November 29, 2024

Newsnap Kannada

The World at your finger tips!

deepa1

ಮತ್ತೆ ಮತ್ತೆ ಕಾಡುತ್ತದೆ ನಿರಾಸೆ,ಆದರೂ ಭರವಸೆಯ ಬೆಳಕನ್ನು ಹುಡುಕುತ್ತಾ..

Spread the love

ಅದೇ ರಾಜಕೀಯ, ಅದೇ ಆಡಳಿತ ಅದೇ ಸುದ್ದಿಗಳು,
ಬೇಸಿಗೆಯ ಸೆಖೆ, ಮಳೆಗಾಳಿಯ ಆಹ್ಲಾದ ಚುಮುಚುಮುಗುಟ್ಟುವ ಚಳಿ,

ಅಪಘಾತಗಳು, ಅಪರಾಧಗಳು, ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚೆಚ್ಚು,

ತಲೆ ಎತ್ತುತ್ತಿರುವ ಕಟ್ಟಡಗಳು, ರಸ್ತೆ ತುಂಬಿದ ಕಾರುಗಳು,
ಹವಾನಿಯಂತ್ರಿತ ಮೆಟ್ರೋ, ಅರಮನೆಯಂತ ಶಾಲೆಗಳು,
ಭವ್ಯ ಆಸ್ಪತ್ರೆಗಳು, ಲಕ್ಷುರಿ ಹೋಟೆಲುಗಳು,

ಟಿವಿ, ಫೇಸ್ ಬುಕ್, ಟ್ವಿಟ್ಟರ್, ಕ್ಲಬ್ ಹೌಸ್, ವಾಟ್ಸಪ್ ಗಳು, ಘಟಿಸುವ ಮೊದಲೇ ಸುದ್ದಿಯಾಗುವ ಬ್ರೇಕಿಂಗ್‌ ನ್ಯೂಸ್ ಗಳು,

ಕೋಟಿಕೋಟಿ ಬೆಲೆ ಬಾಳುವ ವಜ್ರ ವ್ಯೆಡೂರ್ಯಗಳು,
ಲಕ್ಷಾಂತರ ಬೆಲೆಯ ಸೂಟು ಬೂಟುಗಳು,
ಮನತಣಿಸುವ ಶಾಪಿಂಗ್ ಮಾಲ್ ಗಳು,

ರಾಜ್ಯ, ದೇಶ ಸ್ವರ್ಗಕ್ಕೆ ಹತ್ತಿರ ಎಂಬ ಜಾಹೀರಾತುಗಳು,
ಆದಾಯದ, ಬೆಳವಣಿಗೆಯ ಅಂಕಿ ಅಂಶಗಳು,

ಓ, ನಾವೆಲ್ಲಾ ಅಭಿವೃದ್ಧಿ ಹೊಂದಿದ ದೇಶದ ಪ್ರಜೆಗಳು,
ಅದಕ್ಕಾಗಿಯೇ ಕಾಡಿತ್ತಿದೆ ನಿರಾಸೆ ಮತ್ತೆ ಮತ್ತೆ,

ನಿಜ ಹೇಳಿ,
ಪುಕ್ಕಟೆ ಸೀರೆ ಹಂಚುವಾಗ ನೂಕುನುಗ್ಗಲಿಗೆ ಹೆಂಗಸರು ಈಗಲೂ ಬಲಿಯಾಗುತ್ತಿಲ್ಲವೇ ?,

ಮಲಗಲು ಸೂರಿಲ್ಲದೆ ಮೋರಿ ಪಕ್ಕದ ದೊಡ್ಡ ಪ್ಯೆಪುಗಳಲ್ಲಿ ಲಕ್ಷಾಂತರ ಜನ ಈಗಲೂ ವಾಸಿಸುತ್ತಿಲ್ಲವೇ ?,

ಬಿರ್ಯಾನಿಯ ಆಸೆಗಾಗಿ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಈಗಲೂ ಲಕ್ಷಾಂತರ ಜನ ಬರುವುದಿಲ್ಲವೇ ?,

ಹೋಟೆಲ್ ಗಳಲ್ಲಿ, ಕಾರ್ಖಾನೆಗಳಲ್ಲಿ ಪುಟ್ಟ ಪುಟ್ಟ ಕಂದಮ್ಮಗಳು ಶಾಲೆಗೆ ಹೋಗಲು ಸಾಧ್ಯವಾಗದೆ ಈಗಲೂ ದುಡಿಯುತ್ತಿಲ್ಲವೇ ?,

ಹಸಿವಿನಿಂದ, ಅವಮಾನದಿಂದ, ಬೆಳೆನಾಶಗಳಿಂದ ಈಗಲೂ ಸಾವಿರಾರು ಜನರು ಸಾಯುತ್ತಿಲ್ಲವೇ ?,

ಕ್ಷುಲ್ಲುಕ ಕಾರಣಕ್ಕಾಗಿ ದೊಂಬಿಗಳಾಗಿ ಜನ ಹೊಡೆದಾಡಿಕೊಳ್ಳುತ್ತಿಲ್ಲವೆ ?,

ಛೆ, ಯಾವ ದೃಷ್ಟಿಕೋನದಿಂದ ನೋಡಬೇಕು ಈ ಸಮಾಜವನ್ನು ?,
ಅಥವಾ ಏನೂ ಯೋಚಿಸದೆ ಇದೆಲ್ಲಾ ಸಹಜವೆಂಬಂತೆ ಬದುಕಬೇಕೆ ?,

ಹಾಗಾದರೆ ನಾವು ಪ್ರತಿಕ್ರಿಯಿಸಲೇ ಆಗದ ಅಸಹಾಯಕ ಗೊಂಬೆಗಳೇ ?,
ಅಥವಾ ಭ್ರಮೆಗಳನ್ನು ನಿಜವೆಂದೂ, ವಾಸ್ತವಗಳನ್ನು ಕನಸುಗಳೆಂದು, ತಿಳಿದು ಹೇಗೋ ಬದುಕುತ್ತಿರುವ ಮೂರ್ಖರೇ ?,

ಅದಕ್ಕಾಗಿಯೇ ಕಾಡುತ್ತಿದೆ ನಿರಾಸೆ ಮತ್ತೆ ಮತ್ತೆ ನನ್ನನ್ನು ಆಳವಾಗಿ,

ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವುದು.

ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎಂದು ಕೂಗುವುದು.

ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎಂದು ದೂರುವುದು.

ಕೆರೆಗಳನ್ನು ನುಂಗಿ ಬಿಡುವುದು,
ಕುಡಿಯಲು ನೀರಿಲ್ಲ, ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು.

ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎಂದು ಕೊರಗುವುದು.

ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.

ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.

ದಿಡೀರ್ ಶ್ರೀಮಂತಿಕೆಯ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.

ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎಂದು ಹಲುಬುವುದು.

ಸಂಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡ್ಯೆವೋರ್ಸ ಮಾಡಿಕೊಳ್ಳುವುದು.

ಹಣ ಪಡೆದು, ಜಾತಿ ನೋಡಿ ಓಟಾಕುವುದು,
ಸರ್ಕಾರ ಸರಿಯಿಲ್ಲ ಎಂದು ಬಯ್ಯುವುದು.

ಎಚ್ಚೆತ್ತುಕೊಳ್ಳೋಣ,

ಪರಿಸ್ಥಿತಿ ಕ್ಯೆ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.
ಇದೆಲ್ಲಾ ಖಂಡಿತ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.

ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ಸರ್ಕಾರಕ್ಕೆ ಮಾತ್ರ.
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.

ಹೊಸ ನಿರೀಕ್ಷೆಗಳು ಹುಟ್ಟಲಿ ಎಂಬ ಭರವಸೆಯೊಂದಿಗೆ …..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!