ಬ್ಯಾಂಕರ್ಸ್ ಡೈರಿ : ದಿನವೂ ಹೊಸ ಹೊಸ ಖಾತೆಗಳನ್ನು ತೆಗೆಯುವುದು ನಮ್ಮ ದಿನಚರಿಗಳಲ್ಲಿ ಒಂದು. ಹಾಗೆ ಖಾತೆ ತೆರೆಯುವಾಗ ನಾವು ಕೇಳುವ ಕೆಲ ಪ್ರಶ್ನೆಗಳು ನಮ್ಮ ಗ್ರಾಹಕರ ಬದುಕಿನ ಅನೇಕ ಪುಟಗಳನ್ನು ತೆರೆದುಬಿಡುತ್ತದೆ. ಹಾಗೆ ಆಗಲು ಸಾಧ್ಯವಾಗುವುದು ಕೇಳುವ ಕಿವಿಗಳು ತೆರೆದುಕೊಂಡಾಗ ಹಾಗು ಅರ್ಥೈಸಿಕೊಳ್ಳುವ ಮನಸ್ಸಿದ್ದಾಗ.
ಅಂಥ ಹಲವಾರು ಪ್ರಸಂಗಗಳನ್ನು ನಾನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ತೆಗೆದಷ್ಟೂ ಮುಗಿಯದ ಚಿಲುಮೆಯದು ಅಂಥ ಅನುಭವಗಳು.
ಹೀಗೊಂದು ದಿನ ದಿನೇಶ್ ಖಾತೆ ತೆರೆಯೋದಕ್ಕೆ ಬಂದಿದ್ದ. ಅದು ನನ್ನ ಹಿಂದಿನ ಶಾಖೆಯಲ್ಲಿ. ಅದು ಹಳ್ಳಿ. ತಂದೆ ತಾಯಿ ಹುಟ್ಟಿದೂರಿನ ಹೆಸರು ಎಲ್ಲವೂ ಆಯಿತು. ಏನು ಓದಿರುವುದು ಏನು ಕೆಲಸ ಎಂದೆಲ್ಲಾ ಕೇಳಬೇಕಲ್ಲಾ… ಕೇಳಿದೆ. ಆತ ‘ಒಂದನೇ ಕ್ಲಾಸ್ ಒಂದು ದಿನ’ ಎಂದ. ನನಗೆ ಸಖೇದಚ್ಚರಿ. ‘ಅದೇನ್ರೀ ಒಂದನೇ ಕ್ಲಾಸು ಒಂದು ದಿನ ಅಂದ್ರೆ?’ ಎಂದು ಪ್ರಶ್ನಿಸಿದೆ. ಅಯ್ಯೋ ಅದೇನು ಹೇಳ್ತೀರಿ ಮೇಡಂ ನಮ್ ಮಾಸ್ಟರ್ ಮೊದಲನೇ ದಿನಾನೇ ಹೆಂಡತೀನ ಹೊಡೆದಂಗೆ ಹೊಡೆದ್ರು. ಅದಕ್ಕೆ ಇಸ್ಕೂಲನ್ನೇ ಬಿಟ್ಬಿಟ್ಟೆ. ಹಾಗಿಲ್ಲದಿದ್ದಿದ್ದ್ರೆ ನಾನು ಇಂಜಿನಿಯರ್ ಆಗ್ತಿದ್ದೆ. ಈಗ ಡ್ರೈವರ್ ಆಗಿದೀನಿ.’ ಎಂದು ನಕ್ಕ. ಅಷ್ಟೇ ಅಲ್ಲದೆ ‘ನನ್ನ ಹೊಡೆದ ನಮ್ ಮಾಸ್ಟರ್ ಚೆನ್ನಾಗಿರಲಿ’ ಎಂತಲೂ ಅಂದ. ಇದು ಇನ್ನೂ ಹೆಚ್ಚಿನ ಆಶ್ಚರ್ಯವನ್ನು ಉಂಟುಮಾಡಿತು. ‘ಅದೇನ್ರೀ ಹೀಗಂತಿದೀರಾ?’ ಎಂದೆ. ‘ಮೇಡಂ ಅವರು ಹೊಡೆಯದೇ ಹೋಗಿದ್ರೆ ನಾನು ಡ್ರೈವರ್ ಆಗ್ತಿದ್ನಾ? ಇಲ್ಲ ತಾನೇ? ನನಗೆ ಈ ಕೆಲಸದಲ್ಲಿ ತುಂಬಾ ಖುಷಿ ಇದೆ. ಕೈ ತುಂಬಾ ಸಂಪಾದಿಸುತ್ತಾ ಇದ್ದೇನೆ. ರಾಜನ ಥರ ಇದ್ದೇನೆ. ರಜೆಗೆ ಯಾರನ್ನೂ ಕೇಳಬೇಕಿಲ್ಲ. ನನಗೆ ಯಾರೂ ಬಾಸ್ ಇಲ್ಲ. ನನಗೆ ನಾನೇ ಬಾಸ್’ ಎಂದು ಶಿಳ್ಳೆ ಹೊಡೆಯುವಷ್ಟು ಸಂತೋಷದಿಂದ ಹೇಳಿದ. ಪಕ್ಕದಲ್ಲಿದ್ದವರು- ಹಾಗಿದ್ರೆ ನಿಮ್ ಮಾಸ್ಟರ್ರಿಗೇ ನಾಮಿನೇಷನ್ ಮಾಡ್ರೀ. ಕೃತಜ್ಣತೆ ತೋರಿಸಿದ ಹಾಗಾಗುತ್ತೆ ಎಂದರು. ಸುತ್ತಲಿನ ಎಲ್ಲರೂ ನಕ್ಕುಬಿಟ್ಟರು.
ಮಗದೊಂದು ದಿನ ಅಕೌಂಟ್ ಮಾಡೋಕೆ ಶಿಲ್ಪ ಬಂದಿದ್ರು. ಅದೂ ಹಳ್ಳಿಯಲ್ಲಿಯೇ. ಮಗು ಜೋರು ಗಲಾಟೆ ಮಾಡಿತ್ತು. ಅದಕ್ಕೆ ಅವಳ ಗಂಡ ಸಿಟ್ಟು ಮಾಡ್ತಿದ್ದ. ನಾನು ಆಕೆಯ ವಾರ್ಷಿಕ ಆದಾಯ ಕೇಳಿದಾಗ್ಲೂ ಗಂಡನ ಮುಖ ದಪ್ಪಗಾಯಿತು. ಕಾರಣ ನನಗೆ ಗೊತ್ತಿಲ್ಲ. ಇನ್ನೊಂದು ಬ್ಯಾಂಕಿನ ಖಾತೆಯ ಏಟಿಎಂ ಕಾರ್ಡ್ ಕೂಡ ಅವನ ಹತ್ತಿರಾನೇ ಇತ್ತು ಎಂದು ತಿಳಿಯಿತು. ಎಲ್ಲಕ್ಕೂ ಸಿಟ್ಟು ಮಾಡ್ತಿದ್ದ. ಈಕೆ ಅದು ಹೇಗೆ ಅವನೊಟ್ಟಿಗೆ ಬದುಕುತ್ತಿದ್ದಾಳೋ ಎಂದು ನನಗೆ ಭಯವೇ ಆಯಿತು. ಮತ್ತೊಮ್ಮೆ ಮಗು ಅತ್ತಾಗ ‘ಮಗೂನ ನೀನೇ ನೋಡ್ಕೋ’ ಅಂತ ಬ್ಯಾಂಕಿನಲ್ಲೇ ಎಲ್ಲರ ಮುಂದೆಯೇ ರಪ್ ಅಂತ ಮಗೂನ ಕೈಗಿಟ್ಟು ಸರಸರ ಹೊರಗೆ ಹೋದ. ಶಿಲ್ಪ ‘ ಮೇಡಂ ನಾನು ಕೆಲಸ ಬಿಟ್ರೆ ಪರಿಸ್ಥಿತಿ ಇನ್ನೂ ಹದಗೆಡುತ್ತೆ. ಸದಾ ಅವನ ಜೊತೆಯಲ್ಲೇ ಇದ್ದರೆ ಮತ್ತೂ ಕಷ್ಟ ಆದರೂ ಕೆಲಸಕ್ಕೆ ಹೋಗೋದು’ ಎಂದಳು. ನನಗೆ ಆಕೆಯ ಪರಿಸ್ಥಿತಿ ಅಯ್ಯೋ ಎನಿಸಿತು. ಅಕೌಂಟ್ ಓಪನ್ ಆದ ಮೇಲೆ ಹಣ ಜಮಾ ಮಾಡಬೇಕಿತ್ತು. ‘ಹಣ ಕಟ್ಟೋಕೆ ಚಲನ್ ತೆಗೆದುಕೊಳ್ಳು’ ಎಂದೆ. ಆಕೆ ‘ಅವರೇ ಫೆÇೀನ್ ಪೇ ನಲ್ಲಿ ಕಳಿಸ್ತಾರೆ’ ಅಂದಳು. ಪರವಾಗಿಲ್ವೇ ಎಂದುಕೊಂಡು ನಾನು ‘ಗುಡ್ ಇದಾದ್ರೂ ಓಕೆ’ ಅಂದೆ. ಅದಕ್ಕೆ ಅವಳು ‘ನನ್ನ ಬೇರೆ ಅಕೌಂಟಿಂದ ಕಳಿಸೋದು. ಅವರ ದುಡ್ಡಲ್ಲ ಮೇಡಂ’ ಎಂದಳು..
ಆಕೆ ಬಡವರ ಮನೆಯ ಮಗಳು. ಸಿರಿವಂತಿಕೆಯ ಆಸೆಯಿಂದ ದೊಡ್ಡ ಮನೆಯ ಹುಡುಗನೇ ಬೇಕೆಂದು ಮನೆಯವರಲ್ಲಿ ಒತ್ತಾಯ ಮಾಡಿ ತೀರಾ ಹೈ ಲೆವೆಲ್ ಹುಡುಗಗನ್ನೇ ಮದುವೆಯಾದಳು. ಕಂಡು ಕೇಳಿದವರೆಲ್ಲಾ ಮನಸ್ಥಿತಿ ಮತ್ತು ಪರಿಸ್ಥಿತಿ ಮ್ಯಾಚ್ ಆಗಲ್ಲ ಬೇಡ ಬೇಡ ಅಂದರೂ ಸಿರಿವಂತಿಕೆಯ ಆಸೆಯಿಂದ ಹುಡುಗಿ ಮದುವೆಯಾದಳಂತೆ. ಹಾಗಂತ ಆಕೆಯ ತಮ್ಮ ಖಾತೆ ತೆರೆಯಲು ಬಂದಾಗ ಹೇಳಿದ್ದು. ಅಕ್ಕ ವಿಚಾರ ಏತಕ್ಕೆ ಬಾಂದಿತು ಎಂದರೆ ನಾಮಿನಿ ಆಕೆಯೇ ಆಗಿದ್ದಳು. ಆಕೆಯ ವಿಳಾಸ ಹೇಳುವಾಗ ಅದೇಕೋ ಏನೋ ಈ ವಿಚಾರಗಳನ್ನೆಲ್ಲಾ ಹೇಳಿದ. ಬಹುಶಃ ಹಂಚಿಕೊಂಡರೆ ದುಃಖ ಹಗುರಾಗುವುದು ಎಂದೋ ಏನೋ. ಅಕ್ಕನೆಂದರೆ ತಮ್ಮನಿಗೆ ಅಷ್ಟು ಅಕ್ಕರೆ. ತಮ್ಮ ವಿನೋದ್ ಹೇಳಿದ ಹಾಗೆ ಅಕ್ಕನ ಮನೆಯ ತುಂಬ ಆಳು ಕಾಳು, ಕಾರುಗಳು. ಎಲ್ಲಾ ಅನುಕೂಲ ಇರುವ ಅಪಾರ್ಟ್ ಮೆಂಟಿನಲ್ಲೇ ವಾಸ. ಹೇಗೂ ಎಲ್ಲವೂ ಕ್ಯಾಂಪಸ್ಸಲ್ಲೇ ಇರೋದ್ರಿಂದ ಹೊರಗೆಲ್ಲೂ ಹೋಗಬಾರದು ಎಂದು ಭಾವನ ಕಟ್ಟಪ್ಪಣೆ. ಅವನ ಅಪ್ಪಣೆಯಿಲ್ಲದೆ ಅವ್ರಪ್ಪ ಅಮ್ಮನ ಹತ್ತಿರಾನೂ ಮಾತನಾಡಬಾರದು ಎನ್ನುವಾಗ ವಿನೋದ್ ಕಣ್ಣು ತುಂಬಿಬಂದಿತ್ತು.
ಬದುಕು ಹಾವು ಏಣಿ ಆಟದ ಹಾಗೆ. ಯಾವಾಗ ಯಾರಿಗೆ ಏಣಿ ಸಿಗುವುದೋ, ಹಾಗೆ ಸಿಕ್ಕ ಏಣಿ ಎಲ್ಲಿಗೆ ಕರೆದೊಯ್ಯುವುದೋ…. ಯಾರಿಗೆ ಯಾವಾಗ ಹಾವು ಕಚ್ಚಿ ನೆಲ ಕಚ್ಚುವರೋ ಯಾರೂ ಅರಿಯರು.ಮೈಸೂರಿನಲ್ಲಿ ಹುಲಿಯ ದಾಳಿಗೆ ಮಹಿಳೆ ಬಲಿ
ಬಂದದ್ದ ಬಂದಂತೆ ಸ್ವೀಕರಿಸಿ ನಡೆಯುವುದಷ್ಟೇ ನಮ್ಮ ಪಾಲಿಗೆ ಉಳಿಯುವುದು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ