ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ ಎಂಬ ಮೈಸೂರ ಮಲ್ಲಿಗೆಯ ಸಾಲು ಎಷ್ಟು ಜನರ ಬಾಯಲ್ಲಿ ಎದೆಯಲ್ಲಿ ನಲಿದಾಡಿಲ್ಲ ಹೇಳಿ? ನಲ್ಲೆಯ ಸನಿಹ, ಅವಳು ಮುಡಿದ ಹೂವಿನ ಘಮಲು ನಲ್ಲನಿಗೆ ಯಾವತ್ತೂ ಎದೆ ಝಲ್ಲೆನಿಸುತ್ತದೆ. ಈ ನಲ್ಲೆಯ ಹೆಸರು ಪದುಮ. ಮೈಸೂರಮಲ್ಲಿಗೆಯ ನಾಯಕಿ. ಇದನ್ನು ಬರೆದ ಕವಿ ಕೆ ಎಸ್ ನರಸಿಂಹಸ್ವಾಮಿ, ರವಿ ತನ್ನ ಕೆಲಸ ಆರಂಭಿಸುವ ಮೊದಲೇ ನಾಡಿನಾದ್ಯಂತ ಹೆಸರುವಾಸಿಯಾದರು. ನನ್ನೂರು ಚೆಂದವೋ, ನಿನ್ನೂರು ಚೆಂದವೋ ಎಂದು ಒಂದಿರುಳು ಕನಸಿನಲಿ ಕೇಳಿದ ಕವಿ ಇವರು. ಈ ಪದಗಳ ಬಳಕೆಯೇ ನೋಡಿ. ಪ್ರೀತಿಯ ಜೊತೆಗೆ ಅಪ್ಪಟ ಕನ್ನಡ ಪದಗಳ ಬಳಕೆ ನಮ್ಮ ಎದೆಯ ಕವಾಟವನ್ನು ತೆರೆಯುತ್ತದೆ. ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿಹ ಹೆಸರನ್ನೂ ಈ ಕವಿ ಕಂಡರು.
ನವಿರು ಪ್ರೀತಿಗಾಗಿ ಹಂಬಲ
ನರಸಿಂಹಸ್ವಾಮಿಯವರ ಕಾವ್ಯದಲ್ಲಿನ ಅತ್ಯಂತ ಗಮನಾರ್ಹವಾದ ವಿಷಯವೆಂದರೆ ನವಿರು ಪ್ರೀತಿಗಾಗಿ ಹಂಬಲ. ಅವರ ಕವಿತೆಯಲ್ಲಿ, ಅವರು ಬರೆಯುತ್ತಾರೆ, “ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ, ಓಡಿದುದು ದಾರಿ ಬೇಗ”. ಇದು ಯಾವುದೇ ಪ್ರೇಮಿಗೆ ಅರ್ಥವಾಗುವ ಸಂದರ್ಭ. ಕೊಂಚ ದೂರದಲ್ಲಿರುವ ನಲ್ಲೆಯ ಊರಿಗೆ ಹೋಗಲು ಎಲ್ಲಿಲ್ಲದ ತುಡಿತ. ದಾರಿ ಕೂಡ ಬೇಗ ಸವೆದು ಹೋಗುತ್ತದೆ. ಅಲ್ಲಿಯೇ ಊರಬೇಲಿಗೆ ಬಂದು ಕುಶಲವನು ಕೇಳಿದರೆ, ಕೆನ್ನೆ ಕೆಂಪಾಗುವುದನ್ನು ಕೂಡ ಗಮನಿಸಿ ಕವಿಯು ನವಿರು ಪ್ರೇಮದ ಸೂಕ್ಷ್ಮವನ್ನು ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ. “ನಿನ್ನ ಪ್ರೇಮದ ಪರಿಯ ನಾನರಿಯೆ….ಕನಕಾಂಗಿ ನಿನ್ನೊಳಿದೆ…ನನ್ನ ಮನಸು” ಎಂಬ ಕವನದಲ್ಲಿ ಆವಾಗಾವಾಗ ಬರುವ ಪ್ರಿಯತಮೆಯ ಪ್ರೀತಿಯ ಅಲೆಯ ಬಗ್ಗೆ ಹೇಳಿದ್ದಾರೆ. ಈ ಪರಿಯ ಅರಿಯಲು ಕವಿಯ ಸೋತ ಭಾವ ಇಲ್ಲಿದೆಯೋ ಎಂಬ ಸೂಚನೆ ಕಂಡರೂ, ತನ್ನ ಮನಸು ಅವಳೊಳಗಿರುವ ಕಾರಣ ಸೋಲಲಲ್ಲೂ ಗೆಲುವನ್ನು ಕಂಡ ಸಾರ್ಥಕ ಭಾವ ಕವಿಯದು. ಕವಿಗಳಿಗೆ ತಮ್ಮ ಪ್ರಿಯತಮೆ ಯಾವಾಗಲೂ ಚೆಂದ. “ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ, ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ” ಎಂದು ಹೇಳಲು ಮರೆಯುವುದಿಲ್ಲ.
ಪ್ರಕೃತಿಯ ವರ್ಣನೆ
ಪ್ರೀತಿಯೆಂಬುದು ಪ್ರಕೃತಿಯಲ್ಲಿ ನಡೆಯುವ ನಿರಂತರ ಪ್ರಕ್ರಿಯೆ. ಹೂವಿಂದ ಹೂವಿಗೆ ಹಾರುವ ದುಂಬಿ ಪರಾಗವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಪಸರಿಸುವ ಮೂಲಕ, ಹೂವು ಕಾಯಾಗಿ ಹಣ್ಣಾಗುವುದಕ್ಕೆ ಕಾರಣವಾಗುತ್ತದೆ. ಕೆ ಎಸ್ ನ ತಮ್ಮ ಆಸೆ ಎಂಬ ಕವನದಲ್ಲಿ ಪರೆಯುತ್ತಾರೆ, ” ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ”. ಇದು ಅವರ ಪ್ರಕೃತಿ ಪ್ರೇಮವನ್ನು ತೋರಿಸುತದೆ, ಅದರ ಜೊತೆಯಲ್ಲಿ ಹಕ್ಕಿ ಮತ್ತು ಹೂವಿನ ಸಂಬಂಧವನ್ನು ಕಟ್ಟಿಕೊಟ್ಟಿದ್ದಾರೆ. ಎಚ್ಚರಿಕೆ ಎಂಬ ಕವನದಲ್ಲಿ ” ಕೇತಕೆಯ ಬನಗಳಲಿ ಸಂಚರಿಸದಿರು ಚೆಲುವೆ” ಎನ್ನುವ ಎಚ್ಚರಿಕೆಯೂ ಕಾಣುತ್ತದೆ. ಇನ್ನು ಸಿರಿಗೆರಯ ನೀರಲ್ಲಿ ಎಂಬ ಕವನವನ್ನು ತೆಗೆದುಕೊಂಡರೆ, ಕೆರೆ, ಗುಡಿಯ ಗೋಪುರ, ಜೋಯಿಸರ ಹೊಲ, ದನದ ಕೊಟ್ಟಿಗೆ, ನವಿಲು ಮುಂತಾದ ಎಲ್ಲಾ ಕಡೆ ಪ್ರೇಯಸಿಯ ಹೆಸರನ್ನು ಕವಿ ಕಾಣುತ್ತಾರೆ. ನಮ್ಮೂರು ಚೆಂದವೋ ಹಾಡಿನಲ್ಲಿ “ನವಿಲೂರಿನೋಳಗೆಲ್ಲ ನೀನೆ ಬಲು ಚೆಲುವೆ,
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ”. ಆಂತಹಾ ಚೆಲುವಿನೋಳನ್ನು ಬಿಟ್ಟಿರಲು ಸಾಧ್ಯವೇ? ಮರುದಿನವೇ ಮದುವೆಯನ್ನು ಮಾಡಿಕೊಂಡು ತನ್ನವಳನ್ನಾಗಿ ಮಾಡಿ ಎದೆಯ ಅರಮನೆಯಲ್ಲಿ ಬಚ್ಚಿಡುತ್ತಾರೆ ಕೆ ಎಸ್ ನ !
ನೈಜತೆಯ ಚಿತ್ರಣ
ಇಷ್ಟೆಲ್ಲಾ ಪ್ರೀತಿ ಪ್ರೇಮದ ಚಿತ್ರಣವಿರುವಾಗ ಕೆಲವೊಮ್ಮೆ ನಮಗೆ ಜೀವನದ ನಿಜ ಪರಿಸ್ಥಿತಿ ಕಾಣುವುದು. ಪ್ರೀತಿ ಕುರುಡು ಎಂದು ಎಲ್ಲರೂ ಬರೆದು ಹೊಗಳಿ ಹಾಡಿದ್ದಾರೆ. ಆದರೆ ಪ್ರೀತಿಸಿದ ಹೆಣ್ಣು ಸಂಸಾರದಲ್ಲಿ ಕಷ್ಟ ಪಡುವಾಗ, ಸಿಂಗಾರವಿಲ್ಲದೆ ದಿನ ದೂಡುವಾಗ ಕವಿಹೃದಯ ಮಿಡಿಯುತ್ತದೆ. “ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ..ಬಂಗಾರವಿಲ್ಲದಾ ಬೆರಳು..ತಗ್ಗಿರುವ ಕೊರಳಿನಾ ಸುತ್ತ ಕರಿಮಣಿ ಒಂದೆ, ಸಿಂಗಾರ ಕಾಣದಾ ಹೆರಳು..”. ಮಾವನ ಮನೆಗೆ ಹೋದಾಗ “ಪದುಮಳು” ಬಳಿಯಲಿ ಇಲ್ಲದಿದ್ದರೂ ಕವಿಗೆ ಕಷ್ಟವಾಗುತ್ತದೆ. ಪ್ರೇಮಿಗೆ ಮದುಮಳ ಬಳೆಗಳ ದನಿ ಕೇಳದಿದ್ದರೆ ಸುಖವಿಲ್ಲ. ಗಂಡಿಗೆ ಕಾಲ್ಗೆಜ್ಜೆಯ ನಾದ, ಬಳೆಗಳ ಘಲ್ ಘಲ್ ಕಿವಿಗೆ ಇಂಪೇ. ಬಳೆಗಾರ ಚೆನ್ನಯ್ಯ ಮುಂಚಿನ ಕಾಲದಲ್ಲಿ ಮನೆಗೆ ಬಂದು ಕೈಯೆಲ್ಲಾ ಬಳೆಗಳನ್ನು ತೊಡಿಸುತ್ತಿದ್ದನು. ಮೆನೆಯಿಂದ ಮನೆಗೆ ಓಲೆಕಾರ ಕೂಡ ಅವನೆ. ಇಲ್ಲಿನ ಸುದ್ದಿಯನ್ನು ಅಲ್ಲಿಗೆ, ಅಲ್ಲಿನ ಸುದ್ದಿಯನ್ನು ಇಲ್ಲಿಗೆ ತಲುಪಿಸುವ ಹೃದಯದ ತಂತಿಯ ಮೇಲಿನ ನಡಿಗೆ ಅವನದು. ಹೆಣ್ಣು ತೌರಸುಖದೊಳಹೆ ತನ್ನ ಪರೆಯಬಹುದೋ ಎಂಬ ಆತಂಕಕ್ಕೆ ಕೂಡ ಕವಿತೆಯಲ್ಲಿಯೇ “ನಿಮ್ಮ ನೆನಸೆ ನನ್ನ ಹಿಂಡುವುದು ಹಗಲಿನಲಿ, ಇರುಳಿನಲಿ ಕಾಣುವುದು ನಿಮ್ಮ ಕನಸು” ಎಂದು ಉತ್ತರವನ್ನು ಕೊಟ್ಟಿದ್ದಾರೆ. ಪಶ್ಚಾತ್ತಾಪ ಎಂಬ ಕವಿತೆಯಲ್ಲಿ, “ಕಣ್ಣ ಹನಿಯು ಮಣಿಯ ತೆರದಿ, ಕಣ್ಣಿನೊಡವೆಯಾಯಿತು. ತುಟಿಗೆ ಬಂದ ಮಾತು ತಿರುಗಿ ಬಂದ ಕಡೆಗೆ ಹೋಯಿತು” ಎಂದು ಮರುಗುತ್ತಾರೆ.
ಮೈಸೂರ ಮಲ್ಲಿಗೆಯ ಮೂಲಕ ಪ್ರೇಮಿಗಳ ದಿನ
ಪ್ರೀತಿಗೆ ಮೀಸಲಾದ ಈ ದಿನದಂದು, ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಗಳು, ನಮ್ಮ ದೈನಂದಿನ ಜೀವನದ ಪ್ರೀತಿ ಹೇಗೆ ಹೆಣೆಯಲ್ಪಟ್ಟಿದೆ ಎಂದು ನಮಗೆ ನೆನಪಿಸುತ್ತದೆ. ಪ್ರೀತಿಯು ದುಂದುಗಾರಿಕೆಯಲ್ಲ ಬದಲಿಗೆ ತಿಳುವಳಿಕೆ, ತಾಳ್ಮೆ ಮತ್ತು ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳುವ ಸಾಮರ್ಥ್ಯ ಎಂದು ಅವರ ಮಾತುಗಳು ನಮಗೆ ಕಲಿಸುತ್ತವೆ. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಮಗದೇ ಕೋಟಿ ರುಪಾಯಿ, ಅವಳು ಮನೆಯೊಳಗಿದ್ದರೆ ನಾವೂ ಒಬ್ಬ ಸಿಪಾಯಿಯಲ್ಲವೇ? ಪ್ರೇಮಿಗಳ ದಿನವನ್ನು ಆಚರಿಸುತ್ತಿರುವಾಗ, ಅವರ ಕವನಗಳು ಒಳಗೊಂಡಿರುವ ಸರಳತೆ ಮತ್ತು ಪ್ರಾಮಾಣಿಕತೆಯೊಂದಿಗೆ ನಮ್ಮ ಜೀವನದಲ್ಲಿ ಪ್ರೀತಿಯನ್ನು ಪಾಲಿಸೋಣ. ನಿಜವಾದ ಪ್ರೀತಿ ಪ್ರತಿ ಕನ್ನಡ ಹೃದಯದಲ್ಲಿ ಅನುರಣಿಸುತ್ತಲೇ ಇರಲಿ ಎಂದು ಆಶಿಸೋಣ. ಇಂದಿನ ಕಾಲಕ್ಕೆ ವಾಣಿಜ್ಯ ಕಾರಣಗಳು ಪ್ರೀತಿಯ ದಿನದ ವ್ಯಾಪಾರಕ್ಕೆ ಒಂದಿಷ್ಟು ಕುಮ್ಮಕ್ಕು ಕೊಡಬಹುದು. ಆದರೆ ಪ್ರೀತಿ ವ್ಯವಹಾರ ಅಲ್ಲವಷ್ಟೇ? ವರ್ಷದ ಎಲ್ಲಾ ದಿನಗಳಲ್ಲೂ ಪ್ರೀತಿಪಾತ್ರರನನ್ನು ಪ್ರೀತಿಸೋಣ, ಪ್ರೇಮದ ಕವಿಯ ಪ್ರೇಮ ಕವನಗಳನ್ನು ಓದೋಣ, ಜೊತೆಗೆ ಸ್ವಲ್ಪ ಬರೆಯೋಣ, ಪ್ರೀತಿ ಹಂಚೋಣ! ಪ್ರೀತಿಯ ಕಣ್ಣು ಅದರಲ್ಲಿ ಮುಳುಗುವುದಷ್ಟೇ ಆಗಿರಲಿ, ಅದರಲ್ಲಿ ಮುಳುಗಿ ತೇಲಿ ಭವಾಬ್ಧಿ ದಾಟೋಣ!!
ಬರೆದವರು – ಸಚಿನ್ ಮುಂಗಿಲ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಸಂಯೋಜಕರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು