ನನ್ ಗೆಳತಿ ಸುಧಾ ಸದಾ ‘ಊರ್ ಕಡೆ ಮಾಡೋ ಕೊಟ್ಟೆ ಕಡುಬು ತಿನ್ಲಿಕ್ ಎಷ್ಟು ಚಂದ ಗೊತ್ತಾ, ಅದರೊಟ್ಟಿಗೆ ಮಾವಿನ ಚಟ್ನಿ. . .ಆಹಾ’ ಅಂತಾನೇ ಇರ್ತಿದ್ರು.
‘ಕೊಟ್ಟೆ’ ಅನ್ನೋ ಹೆಸರೇ ಬಯಲುಸೀಮೆಯ ನಮಗೆ ಹೊಸತು. ನಮ್ಗೆ ಗೊತ್ತಿರೋ ‘ಕೊಟ್ಟೆ’ ಪದ ‘ಐ ಹ್ಯಾವ್ ಗಿವನ್’ ಎನ್ನುವ ಇಂಗ್ಲಿಷ್ ಅರ್ಥದ್ದು. . ಮತ್ತು ‘ಟೋಪಿ ಬೇಕೆ ಟೋಪಿ ಎಂಥಾ ಟೋಪಿ . . ಎನ್ನುವ ಹಾಡಿನಲ್ಲಿ ಕೊನೆಗೆ ‘ಕೊಟ್ಟೆ ಕೊಟ್ಟೆ ಕೋಳೀ ಮೊಟ್ಟೆ’ ಎನ್ನುತ್ತಿದ್ದೆವು. ಆ ‘ಕೊಟ್ಟೆ’ ಗೊತ್ತಿತ್ತು. ಇದ್ಯಾವ ಕೊಟ್ಟೇನಪ್ಪಾ ಅಂತ ಒಂದು ರೀತಿಯ ಅಚ್ಚರಿ. ಅದೇ ಆಶ್ಚರ್ಯ ಮಿಶ್ರಿತ ಕುತೂಹಲದಿಂದ ಅವತ್ತು ಶುಕ್ರವಾರ ಅವರ ಮನೆಗೆ ಅವರು ಮಾಡೋ ‘ಕೊಟ್ಟೆ’ ನೋಡ್ಲಿಕ್ಕೆ ಹೋದೆ.
ನಾವು ಚಿಕ್ಕಂದಿನಲ್ಲಿ ತೆಂಗಿನ ಗರಿಯ ಒಂದು ಭಾಗವನ್ನು ಸೀಳಿ ಪೀಪಿ ಮಾಡಿ ಊದುತ್ತಿದ್ದೆವಲ್ಲಾ ಆ ಥರದ ಅದೇನೋ ಎಲೆಯನ್ನು ಅಲ್ಲಿಟ್ಟಿದ್ದರು. ನಾನು ಅದು ಅವರ ಮನೆಯಲ್ಲಿ ಬಂದಿದ್ದ ಅವರ ಅಣ್ಣನ ಮಗಳು ಊದಲು ಇಟ್ಟ ಅವರ ಕಡೆಯ ಪೀಪಿಯ ಗರಿ ಎಂದು ತಿಳಿದೆ.
ಸುಧಾ ಕಡುಬಿನ ಹಿಟ್ಟನ್ನು ರೆಡೀ ಮಾಡಿಟ್ಟಿದ್ದರು. ಅದಕ್ಕೇನೇನು ಹಾಕ್ತೀರಿ ಅಂತ ಕೇಳಿದೆ. “ಮಾಮೂಲೇ . . ನಿಮ್ಮ ಕಡುಬಿನ ಥರಾನೇ. ಉದ್ದು ಒಂದು ಭಾಗ, ಅದಕ್ಕೆ ಕುಸುಬಲಕ್ಕಿ ತರಿ ಎರಡು ಅಥವಾ ಎರಡೂವರೆ ಭಾಗ. ರಾತ್ರೀನೀ ತಿರುವಿಟ್ರೆ ಬೆಳಿಗ್ಗೆ ಹೊತ್ತಿಗೆ ಹುದುಗಿ ಕಡುಬು ಚೆನ್ನಾಗಿ ಬರುತ್ತೆ” ಅಂದ್ರು. ನಮ್ಮ ಕಡೇನೂ ಇದೇ ಥರಾ. ಆದ್ರೆ ನಾವು ಬಾಳೆಯೆಲೆಯ ಒಳಗೆ ಹಿಟ್ಟು ಹುಯ್ದು ಉದ್ದಿನ ಕಡುಬು ಮಾಡ್ತೀವಿ. ಇರಲಿ ಇದ್ಯಾವ ಥರದ್ದೋ ನೋಡೋ ಆಸೆ, ಕುತೂಹಲ ಜಾಸ್ತಿ ಆಯ್ತು. ಕಡುಬಿನ ಪಾತ್ರೆಗೆ ನೀರು ಹಾಕಿ ಕುದಿಯಲು ಇಟ್ಟರು.
ಆಗ್ಲೇ ಹೇಳಿದ್ನಲ್ಲಾ ಪೀಪಿ ಊದೋ ತೆಂಗಿನ ಗರಿ ತರಹದ ಗರಿ, ಅದರಿಂದ ಒಂದೊಂದೇ ಗರಿ ತೆಗೆದು ತಳದಲ್ಲಿ ಮೂರು ಮೂಲೆ ಮಾಡಿ ಅದಕ್ಕೆ ತೆಂಗಿನ ಕಡ್ಡಿಯನ್ನು ಚುಚ್ಚಿ ಸರಿಯಾದ ಬೇಸ್ ಮಾಡಿದ್ರು. ಅದನ್ನು ಸುತ್ತುತ್ತಾ ಸುತ್ತುತ್ತಾ, ಮಧ್ಯ ಕಡ್ಡಿ ಚುಚ್ಚುತ್ತಾ ಒಂದು ಅಂಗೈ ಅಗಲದ ಅರ್ಧ ಅಡಿಯ ಒಂದು ಪಾತ್ರೆಯಾಕಾರವನ್ನು ಮಾಡಿಯೇ ಬಿಟ್ರು. ಎಷ್ಟು ಸುಲಭಕ್ಕೆ ಮಾಡಿದ್ರು ಅಂದ್ರೆ ಕೊಟ್ಟೆ ಮಾಡೋದು ಕಷ್ಟ ಅಲ್ಲವೇ ಅಲ್ಲ ಅಂತ ನನಗೆ ಅನಿಸಿತು. “ರೀ ಸುಧಾ ಇದು ಯಾವ ಗರಿ? ತೆಂಗಿನ ಗರಿ ತರಹಾನೇ ಇದೆ. ಆದ್ರೆ ಅದಲ್ಲಪ್ಪಾ” ಅಂದೆ. ಅದಕ್ಕೆ ಅವರು “ ಇದನ್ನು ನಮ್ಮೂರಿನ ಕಡೆ ಮುಂಡುಗದ ಓಲೆ ಅಂತೀವಿ. ಗದ್ದೆ, ಹಳ್ಳಗಳಲ್ಲಿ ಹೆಚ್ಚಾಗಿ ಬೆಳೆಯುತ್ತೆ. ಕೆಲವು ಸ್ಥಳಗಳಲ್ಲಿ ಬೇರೆಬೇರೆ ಹೆಸರುಗಳನ್ನು ಹೇಳ್ತಾರೆ. ಇದ್ರಲ್ಲಿ ಮೂರು ಥರದ ಮುಳು ಇರುತ್ತೆ… ಎರಡು ಮುಳ್ಳನ್ನು ಸವರಿ ತೆಗೀಬೇಕು. ಮಧ್ಯದ ಗಟ್ಟಿ ಮುಳ್ಳನ್ನು ತುಂಬ ಎಚ್ಚರದಿಂದ ಈಳಿಗೆ ಮಣೆಯಲ್ಲಿ ಸವರಿ ತೆಗೀಬೇಕು. ಗಮನ ಹರಿಸದಿದ್ರೆ ಚೆನ್ನಾಗಿ ತುರಿಸುತ್ತೆ ಮುಳ್ಳು” ಅಂದ್ರು. ನನಗೆ ಯಾಕೋ ಭಯ ಆಯ್ತು. ನಮ್ ಬಾಳೆಯೆಲೆಯಲ್ಲಿ ಹೀಗೆಲ್ಲಾ ಇರಲ್ಲಪ್ಪಾ ಸದ್ಯ ಅಂದುಕೊಂಡೆ ಮನಸ್ಸಿನಲ್ಲೇ.
“ಎಲೆಯ ಪರಿಮಳ ಕೊಟ್ಟೆ ಕಡುಬಿನಲ್ಲಿ ಚಂದ ಬರಬೇಕೆಂದರೆ ಬತ್ತದ ಹುಲ್ಲಿನ ಬೆಂಕಿಯಲ್ಲಿ ಎಲೆಯನ್ನು ಬಾಡಿಸಬೇಕು. ಮುದುರಿ ಸುಕ್ಕಾಗಿ ಕಪ್ಪಾದ ಎಲೆಯನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ ಸುಕ್ಕು ತೆಗೆಯಬೇಕು. . .” ಅಂದ್ರು ಸುಧಾ. ಅಯ್ಯೋ ದೇವ್ರೆ ಇದೊಳ್ಳೆ ಕಥೇನಲ್ಲಪ್ಪಾ. ಇಷ್ಟು ಕಷ್ಟ ಪಟ್ಟಾದ್ರೂ ಇದ್ರಲ್ಲೇ ಕಡುಬು ಮಾಡೋದಾದ್ರೂ ಯಾಕೋ ಅಂದ್ಕೊಂಡೆ. ಬಾಯ್ಬಿಟ್ಟು ಹೇಳೋಕಗುತ್ತ್ಯೇ?
ನಾ ಕಣ್ಕಣ್ ಬಿಟ್ಕೊಂಡು ನೋಡ್ತಿದ್ದ ಹಾಗೇನೇ ಚಕಚಕ ಅಂತ ಸುಧಾ ಐದು “ಕೊಟ್ಟೆ” ಸುತ್ತೇಬಿಟ್ರು. ಕಡುಬಿನ ಪಾತ್ರೆಯೊಳಗೆ ಕೊಟ್ಟೆ ಇಟ್ಟು, ಹಿಟ್ಟು ಹುಯ್ದ್ರು. ಅರ್ಧ ಗಂಟೆಯೊಳಗೆ ಕಡುಬು ತಯಾರಾಯಿತು. ಬಿಸಿ ಬಿಸಿ ಕಡುಬಿಗೆ ಹುಳಿಮಾವಿನ ಖಾರದಚಟ್ಣಿ ಮೇಲೊಂದಿಷ್ಟು ಹಸುವಿನ ತುಪ್ಪ. . ಆಹಾ ಎರಡು ಕಡುಬು ಗುಳುಂ ಆಯ್ತು. ನಿಜಾ ಹೇಳ್ತೀನಿ ಅಂಥಾ ರುಚಿಯಾದ ಕಡುಬನ್ನು ನಾ ತಿಂದೇ ಇರ್ಲಿಲ್ಲ. ನೋಡಲು ಅಷ್ಟು ದೊಡ್ಡದೆನಿಸಿದ್ರೂ ಒಳಗೆ ಬಿದಿರ ಕೊಳಲೊಳಗಿನ hಚಿಟಟoತಿ ಥರ ಒಂದು ಇದರೊಳಗೂ ಮಧ್ಯೆ ಖಾಲಿ ಜಾಗ ವಿಶೇಷ ಣexಣuಡಿe ಜಿeeಟ ಮಾಡಿಸಿತು.
ಬರೀ ಥ್ಯಾಂಕ್ಸ್ ಹೇಳಿದ್ರೆ ಸಾಕೇ…? “ಸುಧಾ ನಾನೂ ಒಂದು ದಿನಾ ಮಾಡ್ಬೇಕ್ರೀ ಕೊಟ್ಟೇನಾ.” ಅಂದೆ. ಅವರಿಗೋ ಖುಷೀಂದ್ರೆ ಖುಷಿ. ನಾನೂ ಅವರ ಕಡೆಯ ತಿಂಡಿ ಕಲಿಯಲು ಉತ್ಸಾಹ ತೋರಿದ್ದಕ್ಕೆ. ಸೈ ಅಂದಿದ್ದೇ. ಸಂಸ್ಕಾರಗೊಂಡಿದ್ದ ಎಲೆಯನ್ನು ನನಗೆ ಹಸ್ತಾಂತರಿಸಿಯೇಬಿಟ್ರು.
ಭಾನುವಾರ ಸಪ್ರ್ರೈಸ್ ಆಗಿ ನನ್ನ ಕೈಯ್ಯಾರೆ ಕೊಟ್ಟೆ ಕಡುಬು ಮಾಡಿ ಗಂಡ ಮಗನಿಗೆ ತಿನ್ನಿಸಿ ‘ಶಹಬ್ಬಾಸ್’ ಎನಿಸಿಕೊಂಡೇ ಬಿಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ. ಕಪ್ಪು ಕವರಿನಲ್ಲಿ ಆ ಮುಂಡುಗದ ಎಲೆಯನ್ನು ಅಡಗಿಸಿಕೊಂಡು ಮನೆಗೆ ಬಂದೆ. ಮನೆಗೆ ಕಾಲಿಟ್ಟಕೂಡಲೇ ಪತಿರಾಯ “ಏನ್ರೀ ಮೇಡಂ. . ಕೈಯಲ್ಲೇನೋ ಇದೆ.. ಪಾನೀಪುರೀ ತಂದ್ದ್ರಾ?” ಅಂತ ಕೇಳಿದ್ರು. “ಇಲ್ಲಪ್ಪಾ. . ಸುಧಾ ಏನೋ ಕೊಟ್ರು.. ಅದೂ” ಅಂತ ಮಾತನ್ನು ತೇಲಿಸಿಬಿಟ್ಟೆ.
ಹೆಣ್ಣು ಜೀವಕ್ಕೆ ಹೊಸತೇನಾದ್ರೂ ಮಾಡಬೇಕಂದ್ರೆ, ಹೊಸತು ಕಲೀಬೇಕಂದ್ರೆ, ಹೊಸತೇನಾದ್ರೂ ನೋಡಿದ್ರೆ ತಳಮಳ ಇರದಿದ್ದೀತೇ..? ರಾತ್ರಿಯೆಲ್ಲಾ ಕನಸಿನಲ್ಲಿಯೂ ‘ಕೊಟ್ಟೆ ಕಡುಬೇ’ ¸ಸದ್ಯ ಗಂಡ ಚೆನ್ನಾಗಿ ಗೊರಕೆ ಹೊಡೀತಿದ್ದರಿಂದ ನನ್ನ ಕಡುಬಿನ ಕನವರಿಕೆ ಅವರಿಗೆ ಕೇಳಿಸಿರಲಿಲ್ಲವಾದೀತು.
ಶನಿವಾರ ಬೆಳಿಗ್ಗೆಯೇ ಕಡುಬಿಗೆ ಉದ್ದು, ಅಕ್ಕಿತರಿ ನೆನೆಸಿದೆ. ನಾಳೆ ಭಾನುವಾರದ ವಿಶೇಷ ತಿಂಡಿ ಏನು ಎಂದು
ಕೇಳಿದ ಗಂಡ ಮಗನಿಗೆ ಇಡ್ಲಿ ಎಂದಷ್ಟೇ ಹೇಳಿದೆ. ಅವರಿಗೆ ಹೊಸ ತಿಂಡಿ ಕಲಿತು ಮಾಡಿಕೊಡೋ ಸಪ್ರ್ರೈಸ್ ಹಾಳಾಗಬಾರದಲ್ಲಾ. ಅದಕ್ಕೆ. ಮಾಮೂಲಿನಂತೆಯೇ ಇಡ್ಲಿಗೆ ರುಬ್ಬಿದಂತೆಯೇ ರಾತ್ರಿ ರುಬ್ಬಿಟ್ಟೆ.
ಯುದ್ಧಕ್ಕೆ ತಯಾರಾದ ಹೊಸ ಯೋಧನಂತಿದ್ದೆ ನಾನು. ಬೆಳಿಗ್ಗೆ ಅವರೆಲ್ಲ ಎದ್ದು ಬರುವ ವೇಳೆಗೆ ಅವರಿಗೆ ಕಾಣದ ಹಾಗೆ ‘ಕೊಟ್ಟೆ’ ಕಟ್ಟಿ ಕಡುಬು ರೆಡಿ ಮಾಡಿ ಹಸಿರು ಬಾಳೆಯೆಲೆ ಮೇಲೆ ಚಟ್ನಿ ತುಪ್ಪದೊಂದಿಗೆ ಕೊಟ್ಟರೆ ಆಹಾ ಅದೆಷ್ಟು ಖುಷಿ ಪಡ್ತಾರಲ್ವಾ? ಎಂಬ ಜಪದೊಂದಿಗೆ ಕೊಟ್ಟೆ ಕಟ್ಟಲು ಹೊರಟೆ.
ಶ್ರೀನಿವಾಸಾಅ. . . ನಾ ನೋಡಿದಷ್ಟು ಸುಲಭ ಆಗಿರಲಿಲ್ಲ ಕಟ್ಟೋದು. ಸುಧಾ ಚಕ ಚಕ ಅಂತ ಕಟ್ಟಿದ್ರು. ನಾ ಅದು ತುಂಬ ಸುಲಭ ಅಂದುಕೊಂಡಿದ್ದೆ. ಈಗ ನೋಡಿದ್ರೆ . . ಹೊಸತಾಗಿ ಹೂ ಕಟ್ಟೋ ಹುಡುಗಿ ಕೈ ಬೆರಳುಗಳನ್ನು ಹಾಗೋ ಹೀಗೋ ಅಲ್ಲಾಡಿಸ್ತಾನೇ ಹೂಗಳನ್ನೆಲ್ಲಾ ನೆಲದಲ್ಲೇ ಉದುರಿಸ್ತಳಲ್ಲಾ ಹಾಗೆ ಒಂದು ಕಡೆಯಿಂದ ಮೂರು ಮೂಲೆ ಮಾಡಿ ಕಡ್ಡಿ ಚುಚ್ಚುವಷ್ಟರಲ್ಲಿ ಒಂದೊಂದೇ ಮೂಲೆ ಬಿಚ್ಚುಕೊಳ್ತಾ ಇತ್ತು. ಅರ್ಧ ಗಂಟೆ ಕಷ್ಟ ಪಟ್ಟ ಮೇಲೆ ಹಾಗೂ ಹೀಗೂ ಒಂದು ಕೊಟ್ಟೆ ಆಯ್ತು. ಇನ್ನೊಂದು ಗಂಟೆ ತಗೊಂಡು ಮತ್ತೆ ಮೂರು ಮಾಡಿದೆ. ಸುಧಾ ಕೊಟ್ಟೇನ ಪಾತ್ರೆಯಲ್ಲಿಟ್ಟು ಹಿಟ್ಟು ಹುಯ್ದಿದ್ರು. ನಮಗೆ ಬಾಳೆಯೆಲೆಯನ್ನು ಕೈಲಿ ಹಿಡಿದು ಹುಯ್ದು ಆಮೇಲೆ ಪಾತ್ರೇನಲ್ಲಿ ಇಡೋ ಪದ್ಧತಿ ಗೊತ್ತು. ಇದನ್ನೂ ಹಾಗೆಯೇ ಕೈಲಿ ಹಿಡಿದು ಭಯ ಭಕ್ತಿಯಿಂದ ನಿಧಾನವಾಗಿ ಹಿಟ್ಟು ಹಾಕಿ ಇಡಲು ನೋಡ್ತೀನಿ ಹಿಟ್ಟು ಒಂದು ಮೂಲೆಯಿಂದ ಸೋರ್ತಿದೆ. ಗಡಬಡಿಸಿ ಬೇಗ ಬೇಗ ಅದನ್ನು ಕಡುಬಿನ ಪಾತ್ರೆಯಲ್ಲಿಟ್ಟೆ. ಇದು ಸರಿಹೋಗಲ್ಲ ಅಂತ ಗೊತ್ತಾಗಿ ಕೊಟ್ಟೆಗಳನ್ನೆಲ್ಲಾ ಪಾತ್ರೆಯೊಳಗೇ ಇಟ್ಟು ಹಿಟ್ಟು ಹುಯ್ದು ಮುಚ್ಚಳ ಮುಚ್ಚಿ ‘ಅಯ್ಯಪ್ಪಾ’ ಎಂದು ನಿಟ್ಟುಸಿರು ಬಿಟ್ಟೆ.. ಯಾಕೋ ಸುಸ್ತಾದಂತೆನಿಸಿ ಕಾಫಿ ಮಾಡಿ ಹೀರಿದೆ.
ಅಷ್ಟರಲ್ಲಿ ಗಂಡ ಮಗ ಎದ್ದಾಯ್ತು. ಬೇಗ ಬೇಗ ರೆಡಿಯಾಗಿ ಬನ್ನಿ. ತಿಂಡಿ ತಿನ್ನೋಣಾ. . ಎಂದು ಸಂಭ್ರಮ ತೋರಿದೆ. ಇದೇನಿವತ್ತು ಇಷ್ಟು ಖುಷಿ ಮುಖದಲ್ಲಿ ತಾಂಡವವಾಡ್ತಿದೆ ಅಂತ ಯಜಮಾನರು ರೇಗಿಸಿದರು. ನಾನು ನಿಧಾನವಾಗಿ ರಾಗ ಎಳೆಯುತ್ತಾ “ರೀ ಇವತ್ತು ಸೌತ್ ಕೆನರಾ ಸ್ಪೆಷಲ್ ಕೊಟ್ಟೆ ಕಡುಬು ಮಾಡಿದೀನ್ರೀ. . . ಮೊನ್ನೆ ಸುಧಾ ಮಾಡಿದ್ರೂ ಎಷ್ಟು ಚೆನಾಗಿತ್ತು ಗೊತ್ತಾ.? ನೀವಿವತ್ತು ತಿಂದ್ರೀ ಅಂದ್ರೆ ಪ್ರತಿ ಭಾನುವಾರಾನೂ ಇದನ್ನೇ ಮಾಡೇ ಅಂತೀರಿ” ಅಂದೆ. ಅಷ್ಟಕ್ಕೇ ನಿಲ್ಲಿಸಲಿಲ್ಲಾ. ಅದನ್ನು ಮಾಡೋ ವಿಧಾನವನ್ನು ಚಾಚೂ ತಪ್ಪದೇ ವಿವರಿಸುತ್ತಾ ಇದ್ದೆ. ಒಂದೆರೆಡು ಬಾರಿ ಯಜಮಾನರು ಆಕಳಿಸಿದ್ದನ್ನು ನೋಡಿಯೂ ನೋಡದಂತೆ ಮಳೆಗರೆದಂಥ ಉತ್ಸಾಹದಿಂದ ಕೊಟ್ಟೆಕಡುಬಿನ ಬಣ್ಣ, ಗಾತ್ರ, ರುಚಿಯ ಬಗ್ಗೆ ವರ್ಣಿಸಿದ್ದೇ ವರ್ಣಿಸಿದ್ದು. ಅವರಿಗೂ ಸಾಕಾಯ್ತು ವರ್ಣನೆ ಕೇಳಿ. . ಮೆಲ್ಲಗೆ ಭಾನುವಾರದ ಪೇಪರ್ ನ ವಿಶೇಷ ಸುದ್ಧಿಗಳತ್ತ ಜಾರಿಕೊಂಡರು.
ಸುಮಾರು 40 ನಿಮಿಷಗಳಾಯಿತು. ಬಾಳೆಯೆಲೆಯ ಮೇಲೆ ಮಾವಿನ ಚಟ್ಣಿ, ಘಮಘಮ ತುಪ್ಪ, ಸಾಲದೆಂಬಂತೆ ಎರಡು ಮೂರು ತರಕಾರಿ, ಕೊತ್ತಂಬರಿ ಸೊಪ್ಪಿನಿಂದ ಎಲೆಯನ್ನು ಗರ್ನಿಷ್ ಬೇರೆ ಮಾಡಿದ್ದೆ. ಕಡುಬಿನ ಪಾತ್ರೆಯ ಮುಚ್ಚಳ ತೆಗೆದು ಕಡುಬನ್ನು ತೆಗೆದು ಹಾಕುವ ಅತ್ಯುತ್ಸಾಹ. . . ಮುಚ್ಚಳ ತೆರೆದು ನೋಡಿದೆ. . .ಕಡುಬೇ ನಾಪತ್ತೆ. ಅಯ್ಯೋ ದೇವ್ರೆ, ಏನಾಯ್ತು ಅಂತ ನೋಡಿದ್ರೆ. ಕಟ್ಟಿದ ಕೊಟ್ಟೆಯ ತಳ ಬಿಚ್ಚಿಕೊಂಡು ಹಿಟ್ಟೆಲ್ಲ ಸೋರಿ ಪಾತ್ರೆಯೆಲ್ಲಾ ಹಿಟ್ಟುಮಯ. ಸ್ವಲ್ಪ ಭಾಗ ಇಡ್ಲಿಯಂತಾಗಿತ್ತು. ತಳದಲ್ಲಿದ್ದುದು ತಟ್ಟೆ ಇಡ್ಲಿಯಂತಾದ್ರೂ ಆಗಿದ್ರೆ ಚೆನ್ನಾಗಿತ್ತು. ಹಿಟ್ಟಿಗೆ ನೀರು ಬೆರೆತು ಅದು ಇಡ್ಲಿಯೂ ಅಲ್ಲದ, ಕಡುಬೂ ಅಲ್ಲದ ಪಿತಿಪಿತಿ ಎನ್ನುವ ದೋಸೆಯಂತಾಗಿತ್ತು. ಗಂಡ ಮಗ ನಾ ಮಾಡಿದ ವಿಶೇಷ ಕೊಟ್ಟೆ ಕಡುಬನ್ನು ತಿನ್ನಲು ತೋಳೇರಿಸಿಕೊಂಡುಬಂದು ನಿಂತು ನನ್ನ ಅವಸ್ಥೆ ನೋಡಿ ಮುಸಿ ಮುಸಿ ನಗುತ್ತಿದ್ದರು. ಜೋರಾಗಿ ನಕ್ಕರೆ ನನ್ನ ಕಣ್ಣಲ್ಲಿ ಕಾಣುವ ಗಂಗಾಕಾವೇರಿ ಸಂಗಮವನ್ನು ನೋಡುವುದು ಅವರಿಗೆ ಬೇಡವಾಗಿತ್ತು. ಜೊತೆಗೆ ಸುಂದರ ಭಾನುವಾರವನ್ನು ಹಾಳುಮಾಡಿಕೊಳ್ಳುವುದೂ ಬೇಡವಾಗಿತ್ತೆನ್ನಿ.
‘ಹೋಗ್ಲಿ ಬಿಡಮ್ಮ ನಮ್ಮನೆ ಕಡುಬಿನ ಪಾತ್ರೆ ಸರಿಯಿಲ್ಲ. ಅದಕ್ಕೇ ಹೀಗಾಯ್ತು. ಇಲ್ಲ್ದಿದ್ದ್ರೆ ನೀನು ಹೀಗೆಲ್ಲಾ ಮಾಡ್ತಿದ್ಯಾ’ ಅಂತ ಯಜಮಾನರು ಕಣ್ಣೊರಿಸಿದ ಶಾಸ್ತ್ರ ಮಾಡಿಯೂ ಆಯ್ತು. ನನಗೂ ಈ ಸಮಾಧಾನವೇ ಬೇಕಾಗಿತ್ತು. ಸದ್ಯ ಜೋರಾಗಿ ರೇಗಿಸಲಿಲ್ಲ, ಅಂದಾಡಲಿಲ್ಲವಲ್ಲಾ. . ಮೆಲ್ಲಗೆ “ರೀ. . . ರೀ. . . ತುಂಬ ದಿನಾ ಆಯ್ತಲ್ಲ್ವಾ ನಾವು ಹೊಟೆಲ್ಗೆ ತಿಂಡಿ ತಿನ್ನೋಕೆ ಹೋಗಿ” ಎಂದೆ. ಜಾಣ ಗಂಡ “ಹೌದು ಹೌದು. . ಈಗ ಹೋಗೋಣ್ವಾ.?” ಎಂದರು. . ತಾಳ ಹಾಕುತ್ತಿದ್ದ ಹೊಟ್ಟೆಯನ್ನು ಮುಂದಿಟ್ಟುಕೊಂಡು ಇಲ್ಲಾ ಅಂತ ಹೇಳೋಕಾಗುತ್ತ್ಯೇ.?
ಹೊಸ ತಿಂಡಿ ಮಾಡ್ತೀನಿ ಅನ್ನೋ ಭರದಲ್ಲಿ ಜಂಭ ಕೊಚ್ಚಿಕೊಂಡಿದ್ದ ನನ್ನನ್ನು ನನ್ನ ಗೆಳತಿಯರು ‘ನೀ ಮಾಡಿದ ಕೊಟ್ಟೆ ಕಡುಬು ಹೇಗಿತ್ತೂ ಅಂತ ಕೇಳಿದ್ರೆ ಏನಂತ ಹೇಳೋದು..? ಅದರ ಅನ್ನೋ ಯೋಚನೇಲಿ ಹೊಟೆಲಿನಲಿ ಅದೇನು ತಿಂಡಿ ತಿಂದೆನೋ ಗೊತ್ತಿಲ್ಲ. ಅಕ್ಕ ಪಕ್ಕದವರಿಗೆ ಕಾಣದ ಹಾಗೆ ಮೆಲ್ಲಗೆ ಆ ಕಡುಬು ಎನ್ನುವ ತಿಂಡಿಯನ್ನು ಯಾವುದಾದರೂ ನಾಯಿ ತಿನ್ನಲಿ ಎಂದು ಹೊರ ಹಾಕಿದ್ದೆ. ಮರುದಿನ ಬೆಳಿಗ್ಗೆಯಾದ್ರೂ ಯಾವ ನಾಯಿಯೂ ಮೂಸಿನೋಡಿರಲಿಲ್ಲ..
ಒಂದಲ್ಲಾ ಒಂದು ದಿನಾ ಮತ್ತೆ ಕೊಟ್ಟೆಕಡುಬು ಮಾಡೇ ಮಾಡ್ತೀನಿ ಅಂತ ಶಪಥ ಮಾಡಿದ್ದೀನಿ. ಅದಕ್ಕೇ ನನ್ನ ಗಂಡ ಮಗ ಈಗಲೂ ಭಾನುವಾರಗಳಲ್ಲಿ ರೇಗಿಸ್ತಿರ್ತಾರೆ ‘ನೀ ಕೊಟ್ಟೆ ಮಾಡ್ಕೊಟ್ಟೆ’ ಅಂತ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)