January 1, 2025

Newsnap Kannada

The World at your finger tips!

deepa1

ದಾರಿ ದೀಪ 19

Spread the love

ವಿಶ್ವ ಇತಿಹಾಸದ ಪ್ರಬಲ ಅಸ್ತ್ರಗಳು ಮತ್ತು ಮಾರಕ ರೋಗಗಳು

ದೇವರು – ಧರ್ಮ – ದೇಶಭಕ್ತಿ……

ಈ ಮೂರು ಸಾಮೂಹಿಕ ನೆಲೆಯಲ್ಲಿ ಅತ್ಯಂತ ತೀವ್ರ ಭಾವನಾತ್ಮಕ ಉದ್ವೇಗ ಉಂಟು ಮಾಡುವ ವಿಷಯಗಳು.
ಇಲ್ಲಿ ನಂಬಿಕೆ ಮತ್ತು ಭಾವನೆಗಳದೇ ಮೇಲಾಟ. ಸತ್ಯ ಮತ್ತು ವಾಸ್ತವ ಯಾವಾಗಲೂ ಹಿನ್ನೆಲೆಗೆ ಸರಿಯುತ್ತದೆ.

ದೇವರೆಂಬುದು ಒಂದು ಅಗೋಚರ ಶಕ್ತಿ ಅದು ನಮ್ಮನ್ನೆಲ್ಲ ಕಾಯುತ್ತಿದೆ ಎಂಬ ನಂಬಿಕೆ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಇದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇಕಡ 90% ಕ್ಕೂ ಹೆಚ್ಚು ಜನ ದೇವರ ಅಸ್ತಿತ್ವವನ್ನು ಬೇರೆ ಬೇರೆ ರೂಪದಲ್ಲಿ ಒಪ್ಪಿದ್ದಾರೆ. ಎಲ್ಲರೂ ನಮ್ಮ ದೇವರೇ ಶ್ರೇಷ್ಠ ಮತ್ತು ಪ್ರಭಾವಶಾಲಿ ಎಂದೇ ನಂಬಿ ಅದರ ಉಳಿವಿಗಾಗಿ ಯಾವ ಹಂತದ ಘರ್ಷಣೆಗೂ ಸಿದ್ಧರಿರುತ್ತಾರೆ.

ಇದರ ಮುಂದುವರಿದ ಭಾಗವೇ ಧರ್ಮ ( ಮತ ) ಇದು ಜೀವನ ಶೈಲಿಯ ವಿಧಾನ. ಧರ್ಮದಲ್ಲಿ ಸೂಚಿಸಿರುವ ರೀತಿಯಲ್ಲೇ ಮನುಷ್ಯ ಜೀವಿಸಬೇಕು. ಅದೇ ಬದುಕಿನ ಸಾರ್ಥಕತೆ ಎಂದು ನಂಬಲಾಗಿದೆ. ಇಲ್ಲಿಯೂ ನಮ್ಮ ಧರ್ಮವೇ ಶ್ರೇಷ್ಠ ಎಂದು ಭಾವಿಸಿರುವ ಜನ ಅದರ ಉಳಿವಿಗಾಗಿ ಸಂಘರ್ಷ ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.

ಇನ್ನು ದೇಶಭಕ್ತಿ.ಇದು ಭೂ ಪ್ರದೇಶಕ್ಕೆ ಸಂಬಂಧಿಸಿದ್ದು. ಅದನ್ನು ಈಗ ದೇಶ ಎಂದು ಕರೆಯಲಾಗುತ್ತಿದೆ. ಎಲ್ಲರೂ ನಮ್ಮ ದೇಶವೇ ಶ್ರೇಷ್ಠ ಮತ್ತು ಪವಿತ್ರ ಎಂದು ನಂಬುತ್ತಾರೆ. ಅದಕ್ಕೆ ಬೇರೆಯವರಿಂದ ಸ್ವಲ್ಪ ಧಕ್ಕೆಯಾದರೂ ಎಂತಹ ಪ್ರಾಣತ್ಯಾಗಕ್ಕೂ ಸಿದ್ಧರಾಗುತ್ತಾರೆ.

ವಿಶ್ವ ಇತಿಹಾಸದಲ್ಲಿ ಹರಿದಿರಬಹುದಾದ ರಕ್ತ ಬಹುತೇಕ ಈ ಮೂರು ಕಾರಣಗಳ ಭಿನ್ನಾಭಿಪ್ರಾಯಗಳಿಂದಲೇ ಮತ್ತು ಮುಂದೆ ಮಾನವ ಸಂತತಿ ನಾಶವಾಗುವ ಸಾಧ್ಯತೆ ಇರುವುದು ಈ ಅಂಶಗಳಿಂದಲೇ.

ವಿಪರ್ಯಾಸ ನೋಡಿ. ಸೃಷ್ಟಿಯಲ್ಲಿ ಈ ಮೂರು ಅಂಶಗಳು ಮೊದಲಿಗೆ ಅಸ್ತಿತ್ವದಲ್ಲೇ ಇರಲಿಲ್ಲ. ಇದೆಲ್ಲ ಮಾನವನ ಕೃತಕ ನಿರ್ಮಿತ. ಅದೂ ಕೂಡ ಮನುಷ್ಯ ತನ್ನ ಜೀವನಮಟ್ಟ ಸುಧಾರಣೆಗೆ ಮತ್ತು ಸುಖ ನೆಮ್ಮದಿಯ ಬದುಕಿಗಾಗಿ ಸೃಷ್ಟಿಸಿಕೊಂಡ ಈ ವ್ಯವಸ್ಥೆಯೇ ಇಂದು ಆತನ ವಿನಾಶಕ್ಕೆ ಕಾರಣವಾಗುತ್ತಿದೆ.
ಹೇಗೆ ಮಾನವ ತನ್ನ ರಕ್ಷಣೆಗಾಗಿ ಸಂಶೋಧಿಸಿದ ಬಂದೂಕು ಬಾಂಬುಗಳು ಹೊಡೆತಕ್ಕೆ ಈಗ ತಾನೇ ಹತನಾಗುತ್ತಿದ್ದಾನೋ Exactly ಹಾಗೆ.

ಸಾಮಾನ್ಯರಾದ ನಮ್ಮ ಜವಾಬ್ದಾರಿ ಈ ವಿಷಯಗಳಲ್ಲಿ ಹೆಚ್ಚೇನು ಇರುವುದಿಲ್ಲ. ಆದರೆ ಸಂಯಮ, ವಿವೇಚನೆ, ಪ್ರೀತಿ, ವಿಶ್ವಾಸ, ಮಾನವೀಯತೆ ಸಾಮೂಹಿಕವಾಗಿ ಬೆಳೆಸಿಕೊಂಡರೆ ಇನ್ನೊಂದಿಷ್ಟು ವರ್ಷ ನೆಮ್ಮದಿಯಾಗಿ ಬದುಕಬಹುದು ಮತ್ತು ನಮ್ಮ ಮುಂದಿನ ಪೀಳಿಗೆಗೆ ಒಂದಷ್ಟು ಒಳ್ಳೆಯ ದಾರಿ ತೋರಬಹುದು. ಇಲ್ಲದಿದ್ದರೆ ದ್ವೇಷ ಆಕ್ರೋಶ ಸೇಡು ಪರಾಕ್ರಮ ಮೆರೆಯಲು ಪ್ರಯತ್ನಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ.

ಕಾಲದ ಅಂತರಂಗದಲ್ಲಿ ಏನೇನು ಅಡಗಿದೆಯೋ…….

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!