Editorial

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 11

ಕಾವ್ಯಲೋಕದ ಅಪೂರ್ವ ಚೇತನ ಜಯಕವಿ

ಡಾ||ಜಯಪ್ಪ ಹೊನ್ನಾಳಿ

ಸಮುದಾಯವನ್ನು ಆಕರ್ಷಿಸುವ, ಅವರನ್ನು ನೇರವಾಗಿ ತಲುಪಬಲ್ಲ, ಮನಕ್ಕೆ ಮುದ ನೀಡುವ  ರೀತಿಗಳಲ್ಲಿ ತನ್ನ ಹರಿವನ್ನು ಬಿಚ್ಚಿಕೊಳ್ಳುತ್ತಾ ಸಮಾಜದ ನೋವು ಹತಾಶೆಗಳಿಗೆ ಒಂದು ಭಿನ್ನವಾದ ಉತ್ಸಾಹವನ್ನು ಚೇತನವನ್ನೂ ನೀಡಬಲ್ಲದು ಕಾವ್ಯ. ಹಾಗಾಗಿ ಕಾವ್ಯಕ್ಕೆ ಸಾಹಿತ್ಯದಲ್ಲಿ ಅದರದೇ ಆದ ಸೊಗಡು ಇದೆ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರಗಳಲ್ಲಿ ಕೈಯಾಡಿಸಿ ಅಕ್ಷಯವಾದ ಹತ್ತು ಹಲವು ಅಮೃತಮಯ ಕಾವ್ಯಗಳನ್ನು ಅಕ್ಷರರೂಪಕ್ಕಿಳಿಸಿದ ಓರ್ವ ಅಪರೂಪದ ಕಾವ್ಯ ಪ್ರತಿಭೆಯೇ ಮೈಸೂರಿನ  ಡಾ| ಜಯಪ್ಪ ಹೊನ್ನಾಳಿಯವರು(ಜಯಕವಿ).

ಬಾಲ್ಯ ಮತ್ತು ಶಿಕ್ಷಣ

ಜಯಪ್ಪ ಹೊನ್ನಾಳಿಯವರು ಸರ್ವಜ್ಞನ ಮಾಸೂರಿನಲ್ಲಿ ರುದ್ರಮ್ಮ ವಿನಾಯಕಪ್ಪ ದಂಪತಿಗಳ ಪ್ರಥಮ ಪುತ್ರನಾಗಿ 12-06-1965 ರಲ್ಲಿ ರೈತಾಪಿ ಕುಟುಂಬದಲ್ಲಿ ಜನಿಸಿದರು. ತ್ರಿಪದಿಗಳಬ್ರಹ್ಮಸರ್ವಜ್ಞ, ಕನ್ನಡದ ಮೊದಲ ವಚನಕಾರ್ತಿ  ಅಕ್ಕಮಹಾದೇವಿ ಅನುಭಾವಿ ಅಲ್ಲಮಪ್ರಭು, ಹರಿದಾಸ ಶ್ರೇಷ್ಠ ಕನಕದಾಸ, ಶಿವ ಶರಣೆ ಸತ್ಯಕ್ಕ ಇಂತಹ ಹಲವು ಸಾಧಕರು ಉಸಿರಾಡಿದ, ತಮ್ಮ ಸಾಧನೆ ಸಿದ್ಧಿಗಳನ್ನು ಮೆರೆದ ಮಣ್ಣಂಗಳದಲ್ಲಿ ಜನಿಸಿದ ಜಯಪ್ಪ ಅವರಿಗೆ ಇವರೆಲ್ಲರು ಆದರ್ಶ ಎನಿಸಿದರು.

ಹೊನ್ನಾಳಿಯವರ ಬಾಲ್ಯವೋ ಕಷ್ಟವನ್ನೆ ಅರೆದುಂಡ, ನೋವು ಅಪಮಾನ ಅವಮಾನಗಳಿಂದ ಜರ್ಜರಿತವಾದ ಬಾಲ್ಯವಾಗಿತ್ತು ಬದುಕಿನ ಎಲ್ಲ ಅನುಭವಗಳನ್ನು ತಳಸ್ಪರ್ಶಿಯಾಗಿ ನೋಡಿ ಅನುಭವಿಸಿದರು ಇವರು. ಕಡು ಬಡತನ ತಾಂಡವವಾಡುತ್ತಿರುವ ‘ಹುಲ್ಲಿನ ಮನೆಯಲ್ಲಿ ವಾಸ, ಒಂದೊಂದು ದಿನ ಉಪವಾಸ ಮಲಗುವ ಸ್ಥಿತಿ. ಹುರಿದ ಹುಣಸೆ ಬೀಜಕ್ಕೆ ಜಗಳ ವಾಡುವ ಮಕ್ಕಳು, ಅವರಿವರು ಕೊಟ್ಟ ಹಳೆ ಬಟ್ಟೆಯನ್ನೊ, ನೆರೆಮನೆಯ ಅಜ್ಜಿ ನೀಡುತ್ತಿದ್ದ ತುಸು ತಿಂಡಿಯನ್ನೊ ಮಕ್ಕಳಿಗೆ ನೀಡಿ, ತಾನು ಊಟ ಮಾಡಿದೆ ಹೊಟ್ಟೆ ತುಂಬಿತು ಎಂಬಂತೆ ತೇಗಿ ಮಕ್ಕಳನ್ನು ತಟ್ಟಿ ಮಲಗಿಸುತ್ತಿದ್ದ ಮಹಾ ತಾಯಿ ರುದ್ರಮ್ಮ ಜಯಪ್ಪ ಅವರ ಪಾಲಿಗೆ ಆದರ್ಶದ ಗಣಿ.

ಅಪ್ಪ ಮಗನನ್ನು ಬರೀ ಐನೂರು ರೂಪಾಯಿಗೆ ಪಕ್ಕದ ಹಳ್ಳಿಯಲ್ಲಿ  ಜೀತಕ್ಕೆ ಹಾಕಿದರು.  ಅಪ್ಪನಿಂದ ಪರಿತ್ಯಕ್ತರಾದರು ಜಯಪ್ಪ. ಅವರು ಜೀತದ ಮನೆಯಿಂದ ಬಿಟ್ಟೋಡಿ ಊರಿಗೆ ಬಂದಾಗ ತಂದೆಯಿಂದ ಹೊಡೆತ ಬಡಿತ ತಿಂದು, ಶಾಲೆಯನ್ನೇ  ಬಿಡುವ ಸ್ಥಿತಿ ಬಂದಿತು. ಅಪ್ಪನಿಗೆ ಗೊತ್ತಾಗದಂತೆ ಗೆಳೆಯರ ಹಸು ಕುರಿ ಕಾಯುವ ಕೆಲಸ ಮಾಡಿ ವಾರಕ್ಕೆ ಮೂರುದಿನ ಶಾಲೆಗೆ ಹೋದರು.

ಒಂದು ಯುಗಾದಿ ಹಬ್ಬದ ದಿನ ಮನೆಯಲ್ಲಿ ಉಪವಾಸ. ಈ ವಿಷಯಕ್ಕೆ ಅವ್ವ ಅಪ್ಪನಲ್ಲಿ ಜಗಳವಾಡಿದಾಗ ಅಪ್ಪ ಅವ್ವನ ಕೈ ಮುರಿದು ಹಣೆ ಒಡೆದು ಮನೆ ಬಿಟ್ಟು ಹೋದರಂತೆ. ರಾತ್ರಿಯಿಡೀ ಅಪ್ಪನಿಗಾಗಿ ಅವ್ವ ಬಾಗಿಲಲ್ಲೇ ಕಾಯುತ್ತಿದ್ದ ಆ ದೃಶ್ಯವನ್ನು ಹೊನ್ನಾಳಿಯವರು  ‘ನನ್ನವ್ವ  ಭರತಖಂಡದ ನಾರಿಯರ ಪ್ರತಿನಿಧಿ’’ ‘ಜೀವನದ ಕಟು ಸತ್ಯಗಳನ್ನು ತಿಳಿಸಿದ ಗಣಿ’ ಎಂದು  ಬಣ್ಣಿಸುತ್ತಾರೆ.

ಅವ್ವ ಈ ನೋವನ್ನು  ಸಹಿಸದೆ ಎಲ್ಲ ಮಕ್ಕಳನ್ನು ಕರೆದುಕೊಂಡು ಹರಿಯುವ ಹೊಳೆಗೆ ರಾತೋರಾತ್ರಿ ಹಾರಲು ಹೊರಟಳು.. ಮಕ್ಕಳಲ್ಲಿ ಕೇಳ್ತಾಳೆ ‘ಬದುಕಬೇಕಾ-ಅಲ್ಲ ನೋವಿಲ್ಲದ, ಸುಖ ಶಾಂತಿಗಳ ಆ ಊರಿಗೆ ಹೋಗುವನಾ’” ಅಂದಾಗ  “ಬದುಕೋಣ ಅಮ್ಮ … ಸಾಯೋಕೆ ಹೆದರಿಕೆ ಆಗ್ತದೆ. ನಿನ್ನನ್ನು ನಾವು ಕೂಲಿ ನಾಲಿ ಮಾಡಿ ಸಾಕ್ತೀವಿ ಅಮ್ಮ.. ಮನೆಗೆ ಹೋಗೋಣ”” ಅಂದಾಗ ಮಕ್ಕಳನ್ನು ತನ್ನ ಹರಿದ ಸೆರಗಿನಲ್ಲಿ ಮುಚ್ಚಿ ಅತ್ತು ಗೋಳಾಡಿ ಮುಖ ತುಂಬಾ ಮುತ್ತಿಟ್ಟು “ನಡೀರಿ  ಮನೆಗೋಗುವಾ.. ನಾವಿಲ್ಲಿಗೆ ಇನ್ನು ಬರುವುದೇ ಬೇಡ” “ ಅಂತ ಭಾಷೆ ಕೊಡ್ತಾಳೆ ಆ ಮಹಾಮಾತೆ ಹೊನ್ನಾಳಿಯವರ ಎರಡಕ್ಷರದ ಮಹಾಕಾವ್ಯ “ಅವ್ವ””

ಅವ್ವನ ನವಿರಾದ ಪ್ರೀತಿತುಂಬಿದ ಹರಕೆ, ಗೆಳೆಯರ ಬಳಗದ, ಗುರುಗಳ, ಊರವರ ಹಾರೈಕೆಯೊಂದಿಗೆ ಮಾಸೂರಿನಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ, ಮತ್ತು ಪಿಯುಸಿಯನ್ನು ಮುಗಿಸಿ ವಿದ್ಯೆಯ ಹಸಿವು, ನೂರಾರು ಕನಸು, ಸಾಧಿಸುವ ಛಲ, ಮುನ್ನಡೆವ ಆಸೆಗಳ ಮೂಟೆಗಳೊಂದಿಗೆ  ಮೈಸೂರಿಗೆ ಬಂದರು ಹೊನ್ನಾಳಿಯವರು.. ಎಲ್ಲಿಯ ಮಾಸೂರು..?ಎಲ್ಲಿಯ ಮೈಸೂರು..? ಎತ್ತಣಿಂದೆತ್ತ  ಸಂಬಂಧವಯ್ಯಾ…? ಮೈಸೂರಿನಲ್ಲಿ ಜಯಪ್ಪ ಅವರು ಕನ್ನಡ ಸಮಾಜಶಾಸ್ತ್ರದಲ್ಲಿ ಎಂ. ಎ, ಬಿ.ಎ ಯನ್ನು, ಬಿ.ಪಿ.ಎಡಿ ಯನ್ನು ದ್ವಿತೀಯ ರ್ಯಾಂಕಿನೊಂದಿಗೂ, ಯೋಗವನ್ನು ಪ್ರಥಮ ರ್ಯಾಂಕಿನೊಂದಿಗೂ ಹಾಗೂ 2016 ರಲ್ಲಿ ಫಿಲಾಸಫಿಯಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದು ವಿದ್ಯಾಶಿಲೆಯಲ್ಲಿ ಅರಳಿದ ಶಿಲ್ಪವಾದರು.
 
ವೃತ್ತಿ ಜೀವನ

1986 ರಿಂದ ಡಾ| ಜಯಪ್ಪ ಹೊನ್ನಾಳಿಯವರು ಮೈಸೂರಿನ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿರಂತರ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇಲಾಖೆಗೆ, ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕ ಎನಿಸಿಕೊಂಡಿದ್ದಾರೆ.
 
ಸಾಹಿತ್ಯ ಕೃಷಿ

ಎಳವೆಯಲ್ಲಿಯೇ ಸಣ್ಣ ಪುಟ್ಟ ಕವನಗಳನ್ನು ಬರೆಯುತ್ತಿದ್ದ  ಹೊನ್ನಾಳಿಯವರು 2001 ರಿಂದ ಗಂಭೀರವಾಗಿ ಸಾಹಿತ್ಯಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಕಥೆಗಾರರಾಗಿ, ಸಾಹಿತಿಯಾಗಿ,ಲೇಖಕರಾಗಿ,ಬರಹಗಾರರಾಗಿ, ವಚನಕಾರರಾಗಿ, ಚಿಂತನಕಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ, ಚಿತ್ರಸಾಹಿತಿಯಾಗಿ ಹಾಯ್ಕುಗಾರರಾಗಿ“ಬಾ ಬೆಳಕೇ”ಎನ್ನುತ್ತಾ ಬೆಳಕಿನೂರಿಗೆ ತನ್ನ ನಡಿಗೆಯನ್ನು ಪ್ರಾರಂಭಿಸಿಯೇ ಬಿಟ್ಟರು ಜಯಕವಿ.
 
ಆ  ದಿನಗಳಲ್ಲಿ ‘ಕಾವ್ಯವೇ’ ತನ್ನ ಅಂತರಾತ್ಮದ ಆತ್ಮೀಯ ಕ್ಷೇತ್ರ ಎನ್ನುವುದು ಅವರರಿವಿಗೆ ಬಂತು. ತನ್ನ ಮೆಚ್ಚಿನ ಕಾವ್ಯಕೃಷಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಅವರ ಹುಟ್ಟಿದೂರು ಮಾಸೂರಿನ ನೆಲದ ಕಂಪೊ ಅಥವಾ ಕೈಬೀಸಿ ಕರೆದ ಮೈಸೂರಿನ ಮಧುರತೆಯೋ  ಅವೆರಡೂ ಜಯಕವಿಯ ಕಾವ್ಯಗಳ ಮೇಲೆ ಅಪಾರ ಪ್ರಭಾವ ಬೀರಿದ್ದರೆ ಅಚ್ಚರಿಯಲ್ಲ. ಮೈಸೂರಿಗೆ ಬಂದಾಗ ಅವರ ಕೈ ಹಿಡಿದು ಮುನ್ನಡೆಸಿದುದು ಮಾತ್ರ ಕಾವ್ಯದಾರಿಯೇ.
   
ಕವಿರಚನೆಯ ನಕ್ಷತ್ರಕಾವ್ಯಗಳು

‘ಬಾ ಬೆಳಕೇ’….. ‘ಹುಲ್ಲಿನಮನೆ’…. ‘ನಕ್ಷತ್ರಕಾವ್ಯ’… ‘ನಿನ್ನ ಹೆಸರು ಪ್ರೀತಿಯೇ’… ‘ಭಾವಬೆಳದಿಂಗಳು’ ‘ಅವ್ವಾ’.. ‘ಬಂದಬರ್ತಾನಚಂದ್ರ’…. ‘ಕಾಗದದದೋಣಿ’ (ಬಿಡುಗಡೆಗೆ ಕಾದಿದೆ) ‘ಕಾವ್ಯಕುಮುದ್ವತಿ’”ಎಂಬ ಭಾವಗೀತೆಯ ಸಂಕಲನ ಹಾಯ್ಕು ಸಂಕಲನಗಳಾದ ‘ಮುತ್ತುಗ’ ‘ಬಿಲ್ವ’ ‘ತ್ರಿದಳ’(ಬಿಡುಗಡೆಯಾಗಲಿದೆ). ‘ವಚನನಂದನ’ ಎಂಬ ವಚನ ಸಂಕಲನ, ‘ಕಾವ್ಯ ಕೂಡಲ’ಎಂಬ ಕಾವ್ಯಸಂಪುಟ, ‘ಹೂರಣತೋರಣ’ ಚಿಂತನಮಾಲೆ, ‘ಮೌನದ ನಡುವೆ’” ವಿಮರ್ಶಾಸಂಕಲನ,  ‘ಸುತ್ತಮುತ್ತಲ ಹತ್ತು ಕಥೆಗಳು’”ಕಥಾಸಂಕಲನ (ಬಿಡುಗಡೆ ಆಗಲಿದೆ)
‘ಕುಲವನರಸದಿರಿ ಭೋ..’” ಬಸವಣ್ಣನವರ ಕುರಿತ ಕೃತಿ…. ಈ ಎಲ್ಲವುಗಳಲ್ಲಿ ಕಂಡು ಬರುವ ಕವಿಪ್ರತಿಭೆ ರೋಚಕ …ರೋಮಾಂಚಕ…!!

ಹಾಯ್ಕುಕಾರರಾಗಿ
 

ಡಾ ಜಯಪ್ಪ ಹೊನ್ನಾಳಿಯವರು ಉತ್ತಮ ಹಾಯ್ಕುಗಾರರು.  
ಹಾಯ್ಕು ಎಂಬ ಕವನ ಪ್ರಕಾರವೊಂದು ಇದೆ, ಅದು ಇಷ್ಟೊಂದು ಚೆನ್ನಾಗಿದೆಯೆಂಬುದನ್ನು ನಾನು ಅರಿತೇ ಇರಲಿಲ್ಲ.  ಜಪಾನೀ ಶೈಲಿಯ ಪದ್ಯ ಪ್ರಕಾರವಿದು.  ಕವಿ ಮೂರು ಸಾಲುಗಳಲ್ಲಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಪೂರ್ತಿ ಅರ್ಥ ಕೊಡುವ ಅನೇಕ ಹಾಯ್ಕುಗಳನ್ನು ರಚಿಸಿದ್ದಾರೆ.  ಹಾಯ್ಕು ಎಂದರೆ ಹೊಳಹು, ಬೆಳಕು, ವಿಸ್ಮಯ, ರೋಮಾಂಚನ.

ಪ್ರಶಸ್ತಿಗಳು

ನೂರಾರು ಪ್ರಶಸ್ತಿಗಳಿಂದ ಮೀಯಿಸಿಕೊಂಡಿದ್ದಾರೆ, ತೋಯಿಸಿಕೊಂಡಿದ್ದಾರೆ ಕವಿವರರು ಕವನಶ್ರೀ ಕಾವ್ಯಶ್ರೀ, ಕನ್ನಡ ಕುಸುಮ, ದಾಂಪತ್ಯಅನುಸಂಧಾನ, ಡಾ| ರಾಧಾಕೃಷ್ಣನ್ ಉತ್ತಮ ಶಿಕ್ಷಕ ಪ್ರಶಸ್ತಿ, ಸೇವಾ ಕರ್ತ ಪ್ರಶಸ್ತಿ, ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ, ಮುದ್ದು ಮಾದಪ್ಪ ಪ್ರಶಸ್ತಿ, ಬಸವಸೇವಾ ಪ್ರಶಸ್ತಿ, ಮೈಸೂರು ರೋಟರಿ ಕ್ಲಬ್ ಸೋಂಪುರ ಬಸಪ್ಪ ಆದರ್ಶ ಶಿಕ್ಷಕ ಪ್ರಶಸ್ತಿ, ಗೋಪಾಲಕೃಷ್ಣ ಅಡಿಗ ಪ್ರಶಸ್ತಿ, ವಚನ ಸಾಹಿತ್ಯ ಆಕಾಡಮಿ ಪ್ರಶಸ್ತಿ, … ಸಾ.ಶಿ. ಇಲಾಖೆಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2010 ನೇ ಸಾಲಿನ ಡಾ. ರಾಧಾಕೃಷ್ಣನ್ ರಾಜ್ಯಮಟ್ಟದ ಪ್ರಶಸ್ತಿ, ವಸುಂಧರ ರತ್ನ ಪ್ರಶಸ್ತಿ, ರೋಟರಿ ಮೈಸೂರು ಸೌತ್ ಈಸ್ಟ್ ಅವರಿಂದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, 2011ನೇ ಸಾಲಿನ ರಾಜ್ಯಮಟ್ಟದ ಬಸವ ಜ್ಯೋತಿ ಪ್ರಶಸ್ತಿ, 2011 ನೇ ಸಾಲಿನ ದಸರೆಯ ಕವಿ ಪ್ರಶಸ್ತಿ, ಮೈಸೂರು ಜಿಲ್ಲೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಇಂತಹ ಹಲವಾರು ಹೆಮ್ಮೆ ಹೆಗ್ಗಳಿಕೆಯ ಪ್ರಶಸ್ತಿಗಳು ಹೊನ್ನಾಳಿಯವರನ್ನು ಅರಸಿಕೊಂಡೇ ಬಂದು ಇವರು ಅವುಗಳಿಂದ ಅಲಂಕೃತರಾದರು.

ಗೌರವ ಸಮ್ಮಾನಗಳು

ಇವರಿಗೆ ಸಿಕ್ಕ ಸ್ಥಾನಮಾನಗಳು ನಿಜಕ್ಕೂ ಅವರ ಅರ್ಹತೆಗೆ ತಕ್ಕವು.  
❖ ಅಧ್ಯಕ್ಷರು, ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ
❖ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಪ್ರಧಾನ ಕಾರ್ಯದರ್ಶಿ
❖ ಅಧ್ಯಕ್ಷರು, ಸರ್ವಜ್ಞನ ಕನ್ನಡ ಸಂಘ ಮೈಸೂರು
❖ ಸದಸ್ಯರು, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು  ಮೈಸೂರು ಇವುಗಳು ಇವರ ಸಾಧನೆಗೆ ಸಿಕ್ಕ ಸಮ್ಮಾನಗಳು
 
ಅನೇಕ ಪ್ರಮುಖ ಗೋಷ್ಠಿಗಳಲ್ಲಿ ಭಾಗವಹಿಸಿ ಕವಿ ಅಭಿನಂದನೀಯರಾಗಿದ್ದಾರೆ.
 
ಮೈಸೂರು ದಸರಾ ಕವಿ ಗೋಷ್ಠಿ, ಹಾವೇರಿ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷ
ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ನಮ್ಮೇಳನದಲ್ಲಿ 2008ರಲ್ಲಿ ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ದೂರದರ್ಶನ ಹಾಗೂ ಆಕಾಶವಾಣಿಯು ಹಲವು ಕವಿಗೋಷ್ಠಿಗಳು
ರಾಜ್ಯಸರಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘ ಸಂಸ್ಠೆಗಳು ಶರಣ ಸಾಹಿತ್ಯ ಪರಿಷತ್ತುಗಳು ನಡೆಸಿದ ಅನೇಕ ಸಮ್ಮೇಳನಗಳು, ಕವಿಗೋಷ್ಠಿಗಳು ವಚನಗೋಷ್ಠಿಗಳು,
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಆಶಯ ಭಾಷಣಕಾರರಾಗಿ
ಚಂದನವಾಹಿನಿಯಲ್ಲಿ ಬೆಳಗು ಕಾರ್ಯಕ್ರಮದ ಅತಿಥಿ ಮಂಡ್ಯ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮೈಸೂರು ಹಾಗೂ ಬೆಂಗಳೂರು ಆಕಾಶವಾಣಿಗಳಲ್ಲಿ ಭಾವಗೀತೆಗಳ ವಾಚನ, ದೂರದರ್ಶನದಲ್ಲಿಯೂ ಹಲವು ಭಾವಗೀತೆಗಳ ಪ್ರಸಾರ. ಕವಿಯ ‘ಕೊರಳೆ’ ಎಂಬ ಭಾವಗೀತೆಗೆ (ರಾಗ ಸಂಯೋಜಕಿ ಸುನೀತಾ ಚಂದ್ರಕುಮಾರ್) 2014 ರಲ್ಲಿ ಕೆ.ಐ.ಎಂ.ಎ. (ಕರ್ನಾಟಕ ಇಂಟರ್ ನ್ಯಾಶನಲ್ ಮ್ಯೂಸಿಕ್ ಅವಾರ್ಡ್) ಬಂದಿರುವುದು.
 
ಅಂತರಂಗದ ಅನನ್ಯ ಉಸಿರದನಿಗಳು ಯಾವ ಮಂತ್ರಘೋಷಕ್ಕೂ ಕಡಿಮೆ ಇಲ್ಲದವುಗಳು. ಯಾವ ಚಂದ್ರ ತಾರೆಗೂ ಹೋಲಿಕೆ ಇಲ್ಲದವುಗಳು. ಕಾವ್ಯದಲ್ಲಿಯೇ ಬದುಕಿನಾನಂದವನ್ನು ಅನುಭವಿಸುತ್ತಾ ಧನ್ಯತೆ ಮಾನ್ಯತೆಯೊಂದಿಗೆ ಭವ್ಯತೆಯಲ್ಲಿ ಮೆರೆಯುತ್ತಿರುವ, ಸರ್ವರ ಹೃನ್ಮಂದಿರದಲ್ಲಿ ಸಾಂಸ್ಕೃತಿಕ ದೀಪ ಹಚ್ಚುತ್ತಿರುವ, ಕಾವ್ಯಾಲಂಕಾರ ಮಾಡಿ ಕಾವ್ಯ ದೇವಿಗೆ ಜ್ಯೋತಿ ಬೆಳಗುವ ಡಾ| ಜಯಪ್ಪ ಹೊನ್ನಾಳಿ ಯವರ ಬದುಕು -ಬರೆಹ ಸಜ್ಜನಿಕೆ- ಸಂಪನ್ನತೆ, ಸಾಹಿತ್ಯ ಪ್ರೀತಿ-ಕಾವ್ಯಾಭಿವ್ಯಕ್ತಿ.
ನಿಡಿದಾಗಿರಲಿ……….  ನಿರಾಳವಾಗಿರಲಿ…….. ನಿರಂತರವಾಗಿರಲಿ……
ಈ ಕಾವ್ಯಪ್ರಭೆ ಜಗದಗಲ ಮುಗಿಲೆತ್ತರ ವ್ಯಾಪಿಸಲಿ…… ಕಂಗೊಳಿಸಲಿ…. ಸಂಭ್ರಮಿಸಲಿ
 

ಶ್ರೀಮತಿ.ಕೆ.ಸರೋಜಿನಿ ನಾಗಪ್ಪಯ್ಯ
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯಿನಿ,
ಈಶ್ವರಮಂಗಲ
ಪುತ್ತೂರು .

Team Newsnap
Leave a Comment
Share
Published by
Team Newsnap

Recent Posts

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024

ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)… Read More

May 15, 2024

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024