ಕರೋನಾ ಮಾರಿಗೆ ಭದ್ರಾವತಿಯ ರಂಗಭೂಮಿ ಕಲಾವಿದ, ಡಾ. ರಾಜ್ ಆಪ್ತ ಎಸ್.ಜಿ. ಶಂಕರಮೂರ್ತಿ (೬೮) ಬಲಿಯಾಗಿದ್ದಾರೆ.
ಭದ್ರಾವತಿಯ ಎಂಪಿಎಂ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಿದ್ದ ಶಂಕರಮೂರ್ತಿಯವರು ಶಾಂತಲಾ ಕಲಾವೇದಿಕೆ ಹಾಗೂ ಶಾಂತಲಾ ಆರ್ಟ್ಸ್ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದ್ದವರು. ಕಾರ್ಖಾನೆಯ ಇತರೆ ಉದ್ಯೋಗಿಗಳನ್ನು ಬಳಸಿಕೊಂಡು ಅನೇಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದರು. ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಕೆಲವು ಮುಖ್ಯ ನಾಟಕಗಳೆಂದರೆ, ‘ಈಸಕ್ಕಿ ಆಸೆ ನಮಗೇಕೆ?’, ‘ಮೌಲ್ಯ’, ‘ವೆಂಕಿಪುರ-ಬೆಂಕಿಪುರ’, ‘ಈಸೂರಿನ ಆ ಶೂರರು.’ ಇವುಗಳಲ್ಲದೇ ಇನ್ನೂ ಅನೇಕ ನಾಟಕಗಳನ್ನು ಶಂಕರಮೂರ್ತಿಯವರು ನಿರ್ದೇಶಿಸಿದ್ದರು. ಇದಲ್ಲದೇ ಅವರಿಗೆ ಶಿಲ್ಪ ಕಲೆಯಲ್ಲಿ ವಿಪರೀತ ಪ್ರೀತಿ ಇತ್ತು.
ವರನಟ ಡಾ. ರಾಜಕುಮಾರ ಅವರೊಂದಿಗೆ ಒಡನಾಟವನ್ನೂ ಇವರು ಹೊಂದಿದ್ದರು. ಅವರ ಮನೆಯ ವಾಸ್ತುಶಿಲ್ಪವನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟವರು ಶಂಕರ ಮೂರ್ತಿಯವರೇ.
ಇತ್ತೀಚಿಗೆ ಅವರ ಪತ್ನಿ ಕರೋನಾ ಸೋಂಕಿಗೆ ತುತ್ತಾಗಿದ್ದರು. ಆಸ್ಪತ್ರೆಗೆ ದಾಖಲು ಮಾಡಿದ ನಂತರ, ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇವರೂ ಸಹ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಶಂಕರಮೂರ್ತಿಯವರಿಗೆ ಕೊರೋನಾ ಸೋಂಕು ಧೃಡಪಟ್ಟ ನಂತರ ಅದೇ ಆಸ್ಪತ್ರೆಯಲ್ಲಿ ಮೂರ್ತಿಯವರು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಶಂಕರಮೂರ್ತಿಯವರಿಗೆ ಒಬ್ಬ ಪುತ್ರನಿದ್ದಾನೆ.
ಶಂಕರಮೂರ್ತಿಯವರು ರಾಜ್ ಕುಮಾರ್ ಅವರ ಅನೇಕ ಮೂರ್ತಿಗಳನ್ನು ಮಾಡಿಕೊಟ್ಟಿದ್ದಾರೆ. ಭದ್ರಾವತಿಯ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ, ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಷ್ಠಾಪಿಸಲಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆಗಳು ಇವರ ಶಿಲ್ಪಕಲೆಯ ಬತ್ತಳಿಕೆಯವೇ. ನಗರಸಭೆ ಮುಂಭಾಗದ ಉದ್ಯಾನದಲ್ಲಿ ಪ್ರತಿಷ್ಠಾಪಿಸಬೇಕೆಂದು ಇತ್ತೀಚಿಗೆ ಭದ್ರೆಯ ಮೂರ್ತಿಯನ್ನು ಅವರು ತಯಾರಿಸಿದ್ದರು. ಭದ್ರಾವತಿಯ ಅನೇಕ ಕಡೆ ಇವರ ಶಿಲ್ಪಕಲೆಗೆ ಬೇಡಿಕೆಯಿತ್ತು.
ಕೊನೆಯ ಪತ್ರ
ಅವರು ತಮ್ಮ ಸಾವಿಗೆ ಮುನ್ನ ಫೇಸ್ ಬುಕ್ ನಲ್ಲಿ ‘‘ಕರೊನಾ ಎಂಬ ಪ್ರಿಯೆ ಇತ್ತೀಚೆಗೆ ನನ್ನನ್ನು ಬಿಗಿದಪ್ಪಿಕೊಂಡಿದ್ದಾಳೆ, ನಾನು ಏಕಪತ್ನೀವ್ರತಸ್ಥ, ನನ್ನ ಅರ್ಧಾಂಗಿಯೇ ನನಗೆ ಜೀವದ ಜೀವ. ನನ್ನ ತಂಟೆಗೆ ಬರಬೇಡ ಎಂದು ಸರ್ಕಸ್ ಕೂಡ ಮಾಡಿದ್ದೆ. ಆದರೆ ಈಗ ಬಂದುಬಿಟ್ಟಿದೆ. ಹಾಗಾಗಿ ವನವಾಸಕ್ಕೆ ಹೊರಟಿದ್ದೇನೆ, ಬೇಗನೆ ಗುಣಮುಖರಾಗಿ ಬಂದು ಎಲ್ಲರೊಂದಿಗೆ ಸೇರಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇವರ ಕೊನೆಯ ನುಡಿಗಳನ್ನು ಅಭಿಮಾನಿಯೊಬ್ಬರು ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾರೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು