ನಿಮ್ಮ ಕುಟುಂಬದ ಒಳಗೋ ಅಥವಾ ಹೊರಗೋ ನಡೆಯಬಹುದಾದ ಯಾವುದೇ ಒಂದು ಘಟನೆಗೆ, ಒಬ್ಬ ವ್ಯಕ್ತಿಯ ಕ್ರಿಯೆಗೆ ಅಥವಾ ಆಯಾ ಸಂಧರ್ಭಕ್ಕೆ ತಕ್ಕಂತೆ , ನಿಮ್ಮ ಆಲೋಚನೆ, ವ್ಯಕ್ತಿತ್ವ ಹಾಗೂ ಸ್ವಭಾವಕ್ಕನುಗುಣವಾಗಿ ಪ್ರತಿಕ್ರಿಯಿಸುವುದು ಸಹಜ ಪ್ರಕ್ರಿಯೆ. ಆದರೆ ಕೆಲ ದಿನಗಳ ನಂತರ ಅದೇ ಘಟನೆ ಅಥವಾ ಸಂಧರ್ಭಕ್ಕೆ ನಿಮ್ಮ ಅದೇ ಪ್ರತಿಕ್ರಿಯೆ ಈ ಮೊದಲಿನಂತಿರದೇ ಸ್ವಲ್ಪ ಮಟ್ಟಿಗೆ ಭಿನ್ನವಾಗಿರುವುದೂ ಸಹ ಅಷ್ಟೇ ಸಹಜ.
ಇದರ ಮೂಲಬೇರು ಹಿಡಿದು ಹೊರಟಾಗ ಕೊನೆಗೆ ಸಿಕ್ಕ ಸಣ್ಣ ಎಳೆಯನ್ನೇ ಎಳೆದು ಈ ನಾಲ್ಕಕ್ಷರಗಳನ್ನು ಹೊಸೆದಿದ್ದೇನೆ, ಒಪ್ಪಿಸಿಕೊಳ್ಳಿ.
ಯಾವುದೇ ಒಬ್ಬ ಮನುಷ್ಯ ಒಂದು ಸಂಧರ್ಭಕ್ಕೆ ಸ್ಪಂದಿಸುವುದು ಅಥವಾ ಪ್ರತಿಕ್ರಿಯಿಸುವುದು ಬಹುತೇಕ ಅವನ ಆ ಸಂಧರ್ಭದ ಮೂಡ್ ಮೇಲೆ ಆಧಾರವಾಗಿರುತ್ತೆ. ಅಂದರೆ ಒಂದೇ ತೆರನಾದ ಸಿಚುಯೇಷನ್ನಿಗೂ ಭಿನ್ನ ರೀತಿಯಲ್ಲಿ ಅವನ ಮನದಿಂಗಿತ ತೆರೆದುಕೊಳ್ಳುವುದಕ್ಕೆ ಅವನ ಅಂದಿನ ಮನಸ್ಥಿತಿ ಅಥವಾ ಮೂಡ್ ಎಂಬುದು ಮೂಲ ಕಾರಣವಾಗಿರಬಲ್ಲದು. ಸಪೋಸ್ , ಅವನ ಮೂಡ್ ಚೆನ್ನಾಗಿದ್ದಾಗ ಒಂದು ತೆರನಾಗಿ ವರ್ತಿಸುವ ಅದೇ ವ್ಯಕ್ತಿ ,ಒಂದೊಮ್ಮೆ ಅವನ ಮೂಡು ಖರಾಬ್ ಆಗಿದ್ದಾಗ ಅಂತಹದೇ ಸಂಧರ್ಭಕ್ಕೆ ಪಕ್ಕಾ ಬೇರೆ ಥರಾನೇ ಬಿಹೇವ್ ಮಾಡುತ್ತಾನಲ್ಲವೇ..?
ಈ ಮೂಡು ಅನ್ನೋದು ಚೆನ್ನಾಗಿರಬೇಕಾದರೆ ಅವನೊಳಗಿನ ತೃಪ್ತಿ, ಸಂತೋಷ, ನೆಮ್ಮದಿ ಅಥವಾ ಬಹುಮುಖ್ಯವಾಗಿ ಅವನ ಎದೆ ಚಿಪ್ಪಿನೊಳಗಿನ ಪ್ರೀತಿಸುವ ಮನಸ್ಸು ಸದಾ ಕ್ರಿಯಾಶೀಲವಾಗಿರಬೇಕು. ಯಾವುದು ಏನಿಲ್ಲವೆಂದರೂ ಕೊನೇಪಕ್ಷ ಒಬ್ಬರ ಬಗೆಗೆ ಪ್ರೀತಿ ತುಂಬಿದ ಮನೋಭಾವವಿದ್ದಲ್ಲಿ ಈ ಒಳ್ಳೇ ಮೂಡ್ ಅನ್ನೋದು ನಮ್ಮನ್ನು ಬಿಟ್ಟು ಸೈಡ್ ಗೆ ಹೋಗೋಲ್ಲ.
ಹೀಗೆಲ್ಲಾ ಕಗ್ಗಂಟಾಗಿಸಿ ಹೇಳೋ ಬದಲು ಮನುಷ್ಯನ ವರ್ತನೆಯ ಈ ಸಿಂಪಲ್ ಸಿದ್ದಾಂತವನ್ನು ಒಂದೆರಡು ಲೈವ್ ಎಗ್ಸಾಂಪಲ್ ಕೊಟ್ಟು ಸರಳವಾಗಿ ಹೇಳಿದಲ್ಲಿ ಮನಸಿಗೆ ಸ್ವಲ್ಪ ಹತ್ತಿರವಾಗಬಲ್ಲದು.
ಹಾಗಾದರೆ ಬನ್ನಿ ನನ್ನ ಸಂಗಡ….
ಒಂದು ಕುಟುಂಬದಲ್ಲಿ ಎಲ್ಲ ಸದಸ್ಯರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಹಾಗೂ ನಂಬಿಕೆಗಳು ಬಲವಾಗಿ ಇದ್ದಾಗ ಒಬ್ಬರ ಯಾವುದೇ ವರ್ತನೆಗಳು ಅಥವಾ ನಿರ್ಧಾರಗಳು, ಅವು ಸರಿಯಿರಲಿ ಬಿಡಲಿ, ಅದಾವುವೂ ಎಂದಿಗೂ ತಪ್ಪು ಎಂದಾಗಲೀ ಅಥವಾ ಕಿರಿಕಿರಿ ಎಂದಾಗಲೀ ಮತ್ತೊಬ್ಬರಿಗೆ ಅನಿಸೋದೇ ಇಲ್ಲ. ಯಾರೊಬ್ಬರ ಮಾತು, ಕತೆ , ವರ್ತನೆ , ಆದೇಶ, ಸಂದೇಶ…ಈ ಯಾವುದರಿಂದಲೂ ಇನ್ನೊಬ್ಬರ ಮನಸಿಗೆ ಅಸಹನೀಯದ ಅನುಭವ ಆಗೋಕೆ ಛಾನ್ಸೇ ಇರೋಲ್ಲ.
You know why..? ಸಂಧರ್ಭ ಎಂತಹದೇ ಇರಲಿ, ಅವರೆಲ್ಲರ ಹೃದಯದೊಳಗೆ ಪ್ರೀತಿ ಎಂಬ ಅಂತಃಕರಣದ ಜ್ಯೋತಿ ಸದಾ ಬೆಳಗುತ್ತಲೇ ಇರುತ್ತದೆ.
ಮತ್ತೇ ಕೆಲವು ಕುಟುಂಬದಲ್ಲಿ ಆಸ್ತಿ , ಹಣ, ಐಶ್ವರ್ಯ, ಬಂಗಲೆ, ಆಳು- ಕಾಳು ಈ ಎಲ್ಲ ಐಹಿಕ ಸವಲತ್ತುಗಳು ಢಾಳಾಗಿರುತ್ತದೆಯಾದರೂ ಒಬ್ಬರು ಮತ್ತೊಬ್ಬರನ್ನು ಸದಾ ಅನುಮಾನ -ಅಸಹನೆಗಳಿಂದಲೇ ಕಾಣುವ ಪರಿಸ್ಥಿತಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಗಾಗ್ಗೆ ಗೋಚರಿಸುತ್ತಲೇ ಇರುತ್ತದೆ. ಅಂತಹ ವಾತಾವರಣದಲ್ಲಿ ಮಾತಿನ ಅರ್ಥಗಳೆಲ್ಲವೂ ಅನರ್ಥವಾಗಿ , ಸ್ವರಗಳೆಲ್ಲವೂ ಅಪಸ್ವರವಾಗಿ, ರಾಗ-ತಾಳಗಳೆಲ್ಲವೂ ಲಯತಪ್ಪಿ ಹೋಗಿ ಇಡೀ ಸಂಸಾರದ ಸಂಗೀತವೇ ಶ್ರುತಿ ತಪ್ಪಿ ಎತ್ತೆತ್ತಲೋ ಸಾಗುತ್ತದೆ. ಅಲ್ಲಿನ ಸದಸ್ಯರ ನಡುವೆ ಪ್ರೀತಿ -ವಿಶ್ವಾಸ ನಂಬಿಕೆಗಳ ಕೊರತೆಯೆಂಬುದು ಒಳಗೊಳಗೇ ತಣ್ಣಗೆ ಲಾಸ್ಯವಾಡುತ್ತಲಿರುವುದೇ ಅದಕ್ಕೆ ಮುಖ್ಯ ಕಾರಣ.
ಕುಟುಂಬಗಳ ವಿಚಾರ ಬಿಟ್ಟಾಕಿ. ಅದು ಸ್ವಲ್ಪ ಕಾಂಪ್ಲಿಕೇಟೇಡ್ ! ಸ್ವಲ್ಪ ಹಾಗೇ ಹೊರಗಡೆ ಬಂದು ಗಮನಿಸಿ.
ನೀವು ಬಸ್ ನಲ್ಲೋ, ಕಾರಿನಲ್ಲೋ ಅಥವಾ ರೈಲಿನಲ್ಲೋ ನಿಮ್ಮ ಆಪ್ತ ಸ್ನೇಹಿತರೊಂದಿಗೆ ಪಯಣಿಸುವಾಗ ಮೂರು ಜನ ಕೂರಬಹುದಾದ ಸೀಟಿನಲ್ಲಿ ಆರು ಮಂದಿ ಗೆಳೆಯರು ಒತ್ತಲಿಸಿಕೊಂಡು ಕಷ್ಟಪಟ್ಟು ಕುಳಿತು ಜರ್ನಿ ಮಾಡುತ್ತಾ ಸಾಗಿದರೂ, ಖುಷಿಯಿಂದಲೇ ಜರ್ನಿಯನ್ನು ಎಂಜಾಯ್ ಮಾಡಿಕೊಂಡೇ ಸಾಗುತ್ತೀರಿ. ಪ್ರಯಾಣದ ಯಾವುದೇ ಹಂತದಲ್ಲೂ ಅಷ್ಟು ಇಕ್ಕಟ್ಟಾದ ಸ್ಥಿತಿಯಲ್ಲಿ ಕೂತು ಪಯಣಿಸುವುದು ನಿಮಗೆ ಕಿರಿಕಿರಿ ಅಂತ ಅನಿಸೋದೇ ಇಲ್ಲ. ಏಕೆಂದರೆ ನೀವು ಪಯಣಿಸುತ್ತಿರುವುದು ನಿಮ್ಮ ಮನಸಿಗೆ ಹತ್ತಿರವಾದವರ , ಹೃದಯಕ್ಕೆ ಸನಿಹವಾದವರ ಜೊತೆಗೆ ! ಅಲ್ಲಿ ಪ್ರೀತಿ ತಾನಾಗಿಯೇ ಸ್ಫುರಿಸಿ ನಿಮ್ಮ ಒಳ್ಳೆಯ ಮೂಡ್ ಅನ್ನು ಸದಾ ಜಾಗೃತವಾಗಿಟ್ಟಿರಬಲ್ಲದು.
ಅದೇ ನೀವು ನಿಮ್ಮ ಮನಸಿಗೆ ಸ್ವಲ್ಪ ಅಸಹನೀಯ ಎನಿಸಬಹುದಾದ ಅಪರಿಚಿತ ಸಹಪಯಣಿಗನ ಪಕ್ಕದಲ್ಲಿ ಪಯಣಿಸುವಾಗ, ಕುಳಿತುಕೊಳ್ಳಲು ಸಾಕಷ್ಟು ಸ್ಪೇಸ್ ಇದ್ದರೂ ಒಂದೊಮ್ಮೆ ಪಕ್ಕದ ಸೀಟಿನ ಆ ಸಹಪ್ರಯಾಣಿಕ ನಿಮಗೆ ಸ್ವಲ್ಪವೇ ಒತ್ತಿ ಕೂತರೂ, ಮೆಲ್ಲಗೆ ತೂಕಡಿಸುತ್ತಾ ನಿಮ್ಮ ಮೇಲೆ ಒಂಚೂರು ವಾಲಿದರೂ ಅಥವಾ ಕಿಂಚಿತ್ ಶೇಕ್ ಆಗಿ ನಿಮಗೆ ಟಚ್ ಆದರೂ ಸಾಕು, ಅದು ವಿಪರೀತ ಕಿರಿಕಿರಿಯೆನಿಸಿ ಇನ್ನಿಲ್ಲದ ಕೋಪ ಬರಬಹುದು. ಅಂತಿಮವಾಗಿ ಅದು ವಾದ- ವಿವಾದ, ಜಗಳದಲ್ಲಿ ಕೊನೆಯಾಗುವ ಸಂಭವವೂ ಇರುತ್ತದೆ.
ಏಕೆಂದರೆ ಅಲ್ಲಿ ಕನಿಷ್ಠ ಸಹನೆ ಅಥವಾ ಎದೆಯೊಳಗಿನ ಯಃಕಿಂಚಿತ್ತು ಪ್ರೀತಿ ಎನ್ನುವ ಅಂಶ ಕಾರಣವಿಲ್ಲದೇ ಕಣ್ಮರೆಯಾಗಿ ನಮ್ಮಿಂದ ಹಾಗೆ ಆಡಿಸುತ್ತದೆ.
ಈ ಸಹನೆ, ಪ್ರೀತಿ, ಹೊಂದಾಣಿಕೆ ಎನ್ನುವ ಮೆಡಿಸಿನ್ ಎಷ್ಟು ಪರಿಣಾಮಕಾರಿಯೆಂದರೆ, ಸಪೋಸ್ ನಿಮ್ಮೊಳಗೆ ಅವು ಸಾಕಷ್ಟು ತುಂಬಿಕೊಂಡಿದ್ದಾಗ, ಮನೆಯಲ್ಲಿ ನಿಮ್ಮ ಚಿಕ್ಕ ಮಗ ಅಥವಾ ಮಗಳು ತುಂಟತನದಿಂದ ತುಂಬಾ ದುಬಾರಿಯಾದ. ಟೀವಿಯನ್ನೋ, ಟೀಪಾಯ್ ಗ್ಲಾಸನ್ನೋ ಅಥವಾ ಇನ್ನಾವುದೋ ಬೆಲೆ ಬಾಳುವ ವಸ್ತುವನ್ನೋ ಹಾಳು ಮಾಡಿದರೂ ಸಹ ಅದನ್ನು ಕೂಲಾಗಿಯೇ ತೆಗೆದುಕೊಂಡು ಕೆಲಕಾಲದ ನಂತರ ಮರೆತುಬಿಡುತ್ತೀರಿ. ಆದರೆ ನಿಮ್ಮ ಮೂಡು ಖರಾಬ್ ಆಗಿದ್ದಾಗ ಈ ಪ್ರೀತಿ ಗೀತಿಗೆಲ್ಲಾ ಹೃದಯದಲ್ಲಿ ಜಾಗ ಇರೋಲ್ಲ. ಅಂತಹ ಸಂಧರ್ಭದಲ್ಲಿ ಏನಾದರೂ ನಿಮ್ಮ ಮಕ್ಕಳು ಮನೆಯೊಳಗೆ ಸ್ವಲ್ಪವೇ ಅಶಿಸ್ತು ತೋರಿ ಒಂದು ಸಣ್ಣ ಪೇಪರ್ ತುಂಡು ಬಿಸಾಡಿದರೂ ಕೆಂಡದಂಥ ಕೋಪ ಉಕ್ಕಿ ಬರುತ್ತಲ್ಲವೇ..?
ಇಂತಹ ಹತ್ತು ಹಲವು ಸಮಾನ ರೀತಿಯ ಸಂಧರ್ಭಗಳಲ್ಲಿ ಒಬ್ಬನೇ ವ್ಯಕ್ತಿ ಇತರರೊಂದಿಗೆ ಭಿನ್ನವಾಗಿ ವರ್ತಿಸಲು ಮೂಲ ಕಾರಣವೇ ಅವನೊಳಗಿನ ಪ್ರೀತಿ, ವಿಶ್ವಾಸ ಹಾಗೂ ಸಹನೆಗಳ ಪ್ರಮಾಣದ ಏರಿಳಿತ.
ಇಷ್ಟೆಲ್ಲಾ ಬೇರೆ ಬೇರೆ ಸೀನುಗಳು ಯಾಕೆ ? ನೀವೇ ಒಂದು ಸಣ್ಣ ಟೆಸ್ಟ್ ಮಾಡಿ ನೋಡಿ.
ಮನೆಯಲ್ಲಿ ನಿಮ್ಮ ಹೆಂಡತಿ ಅಥವಾ ಗಂಡನ ಜೊತೆ ಆಗಾಗ್ಗೆ ಅಥವಾ ಅಪರೂಪಕ್ಕಾದರೂ ಚಿಕ್ಕ ಪುಟ್ಟ ವಿಚಾರಗಳಿಗೂ ವಾದ, ವಿವಾದ, ರಗಳೆ, ಜಗಳ ನಡೆಯುತ್ತಲೇ ಇರುವುದು ಕಾಮನ್ ಅಲ್ಲವೇ ! ಇದಕ್ಕೆ ಜಗತ್ತಿನ ಯಾವ ಗಂಡ ಹೆಂಡಿರೂ ಹೊರತಲ್ಲ. ಹಾಗೊಮ್ಮೆ ನಾವು ದಂಪತಿಗಳು ಯಾವತ್ತೂ ಒಬ್ಬರ ಮೇಲೊಬ್ಬರು ಅಸಹನೆ ತೋರಿಲ್ಲ, ಜಗಳವಾಡಿಲ್ಲ ಅಥವಾ ವಾದ ಮಾಡಿಲ್ಲ ಎಂದರೆ ಖಂಡಿತಾ ಅಲ್ಲೊಂದು ಸಮಸ್ಯೆ ಇದ್ದೇ ಇದೆ ಎಂದರ್ಥ !
ಅದಿರಲಿ, ನಿಮ್ಮ ಸಂಗಾತಿಯ ಬಗ್ಗೆ ಪರಸ್ಪರ ಪ್ರೀತಿ, ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ, ಆಪ್ಯಾಯತೆಗಳು ಅನ್‌ಕಂಡೀಷನಲ್ ಆಗಿದ್ದಾಗ ಇಬ್ಬರಲ್ಲಿ ಯಾರೇ ಎಂತಹ ದೊಡ್ಡ ಮಿಸ್ಟೇಕ್ ಮಾಡಿದರೂ ಅಲ್ಲಿ ಜಗಳಕ್ಕೆ ಆಸ್ಪದ ಕಡಿಮೆ. ಒಂದೊಮ್ಮೆ ಚಿಕ್ಕಪುಟ್ಟ ಆರ್ಗ್ಯೂಮೆಂಟ್ ಗಳಾದರೂ ಅದನ್ನು ಬೆಳಸಲು ಹೋಗುವುದಿಲ್ಲ. ಎಲ್ಲಿ ಪರಸ್ಪರ ಅಂಡರ್ ಸ್ಟಾಂಡಿಂಗ್ ಇರುತ್ತೋ ಅಲ್ಲಿ ಆರ್ಗ್ಯೂಮೆಂಟ್ಸ್ ಗಳಾದರೂ ಕೊನೆಗೆ ಗೆಲ್ಲೋದು ಪ್ರಾಮಾಣಿಕ ಪ್ರೀತಿಯೇ !
ಅದೇ ಅವರಿಬ್ಬರ ನಡುವೆ ಪರಸ್ಪರ ಒಂದು ಸಣ್ಣಮಟ್ಟದ ಪೊಸ್ಸೆಸ್ಸೀವ್ ನೆಸ್ ಹಾಗೂ ನೈಜಪ್ರೀತಿಯ ಕೊರತೆ ಇದ್ದಾಗ ಕೆಲವು ಸಂಧರ್ಭದಲ್ಲಿ ಯಾವುದೋ ಒಂದು ಕಿತ್ತುಹೋಗುವ ಸಣ್ಣವಿಚಾರಕ್ಕೂ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾದಗಳು ತಾರಕಕ್ಕೇರಿ ಆ ಕ್ಷಣಕ್ಕೆ ಬಾಯಿಂದ ಬರಬಾರದ ಮಾತುಗಳೆಲ್ಲವೂ ಪುಂಖಾನುಪುಂಖವಾಗಿ ಹೊರಟು
ಸಂಬಂಧವೇ ಹಳಸುವಷ್ಟರ ಮಟ್ಟಕ್ಕೂ ಹೋಗಬಹುದು !ಇದನ್ನು ಓದಿ – ವರುಣಾರ್ಭಟ – ಕೆಆರ್‌ಎಸ್‌ನಿಂದ ಕಾವೇರಿ ನದಿಗೆ 25ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ಸಿದ್ದತೆ
ಅದು ಆ ಘಟನೆ ಅಥವಾ ಸಂಧರ್ಭದ ತಪ್ಪಲ್ಲ…..ಅದು ಆ ಕ್ಷಣಕ್ಕೆ ಎದುರಿನ ವ್ಯಕ್ತಿಯ ಬಗ್ಗೆ ನಿಮ್ಮೊಳಗೆ ಇದ್ದಿರಬಹುದಾದ ಹೊಂದಾಣಿಕೆ, ವಿಶ್ವಾಸ ಅಥವಾ ಪ್ರೀತಿಯ ಪ್ರಮಾಣದಲ್ಲಿನ ವ್ಯತ್ಯಾಸದ ಪರಿಣಾಮವಷ್ಟೇ.!
ನಮ್ಮ ಎದೆ ಗೂಡಲ್ಲಿ ಬೊಗಸೆಯಷ್ಟು ಪ್ರೀತಿಯ ಹಣತೆ ಬೆಳಗುತ್ತಿರುವಾಗ ಎಲ್ಲವನ್ನೂ ಸಹನೆಯಿಂದ ಸರಿದೂಗಿಸುವ ಮನಸೇ, ಒಂದೊಮ್ಮೆ ಅದು ನಂದಿಹೋದಾಗ ಅಸಹನೆಯ ಜ್ವಾಲಾಮುಖಿಯಾಗಿ ಕುದಿಯುತ್ತ ವಿಭಿನ್ನವಾಗಿ ಆಲೋಚಿಸುವಂತೆ ಮಾಡುತ್ತದೆ. ಸೋ….ನಮ್ಮೆದೆಗೂಡಿನ ಪ್ರೀತಿಯ ಜ್ಯೋತಿಯನ್ನು ಯಾವುದೇ ಕಾರಣಕ್ಕೂ, ಎಂತಹದೇ ಸಂಧರ್ಭದಲ್ಲೂ ಆರಲು ಬಿಡದಿರೋಣ..,..
ಅದು ಅಮರಜ್ಯೋತಿಯಾದಷ್ಟೂ ಹೃದಯ ಹಗುರ.
ಮರೆಯುವ ಮುನ್ನ ಕೆಲವರಿಗೆ ನಾವು ಮೇಲ್ನೋಟಕ್ಕೆ ದೈಹಿಕವಾಗಿ ಹತ್ತಿರವಿದ್ದರೂ ಅಂತರಾಳದಲ್ಲಿ ಪ್ರೀತಿ, ಆಪ್ಯಾಯತೆ, ಅನ್ಯೋನ್ಯತೆಯ ಲತೆ ಬಾಡಿರುತ್ತದೆ. ಈ ಕಾರಣಕ್ಕೇ ಅದು ಮನಸಿಗೆ ದೂರವಾದ ಭಾಂಧವ್ಯವಾಗಿ ಕೇವಲ ಹೆಸರಿಗಷ್ಟೇ ಹತ್ತಿರವಾಗಿ ಉಳಿದರೂ , ಆಗಾಗ್ಗೆ ಅಲ್ಲಿ ಅಸಹನೆಯ ಸ್ಪಾರ್ಕ್ ಸಿಡಿಯುತ್ತಲೇ ಇರುತ್ತದೆ.
ಮತ್ತೇ ಕೆಲವರು ಭೌತಿಕವಾಗಿ ಎಷ್ಟೇ ದೂರದಲ್ಲಿದ್ದರೂ ಅವರನ್ನು ಹೃದಯದ ತಿಜೋರಿಯಲ್ಲಿ ಪ್ರೀತಿಯೆಂಬ ಕೀಲಿಯಿಂದ ಭದ್ರವಾಗಿ ಲಾಕ್ ಮಾಡಿರುವುದರಿಂದ ಆ ಅನುಬಂಧದ ಹಣತೆ ಎದೆಯಾಳದಲ್ಲಿ ಸಹನೆಯಿಂದ ಸದಾ ಬೆಳಗುತ್ತಲೇ ಇರುತ್ತದೆ.
ಅದು ಎಲ್ಲಾ ಮಾನವ ಸಂಬಂಧಗಳಲ್ಲೂ ಬೆಳಗುತ್ತಲೇ ಇರಲಿ…!
ಹಿರಿಯೂರು ಪ್ರಕಾಶ್.
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ