ಕವಿ ಎಂದರೆ ಕಲ್ಪನಾ ವಿಹಾರಿ… ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯೇ ಕವಿತ್ವ. ಮನಸ್ಸು ಪ್ರಶಾಂತವಾಗಿ ಇರುವಲ್ಲಿ ಸಾಹಿತ್ಯ ಉತ್ತಮವಾಗಿ ಹೊರಹೊಮ್ಮುತ್ತದೆ. ನೈಸರ್ಗಿಕವಾಗಿ ಇರುವಂತಹ ಪ್ರಕೃತಿಯ ಸೊಬಗನ್ನು ಹಲವಾರು ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದಿಕವಿ ಪಂಪನಿಂದ ಇತ್ತೀಚಿನವರೆಗಿನ ಬರಹಗಾರರು ಪ್ರಕೃತಿಯ ವೈಭವವನ್ನು ಬಣ್ಣಿಸಿದ್ದಾರೆ. ನಿಷ್ಕಲ್ಮಶ ಪ್ರಕೃತಿಯಂತೆ ಭಾವಲಹರಿಗಳು ಕಾವ್ಯ, ಗೀತೆ, ಲೇಖನಗಳು ಹೊರಹೊಮ್ಮುತ್ತವೆ.
ಇಂದು ಜಗದಕವಿ, ಯುಗದಕವಿ, ರಸ ಋಷಿ ಕುವೆಂಪುರವರ ೧೧೮ ನೆಯ ಜನ್ಮದಿನ. ಕುವೆಂಪುರವರ ಹೆಸರು ಕೇಳದ ಕನ್ನಡಿಗನಿಲ್ಲ. ಪುಟ್ಟಪ್ಪ ರಾಷ್ಟ್ರಕವಿಯಾದ ಸಾಧನೆ ವಿಶಿಷ್ಟ. ಸ್ವಚ್ಚಂದ ಭಾವವನ್ನು ಬಯಸುತ್ತಿದ್ದ ರಸ ಋಷಿ ತಮ್ಮ ಸಾಹಿತ್ಯ ಚಟುವಟಿಕೆಯಲ್ಲಿ ಪ್ರಕೃತಿಯ ಚಿತ್ರಣವನ್ನು ಬಿಂಬಿಸಿದ್ದಾರೆ. ಮಲೆನಾಡಿನ ಸೌಂದರ್ಯವು ಎಂಥವರನ್ನು ಕೂಡ ಬೆರಗಾಗಿಸುತ್ತದೆ. ಕುಪ್ಪಳಿ ಮೂಲದ ಶ್ರೀಯುತರು ಈ ಪ್ರಕೃತಿಯ ಮಡಿಲಲ್ಲಿ ಬೆಳೆದು ಧೀಮಂತರಾದವರು. ‘ಕೈಮುಗಿದು ಒಳಗೆ ಬಾ, ಇದು ಸಸ್ಯಕಾಶಿ’ ಎನ್ನುವಂತೆ ಪ್ರಕೃತಿ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಮಲೆನಾಡಿನ ಗಿರಿಶಿಖರಗಳು, ಸಾಲು ಸಾಲು ಮರದ ಕೊಂಬೆಗಳು, ಬೆಟ್ಟಗುಡ್ಡಗಳು, ಬಾನೆತ್ತರಕೆ ನಿಂತಿರುವ ಗಿಡಮರಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಕವಿಮನೆ, ಕವಿಶೈಲ ಮಾರ್ಗದ ಪಯಣ ಮೈನವಿರೇಳಿಸುತ್ತದೆ. ಈ ಸೌಂದರ್ಯದ ನೋಟ ಕಾವ್ಯದಲ್ಲಿ ಎಲ್ಲರಿಗೂ ಮನಸಿಗೆ ಮುದ ನೀಡುತ್ತದೆ. ಸಹ್ಯಾದ್ರಿಯ ತಪ್ಪಲಲ್ಲಿ ಕಾವ್ಯ ಮೇಳೈಸುತ್ತದೆ.
ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ನಿಸರ್ಗವನ್ನು ಆಂಗ್ಲಭಾಷೆಯ ಮೂಲಕ ಮೊದಲಾಗಿ ಪಸರಿಸಿದ ಶ್ರೀಯುತರು ಕನ್ನಡಿಗರಿಗೆ ಅರ್ಥೈಸುವಂತೆ ತಾಯ್ನಾಡ ಭಾಷೆ ಕನ್ನಡದಲ್ಲಿ ರಚಿಸಿದ್ದಾರೆ. ವಿಹಂಗಮ, ರಮಣೀಯ ನೋಟದ ಪರಿಸರವನ್ನು ಶ್ರೀಯುತರು ಸಾಧ್ಯವಾದಷ್ಟು ಹರಡಿದ್ದಾರೆ. ಕಾಡಿನಲ್ಲಿ ತಪಸ್ಸು ಮಾಡುವುದು ವ್ರತವಿದ್ದಂತೆ. ಋಷಿಮುನಿಗಳು ಸರ್ವರ ಒಳಿತಿಗಾಗಿ ಈ ರೀತಿ ಮಾಡುತ್ತಿದ್ದರಂತೆ, ಕುವೆಂಪುರವರು ಪರಿಸರದೊಡನೆ ಸಾಹಿತ್ಯದಲ್ಲಿ ಋಷಿಯಾಗಿದ್ದಾರೆ. ‘ಸಾಹಿತ್ಯದಲ್ಲಿ ಋಷಿಯಾಗದವನು ಕವಿಯಾಗಲಾರ’ ಎಂಬ ಮಾತಿಗೆ ಕುವೆಂಪುರವರು ಉಪಮೇಯ. ಪರಿಸರ ದೈವದತ್ತವಾಗಿ ಇರುವುದನ್ನು ಅರ್ಥವರ್ಣನೆ ಎಲ್ಲರನ್ನೂ ಮನಸೂರೆಗೊಳ್ಳುತ್ತದೆ.
ಮಲೆನಾಡಿನ ಬನಗಳು ಕುವೆಂಪು ಅವರ ಸಾಹಿತ್ಯ ವನ್ನು ಇನ್ನೂ ಆಪ್ತವಾಗಿಸಿಬಿಡುತ್ತವೆ. ಮಲೆನಾಡಿನ ಸೌಂದರ್ಯಕ್ಕೂ ಕುವೆಂಪು ಅವರ ಸಾಹಿತ್ಯಕ್ಕೂ ಅದೇನೋ ಅವಿನಾಭಾವ ಸಂಬಂಧ.
‘ ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ, ಹರಿವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ, ಅಲ್ಲಿ ಗಿಳಿಗೊರವಂಕ ಕೋಗಿಲೆಗಳಿಂಚರವು ಕಲೆಯು ತಲೆಯಲೆಯಾಗಿ ಕೇಳಿಬರುತಲಿರಲಿ’ ಎಂಬ ಕವನದಲ್ಲಿ ಇಡೀ ಮಲೆನಾಡನ್ನೇ ಮುದ್ದಾಗಿ ಕಾಣಿಕೆಯಾಗಿ ನೀಡಿದ್ದಾರೆ. ಯೋಜನೆ ಹಾಕಿಕೊಂಡು ಹೋಗಲಾಗದೇ ಇದ್ದಾಗ ಈ ಹಾಡು ಕೇಳಿ ಸಹ್ಯಾದ್ರಿ ಬೆಟ್ಟಗಳಿಗೆ ಕವಿಯ ಭಾವದಲ್ಲಿ ಕಣ್ಮುಚ್ಚಿಕೊಂಡು ಕೇಳುತಲಿದ್ದರೆ, ಹಾಗೇ ಒಂದು ಟೂರ್ ಹೋಗಿಬಂದು ಬಿಡಬಹುದು. ‘ಉದಯಗಗನದಲಿ ಅರುಣನ ಛಾಯೇ, ಜಗದ ಜೀವನಕೆ ಚೇತನವೀಯೇ’ ಕವನ, ‘ಹಸಿರಿನುಯ್ಯಾಲೆಯಲಿ ಬಿಸಿಲು ತೂಗಾಡುತಿದೆ, ಚುಕ್ಕಿಯು ತ್ಯಾಗದಲಿ ಹಕ್ಕಿ ಹಾರಾಡುತಿದೆ’ ಕವನ ಹೀಗೆ ಅವರ ಕವನಗಳಲ್ಲಿ ನಮ್ಮನ್ನೂ ಆ ಪ್ರಕೃತಿ ಮಡಿಲಿಗೇ ಕರೆದುಕೊಂಡು ಹೋಗಿಬಿಡುತ್ತಾರೆ.
ಈ ಹಿನ್ನೆಲೆಯಲ್ಲಿ ನಿಷ್ಕಲ್ಮಶ ಪ್ರಕೃತಿಯಂತೆ ನಿಷ್ಕಲ್ಮಶ ವ್ಯಕ್ತಿತ್ವ ಅವರದ್ದಾಗಿದೆ. ಅವರ ಸಾಹಿತ್ಯದಲ್ಲಿ ಎಲ್ಲೂ ದೋಷ ಕಾಣದೇ ‘ರಾಷ್ಟ್ರಕವಿ’ಯಾದರು. ಪರಿಸರ ಸಕಲ ಜೀವಿಗಳಿಗೂ ಆಸರೆ ನೀಡುವಂತೆ ‘ಏನಾದರೂ ಆಗು, ಮೊದಲು ಮಾನವನಾಗು’ ಎಂಬ ದಿವ್ಯ ಸಂದೇಶವನ್ನು ಸಾರಿದ ಈ ಕವಿ, ಶೂದ್ರ ಕವಿ, ಶೂದ್ರ ತಪಸ್ವಿ ಎಂದುಕೊಂಡರೂ ವಿಶ್ವಮಾನವವನ್ನು ಸಾರಿ ವಿಶ್ವಮಾನವನೆನೆಸಿದರು. ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಮರದಂತೆ, ಕುವೆಂಪುರವರು ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಅವರ ಸುಪುತ್ರರಾದ ಶ್ರೀಯುತ ಪೂರ್ಣ ಚಂದ್ರ ತೇಜಸ್ವಿಯವರೂ ಸಹ ಪ್ರಕೃತಿ ಪ್ರಿಯರು.ಪ್ರಕೃತಿ, ಪ್ರಾಣಿ, ಪಕ್ಷಿಗಳ ಮಡಿಲಲ್ಲಿಯೇ ಅವರ ಒಡನಾಟ. ಕುವೆಂಪು ಅವರದು ಸಸ್ಯಕಾಶಿ ಯಾದರೆ, ಇವರದು ಪಕ್ಷಿಕಾಶಿ.
ಕುವೆಂಪುರವರು ಇಂಗ್ಲಿಷ್ ನಲ್ಲಿ ಬರವಣಿಗೆ ಆರಂಭಿಸಿದರೂ ಕನ್ನಡದ ಸೊಬಗಿಗೆ ಮನಸೋತು ಕನ್ನಡದಲ್ಲೇ ಬರೆದು, ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟು ರಾಷ್ಟ್ರ ಕವಿ ಎನಿಸಿದಂತಹ ಮಲೆನಾಡ ಕವಿ ನಮ್ಮ ಹೆಮ್ಮೆಯ ಕುವೆಂಪು.
ಮನುಜ ಉತ್ತಮ ಸಂಸ್ಕಾರದಿಂದ, ನಿಸ್ವಾರ್ಥ ಮನೋಭಾವದಿಂದ ಇದ್ದಾಗ ಸಾಧನೆಗೆ ಪೂರಕ. ಆನಂದಮಯ ಈ ಜಗ ಹೃದಯ ಎಂಬ ರಸ ಋಷಿಯ ಮಾತು ಎಂದೆಂದಿಗೂ ಅಮರ. ಕುವೆಂಪು ಕನ್ನಡನಾಡಿನ ಅಜರಾಮರರು.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)