ಡಾ.ಶ್ರೀರಾಮ ಭಟ್ಟ
ಕ್ಷುದ್ರ ಮನ ಮತ್ತು ಉದಾರ ಚರಿತ
ಅಯಂ ಬಂಧುಃ ಅಯಂ ನೇತಿ ಗಣನಾ ಲಘುಚೇತಸಾಮ್
ಉದಾರಚರಿತಾನಾಂ ತು ವಸುಧೈವಕುಟುಂಬಕಮ್
‘ಇವ ನಮ್ಮವ, ಅವ ಬೇರೆಯವ’ ಎಂದೆಣಿಸುವವರು ಕ್ಷುದ್ರಮನದವರು. ಉದಾರ ಮನೋಭಾವ, ಉದಾತ್ತ ನಡತೆ ಉಳ್ಳವರಿಗೆ ವಿಶ್ವವೇ ಕುಟುಂಬವಾಗಿರುವುದು (ವಸುಧಾ ಏವ ಕುಟುಂಬಕಮ್).
‘ವಸುಧೈವ ಕುಟುಂಬಕಮ್’ ಚಿರಪರಿಚಿತವಾದ ಮಾತು. ದೇಶ ಭಾಷೆ ಮತಧರ್ಮಗಳ ಎಲ್ಲೆ ಮೀರಿ ಪರಿಚಿತವಾದ ಈ ನುಡಿಗಟ್ಟಿನ ಹಿಂದಿನ ಚಿಂತನೆ ಅಥವಾ ತರ್ಕ ಅಷ್ಟೇ ಅಪರಿಚಿತ. ವ್ಯಕ್ತಿತ್ವದ ಕ್ಷುದ್ರತೆ ಮತ್ತು ಉದಾತ್ತತೆಗಳ ಅಳತೆಗೋಲನ್ನು ಸರಳ ಮಾತುಗಳಲ್ಲಿ ಹಿಡಿಯುತ್ತಲೇ ಅದನ್ನು ಹರಳುಗಟ್ಟಿಸಿದ ಅಪರೂಪದ ನುಡಿ ವಸುಧೈವ ಕುಟುಂಬಕಮ್. ಇದು ತಂತ್ರಜ್ಞಾನ ಮತ್ತು ವ್ಯಾವಹಾರಿಕ ನಡೆಯ ಗ್ಲೋಬಲೈಝೇ಼ಶನ್ ಅಲ್ಲ; ಭಾವಪ್ರಪಂಚದ ವಿಶ್ವಮಾನವ ಪ್ರಜ್ಞೆ.
ಈ ಮಾತು ಮೊದಲಿಗೆ ಮಹೋಪನಿಷತ್ತಿನಲ್ಲಿ ಕಾಣುತ್ತದೆ. ಮಹಾಭಾರತವು ಮಹೋಪನಿಷತ್ತನ್ನು ಸ್ಮರಿಸಿದ್ದರಿಂದ ಅದರ ಪ್ರಾಚೀನತೆ ಸ್ಪಷ್ಟವಾಗಿದೆ. ಮುಖ್ಯವಾಗಿ ಇದು ಅಧ್ಯಾತ್ಮಿಕ ಕ್ಷೇತ್ರಕ್ಕೆ ಅನ್ವಯಿಸಿದ ಮಾತು. ಮಹೋಪನಿಷತ್ತಿನ ಮಾತಿನಲ್ಲಿ ಇದು ಕಾಮನೆಗಳಿಲ್ಲದ ಆಲಸ್ಯವಿಲ್ಲದ ನಿರ್ಮಲವಾದ ಬ್ರಾಹ್ಮೀಸ್ಥಿತಿ:
‘ಏಷಾ ಬ್ರಾಹ್ಮೀಸ್ಥಿತಿಃ ಸ್ವಚ್ಛಾ ನಿಷ್ಕಾಮಾ ವಿಗತಾಮಯಾ.’ ಈ ಸಂದರ್ಭದಲ್ಲಿ ಇಹದ ಬದುಕಿಗೂ ಅತ್ಯಗತ್ಯವಾದ ಉದಾತ್ತ ಚಿತ್ರವನ್ನು ನೀಡಿದೆ. ಜಗತ್ತು ಜಡ ಮತ್ತು ಚೈತನ್ಯಗಳ ಸಂಗಮ. ಪರಮ ಚೈತನ್ಯದ ಅಪರಿಹಾರ್ಯ ಸಂಸರ್ಗದಿAದಾಗಿ ಜಡಪ್ರಪಂಚವೂ ಚೇತನಶೀಲವಾಗಿ ತೋರುತ್ತದೆ. ಈ ಬಗೆಯ ಸಾಕ್ಷಾತ್ಕಾರ ಉಳ್ಳವನು ಜಡದಲ್ಲೂ ಚೈತನ್ಯವನ್ನು ಅನುಭವಿಸುವನು. ತನ್ನಲ್ಲಿ ಎಲ್ಲವನ್ನೂ ಎಲ್ಲದರಲ್ಲಿ ತನ್ನನ್ನೂ ಕಾಣುವನು. ಆತ ವರ್ಣ ಜಾತಿ ಆಶ್ರಮ ಪಂಥ ಪಂಗಡ ಭಾಷೆ ಮತಧರ್ಮ ಎಲ್ಲವನ್ನೂ ಮೀರಿರುತ್ತಾನೆ. ಆತನದು ಭೇದಬುದ್ಧಿಯಲ್ಲ; ಅಭೇದಬುದ್ಧಿ. ಅಂತರಂಗದಲ್ಲಿ ಆಸೆಗಳಿಲ್ಲದವನಾಗಿಯೂ ಬಹಿರಂಗದಲ್ಲಿ ಲೋಕಹಿತಕ್ಕಾಗಿ ಇತರರಂತೆ ಕ್ರಿಯಾಶೀಲನಾಗಿ ಪರಿಶುದ್ಧ ನಡೆ ನುಡಿಗಳನ್ನು ಇಟ್ಟುಕೊಂಡವನು ಉದಾರ ಎಂದು ಮಹೋಪನಿಷತ್ತು ಉದಾರತೆಯನ್ನು ನಿರ್ವಚಿಸಿದೆ.
ಉದಾರತೆಗೆ ಹಿನ್ನೆಲೆಯಾದ ‘ಅಭ್ಯಾಸ’ವನ್ನೂ ಉಪನಿಷತ್ತು ಸೂಚಿಸಿದೆ. ಸಮತೆಯೇ ಆ ಅಭ್ಯಾಸ. ಮಾನಸಿಕ ದ್ವಂದ್ವಗಳಲ್ಲಿ ಸಮನಾಗಿರುವುದು ಅಂತರಂಗದ ಸಮಭಾವ. ಎಲ್ಲರನ್ನೂ ಎಲ್ಲವನ್ನೂ ಸಮನಾಗಿ ಕಾಣುವುದು ಬಹಿರಂಗದ ಸಮದರ್ಶನ. ಸಮಭಾವ ಮತ್ತು ಸಮದರ್ಶನ ಎರಡೂ ಸೇರಿ ಸಮತೆ. ಸಮತೆ ಇಲ್ಲದೆ ಮಹೋಪನಿಷತ್ತು ಹೇಳುವ ಉದಾರತೆ ಸಂಭವಿಸದು. ಲಘುಚೇತಸ್(ಸಣ್ಣ ಮನಸ್ಸು) ಮತ್ತು ಉದಾರ ಚರಿತ(ಉದಾತ್ತ ನಡವಳಿಕೆ) ಪದಗಳ ಆಯ್ಕೆಯೂ ಸೋದ್ದಿಷ್ಟವಾಗಿದೆ ಎನ್ನುವುದನ್ನು ಗಮನಿಸಬಹುದು.
ಸಾಹಿತ್ಯ ಪ್ರಪಂಚವೂ ‘ವಸುಧೈವ ಕುಟುಂಬಕ’ಕ್ಕೆ ತುಂಬ ಆಪ್ತವಾಗಿ ಸ್ಪಂದಿಸಿದೆ. ಪಂಚತಂತ್ರ, ಹಿತೋಪದೇಶ, ವಿಕ್ರಮಚರಿತ, ಜೈನ ಸುಭಾಷಿತ, ವಲ್ಲಭದೇವನ ಸುಭಾಷಿತಾವಲಿಗಳಲ್ಲಿ ಈ ಶ್ಲೋಕವನ್ನು ಇಡಿಯಾಗಿ ಬಳಸಲಾಗಿದೆ. ‘ಪರಮ ತಪೋನಿಧಾನ ವಸುಧೈಕ ಕುಡುಂಬಕ’ ಎನ್ನುವ ಒಕ್ಕಣೆ ಕನ್ನಡ ಶಾಸನವೊಂದರಲ್ಲಿ ಕಾಣುತ್ತದೆ. ಜೈನ ತೀರ್ಥಂಕರನಾದ ಶಾಂತಿನಾಥ-ಜಿನಚಂದ್ರ ಮುನಿಯನ್ನು ನೆನಪಾಗಿಸಿಕೊಂಡು ಪೊನ್ನನು ರಚಿಸಿದ ಆಗಮಿಕ ಕಾವ್ಯ ‘ಶಾಂತಿಪುರಾಣ’ದಲ್ಲಿ ವಸುಧೈಕ ಕುಟುಂಬಕ ಎನ್ನುವುದನ್ನು ಮುನಿಗೆ ವಿಶೇಷಣವಾಗಿ ಬಳಸಲಾಗಿದೆ:
ಮುನಿಪಸಹಸ್ರಭೋಜನಕರಂ ಬುಧಭವ್ಯಜನೌಘಸೇವ್ಯನ್ ಅ
ತ್ಯನುಪಮ ಚಕ್ರವರ್ತಿ ಯತಿರಾಜಗಣಾಗ್ರಣಿ ದತ್ತವಿತ್ತಭಾ
ಜನ ಕವಿವಾದಿವಾಗ್ಮಿಗಮಕಂ ವಸುಧೈಕಕುಟುಂಬಕಂ ಸಭಾ
ಜನಸುಜನೈಕಭಾಜನಮುಖಂ ಜಿನಚಂದ್ರಮುನೀಂದ್ರನುರ್ವಿಯೊಳ್
ತಮಿಳಿನ ಸಂಗಂ ಸಾಹಿತ್ಯದಲ್ಲಿ ವಸುಧೈವ ಕುಟುಂಬಕಂ ಗೆ ಹತ್ತಿರವಾದ ಮಾತೊಂದು ಇದೆಯಂತೆ. ಅದು ಯತುಂ ಊರೇ; ಯವರುಂ ಕೆಲಿರ್ – ಎಲ್ಲವೂ ನನ್ನ ಊರು; ಎಲ್ಲರೂ ನನ್ನ ನೆಂಟರೇ.
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ