ಮಡಿಕೇರಿ: ಜಿಲ್ಲೆಯ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ 7:40ಕ್ಕೆ ತುಲಾ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಸಂಭ್ರಮದಿಂದ ನೆರವೇರಿತು.
ತೀರ್ಥರೂಪಿಣಿಯಾಗಿ ಕಾವೇರಿ ಮಾತೆ ಭಕ್ತರಿಗೆ ದರ್ಶನ ನೀಡಿದ್ದು, ಮೂರು ಬಾರಿ ಉಕ್ಕಿ ಬಂದು ನಂತರ, ಅರ್ಚಕರು ಬ್ರಹ್ಮ ಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿದರು.
ನಿಗದಿಯಂತೆ, 7:40ಕ್ಕೆ ಸೂರ್ಯ ಕನ್ಯಾ ಲಗ್ನದಿಂದ ತುಲಾ ಲಗ್ನಕ್ಕೆ ಪ್ರವೇಶಿಸುತ್ತಿದ್ದಂತೆ ತೀರ್ಥೋದ್ಭವ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದಲೇ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಾವೇರಿ ಮಾತೆಯನ್ನು ಆಹ್ವಾನಿಸಲು ವಿವಿಧ ಪೂಜಾ ಕೈಂಕಾರ್ಯಗಳನ್ನು ಅರ್ಚಕರ ತಂಡವು ನೆರವೇರಿಸಿತು.
ರಾಜ್ಯದ ವಿವಿಧ ಭಾಗಗಳಿಂದ, ತಮಿಳುನಾಡು ಮತ್ತು ಕೇರಳ ಸೇರಿದಂತೆ ನೆರೆರಾಜ್ಯಗಳಿಂದ ಸಹಸ್ರಾರು ಭಕ್ತರು ತಲಕಾವೇರಿಗೆ ಆಗಮಿಸಿದ್ದರು. ತೀರ್ಥ ರೂಪಿಣಿ ಕಾವೇರಮ್ಮನನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾದು, “ಉಕ್ಕಿ ಬಾ ಕಾವೇರಮ್ಮ, ಕಾವೇರಿ ಬಾಳು” ಎಂದು ಭಜಿಸುತ್ತಿದ್ದರು. ಬ್ರಹ್ಮ ಕುಂಡಿಕೆಯ ಬಳಿ ಸಾವಿರಾರು ಭಕ್ತರು ಸೇರಿದ್ದರು.ಇದನ್ನು ಓದಿ –ಕಲಬುರಗಿಯಲ್ಲಿ ಭೀಕರ ಅಪಘಾತ – ನಾಲ್ವರು ದುರ್ಮರಣ
ಕೊಡವ ಧಿರಿಸಿನಲ್ಲಿ ಆಗಮಿಸಿದ್ದ ಭಕ್ತರು ಕಾವೇರಿ ಸ್ಮರಣೆ ಮಾಡಿದ್ದು, ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಕೂಡ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ವ್ಯಾಪಕ ವ್ಯವಸ್ಥೆ ಮಾಡಲಾಗಿತ್ತು, ಮತ್ತು ಮಡಿಕೇರಿಯಲ್ಲಿ ಹಬ್ಬದ ವಾತಾವರಣ ಉಂಟಾಯಿತು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ