲಿ. ನಾ ಮಾಡಿದ ಅಡುಗೆ ಹಾಗಿತ್ತು, ಹೀಗಿತ್ತು, ಇಷ್ಟು ಚೆನ್ನಾಗಿತ್ತು ಅಷ್ಟು ಜನ ಹೊಗಳಿ ತಿಂದು ತೇಗಿದರು ಎಂದು ಎರಡರಷ್ಟು ಹೆಚ್ಚಾಗೇ ಹೇಳಿಕೊಳ್ಳುತ್ತಿದ್ದರು. ಹೀಗೇ ಬಂದವರ ಮುಂದೆ ‘ನಾಳೆ ಶುಕ್ರವಾರ ಗೃಹಪ್ರವೇಶದ ಅಡುಗೆಗೆ ಬಂದಿದೆ. ಎಂಥಾ ದೊಡ್ಡ ಮನೆ ಅಂತೀರಾ… ಅರಮನೆ ಅನ್ನಬೇಕು ಹಾಗಿದೆ. ನನ್ ಕೈ ರುಚಿ ಚೆನ್ನಾಗಿದೆ ಅಂತ ನಮ್ಗೇ ಹೇಳಿದ್ದಾರೆ. ಸಾವಿರ ಜನರ ಊಟ, ಮನೆ ಓರ‍್ರನ್ನ ನೋಡ್ಬೇಕು ಮಹಾರಾಜ ಇದ್ದ ಹಾಗಿದ್ದಾನೆ’ ಎಂದೆಲ್ಲ ಕಥೆ ಹೇಳುತ್ತಿದ್ದರು. ರಾಮಣ್ಣನವರು ‘ಯರ‍್ರೀ ಅದೂ ಹಳ್ಳಿನೂ ಅಲ್ಲದ, ಸಿಟೀನೂ ಅಲ್ಲದ ಈ ಮಂಡ್ಯದಲ್ಲಿ ಅರಮನೆ ಕಟ್ತಾ ಇರೋದು. ನಂಗೆ ಗೊತ್ತಿಲ್ದವ್ರೇ? ಯಾವ ಏರಿಯಾ ಹೇಳಿ’ ಅಂತ ಕೇಳಿದರು. ರಾಯರು ಹೀಗೆ ಹೀಗೆ, ಇಂತಲ್ಲಿ ಎಂದು ಗುರುತು ಹೇಳಿದರು. ರಾಮಣ್ಣನವರ ಮುಖಭಾವ ಬದಲಾಗಿಹೋಯಿತು. ‘ರಾಯರೇ ಆ ಮಹದೇವ ಅಂಡರ್ ವರ್ಲ್ಡ್ ಆಸಾಮಿ. ದೊಡ್ಡ ದೊಡ್ಡ ಅಡುಗೆ ಕಂಟ್ರಾಕ್ಟರ್ ಗಳೆಲ್ಲ ಬಹುಶ: ಹೆದರಿ ಅಲ್ಲಿ ಒಪ್ಪಿದ್ದೀವಿ, ಊರಲ್ಲಿ ಇರಲ್ಲ ಅಂದಿರಬೇಕು. ಅದಕ್ಕೇ ನಿಮ್ಮನ್ನು ಹುಡುಕಿಕೊಂಡು ಬಂದಿದಾನೆ. ಅವತ್ತು ನಿಮ್ ಕೈರುಚಿ ಚೆನ್ನಾಗಿಲ್ಲ ಅಂದ್ರೆ, ನಿಮ್ಮ ಕೈಯ್ಯೇ ಕಚಕ್. ಈಗಾಗ್ಲೇ ಒಂದಿಬ್ಬರ ಬೆರಳು, ಹಸ್ತ ಎಲ್ಲಾ ಗಾಯಬ್ ಆಗಿವೆ. ಸ್ವಲ್ಪ ಹುಷಾರು’ ಎಂದುಬಿಟ್ಟರು.
ಸುದೇಶರಾಯರ ತಲೆಯ ಮೇಲೆ ಆಕಾಶ ಮಾತ್ರ ಯಾಕೆ, ಅದರ ಮೇಲೆ ದೊಡ್ಡ ಎಣ್ಣೆ ಬಾಣಲೆಯಲ್ಲಿ ಸತ್ತವರನ್ನು ಬೋಂಡದಂತೆ ಹುರಿಯುವ ನರಕವೂ ತಲೆಯ ಮೇಲೆ ಬಿದ್ದ ಹಾಗಾಯ್ತು. ‘ಅಯ್ಯೋ ನನ್ ಅದೃಷ್ಟವೇ, ಇರೋ ಒಬ್ಬ ಮಗನ್ನ ಹೇಗೋ ಕಷ್ಟಪಟ್ಟು ಓದಿಸಿ ಒಂದೊಳ್ಳೆ ಕೆಲಸಕ್ಕೆ ಸೇರಿಸಿ ದಡ ಮುಟ್ಟಿಸಿದರೆ ಬದುಕು ಸಾರ್ಥಕ ಅನ್ನೋ ಬಡತನ ನಮ್ಮದು. ಈಗ ಅದಕ್ಕೂ ಕತ್ತರಿ ಬೀಳೋ ಹಾಗಾಯ್ತಲ್ಲ’ ಅಂತ ಹಲುಬೀ ಹಲುಬೀ ಎರಡು ದಿನ ನಿದ್ದೆಗೆಟ್ಟರು. ‘ಕೊನೇ ಘಳಿಗೇಲಿ ಅಡುಗೆಗೆ ಆಗೋಲ್ಲ ಅಂದರೆ ಜೀವಾನೇ ತೆಗೀಬಹುದು. ಬೆರಳು ಹೋದ್ರೆ ಬದುಕಬಹುದು ಜೀವಾನೇ ಇಲ್ಲದಿದ್ದೆç ನನ್ ಹೆಂಡ್ತಿ ಮಗನ ಗತಿಯೇನು? ಅವರಿಗೆ ಹೇಳಿದರೆ ಘಾಬರಿ ಆಗ್ತಾರೆ ನೋಡೋಣ. ಬ್ರಾಮಣ ಜಲ್ಮದಲ್ಲಿ ಹುಟ್ಟಿದ್ದೀನಿ ದೇವರು ದಿಂಡರು ಅಂತ ಮಾಡಿದ್ದೀನಿ. ಸಾವಿರಾರು ಜನರಿಗೆ ಊಟ ಬಡಿಸಿದ್ದೀನಿ. ಮಹದೇವನಿಗೆ ಬ್ರಹ್ಮಹತ್ಯಾ ದೋಷ ಬರೋದಿದ್ರೆ ಬರ್ಲಿ. ನಾನೇನು ಮಾಡೋಕಾಗುತ್ತೆ. ಅದು ಅವನ ಕರ್ಮ’ ಎಂದು ತಮ್ಮನ್ನೇ ತಾವು ಸಮಾಧಾನಪಡಿಸಿಕೊಂಡು, ನಂಬಿದ ನಾರಸಿಂಹನ ಮೇಲೆ ಭಾರ ಹಾಕಿ ಇಂದು ಗೃಹಪ್ರವೇಶದ ಅಡುಗೆಯಲ್ಲಿ ಇದ್ದಾರೆ.

ಗೃಹಪ್ರವೇಶ ಮುಗಿಯುತ್ತಾ ಬಂದಿತ್ತು. ಇನ್ನೇನು ಎಲೆ ಹಾಕುವ ಹೊತ್ತು, ಇವರಿಗೆ ಕಥೆ ಹೇಳುತ್ತಾ ಕೂರುವುದಕ್ಕಾಗುತ್ಯೇ? ಜೊತೆಗೆ ಈ ವಿಷಯ ಗೊತ್ತಾದರೆ ಸಹಾಯಕರು ಓಡಿಹೋದರೆ ನನ್ನ ಗತಿ ಏನು ಎಂದು ಯೋಚಿಸಿ ‘ವಿನೂ , ಗುಂಡ, ಸುಬ್ಬ, ಪುಟ್ಟಾ ನಡರ‍್ರೋ ಎಲೆ ಹಾಕಿಬನ್ನಿ. ನಿಧಾನವಾಗಿ ನಾವು ಮಾತಾಡೋಣ. ಬನ್ರೋ. ಇದೆಲ್ಲಾ ಮುಗೀಲಿ ಕಥೆ ಹೇಳ್ತೀನಿ’ ಅಂತ ಕರೆದರು. ಸರಿ ಒಂದಲ್ಲಾ ಎರಡಲ್ಲಾ ಅಂತ ಐದು ಪಂಕ್ತಿ ಊಟ ಆಯ್ತು. ಮನೆಯ ಯಜಮಾನ ಬಂದು ‘ಸಾವಿರಕ್ಕೂ ಜಾಸ್ತಿ ಜನ ಆಗಿದ್ದಾರೆ. ಇನ್ನೂ ಐನೂರು ಜನ ನಮ್ ಕಡೆಯವುö್ರ ಬರ್ತೀವಿ ಅಂತ ಫೋನ್ ಮಾಡಿದ್ದಾರೆ. ರೆಡಿಮಾಡಿ’ ಎಂದ. ಮಹದೇವನ ಸಮಾಧಾನದ ಮುಖ ನೋಡಿ ದಾರಿಗೆ ಬಂದಿದ್ದ ಅರೆಜೀವ ಮತ್ತೆ ಕುಯ್ಯೋ ರ‍್ರೋ ಅಂತು. ‘ಅಯ್ಯೋ ಕರ್ಮವೇ ಈಗ ಸಡನ್ ಆಗಿ ಹೇಳಿದ್ರೆ ಐನೂರು ಜನರಿಗೆ ಹೇಗಪ್ಪಾ ಮಾಡೋದು. ನೂರು, ನೂರೈವತ್ತು ಜನರಿಗೆ ಆದ್ರೆ ಹೇಗೋ ಹೊಂದಿಸಬಹುದು. ಎರಡು ದಿನನಿಂದ ಮಾಡಿದ್ದ ತಯಾರಿಯನ್ನು ಇನ್ನೊಂದು ಗಂಟೆಯಲ್ಲಿ ಹೇಗೆ ಮಾಡೋದು. ಸಾರು, ಹುಳಿಯೇನೋ ಧಂಡಿಯಾಗಿದೆ. ಮಿಕ್ಕಿದ್ದು??’ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತರು. ಇವರನ್ನೇ ನೋಡುತ್ತಾ ನಿಂತಿದ್ದ ಮಹದೇವ ದೊಡ್ಡ ದನಿಯಲ್ಲಿ ‘ರಾಯರೇ ಎರಡು ಮೂಟೆ ಅಕ್ಕಿ ತರಿಸಿದ್ದೀನಿ ಅನ್ನ ಮಾಡಿ. ಬೇಕರಿಯಿಂದ ಲಾಡು, ಮೊಸರು ತರಿಸ್ತೀನಿ. ಒಂದಿಷ್ಟು ಜನರಿಗೆ ಸಾರು, ಇಷ್ಟು ಹುಳಿ ಬಡಿಸಿ. ಸಾಧ್ಯ ಆದ್ರೆ ಒಂದು ಚಿತ್ರಾನ್ನ ಕಲೆಸಿ. ಮಾವಿನಕಾಯಿ, ಮೆಣಸಿನಕಾಯಿ ಎಲ್ಲಾ ತರಿಸ್ತಾ ಇದೀನಿ. ಇನ್ನೂ ಒಂದು ಗಂಟೆ ಇದ್ಯಲ್ಲಾ’ ಅಂದದ್ದೇ ಹೊರಟ. ಬದುಕಿದೆಯಾ ಬಡಜೀವವೇ ಅಂತ ದಡ ಬಡ ಅಂತ ಅನ್ನ ಬಸಿದು, ಅಷ್ಟರಲ್ಲಿ ಚಿತ್ರಾನ್ನದ ಒಗ್ಗರಣೆ ಮಾಡಿ ಜನರೆಲ್ಲ ಬರುವ ಹೊತ್ತಿಗೆ ಅಡುಗೆ ಸಿದ್ಧವಾಯ್ತು. ಮಹದೇವ ಬಂದವನೇ ‘ಆಯ್ತೇ ಎಲ್ಲಾ?’ ಎಂದು ಕೇಳಿ ‘ನೀವೂ ಸುಸ್ತಾಗಿದ್ದೀರ. ಇನ್ನೆಲ್ಲ ನಮ್ಮವರೇ. ನಾವೇ ಬಡಿಸಿಕೊಳ್ತೀವಿ. ನೀವು ಹೊರಡಿ.’ ಅಂದ. ಇದನ್ನು ಕೇಳಿ ಸುದೇಶರಾಯರ ಜೀವ ನರಕದಿಂದ ಸ್ವರ್ಗಕ್ಕೆ ಜಾರಿದಂದಾಯ್ತು. ‘ನನ್ನ ಹೆಂಡತಿ ಅದ್ಯಾವ ಜಲ್ಮದಲ್ಲಿ ದೇವರಿಗೆ ಸಂಪಿಗೆ ಮಲ್ಲಿಗೆ ಜಾಜಿಗಳಿಂದ ಪೂಜೆ ಮಾಡಿದ್ದಳೋ ಅವಳ ಮಾಂಗಲ್ಯ ಉಳಿಯಿತು’ ಎಂದುಕೊಂಡು ತಮ್ಮ ಪಾಕಪರಿಕರಗಳನ್ನು ಕಟ್ಟಿಕೊಂಡರು. ತಮ್ಮ ಸಹಾಯಕರಿಗೆ ‘ಬನ್ರೋ ಬೇಗ ಬೇಗ’ ಎಂದು ಅವಸರ ಮಾಡಿದರು. ಸಾವಧಾನ ಸ್ವಭಾವದ ರಾಯರೇಕೆ ಇವತ್ತು ವಿಚಿತ್ರವಾಗಿ ಆಡ್ತಿದಾರೆ ಅಂತ ಅವರ ಸಹಾಯಕರಿಗೆ ಇನ್ನೂ ಗೊಂದಲ. ಹೊರಡುವಾಗ ಮನೆಯ ಯಜಮಾನನಿಗೆ ಹೇಳಿ ಹೋಗುವುದು ವಾಡಿಕೆ. ಇಂದು ಹೇಳಬೇಕೋ ಬೇಡವೋ ಎಂಬ ದ್ವಂದ್ವ. ‘ಓ ಇನ್ನೂ ಅವರು ಪೂರ್ತಿ ದುಡ್ಡು ಕೊಟ್ಟಿಲ್ಲ. ಹೇಳಲೇಬೇಕಲ್ಲಾ. ಜೀವ ಉಳೀತು ನಿಜ. ಆದರೆ ದುಡ್ಡು ಬರದೇ ಹೋದರೆ ಅರ್ಧ ಜೀವ ಹೋಗುತ್ತಲ್ಲಾ. ದಿನಸಿ ಅಂಗಡಿಯವನಿಗೆ ಬಾಕಿ ಇದೆ, ಸಹಾಯಕರಿಗೆ ಇನ್ನೂ ಕೊಟ್ಟಿಲ್ಲ. ಹೇಳದೇ ಕೇಳದೇ ಓಡಿಹೋಗಲು ಸಾಧ್ಯವೇ?’ ಎಂದು ನಿಧಾನವಾಗಿ ‘ಸ್ವಾಮೀ, ನಾವಿನ್ನು ಹೊರಡಬಹುದೇ?’ ಎಂದರು. ಮಹದೇವ ‘ರಾಯರೇ ಬಂದವರೆಲ್ಲಾ ಊಟ ಚೆನ್ನಾಗಿದೆ ಅಂತ ಹೊಡೆದರು. ಒಂದು ನಿಮಿಷ ಕೂತ್ಕೊಳಿ’ ಎಂದು ಹೇಳಿ ತಟ್ಟೆಯ ತುಂಬ ಹಣ್ಣು ತುಂಬಿ, ಪಂಚೆ ಶಲ್ಯ ಸೀರೆ ಇರಿಸಿ, ಬಾಕಿ ಉಳಿದಿದ್ದ ಹಣವನ್ನೂ , ಜೊತೆಗೊ ಒಂದಿಷ್ಟು ಹೆಚ್ಚಿನ ಹಣವನ್ನೂ ಕೊಟ್ಟು ‘ರಾಯರೇ ನನ್ನಿಂದ ಏನಾದ್ರೂ ಕೆಲಸ ಆಗಬೇಕಿದ್ರೆ ಹೇಳಿ. ಯಾವೋನಾದ್ರೂ ನಿಮ್ಮ ತಂಟೆಗೆ ಬಂದ್ರೆ ಹೇಳಿ, ಕಚಕ್ ಅನ್ನಿಸಿಬಿಡ್ತೀನಿ. ನಾನೇನು ಪುಡಿ ರೌಡೀನಾ? ನಂದೇ ಒಂದು ದೊಡ್ಡ ಗ್ಯಾಂಗಿದೆ. ನೀವೇನು ಹೆದರಬೇಡಿ’ ಎಂದ.
‘ನಿನ್ನಿಂದ ನಾನು ಕಚಕ್ ಆಗ್ಲಿಲ್ಲವಲ್ಲಾ ಅದೇ ನನ್ನ ಪುಣ್ಯ.’ ಎಂದು ಮನದಲ್ಲೇ ಅಂದುಕೊಂಡು ‘ನನಗ್ಯಾರು ತಂಟೆ ಕೊಡ್ತಾರೆ ಸ್ವಾಮೀ? ಬಡವ ನೀ ಮಡಗ್ದಂಗಿರು ಅಂತ ಅಡುಗೆ ಪಡುಗೆ ಮಾಡ್ಕೊಂಡು ಬದುಕಿಕೊಳ್ತೀನಿ’ ಎಂದು ಹೇಳಿ ಹೊರಟರು.
ಇದಾಗಿ ಒಂದು ವಾರಕ್ಕೆ ಮತ್ತೆ ಮಹದೇವನಿಂದ ರಾಯರಿಗೆ ಬುಲಾವ್. ‘ಏನು ಗ್ರಹಚಾರ ಕಾದಿದ್ಯೋ ನಂಗೆ, ಮತ್ತೆ ಮತ್ತೆ ಈ ಜೀವಾನ ಒತ್ತೆ ಇಡ್ತೀಯಲ್ಲೋ ದೇವಾ’ ಎಂದುಕೊಳ್ಳುತ್ತಲೇ ಅವರ ಮನೆಗೆ ಹೋದರು. ‘ರಾಯರೇ ಮುಂದಿನ ವಾರ ನಮ್ಮ ಪಟ್ಟಲದಮ್ಮನ ದೇವಸ್ಥಾನದ ಕಳಶ ಸ್ಥಾಪನೆ. ಹತ್ತು ಸಾವಿರ ಜನರಿಗೆ ಊಟ. ಅವತ್ತು ಮಾಡಿದ್ರಲ್ಲಾ. ಅದೇ ಥರ ಚಿತ್ರಾನ್ನ, ಸಾರು ಅನ್ನ ಮಜ್ಜಿಗೆ ಮಾಡಿ ಸಾಕು.’ ಎಂದು ಹೇಳಿ ಕೈತುಂಬಾ ಹಣ ಕೊಟ್ಟು ಕಳಿಸಿದ.
ಒಮ್ಮೆ ಯಾವುದೋ ಅಂಗಡಿಯಲ್ಲಿ ರಾಯರು ಮಹದೇವ ಭೇಟಿಯಾದಾಗ ಅದ್ಯಾವುದೋ ತಗಾದೆಯಾಗಿ ನಿಂತಿದ್ದ ರಾಯರ ನೆಂಟರ ಆಸ್ತಿ ವಿಚಾರ ವಿನಿಮಯವಾಗಿ ಅದೂ ಸುಖಾಂತವಾಯ್ತು.
ಈಗ ಕಂಡ ಕಂಡವರೆಲ್ಲ ಸುದೇಶರಾಯರ ಬೆನ್ನು ಬಿದ್ದಿದ್ದಾರೆ… ನಿಮ್ಗೆ ರೌಡಿ ಸ್ನೇಹ ಇದ್ಯಂತಲ್ಲಾ.. ನಂಗೆ ಆ ಕೆಲ್ಸ ಮಾಡಿಸಿಕೊಡಿ, ಈ ಕೆಲ್ಸ ಮಾಡಿಸಿಕೊಡಿ.. ಅಂತ. ಮಳೆ ನಿಂತರೂ ಮರದ ಹನಿ ಅಷ್ಟು ಬೇಗ ನಿಲ್ಲುತ್ಯೇ?
ಅಂಥವರಿಂದ ಎಷ್ಟು ದೂರ ಇದ್ದರೆ ಅಷ್ಟೂಒಳ್ಳೆಯದು ಎಂದು ನಂಬಿ ಸುಮ್ಮನಿದ್ದರೂ ರಾಯರಿಗೆ ಇನ್ನೂ ಪೇಚು ನಿಂತಿಲ್ಲ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
Copyright © All rights reserved Newsnap | Newsever by AF themes.
error: Content is protected !!