April 19, 2025

Newsnap Kannada

The World at your finger tips!

DK shivkumar

ಕರ್ನಾಟಕದ ಬಜೆಟ್ ದೇಶಕ್ಕೆ ಮಾದರಿ: ಡಿ.ಕೆ. ಶಿವಕುಮಾರ್

Spread the love

ಬೆಂಗಳೂರು: ಈ ಬಾರಿಯ ಕರ್ನಾಟಕ ಬಜೆಟ್ ದೇಶಕ್ಕೆ ಮಾದರಿಯಾಗಿದೆ. ನಮ್ಮ ಬಜೆಟ್ ಅನ್ನು ಬೇರೆ ರಾಜ್ಯಗಳು ಗಮನಿಸುತ್ತಿವೆ. ಇದು ಜನಪರ ಬಜೆಟ್ ಆಗಿದ್ದು, ಕರ್ನಾಟಕದ ಜನತೆಗೆ ಅನೇಕ ಅನುಕೂಲಗಳನ್ನು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಗರದ ಸಂಚಾರ ಸಮಸ್ಯೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಟನಲ್ ನಿರ್ಮಾಣ ಮಾಡಲಾಗುವುದು. ಹೊಸ ಮೆಟ್ರೋ ಯೋಜನೆಯ ಜೊತೆಗೆ ಎಲಿವೇಟೆಡ್ ಕಾರಿಡಾರ್ ಕೂಡಾ ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ 50% ನಗದು ಸಹಾಯವನ್ನು ಕಾರ್ಪೊರೇಷನ್ ನೀಡಲಿದೆ ಹಾಗೂ ಉಳಿದ 50% ಮೊತ್ತವನ್ನು ಬಿಎಂಆರ್‌ಸಿಎಲ್ ವಹಿಸಿಕೊಳ್ಳಲಿದೆ” ಎಂದು ವಿವರಿಸಿದರು.

ಅದರ ಜೊತೆಗೆ, ರಾಜ್ಯದ ರಸ್ತೆ ವ್ಯವಸ್ಥೆಯ ಸುಧಾರಣೆಗಾಗಿ 300 ಕಿಮೀ ರಸ್ತೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ 3,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆಯಡಿ, ಕಾಲುವೆಗಳ ಪಕ್ಕದಲ್ಲಿ 50 ಅಡಿ ತೆರವು ಮಾಡಿ ಹೊಸ ರಸ್ತೆ ನಿರ್ಮಿಸಲಾಗುವುದು. ಭೂಸ್ವಾಮಿಗಳಿಗೆ ಟಿಡಿಆರ್ (ಟ್ರಾನ್ಸ್ಫರ್ ಆಫ್ ಡೆವಲಪ್‌ಮೆಂಟ್ ರೈಟ್ಸ್) ನೀಡಲಾಗುವುದು ಎಂದು ತಿಳಿಸಿದರು.

ಬಿಜೆಪಿಯ ಹಲಾಲ್ ಬಜೆಟ್ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, “ಬಿಜೆಪಿಯವರು ಏನನ್ನಾದರೂ ಮಾತಾಡಬಹುದು. ಆದರೆ ಅವರು ಬಜೆಟ್ ಅನ್ನು ಕಣ್ಣುಗಳಿಂದ ಓದಿದ್ದಾರೆ, ಕಿವಿಯಿಂದ ಕೇಳಿಕೊಂಡಿದ್ದಾರೆ, ಆದರೆ ಬಾಯಿಂದ ಸುಳ್ಳು ಹೇಳುತ್ತಿದ್ದಾರೆ” ಎಂದು ಟೀಕಿಸಿದರು.

ನೀರಾವರಿ ಯೋಜನೆಗಳಿಗೆ ಈ ಬಾರಿ ಕಳೆದ ಬಾರಿಗಿಂತ 2,000 ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸಲಾಗಿದೆ. ಅಲ್ಲದೆ, ಮಧ್ಯಂತರವಾಗಿ ವಿವಿಧ ಹೊಸ ಯೋಜನೆಗಳನ್ನು ಘೋಷಿಸಲು ಸರ್ಕಾರ ತೀರ್ಮಾನಿಸಿದೆ. ಅನೇಕ ನಿರ್ಧಾರಗಳನ್ನು ಬೋರ್ಡ್‌ನಲ್ಲಿ ಅಂಗೀಕರಿಸಲಾಗಿದ್ದು, ಅದನ್ನು ಅಧಿವೇಶನದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಇಡುವ ಬಗ್ಗೆ ಮಾತನಾಡಿದ ಅವರು, “ಯಾರೋ ಯಾವುದಾದರೂ ಹೆಸರು ಇಡುತ್ತಾರೆ. ಮನಮೋಹನ್ ಸಿಂಗ್ ಅವರ ಹೆಸರು ಇಡಬಾರದೆ? ಅಂತಹ ಪ್ರಮುಖ ವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡುವಲ್ಲಿ ಏನೂ ತಪ್ಪಿಲ್ಲ” ಎಂದು ಹೇಳಿದರು.ಇದನ್ನು ಓದಿ –ಸಾರ್ವಜನಿಕರ ಗಮನಕ್ಕೆ: ಈ 8 ಸರ್ಕಾರದ ಕಾರ್ಡ್‌ಗಳೊಂದಿಗೆ ನೀವು ಮಹತ್ವದ ಸೌಲಭ್ಯಗಳನ್ನು ಪಡೆಯಬಹುದು!

ಕೇಂದ್ರ ಮತ್ತು ರಾಜ್ಯ ಮಟ್ಟದ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಿಜೆಪಿ ಪ್ರಶ್ನಿಸುವುದರ ಕುರಿತು, “ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಫ್ಲೈಓವರ್ ನಿರ್ಮಿಸಿದ್ದು ಯಾರು? ಎಲೆಕ್ಟ್ರಾನಿಕ್ ಸಿಟಿಗೆ ಫ್ಲೈಓವರ್ ಮಾಡಿಸಿದ್ದು ಯಾರು? ನರೇಗಾ ಯೋಜನೆ ತರಿಸಿದ್ದು ಯಾರು?” ಎಂದು ಪ್ರಶ್ನಿಸಿದರು.

Copyright © All rights reserved Newsnap | Newsever by AF themes.
error: Content is protected !!