ದಾಖಲೆ ತಡವಾದರೂ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಿ‌: ಸಚಿವ ವಿ.ಸೋಮಣ್ಣ

Team Newsnap
1 Min Read

ಕೋವಿಡ್ ಸೋಂಕು ವ್ಯಕ್ತಿಗಳಿಗೆ ಬಿ.ಯು ಸಂಖ್ಯೆ ನೀಡುವ ಸಂಬಂಧ ತಾಂತ್ರಿಕ ದೋಷ ಕಂಡುಬಂದರೂ, ತ್ವರಿತವಾಗಿ ಕೋವಿಡ್-19 ನಿಯಂತ್ರಣಕ್ಕೆ ಬರಬೇಕು ಎಂಬ ಕಾರಣಕ್ಕಾಗಿ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಸಚಿವ ಸೋಮಣ್ಣ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯಕ್ಕೆ 10 ಲಕ್ಷ ಕೋವಿಡ್-19 ನಿರೋಧಕ ಲಸಿಕೆ ಬರುತ್ತಿದ್ದು, ನಗರಕ್ಕೆ 3 ಲಕ್ಷ ಲಸಿಕೆ ನೀಡಲಾಗುತ್ತಿದೆ, ಲಸಿಕೆ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದರು.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ, ಪರೀಕ್ಷೆಗಳ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು, ಕೋವಿಡ್ ಸಂಬಂಧಿಸಿದಂತೆ ಅವಶ್ಯಕವಾದ ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆಯಿಲ್ಲ, ಅಗತ್ಯ ಸಿಬ್ಬಂದಿ ಲಭ್ಯವಿದೆ ಎಂದು ಹೇಳಿದರು.

49 ಶವ ಸಾಗಣೆ ವಾಹನಗಳಿವೆ. ಅವಶ್ಯಕತೆಯಿದ್ದಲ್ಲಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಪ್ರತಿ ವಾರ್ಡ್ ಒಂದಕ್ಕೆ 2 ಆಂಬ್ಯುಲೆನ್ಸುಗಳನ್ನು ನಿಯೋಜನೆ ಮಾಡಲಾಗಿದೆ ಎಂದೂ ಹೇಳಿದರು.

ಇನ್ನೆರಡು ದಿನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ 10 ವೆಂಟಿಲೇಟರ್‌ಗಳನ್ನು ನೀಡಲಾಗುತ್ತದೆ, ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿದ್ದು, ಅಷ್ಟೂ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಸಿದ್ಧತೆಗಳಾಗುತ್ತಿವೆ, ಈ ವ್ಯವಸ್ಥೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು

ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರುಗಳಾದ ಕೆ.ಜೆ.ಜಾರ್ಜ್, ಎನ್.ಎ.ಹ್ಯಾರಿಸ್, ರಿಜ್ವಾನ್ ಹರ್ಷದ್, ಬಿ.ಎಸ್.ಸುರೇಶ್, ಅಖಂಡ ಶ್ರೀನಿವಾಸಸಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು, ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಲಯ ಆಯುಕ್ತರುಗಳಾದ ಮನೋಜ್ ಜೈನ್, ಶ್ರೀ ಬಸವರಾಜು, ವಲಯ ಸಂಯೋಜಕರಾದ ಶ್ರೀ ಮನೋಜ್ ಕುಮಾರ್ ಮೀನಾ, ಉಜ್ವಲ್ ಘೋಶ್, ಜಂಟಿ ಆಯುಕ್ತರುಗಳಾದ ಪಲ್ಲವಿ, ಶಿವಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment