December 19, 2024

Newsnap Kannada

The World at your finger tips!

horatti p

KUWJ ಜಿಲ್ಲಾ- ರಾಜ್ಯ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸ್ವೀಕಾರ – ವೃತ್ತಿ ಘನತೆ ಉಳಿಸಿಕೊಳ್ಳಿ: ಸಭಾಪತಿ ಹೊರಟ್ಟಿ ಕರೆ

Spread the love

ಪತ್ರಕರ್ತ ವೃತ್ತಿ ಜವಾಬ್ದಾರಿಯುತವಾದದ್ದು. ಪತ್ರಕರ್ತರು ರಾಜಕಾರಣಿಗಳಿಗೂ ಬುದ್ದಿ ಹೇಳುವಂತಹ ನೈತಿಕತೆಯನ್ನು ಉಳಿಸಿಕೊಳ್ಳುವ ಮೂಲಕ ವೃತ್ತಿ ಘನತೆ ಕಾಪಾಡಿಕೊಳ್ಳಲು ವಿಧಾನಪರಿಷತ್ ಸಭಾಪತಿ ಬಸವರಾಜಹೊರಟ್ಟಿ ಕರೆ ನೀಡಿದರು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಪತ್ರಕರ್ತರು ಸಮಾಜದ ಒಳಿತಿಗೆ ಕೈಗೊಂಡ ಪ್ರತಿಜ್ಞೆಯಂತೆ ದುಡಿಯಬೇಕು ಎಂದರು.

ಸಮಾಜದ ಆಗು ಹೋಗುಗಳಿಗೆ ಸದಾ ಪ್ರತಿಸ್ಪಂದಿಸುವ ಪತ್ರಕರ್ತರು
ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ತಮ್ಮ ವಿಧಾನಪರಿಷತ್ ನಿಧಿಯಿಂದು ಒಂದೂವರೆ ಕೋಟಿ ರೂ ಹೆಚ್ಚಿನ ನೆರವನ್ನು ಪತ್ರಕರ್ತ ಭವನಗಳಿಗೆ ನೀಡಿದ್ದೇನೆ. ರಾಜ್ಯಾದ್ಯಾಂತ ತಾಲ್ಲೂಕು ಮಟ್ಟದಲ್ಲೂ ಪತ್ರಕರ್ತರ ಭವನಗಳ ನಿರ್ಮಾಣಕ್ಕೆ ಗರಿಷ್ಠ 10 ಲಕ್ಷ ರೂ. ಗಳನ್ನು ನೀಡಲು ಸಿದ್ದನಿದ್ದೇನೆ . ಕಾರ್ಯನಿರತ ಪತ್ರಕರ್ತರ ಸಂಘವು ಸೂಚಿಸುವ ಜಿಲ್ಲೆಗಳಲ್ಲೂ ತಮ್ಮ ತಾಯಿಯ ಹೆಸರಿನಲ್ಲಿರುವ ಟ್ರಸ್ಟ್ ಮೂಲಕ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಿಧಿ ಸ್ಥಾಪಿಸಲು ತಾವು ಸಿದ್ದರಿರುವುದಾಗಿ ಘೋಷಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜ್ಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳು ಕ್ರೀಯಾಶೀಲವಾಗಿವೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ನಿವೃತ್ತ ಪತ್ರಕರ್ತ ಪಿ.ರಾಮಯ್ಯ ಅವರು ಮಾತನಾಡಿ, ವೃತ್ತಿ ಬದ್ಧತೆ ಉಳಿಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಸವಾಲಾಗಿದೆ. ಆಸೆ, ಆಮೀಷಗಳಿಗೆ ಬಲಿಯಾಗದೆ ವೃತ್ತಿ ಘನತೆ ಕಾಪಾಡಿ ಎಂದರು.
ನಲವತ್ತೊಂಬತ್ತು ವರ್ಷದ
ಪತ್ರಿಕೋದ್ಯಮದ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.

ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಮಾತನಾಡಿ, ವಾರ್ತಾ ಇಲಾಖೆ ಮತ್ತು ಕೆಯುಡಬ್ಲ್ಯೂಜೆ ಬಾಂಧವ್ಯದ ಕೊಂಡಿ ಗಟ್ಟಿಯಾಗಿರಬೇಕು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ನಮಗೆ ಸದಾ ಸಹಕಾರ ನೀಡುತ್ತಾ ಮಾದರಿ ಸಂಘಟನೆಯಾಗಿ ಬೆಳೆದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚುನಾವಣೆ ಸವಾಲು ಎದುರಿಸುವ ಮೂಲಕ ದೇಶದಲ್ಲಿ ಒಂದು ಮಾದರಿಯ ವೃತ್ತಿಪರ ಸಂಘಟನೆಯಾಗಿ ಹೆಮ್ಮರವಾಗಿ ಬೆಳೆದಿದೆ ಎಂದರು.
ಸಂಘವು ರಾಜ್ಯ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಅವಿರತವಾಗಿ ಶ್ರಮಿಸಲಿದೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಮೇಶ್ ಅಜ್ಜಮಾಡ ಕುಟ್ಟಪ್ಪ, ಭವಾನಿಸಿಂಗ್, ಪುಂಡಲೀಕ್ ಬಾಳೋಜಿ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ, ಸೋಮಶೇಖರ ಕೆರಗೋಡು, ನಿಂಗಪ್ಪಚಾವಡಿ ಉಪಸ್ಥಿತರಿದ್ದರು.

ಹೊಸದಾಗಿ ಆಯ್ಕೆಯಾಗಿರುವ ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Copyright © All rights reserved Newsnap | Newsever by AF themes.
error: Content is protected !!