November 19, 2024

Newsnap Kannada

The World at your finger tips!

nagesh hegade

ಕನ್ನಡ ಸಾಹಿತ್ಯ – ಪರಂಪರೆ: ಭಾಗ-3

Spread the love

ಕನ್ನಡ ವಿಜ್ಞಾನ ಲೋಕದ ಅಪೂರ್ವ ಬರಹಗಾರ ನಾಗೇಶ್ ಹೆಗಡೆ

ವಿಜ್ಞಾನ ಅಥವಾ ವೈಚಾರಿಕ ಬರಹಗಳನ್ನ ಓದುವುದಕ್ಕೆ ಅನೇಕರು ನಿರಾಸಕ್ತಿ ತೋರಿಸುತ್ತಾರೆ. ಕಾರಣ ಇತರೆ ಬರಹಗಳಂತೆ ಅವು ಓದುಗರನ್ನು ಆಕರ್ಷಿಸುವುದಿಲ್ಲ ಅಥವಾ ಅವುಗಳಲ್ಲಿ ರಂಜನೆಯ ಅಂಶ ಇರುವುದಿಲ್ಲವೆಂಬುದು ಅನೇಕರ ಅನಿಸಿಕೆ. ಆದರೆ ಅವುಗಳಲ್ಲಿ ಇರುವಷ್ಟು ಮಾಹಿತಿ ಯಾವುದೇ ರೀತಿಯ ಬರಹಗಳಲ್ಲಿರುವುದಿಲ್ಲ ಎಂಬುದು ಕೆಲ ಲೇಖಕರ ವಾದ. ಆದರೆ ಇಲ್ಲೊಬ್ಬರಿದ್ದಾರೆ. ಪರಿಸರ ವಿಜ್ಞಾನ ಹಾಗೂ ಜೀವ ವಿಜ್ಞಾನದ ಬರಹಗಳನ್ನು ಯಾವುದೇ ವಯೋಮಾನದವರೂ ಸಹ ಸರಾಗವಾಗಿ, ಯಾವುದೇ ನಿರಾಸಕ್ತಿ ತೋರಿಸದೇ ಓದಬಹುದು. ಆ ಬರಹಗಾರರೇ ನಾಗೇಶ್ ಹೆಗಡೆಯವರು.

ನಾಗೇಶ ಹೆಗಡೆಯವರು ಫೆಬ್ರುವರಿ 14, 1948ರಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಕ್ಕೆಮನೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಹೆಗಡೆ, ತಾಯಿ ಪಾರ್ವತಿ ಹೆಗಡೆ. ಪ್ರಾಥಮಿಕ ಶಿಕ್ಷಣ ಬಕ್ಕೆಮನೆಯಲ್ಲಾಯಿತು. ಸಿರ್ಸಿಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಿಗ್ರಿಯನ್ನು ಪಡೆದರು. ನಂತರ ಪಶ್ಚಿಮ ಬಂಗಾಳದಲ್ಲಿನ ಖರಗಪುರದ ಐಐಟಿಯಲ್ಲಿ ಭೂ ಹಾಗೂ ಗಣಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿದರು. ನಂತರ ಜವಾಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಎನ್ವಿರಾನ್ ಮೆಂಟ್ ಸೈನ್ಸ್ ಅಧ್ಯಯನ ಮಾಡಿದರು. ಇವರು ಓದಿದ ಬ್ಯಾಚ್ ಇಡೀ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ವಿಜ್ಞಾನ ಅಧ್ಯಯನದಲ್ಲಿ ಪದವಿ ಪಡೆದ ಬ್ಯಾಚ್. ನಂತರ ನೈನಿತಾಲ್ ನ ಕುಮಾಂವೋ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ನಾಗೇಶ ಹೆಗಡೆಯವರು ಶಾಲಾದಿನಗಳಿಂದಲೇ ಚಂದಮಾಮ, ಕಸ್ತೂರಿ, ಸುಧಾ, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ನಂತರ ಇನ್ನೂ ಕೆಲವು ಪತ್ರಿಕೆಗಳಿಗೆ ಅಂಕಣಗಳು, ಲೇಖನಗಳನ್ನು ಬರೆದರು. ನೈನಿತಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ‘ಸುಧಾ’ ಪತ್ರಿಕೆಗೆ ಸಹ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ನೋಡಿ ಅರ್ಜಿ ಹಾಕಿದರು. ಆದರೆ ಕೆಲಸ ಸಿಕ್ಕಿದ್ದು ಮಾತ್ರ ‘ಪ್ರಜಾವಾಣಿ’ಯಲ್ಲಿ. ಪ್ರಜಾವಾಣಿಯಲ್ಲಿ ‘ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ’ರಾಗಿ ಸೇವೆ ಸಲ್ಲಿಸಿದರು. ಇದು ನಾಗೇಶ ಹೆಗಡೆ ಅವರಿಗೋಸ್ಕರವೇ ಸೃಷ್ಟಿಸಿದ ಹುದ್ದೆಯಾಗಿತ್ತು. ಇದಾದ ನಂತರ ‘ನುಡಿಚಿತ್ರಗಾರ’ [Feature Writer] ಎಂಬ ಹುದ್ದೆಯನ್ನೂ ಸಹ ನಾಗೇಶ ಹೆಗಡೆ ಅವರಿಗೆಂದೇ ಸೃಷ್ಟಿ ಮಾಡಲಾದ ಹುದ್ದೆಯಾಗಿತ್ತು. ಈ ಎರಡೂ ಹುದ್ದೆಗಳು ಮೊದಲು ಕನ್ನಡ ಪತ್ರಿಕೋದ್ಯಮದಲ್ಲಿ ಇದ್ದಿಲ್ಲ. ಆಮೇಲೆ ಮುಖ್ಯ ಉಪಸಂಪಾದಕ ಹಾಗೂ ಸಹಾಯಕ ಸಂಪಾದಕರಾಗಿ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿದರು.

ಪುಸ್ತಕ ಕೃಷಿಯಲ್ಲಿ ಸಾಕಷ್ಟು ಸೇವೆ :

ನಾಗೇಶ್ ಹೆಗಡೆ ಪರಿಸರ ಮಾಲಿನ್ಯ, ಎಂಥದೋ ತುಂತುರು, ಇರುವದೊಂದೇ ಭೂಮಿ, ನಮ್ಮೊಳಗಿನ ದುಂದುಮಾರ, ಮುಷ್ಠಿಯಲ್ಲಿ ಮಿಲೇನಿಯಮ್, ಕೋಪನ್ ಹೆಗನ್ ಋತು ಸಂಹಾರ, ಚಿಪ್ಪೂ ಪುಟ್ಟನ ಚಮತ್ಕಾರ, ಮನೆಯಂಗಳದ ಜೀವಲೋಕ, ಜನ್ರೊಂದಿಗೆ ವನ್ಯಜೀವ ಹೀಗೆ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ನಾಗೇಶ ಹೆಗಡೆಯವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಪರಿಸರ ರಕ್ಷಣೆಯ ಹೋರಾಟದಲ್ಲಿ ಶಿವರಾಮ ಕಾರಂತರಂತಹ ದಿಗ್ಗಜರೊಡನೆ ಹೋರಾಟ ಮಾಡಿದ್ದಾರೆ. ಬೇಡ್ತಿ-ಅಘನಾಶಿನಿ-ಶರಾವತಿ ನದಿಮೂಲಗಳ ರಕ್ಷಣೆಗೆ ಹಾಗೂ ಕೈಗಾ ವಿದ್ಯುತ್ ಸ್ಥಾವರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅಲ್ಲದೇ ಪರಿಸರ ನಾಶದಿಂದ ಅಗಬಹುದಾದ ಅನಾಹುತಗಳ ಕುರಿತು ಅನೇಕ ಪುಸ್ತಕಗಳನ್ನ ಬರೆದಿದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವದ ಕುರಿತು 35ಕ್ಕೂ ಹೆಚ್ಚು ಕೃತಿಗಳನ್ನ ಬರೆದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನೀಡುವ “ವಿಜ್ಞಾನ ಸಾಹಿತ್ಯ” ಪ್ರಶಸ್ತಿ, ಟಿ.ಎಸ್.ಆರ್ ಮೆಮೋರಿಯಲ್ ಅವಾರ್ಡ್, ಜೊತೆಗೆ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.

70ರ ಹರೆಯದ ಇವರು ಇವತ್ತಿಗೂ ಪರಿಸರ ಸಂರಕ್ಷಣೆ ಕುರಿತು ಪ್ರಜಾವಾಣಿಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ. ಯುವ ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಇವರ ಸಾಹಿತ್ಯ ಕೃಷಿ, ಪರಿಸರ ಸಂರಕ್ಷಣೆಯ ಕೆಲಸಗಳು ಹೀಗೆ ಮುಂದುವರೆಯಲಿ, ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಲಿ ಎಂದು ಆಶಿಸೋಣ.

5855cf72 a9d7 4be9 b313 690a66964cac
ಓಂಕಾರೇಶ್. ಎಸ್

Copyright © All rights reserved Newsnap | Newsever by AF themes.
error: Content is protected !!