November 21, 2024

Newsnap Kannada

The World at your finger tips!

WhatsApp Image 2023 04 26 at 6.51.33 PM

ಬುದ್ಧಿವಂತರ ಬಾಳು (ಕಥಾ ಮನ್ವಂತರ)

Spread the love
ashvini angadi
ಅಶ್ವಿನಿ ಅಂಗಡಿ, ಬದಾಮಿ.

ಈ ಸೃಷ್ಟಿಯ ಮಡಿಲಲ್ಲಿ ‘ಜ್ಞಾನವು’ ಜೀವ ಸಂಕುಲದ ಕಳಶವಿದ್ದಂತೆ, ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ. ಒಂದು ಗಾದೆ ಮಾತಿನಂತೆ ‘ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು.’ ಒಂದು ರೀತಿಯಲ್ಲಿ ಸಂತರಾದ ‘ಹುಚ್ಚಿರೇಶ್ವರ’ ಮಹಾ ತಪಸ್ವಿ ಹೇಳಿರುವಂತೆ.., ಯಾವುದು ಹೌದು ಅದು ಅಲ್ಲ.., ಯಾವುದು ಅಲ್ಲ ಅದು ಹೌದು..! ಎಂಬ ತಾತ್ವಿಕ ಸಾರ ನೆನಪಿಸುವಂತೇ ಇದರ ನಿಜಾರ್ಥವಿಷ್ಟೇ, ಈ ಜೀವನವೆಂಬ ತಿರುಗುವ ಚಕ್ರದಲ್ಲಿ ಶ್ರೀಮಂತಿಕೆ, ಬಡತನವೆಂಬುದು ಅವರವರ ಮತಿಯ ವೈಚಾರಿಕತೆಯ ಯೋಜನೆಗಳಿಗೆ ಬಿಟ್ಟದ್ದು. ಒಳ್ಳೆಯ ಹಾಗೂ ಸಮಯಪ್ರಜ್ಞ ಚತುರತೆಯು ಓರ್ವ ಬಡವನ ಬಾಳನ್ನು ಅತ್ಯಂತ ಶ್ರೀಮಂತಿಕೆಯಿಂದ ಇರುವಂತೆ ಮಾಡಲುಬಹುದು.ಅದೇ ಮೂರ್ಖತನದ ಪರಮಾವಧಿಯ ಬುದ್ಧಿ ತನ್ನ ಶ್ರೀಮಂತಿಕೆಯ ಬಾಳನ್ನು ಕಷ್ಟ ಸಂಕೋಲೆಗೆ ನೂಕಬಹುದಾಗಿದೆ..! ಆದ್ದರಿಂದ ಮೂರು ದಿನದ ಈ ಸಂತೆಯ ಬಾಳಿನಲ್ಲಿ ಸಮಯೋಚಿತ ಹಾಗೂ ಚತುರತೆಯಿಂದ ಬದುಕಿನ ಪಯಣವನ್ನು ಸಂಪನ್ನಗೊಳಿಸಬೇಕಾಗಿದೆ.

ಹೀಗೊಂದು ಸಣ್ಣ ಕಥೆ ನೆನಪಾಗಿತು. ನಿಮಗೆ ಈ ತಾರ್ಕಿಕ ಅನುಭವಗಳನ್ನು ವ್ಯಾಖ್ಯಾನುಭೂತವಾಗಿ ತಿಳಿಸಿ, ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡೆವೆನು. ಒಂದೂರಲ್ಲಿ ರಾಮಪ್ಪನೆಂಬ ಬಡವ ಕೃಷಿ ಕಾರ್ಯವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಒಂದೊಮ್ಮೆ ಅವನ ಜೋಡಿ ಎತ್ತುಗಳಲ್ಲಿ ಒಂದು ಎತ್ತಿಗೆ ತೀವ್ರತರ ಕಾಯಿಲೆ ಉಂಟಾಯಿತು. ಯಾವ ನವ, ನಾಟಿ ಔಷಧಗಳು ಆ ಕಾಯಿಲೆಯ ಮೇಲೆ ಪರಿಣಾಮ ಬೀರಲಿಲ್ಲ. ಚಿಂತಾಕ್ರಾಂತನಾಗಿದ್ದ ರಾಮಪ್ಪ ಊರಿನ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ “ಹರಕೆಯ” ಮೊರೆ ಹೋದ. ದೇವರೇ..! ಈ ಎತ್ತಿನ ಕಾಯಿಲೆಯನ್ನು ಗುಣಪಡಿಸು ತಂದೆ ಎಂದು ಬೇಡಿಕೊಂಡನು. ತದನಂತರ ಇದನ್ನು ಮಾರಿ ಬೇರೆ ಎತ್ತನ್ನು ಕೊಂಡುಕೊಳ್ಳುವೆ, ಅಲ್ಲದೇ ಮಾರಿ ಬಂದ ಹಣದ ಅರ್ಧ ಭಾಗವನ್ನು ನಿನ್ನ ಸನ್ನಿಧಿಗೆ ಒಪ್ಪಿಸುವೆ ಎಂದು ಅರಿಕೆ ಇಟ್ಟನು. ಅದೃಷ್ಟವೋ ಅಥವಾ ದೇವರ ಕೃಪೆಯು ತಿಳಿಯಲಿಲ್ಲ..?! ಎತ್ತು ದಿನದಿಂದ ದಿನಕ್ಕೆ ಚೇತರಿಸಿಕೊಂಡು ಸ್ವಾಸ್ಥ್ಯತೆಯನ್ನು ಹೊಂದಿತು, ಅವಾಗಲೇ ರಾಮಪ್ಪ ಇದನ್ನು ಬೇಗ ಮಾರಿ ಬೇರೆಯದ್ದನ್ನು ಕೊಳ್ಳಲು ಊರಿನ ಸಂತೆಗೆ ಧಾವಿಸಿದನು. ಎತ್ತಿಗೇನೋ ಒಳ್ಳೆಯ ನಿರೀಕ್ಷಿತ 15000 ರೂ. ಬೆಲೆ ಬಂದಿತು. ಆದರೆ ಅವನ ಯೋಚನೆಯೇ ಬೇರೆಯಾಗಿತ್ತು. ಏಕೆಂದರೆ..? ಮಾರಿ ಬಂದಂತಹ ಬೆಲೆಯ ಹಣದಲ್ಲಿ ಅರ್ಧ ದೇವರಿಗೆ ಕೊಡಬೇಕೆಲ್ಲ ಎಂದು ಚಿಂತೆಯಲ್ಲಿ ಮುಳುಗಿದ. ವ್ಯಾಪಾರಿಗಳು ಇನ್ನೂ ಹೆಚ್ಚಿನ ಬೆಲೆ ಕೊಟ್ಟು ಎತ್ತನ್ನು ಕೊಳ್ಳಲು ಮುಂದಾಗಿದ್ದರು. ಆದರೆ ರಾಮಪ್ಪ ಏನು ಮಾಡಲಾಗದೆ ಕೈಕಟ್ಟಿಕೊಂಡು ಕೂತಿದ್ದ, ಹೀಗೆ ಕೂತಿರುವ ವ್ಯಕ್ತಿಯನ್ನು ಅವನ ಸ್ನೇಹಿತ ಹಾಗೂ ಚಾಲಾಕಿಯಾದ ರಂಗಣ್ಣನು ನೋಡಿ ಅವನ ಬಳಿ ಬಂದು “ಏನಯ್ಯ ರಾಮಪ್ಪ ಆವಾಗಿಂದ ಮಾರಾಟಕ್ಕೆ ತಂದಿರುವ ಎತ್ತನ್ನು ಮಾರದೆ ಏಕೆ ಕೈ ಹಿಸುಕಿ ಕೊಳ್ಳುತ್ತಾ ಇಟ್ಕೊಂಡು ಕುಂತಿರುವೆಯಲ್ಲ”ಎಂದು ಕೇಳಿದ..!ಆವಾಗ ರಾಮಪ್ಪ ಅವನ ಪರಿಸ್ಥಿತಿ ಎಲ್ಲವನ್ನು ಅರುಹಿದ ನಂತರ ರಂಗಣ್ಣ ಇದೇನು ಮಹಾ ಕಷ್ಟ, ಏಕೆ ಇಷ್ಟು ಯೋಚನೆಯಲ್ಲಿ ಮುಳುಗಿರುವೆ, ನನಗೆ ಒಂದು ಸಾವಿರ ರೂಪಾಯಿ ಕೊಡುವುದಾದರೆ ನಿನ್ನ ಕಷ್ಟಕ್ಕೆ ಪರಿಹಾರ ನೀಡುವೆ ಎಂದನು. ತಕ್ಷಣವೇ ರಾಮಪ್ಪ ಅವನ ಕೈಗೆ ಒಂದು ಸಾವಿರ ರೂಪಾಯಿ ಕೊಟ್ಟನು.ಕೂಡಲೇ ರಂಗಣ್ಣ ಒಂದು ಮುದ್ದಾದ ಕುರಿಮರಿಯನ್ನು ತೆಗೆದುಕೊಂಡು ಬಂದ ಎತ್ತು ಹಾಗೂ ಕುರಿಮರಿ ಎರಡನ್ನು ಸೇರಿ ಮಾರಾಟಕ್ಕೆ ಇಟ್ಟನು. ಹಾಗೆಯೇ ಒಂದು ಶರತ್ತನ್ನು ಕೂಡ ಹಾಕಿದನು. ಎತ್ತು ಹಾಗೂ ಕುರಿಮರಿಯನ್ನು ಒಟ್ಟಿಗೆ ಕೊಂಡುಕೊಳ್ಳಬೇಕೆಂದು ಹೇಳಿದನು. ಕುರಿಮರಿಯ ಬೆಲೆ 16000 ಎತ್ತಿನ ಬೆಲೆ ರೂ.100 ಎಂದು ಬೆಲೆ ಕಟ್ಟಿದ. ಇದನ್ನು ತಿಳಿದ ವ್ಯಾಪಾರಿಗಳು ನಗುತ್ತಲೇ ಇವನಿಗೆ ಮಾರಾಟದ ಗಂಧವೇ ಗೊತ್ತಿಲ್ಲ. ಯಾವುದಕ್ಕೆ ಹೆಚ್ಚು ಬೆಲೆ ನಿಗದಿ ಮಾಡಬೇಕು..? ಯಾವುದಕ್ಕೆ ಕಡಿಮೆ ಬೆಲೆ ನಿಗದಿಸಬೇಕೆಂದು ತಿಳಿಯದೆ ಮಾರಾಟಕ್ಕೆ ಬಂದಿರುವನಲ್ಲ ಎಂದು ನಗುತ್ತಲೇ ಅವೆರಡೂ ಪ್ರಾಣಿಗಳನ್ನು16,000ರದ ಒಂದು ನೂರು ರೂಪಾಯಿಗೆ ಕೊಂಡುಕೊಂಡರು.ಮಾರಿ ಬಂದ ಎಲ್ಲಾ ಹಣವನ್ನು ನೇರವಾಗಿ ರಂಗಣ್ಣ ರಾಮಪ್ಪನ ಕೈಗೆ ಇಟ್ಟನು. ಇಷ್ಟು ದುಡ್ಡು ನೋಡಿ ಅವನ ಮುಖದಲ್ಲಿ ಕಿರುನಗೆ ಮೂಡಿತು. ಹಾಗೆಯೇ ತನ್ನ ಹರಿಕೆಯ ನೆನಪನ್ನು ಮಾಡಿದ ಆಗ ರಂಗಪ್ಪ ನೀನು ದೇವರಿಗೆ ಕೇವಲ ರೂ.50 ಮಾತ್ರ ಕೊಡಬೇಕು ಎಂದನು. ರಾಮಪ್ಪನಿಗೆ ಏನು ತಿಳಿಯದಾಯಿತು. ಆಗ ರಂಗಣ್ಣ ಕುರಿಯ ಬೆಲೆ 16000 ಎತ್ತಿನ ಬೆಲೆ ರೂ.100 ಎಂದನು. ಹಾಗಾದರೆ ನೀನು ಈಗ ಹೇಳು ದೇವರಿಗೆ ಎತ್ತಿನ ಬೆಲೆಯಲ್ಲಿ ಹರಕೆಯ ರೂಪವಾಗಿ ಎಷ್ಟು ಕೊಡಬೇಕು ಎಂದನು..?! ನಗುತ್ತಲೇ ರಂಗಣ್ಣ ರೂ.50ಯನ್ನು ಆಂಜನೇಯ ದೇವರಿಗೆ ಅರ್ಪಿಸಿ ಬಂದನು. ಜೊತೆಗೆ ರಂಗಣ್ಣನ ಸಾವಿರ ರೂಪಾಯಿಯನ್ನು ಅವನ ಕೈಗಿಟ್ಟು ಸಂತೋಷದಿಂದ ಮನೆ ಕಡೆ ನಡೆದನು. ಇಲ್ಲಿ ನಾವು ತಿಳಿಯಬಹುದಾಗಿತ್ತು ಇಷ್ಟೆ, ಬದುಕಿನಲ್ಲಿ ಜಾಣ್ಮೆ ಇರಬೇಕು. ರಾಮಪ್ಪ, ರಂಗಣ್ಣ ಇಬ್ಬರು ಸುವಿಚಾರಿಗಳೇ..! ಆದರೆ ಯೋಚನಾಶೈಲಿ ಬೇರೆಯಾಗಿತ್ತು. ರಾಮಪ್ಪನ ಕಷ್ಟವನ್ನು ಪರಿಹರಿಸಿಕೊಳ್ಳಲು ಸುಧೀರ್ಘವಾದ ಯೋಚನಾಶೀಲತೆಯನ್ನು ಮಾತ್ರ ಮಾಡಿದ, ಆದರೆ ರಂಗಣ್ಣನ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ಸಿನ ಸಫಲತೆಯನ್ನು ಹೊಂದಿದ.ಹಾಗಾಗಿ ನಾವು “ಎಲ್ಲರಲ್ಲಿ ಒಬ್ಬನಾಗಿ ಬದುಕುವುದಲ್ಲ, ಎಲ್ಲರಿಗಿಂತ ಶ್ರೇಷ್ಠರಾಗಿ ಬದುಕುವುದು ಒಳಿತೆಂದು” ತಿಳಿಯಬಹುದಾಗಿದೆ. ಕಷ್ಟ ಯಾರಿಗಿಲ್ಲ ಹೇಳಿ..? ಆ ಕಷ್ಟಗಳನ್ನು ಸಹನಾಭೂತವಾಗಿ ಪರಿಹರಿಸಿಕೊಳ್ಳವ ಸುಮಾರ್ಗವನ್ನು ತಾಳ್ಮೆಯಿಂದ ಕಂಡುಕೊಳ್ಳಬೇಕು.

Copyright © All rights reserved Newsnap | Newsever by AF themes.
error: Content is protected !!