ಲಲಿತ ಪ್ರಬಂಧಗಳ ಸುಲಲಿತ ವ್ಯಕ್ತಿ ವಸುಧೇಂದ್ರ
2000ದ ದಶಕದ ನಂತರ ಕನ್ನಡದಲ್ಲಿ ಲಲಿತ ಪ್ರಬಂಧಗಳು ಇಲ್ಲ ಎನ್ನಬಹುದಾದಷ್ಟು ವಿರಳ. ಆದರೆ ಆ ಕೊರತೆಯನ್ನು ನೀಗಿಸಿದ್ದು ವಸುಧೇಂದ್ರ.
ಮೂಲತಃ ಸಾಫ್ಟ್‌ವೇರ್ ಎಂಜನೀಯರ್ ಆಗಿದ್ದ ವಸುಧೇಂದ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದು ತಮ್ಮ ಲಲಿತ ಪ್ರಬಂಧಗಳ ಮೂಲಕವೇ.
ಬಳ್ಳಾರಿ ಧೂಳಿನಿಂದ ಎದ್ದು ಬಂದವರು:
ವಸುಧೇಂದ್ರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಪ್ರಹ್ಲಾದ್‌ರಾವ್ ಹಾಗೂ ತಾಯಿ ವಸಂತ. ಸಂಡೂರಿನಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಪೂರೈಸಿದ ಅವರು, ಸೂರತ್ಕಲ್‌ನ ಐಐಟಿಯಲ್ಲಿ ಎಂಜನೀಯರಿಂಗ್ ಪದವಿಯನ್ನು, ಬೆಂಗಳೂರಿನ ಐಐಎಸ್‌ಸಿಯಲ್ಲಿ ಎಂ.ಇ. ಪದವಿ ಪಡೆದ ವಸುಧೇಂದ್ರ ಬಳ್ಳಾರಿ ಧೂಳಿನಿಂದ ಮೈಕೊಡವಿ ಬಂದವರು!
ಪ್ರಕಾಶನ ಹುಟ್ಟು ಹಾಕಿದ್ದು
20 ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ನಂತರ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದ ಅವರು, ಕೆಲಸವನ್ನು ಬಿಟ್ಟು ಛಂದ ಪುಸ್ತಕ ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದರು.
ವಸುಧೇಂದ್ರ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ಅವರು ಬರೆದ ಪುಸ್ತಕಗಳನ್ನು ಯಾವ ಪ್ರಕಾಶಕರೂ ಮುದ್ರಿಸಲು ಮುಂದೆ ಬರಲಿಲ್ಲ. ಆಗ ಗೆಳಯರೊಬ್ಬರು ನೀಡಿದ ಸಲಹೆಯ ಮೇರೆಗೆ ‘ಛಂದ ಪ್ರಕಾಶನ’ ಸಂಸ್ಥೆಯನ್ನು ಪ್ರಾರಂಭಿಸಿದರು. ಅಲ್ಲದೇ ಕನ್ನಡದ ಎಲ್ಲ ಓದುಗರಿಗೂ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕಗಳು ದೊರೆಯಲೆಂಬ ನಿಟ್ಟಿನಲ್ಲಿ, ತಾವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ ನಂತರವೂ ತಮ್ಮ ಪುಸ್ತಕಗಳನ್ನು ಆದಷ್ಟು ಕಡಿಮೆ ದರಕ್ಕೆ ಸೀಮಿತಗೊಳಿಸಿದ್ದಾರೆ.
ಬರವಣಿಗೆಯತ್ತ ಹೆಜ್ಜೆ
ಖಚಿತವಾಗಿ ವಸುಧೇಂದ್ರ ಲಲಿತ ಸಾಹಿತ್ಯ ಕ್ಷೇತ್ರವನ್ನು ಏಕೆ ಆರಿಸಿಕೊಂಡರು ಎಂಬ ಬಗ್ಗೆ ಗೊತ್ತಿಲ್ಲದಿದ್ದರೂ, ತಾವು ಐಟಿ ಕ್ಷೇತ್ರದಲ್ಲಿ ಕಂಡುಕೊಂಡ ಅನುಭವಗಳು, ಅಲ್ಲಿ ನಡೆದ ಘಟನೆಗಳು ಇವುಗಳನ್ನೇ ಆಧಾರವಾಗಿಟ್ಟುಕೊಂಡು ಬರವಣಿಗೆಯನ್ನು ಆರಂಭಿಸಿದವರು ಇವರು. ವಸುಧೇಂದ್ರ ಕೆಲಸದ ನಿಮಿತ್ತ ಲಂಡನ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಬಿಡುವು ಸಿಕ್ಕಾಗ ಅಂತರಾಷ್ಟ್ರೀಯ ಮಟ್ಟದ ಅನೇಕ ಉತ್ತಮ ಸಿನಿಮಾಗಳನ್ನು ನೋಡಿ ಕಥೆಯ ಹಂದರವನ್ನು, ಕಥೆಯ ಪಾತ್ರಗಳನ್ನು ಹೇಗೆ ಕಟ್ಟಬೇಕೆಂದು ಕಲಿತರು.
ವಸುಧೇಂದ್ರ ಕೋತಿಗಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ಹಂಪಿ ಎಕ್ಸ್‌ಪ್ರೆಸ್, ವರ್ಣಮಯ, ಐದುಪೈಸೆ ವರದಕ್ಷಿಣೆ, ರಕ್ಷಕ ಅನಾಥದಂತಹ ಅನೇಕ ಲಲಿತ ಪ್ರಬಂಧಗಳು, ಚೇಳು, ಮನೀಷೆ, ವಿಷಮ ಭಿನ್ನ ರಾಶಿ, ನಮ್ ವಾಜೀನ್ನೂ ಆಟಕ್ಕೆ ಕರ್ಕೊಳ್ರೋ, ಯುಗಾದಿ, ಮೋಹನ ಸ್ವಾಮಿ ಕಥಾ ಸಂಕಲನಗಳು, ಹರಿಚಿತ್ತ ಸತ್ಯ, ತೇಜೋ ತುಂಗಭದ್ರ ಕಾದಂಬರಿಗಳು ಹೀಗೆ ಇವರ ಬರವಣಿಗೆಗಳ ಪಟ್ಟಿ ಸಾಗುತ್ತದೆ.
ಅನುವಾದದಲ್ಲೂ ಆಸಕ್ತಿ:
ಅನುವಾದದಲ್ಲಿನ ಆಸಕ್ತಿಯಿಂದ ತೆಲುಗಿನ ಶ್ರೀರಮಣರ ‘ಮಿಥುನಂ’ ಕಥಾ ಸಂಕಲನವನ್ನು ಕನ್ನಡಕ್ಕೆ ‘ಮಿಥುನ’ವಾಗಿ ತಂದಿದ್ದಾರೆ. ಸ್ವತಃ ಮಾನಸ ಗಂಗೋತ್ರಿ ಯವರೆಗೆ ಚಾರಣ ಮಾಡಿರುವ ಇವರು ಜಾನ್ ಕ್ರೌಕರ್‌ರ ‘ಇಂಟೂ ಥಿನ್ ಏರ್’ ಪುಸ್ತಕವನ್ನು ಕನ್ನಡಕ್ಕೆ ‘ಎವರೆಸ್ಟ್’ ಆಗಿ ತಂದಿದ್ದಾರೆ. ವಸುಧೇಂದ್ರ ಅವರ ಸಾಹಿತ್ಯದ ಶಕ್ತಿ ಹಾಗೂ ಎಲ್ಲರನ್ನೂ ಆಕರ್ಷಿಸುವ ಅಂಶವೆಂದರೆ ಉತ್ತರ ಕರ್ನಾಟಕ ಭಾಷೆಯ ಸಧೃಡ ಬಳಕೆ.
ಇವರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಚಡಗ ಕಾದಂಬರಿ ಪ್ರಶಸ್ತಿ ಇವುಗಳೆಲ್ಲ ಸಂದಿವೆ.
ಒಂದು ಮಾತು
ಇಲ್ಲಿ ಇನ್ನೊಂದು ಮಾತು ಸೇರಿಸಲೇ ಬೇಕು. ವಸುಧೇಂದ್ರ ಅವರು ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಯಾವ ಪ್ರಕಾಶಕರೂ ಮುಂದೆ ಬಾರದಿದ್ದಾಗ, ತಮ್ಮದೇ ಸ್ವಂತ ಪ್ರಕಾಶನ ಸಂಸ್ಥೆಯನ್ನು ತೆರೆಯಲು ನಿರ್ಧಿರಿಸುವ ಮೊದಲು ಕನ್ನಡದ ಮತ್ತೊಬ್ಬ ಖ್ಯಾತ ಸಾಹಿತಿ ಕುಂಬಾರ್, ವೀರಭದ್ರಪ್ಪ ಅವರಿಗೆ ಕರೆ ಮಾಡಿ ಅವರ ಅಭಿಪ್ರಾಯ ಕೇಳುತ್ತಾರೆ. ಅವರು ‘ಕನ್ನಡಕ್ಕೆ ಒಂದು ಒಳ್ಳೆಯ ಪ್ರಕಾಶನ ಸಂಸ್ಥೆ ಇರಲಿಲ್ಲ, ನಿಮ್ಮ ಪ್ರಕಾಶನ ಸಂಸ್ಥೆ ಕನ್ನಡಕ್ಕೆ ಒಂದು ಒಳ್ಳೆಯ ಸಂಸ್ಥೆಯಾಗಲಿ’ ಎಂದು ಪ್ರಕಾಶನ ಕ್ಷೇತ್ರಕ್ಕೂ ಕುಂವೀ ಅವರು ವಸುಧೇಂದ್ರ ಅವರನ್ನು ಅಹ್ವಾನಿಸುತ್ತಾರೆ. ಇವರು ಪ್ರಕಾಶನ ಸಂಸ್ಥೆ ಆರಂಭಿಸಿದಾಗಿನಿಂದ, ‘ಛಂದ ಪುಸ್ತಕ’ದ ಮೂಲಕ ಪ್ರತೀ ವರ್ಷ ಕಥಾ ಸಂಕಲನ ಸ್ಪರ್ಧೆಯನ್ನು ಹಮ್ಮಿಕೊಂಡು, ಸ್ಪರ್ಧೆಗೆ ನಾಡಿನಾದ್ಯಂತ ಕಥಾ ಸಂಕಲನಗಳನ್ನು ಆಹ್ವಾನಿಸುತ್ತಾರೆ. ಬಂದ ಕಥಾ ಸಂಕಲನಗಳಿಗೆ ಕನ್ನಡದ ಖ್ಯಾತ ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ನೇಮಿಸಿ, ಸ್ಪರ್ಧೆಯಲ್ಲಿ ವಿಜೇತವಾದ ಕಥಾ ಸಂಕಲನವನ್ನು ತಮ್ಮ ಸಂಸ್ಥೆಯ ಮೂಲಕ ಪ್ರಕಟಿಸುವದಲ್ಲದೇ, ಕಥಾ ಸಂಕಲನ ರಚಿಸಿದವರಿಗೆ ನಗದು ಬಹುಮಾನವನ್ನೂ ನೀಡುತ್ತಿದ್ದಾರೆ. ತಾವು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಾಗ ಅನುಭವಿಸಿದ ಕಷ್ಟವನ್ನು ಇತರೆ ಯುವ ಸಾಹಿತಿಗಳು ಅನುಭವಿಸಬಾರದು ಎಂಬ ಕಾಳಜಿ ಅವರದು.
ಕೇವಲ ಸಾಹಿತ್ಯ ಕ್ಷೇತ್ರವಲ್ಲದೇ, ಸಾಮಾಜಿಕ ಹೋರಾಟಗಳಲ್ಲಿಯೂ ವಸುಧೇಂದ್ರ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಅವರು ಎಲೆಮರೆ ಕಾಯಿಯಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾದರೂ ಇವರು ಎಲ್ಲರೊಂದಿಗೆ ಸರಳ ಸಜ್ಜನಿಕೆಯೊಂದಿಗೆ ಒಡನಾಡುತ್ತ ಸಾಹಿತ್ಯ ಕ್ಷೇತ್ರದ ಉತ್ತುಂಗಕ್ಕೆ ಏರುತ್ತಿದ್ದಾರೆ.
- ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
- ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
- ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
- ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ
- ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ