ಕೊಡಗು – ಡಿಸಿ ವಾಸ್ತವ್ಯ ಹೂಡಿದ್ದ ಗ್ರಾಮದಲ್ಲೇ ಹುಲಿ ದಾಳಿ- ವಿದ್ಯಾರ್ಥಿ ಬಲಿ

Team Newsnap
1 Min Read

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿಯ ನಿನ್ನೆ ಜಿಲ್ಲಾಧಿಕಾರಿಗಳು ವಾಸ್ತವ ಹೂಡಿದ್ದ ಕುಮಟೂರು ಗ್ರಾಮದಲ್ಲಿ ಹುಲಿ ದಾಳಿಗೆ 14 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿ, ಇದೀಗ ನರಬಲಿ ಪಡೆದು ಕೊಂಡಂತಾಗಿದೆ.

ಕುಮಟೂರಿನ ಕೋಟ್ರಾಂಗಡ ಬಿದ್ದಪ್ಪ ತೋಟ ಕಾರ್ಮಿಕರಾಗಿರುವ ಪಣಿ ಎರವರ ಬಸವ ಅವರ ಪುತ್ರ ಅಯ್ಯಪ್ಪ ಎಂಬ ಬಾಲಕನೇ ಹುಲಿ ದಾಳಿಗೆ ಬಲಿಯಾಗಿದ್ದಾನೆ

ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಯ್ಯಪ್ಪ, ಕೋಟ್ರಾಂಗಡ ಅಶ್ವತ್ ಎಂಬವರ ಕಾಫಿ ತೋಟದಲ್ಲಿ ಸೌದೆಗಾಗಿ ತೆರಳಿದ ಸಂದರ್ಭದಲ್ಲಿ ಸಂಜೆ ತೋಟದಲ್ಲಿ ಎದುರಾದ ಹುಲಿವೊಂದು ಬಾಲಕನ ಮೇಲೆರಗಿ ದಾಳಿ ನಡೆಸಿ, ಸ್ಥಳದಲ್ಲೇ ಕೊಂದು ಹಾಕಿರುವ ಎಲ್ಲಾ ಕುರುಹುಗಳು ಲಭ್ಯವಾಗಿದೆ.

ಹುಲಿ ದಾಳಿಯಿಂದಾಗಿ ಬಾಲಕನ ಮೆದುಳು ಹೊರಬಂದು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಸ್ಥಿತಿಯಲ್ಲಿದೆ.

ಇದೇ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶನಿವಾರ ಗ್ರಾಮ ವಾಸ್ತವ್ಯ ಹೂಡಿದ್ದ ವೇಳೆಯಲ್ಲಿ ಸ್ಥಳೀಯರು ಹುಲಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು.

ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದರು. ಆದರೆ, ಶನಿವಾರ ಸಂಜೆಯೇ ಹುಲಿ ಬಾಲಕನನ್ನು ಬಲಿ ಪಡೆದುಕೊಂಡಿದೆ.

Share This Article
Leave a comment