ಹಾಸ್ಯಬ್ರಹ್ಮ ಬೀಚಿಯವರ ಬದುಕು-ಬರಹ
ಹುಟ್ಟಿದ ತಕ್ಷಣವೇ ತಂದೆಯನ್ನು ತಿಂದುಕೊಂಡಿತು ಎಂದು ಆ ಮಗುವನ್ನು ಮೂರು ದಿನಗಳ ಕಾಲ ಹಗಲು ಇರುಳು ಹೊರಗೆ ಇಟ್ಟಿದ್ದರಂತೆ. ತಂದೆಯನ್ನು ತಿಂದ ಮಗುವಿಗೆ ಬದುಕಲು ಅರ್ಹತೆ ಇಲ್ಲವೆಂದು. ಆದರೆ ಆ ಮಗು ಸಾಯದೇ ಬದುಕುಳಿಯಿತು. ಒಂದು ವೇಳೆ ಆ ಮಗುವೇನಾದರೂ ಉಳಿಯದೇ ಹೋಗಿದ್ದರೆ ಕನ್ನಡ ಸಾಹಿತ್ಯ ಖಂಡಿತವಾಗಿಯೂ ಬಡವಾಗುತ್ತಿತ್ತು ಎನ್ನುವುದು ನಿರ್ವಿವಾದ.
ಆ ಕಂದ ಬೆಳೆದು ದೊಡ್ಡವನಾದ ಮೇಲೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿತು. ‘ಹಾಸ್ಯಬ್ರಹ್ಮ’, ‘ಕನ್ನಡ ಸಾಹಿತ್ಯದ ಬರ್ನಾರ್ಡ್ ಶಾ’ ಎಂದೆಲ್ಲ ಕರೆಸಿಕೊಂಡಿತು. ಬೀಚಿಯವರು ತಮ್ಮ ಆತ್ಮಕಥೆ ‘ನನ್ನ ಭಯಾಗ್ರಫಿ’ಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ.
ಬೀಚಿಯವರು ಜನಿಸಿದ್ದು 23-04-1913ರಲ್ಲಿ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ. ತಂದೆ ಶ್ರೀನಿವಾಸರಾಯರು, ತಾಯಿ ಭಾರತಮ್ಮ. ಬೀಚಿಯವರ ಪೂರ್ಣ ಹೆಸರು ರಾಯಸಂ ಭೀಮಸೇನ ರಾವ್. ಎಲ್ಲರ ತಿರಸ್ಕಾರದೊಂದಿಗೆ ಬೆಳೆದ ಮಗು 6-7 ವರ್ಷವಾಗುವಷ್ಟರಲ್ಲಿ ತಾಯಿಯನ್ನೂ ಕಳೆದುಕೊಂಡಿತು. ತಂದೆಯ ಅಕ್ಕ ರಿಂದಮ್ಮ ಇವರನ್ನು ಹೇಗೋ ಸಾಕಿದರು. ಶಾಲೆಗೆ ಹೋಗಬೇಕಾದರೆ ಅವರಿವರ ಹತ್ತಿರ ಶಾಲಾ ಫೀಸ್ ಸಂಗ್ರಹಿಸುತ್ತಿದ್ದರು ಬೀಚಿ.
ಬಹಳಷ್ಟು ಜನ “ನೀನು ಓದದಿದ್ದರೇನು ನಷ್ಟ” ಎನ್ನುವ ಮಾತನ್ನೂ ಆಡಿದ್ದರಂತೆ. ಆದರೂ ಪ್ರತಿ ತಿಂಗಳು ಹೇಗೋ, ಯಾರೋ ಕೊಡುತ್ತಿದ್ದರು, ಬೀಚಿಯವರ ವಿದ್ಯಾಭ್ಯಾಸ ಮುಂದುವರೆಯಿತು. ಈ ಬಗ್ಗೆ ಬೀಚಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವಂತೆ “ಈ ಜಗತ್ತಿನಲ್ಲಿ ದೇವರಿಲ್ಲ ಎಂದು ಯಾರಾದರೂ ಅಂದಾಗ ಇರಲಿಕ್ಕಿಲ್ಲ ಎಂದೆನ್ನುಕೊಳ್ಳುತ್ತೇನೆ. ಆದರೆ ದಯೆ ಎಂಬುದಿಲ್ಲ ಅಂದಾಗ ಅವರನ್ನು ಕಂಡು ‘ಅಯ್ಯೋ ಪಾಪಿ’ ಅನ್ನುತ್ತೇನೆ. ಅವನು ನಿಜವಾಗಿಯೂ ದುರ್ದೈವಿ.”
ಶಾಲೆಗೆ ಹೋಗಬೇಕಾದಾಗ ಮಕ್ಕಳು ಹಿಂದೆ ಸರಿಯುತ್ತಿರಲಿಲ್ಲ ಎನ್ನುವ ಬೀಚಿಯವರು, ಕಾರಣವನ್ನು ಈ ರೀತಿ ವಿವರಿಸುತ್ತಾರೆ. ‘ಮನೆಗೂ, ಶಾಲೆಗೂ ಯಾವ ವ್ಯತ್ಯಾಸವಿದೆ ಎಂದು ನಾವು ಶಾಲೆಗೆ ಅಂಜಬೇಕು? ಮನೆಯಲ್ಲಿಯೂ ಪೆಟ್ಟುಗಳು, ಶಾಲೆಯಲ್ಲೂ ಪೆಟ್ಟುಗಳು. ಪೆಟ್ಟುಗಳನ್ನು ಕೊಡುವವರಷ್ಟೇ ಬೇರೆ.’ ಈ ಕಾರಣದಿಂದಲೇ ಬೀಚಿಯವರು ಮಕ್ಕಳಿಗೆ ಈ ರೀತಿಯ ಶಿಕ್ಷಾ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸಿದರು.
ಕಷ್ಟಪಟ್ಟು ಎಸ್ ಎಸ್ ಎಲ್ ಸಿಯವರೆಗೆ ಓದಿದ ಬೀಚಿಯವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸದೆ, ಬೇರೆ ಬೇರೆ ಕಡೆ ಕೆಲಸ ಮಾಡಿ, ಕೊನೆಗೆ ಸರ್ಕಾರಿ ಕಛೇರಿಯಲ್ಲಿ ಅಟೆಂಡರ್ ಆಗಿ ಸೇರಿಕೊಂಡರು. ನಂತರ ಪೋಲಿಸ್ ಇಲಾಖೆಗೆ ಸೇರಿಕೊಂಡರು. ವಿವಾಹವೂ ಆಯಿತು. ಅವರ ಮಡದಿ ಬದುಕಿನುದ್ದಕ್ಕೂ ಬೀಚಿಯವರ ಕಷ್ಟಸುಖಗಳನ್ನು ಹಂಚಿಕೊಂಡರು.
ಬಳ್ಳಾರಿಯವರಾಗಿ ಬೀಚಿಯವರ ಮನೆಮಾತು ಕನ್ನಡವಾದರೂ, ಬೆಳೆದದ್ದು ತೆಲುಗಿನ ವಾತಾವರಣದಲ್ಲಿ, ನಂತರ ಸಂಸ್ಕೃತ ಓದಿದರು. ಆನಂತರ ಓದಿದ್ದು ಇಂಗ್ಲಿಷ್ ಅನ್ನೇ. ದಡ್ಡರು ಮಾತ್ರ ಕನ್ನಡವನ್ನು ಓದುತ್ತಾರೆ ಎಂಬ ಅಭಿಪ್ರಾಯವನ್ನು ಬೀಚಿಯವರು ಅಂಗೀಕರಿಸಿದ್ದರು.
ಕನ್ನಡ ಕಾದಂಬರಿಯನ್ನು ಓದುತ್ತಿದ್ದ ತಮ್ಮ ಪತ್ನಿಯನ್ನು ಹಾಸ್ಯ ಮಾಡುತ್ತಿದ್ದರು. ಆದರೆ ಒಮ್ಮೆ ಪತ್ನಿಯ ಬಲವಂತಕ್ಕೆ ರೈಲಿನಲ್ಲಿ ಹೋಗುವಾಗ ಕನ್ನಡ ಕಾದಂಬರಿಯನ್ನು ತೆಗೆದುಕೊಂಡು ಹೋದರು. ಆದರೆ ಕನ್ನಡ ಕಾದಂಬರಿ ಓದುವುದು ಅವಮಾನವೆಂದು ಪರಿಗಣಿಸಿ ಇಲ್ಲಸ್ಟ್ರೇಟೆಡ್ ವೀಕ್ಲಿಯ ಮಧ್ಯದಲ್ಲಿಟ್ಟುಕೊಂಡು ಓದಲಾರಂಭಿಸಿದರು. ಓದುಓದುತ್ತಿದ್ದಂತೆ ಅದರಲ್ಲೇ ಲೀನವಾಗಿಬಿಟ್ಟರು. ಅನಕೃರವರ ‘ಸಂಧ್ಯಾರಾಗ’ ಕಾದಂಬರಿ ಕನ್ನಡ ಸಾಹಿತ್ಯದ ಬಗ್ಗೆ ಅವರ ಯೋಚನಾಲಹರಿಯನ್ನೇ ಬದಲಿಸಿಬಿಟ್ಟಿತು. ಆಗಲೇ ಅವರಿಗೆ ಅರಿವಾಗಿದ್ದು ಅವರ ಒಲವು ಬರವಣಿಗೆಯ ಕಡೆಗಿದೆ ಎಂದು. ಅನಕೃರವರನ್ನು ಅವರು ಗುರುಗಳೆಂದೇ ಪರಿಗಣಿಸಿದರು, ಕನ್ನಡದ ದೀಕ್ಷೆ ಸ್ವೀಕರಿಸಿದರು. ಬೀಚಿಯವರು ತಮ್ಮ ಮೇಲೆ ಪ್ರಭಾವ ಬೀರಿದ 6 ಕೃತಿಗಳ ಬಗ್ಗೆ ಹೇಳಿದ್ದಾರೆ – ಅನಕೃರವರ ‘ಸಂಧ್ಯಾರಾಗ’, ಆದ್ಯರಂಗಾಚಾರ್ಯರ ‘ವಿಶ್ವಾಮಿತ್ರ ಸೃಷ್ಟಿ’, ಜಿಪಿರಾಜರತ್ನಂರವರ ‘ರತ್ನನ ಪದಗಳು’, ಶಂ ಬಾ ಜೋಷಿಯವರ ‘ಯಕ್ಷಪ್ರಶ್ನೆ’, ಕೆವಿ ಅಯ್ಯರ್‍ರವರ ‘ರೂಪದರ್ಶಿ’ ಮತ್ತು ಡಿವಿಜಿಯವರ ‘ಮಂಕುತಿಮ್ಮನ ಕಗ್ಗ.’ ಇನ್ನಾವುದೂ ಅಂತಹ ಪ್ರಭಾವ ಬೀರಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ಅವರಿಗೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಸಾಕಷ್ಟು ಒಲವಿದ್ದು, ಇಂಗ್ಲಿಷ್‍ನಲ್ಲಿ ಲೇಖನ ಬರೆದು ಸ್ನೇಹಿತರೂ, ಹಿತೈಷಿಗಳೂ ಆದ ಮಲೇಬೆನ್ನೂರು ಸತ್ಯವಂತರಾಯರಿಗೆ ತೋರಿಸಿದರು. ಅವರು “ಇದು ಸರಿ, ಆದರೆ ನೀನೇಕೆ ಕನ್ನಡದಲ್ಲಿ ಬರೆಯಬಾರದು?” ಕೇಳಿದರು. ಸ್ವಲ್ಪಕಾಲ ಏನನ್ನೂ ಬರೆಯದ ಬೀಚಿಯವರು ನಂತರ ಕನ್ನಡದಲ್ಲಿ ಬರೆಯಲಾರಂಭಿಸಿದರು. ಅವರ ಮೊದಲ ಕೃತಿಗಳಿಗೆ ಪ್ರಕಾಶಕರನ್ನು ಒದಗಿಸಿಕೊಟ್ಟವರು ಶಂ ಬಾ ಜೋಷಿಯವರು. ಅವರು ಎಲ್ಲೆಡೆ ತಮ್ಮ ಹೆಸರನ್ನು ಬರೆಯುವುದು ಹೀಗೆ – ಬೀCHI. ಅವರ ಹೆಸರಿನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಇರುವುದು ಅವರ ಎರಡೂ ಭಾಷೆಗಳ ಬಗೆಗಿನ ಒಲವನ್ನು ತೋರಿಸುತ್ತದೆ.
1945ರಲ್ಲಿ ಅವರ ಮೊದಲ ಕಾದಂಬರಿ ‘ದಾಸಕೂಟ’ ಪ್ರಕಟವಾಯಿತು. ಬೀಚಿಯವರು ಸಹ ಚಾರ್ಲಿ ಚಾಪ್ಲಿನ್‍ರವರಂತೆ ಜನರನ್ನು ನಗಿಸುತ್ತಲೇ ಬಹಳ ಗಂಭೀರವಾದ ವಿಷಯದ ಬಗ್ಗೆ ಯೋಚಿಸುವಂತೆ ಮಾಡುತ್ತಿದ್ದರು. ಅವರು ಬಹಳ ಪ್ರಮುಖ ಪಾತ್ರದಾರಿ ತಿಂಮ. ಡಿವಿಜಿಯವರ ತಿಮ್ಮ ಬಹಳ ಗಂಭೀರವಾದ ಚಿಂತನೆಯನ್ನು ನೀಡಿದರೆ, ಬೀಚಿಯವರ ತಿಂಮ ಹಾಸ್ಯ ರಸಾಯನದ ಮೂಲಕ ಜೀವನ ಪಾಠವನ್ನು ನೀಡುತ್ತದೆ.
ನಂತರ ಬೀಚಿಯವರು ಬರೆದ ‘ದೇವರ ಆತ್ಮಹತ್ಯೆ’ ಯಿಂದಾಗಿ ಅವರು ಬಳ್ಳಾರಿ ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಯಿತು. ಆಗ ಹಿರಿಯ ವಕೀಲರು, ನಾಟಕಗಳನ್ನು ಬರೆದು ದೇಶವಿದೇಶಗಳಲ್ಲಿ ಪ್ರದರ್ಶನ ನೀಡಿದ ರಾಘವಾಚಾರ್ಯರು ಹೇಳಿಕಳಿಸಿದಾಗ ಬೀಚಿಯವರು ಗಾಬರಿಯಾದರು. ಅವರ ನಾಟಕವನ್ನು ಓದಿಸಿ ಕೇಳಿದ ರಾಘವಾಚಾರ್ಯರು “ಈ ಬಳ್ಳಾರಿಯೆಂಬ ಕಸದ ಡಬ್ಬಿಯಲ್ಲಿ ನೀನೊಂದು ರತ್ನ” ಎಂದಾಗ ಬೀಚಿಯವರು ಅತ್ತುಬಿಟ್ಟರು.
“ರಾಘವಾಚಾರ್ಯರು ನನ್ನ ಪರವಾಗಿ ವಕಾಲತ್ತು ವಹಿಸಿರದಿದ್ದರೆ, ನನ್ನ ಸಾಹಿತ್ಯ ಶಕ್ತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಿತ್ತು” ಎಂದು ಹೇಳಿದ್ದಾರೆ ಬೀಚಿಯವರು. ಹೀಗೆ 1940ರ ದಶಕದಲ್ಲಿ ಆರಂಭಗೊಂಡ ಅವರ ಬರವಣಿಗೆ ಅವರು ಸಾಯುವವರೆಗೂ ಅವಿರತವಾಗಿ ಸಾಗಿತು. ಕಥೆ, ಕಾದಂಬರಿ, ಕವನ, ನಾಟಕ ಎಲ್ಲವನ್ನೂ ಬರೆದಿರುವ ಬೀಚಿಯವರು ಮುಖ್ಯವಾಗಿ ಹಾಸ್ಯರಸವನ್ನು ಬಳಸಿಕೊಂಡಿದ್ದಾರೆ. ಅವರು ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಥೆಗಳು, ಹಾಸ್ಯ, ಕಾದಂಬರಿ, ನಾಟಕ, ಲೇಖನ – ಎಲ್ಲಾ ಶೈಲಿಯಲ್ಲಿಯೂ ಬರೆದಿದ್ದಾರೆ.
ಜೀವನದ ಹಾದಿಯಲ್ಲಿ, 1967ರಲ್ಲಿ ತಮ್ಮ ಪದವೀಧರ ಮಗನನ್ನು ಕಳೆದುಕೊಂಡರು ಬೀಚಿಯವರು. ತೀವ್ರ ಆಘಾತಕ್ಕೆ ಒಳಗಾದ ಅವರು ಆತ್ಮಹತ್ಯೆ ಮಾಡಿಕೊಳ್ಳದಿರಲು ಕಾರಣ ಅವರ ಹೆಂಡತಿ, ಹಿರಿ ಮಗ ಮತ್ತು ಅಣ್ಣನ ಸರ್ಪಕಾವಲು. ಕಿರಿಮಗನಿಗೆ ಮದುವೆ ನಿಶ್ಚಯವಾಗಿತ್ತು, ಎಲ್ಲರೂ ಹುಡುಗಿಯ ಕಾಲ್ಗುಣವನ್ನು ದೂಷಿಸಿದರು. ಆದರೆ ಬೀಚಿಯವರು ಅದೇ ಕನ್ಯೆಯನ್ನು ತಮ್ಮ ಇನ್ನೊಬ್ಬ ಮಗನೊಂದಿಗೆ ಮದುವೆ ಮಾಡಿಸಿದರು. ನಂತರ ಮಗ ಮತ್ತು ಸೊಸೆಯ ಸಂತೋಷಕ್ಕೆ ಅಡ್ಡಿ ಬರಲಿಚ್ಛಿಸದೆ ಮಗನ ಶ್ರಾದ್ಧವನ್ನು ಮಾಡಬಾರದೆಂದು ಅಂದುಕೊಂಡರು. ಅವರ ಪತ್ನಿಯೂ ಸಹ “ಈ ಮನೆಯಲ್ಲಿ ಮಗನ ಶ್ರಾದ್ಧ ಮಾಡಬೇಕೆಂದು ನನಗೆ ಹಟ ಇಲ್ಲ. ನಿಮ್ಮ ಇಷ್ಟದಂತೆ ನೀವು ರಾಮಕೃಷ್ಣಾಶ್ರಮಕ್ಕೆ ಹಣ ಕಳಿಸಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ” ಎಂದರು. ಇದು ಬೀಚಿ ದಂಪತಿಗಳ ವ್ಯಕ್ತಿತ್ವವನ್ನು ಎತ್ತಿತೋರಿಸುತ್ತದೆ.
ತಮ್ಮ ನಿಜಜೀವನದಲ್ಲಿ ಕಂಡಿದ್ದರ ಬಗ್ಗೆ ಅರ್ಥಮಾಡಿಕೊಳ್ಳುತ್ತಾ, ಅರ್ಥವಿಹೀನ ಆಚರಣೆಗಳನ್ನು ಪ್ರಶ್ನಿಸುತ್ತಾ, ತಮ್ಮ ಕ್ರಾಂತಿಕಾರಕ ವಿಚಾರಗಳನ್ನು, ಜೀವನ ತತ್ವಗಳನ್ನು, ತಮ್ಮ ಸಾಹಿತ್ಯದ ಮೂಲಕ ಹಾಸ್ಯಲೇಪದೊಂದಿಗೆ ಜನರ ಮುಂದಿಟ್ಟರು. ಅವರ ಕ್ರಿಯಾಶೀಲತೆ, ಸಾಂಪ್ರದಾಯಿಕವಲ್ಲದ ಮನೋಭಾವ, ವೈಚಾರಿಕ ಚಿಂತನೆ, ಸಮಸ್ಯೆಗಳನ್ನು ಅವರು ನೋಡುವ ಹೊಸ ರೀತಿ, ಅವರನ್ನು ವಿಭಿನ್ನ ವ್ಯಕ್ತಿಯನ್ನಾಗಿಸಿತು. ತಾವು ಹುಟ್ಟಿದ ಸಮುದಾಯದ ಲೋಪದೋಷಗಳನ್ನು ಹೊರಹಾಕಿದ್ದರೆಂದು ತೀವ್ರ ಟೀಕೆಗೆ ಒಳಗಾದರು. ಆದರೂ ಅವರು ಹೊಗಳಿಕೆ – ತೆಗಳಿಕೆಯನ್ನೆಲ್ಲ ಸಮಾನವಾಗಿ ಸ್ವೀಕರಿಸಿದರು. ಅವರು ಯಾರನ್ನು ಸಹ ಕುರುಡಾಗಿ ಹೊಗಳುತ್ತಿರಲಿಲ್ಲ. ಗುರುಗಳೆಂದು ಭಾವಿಸಿದ ಅನಕೃರವರ ಕೆಲವು ಕೃತಿಗಳನ್ನೂ ಸಹ ಅವರು ನಿರ್ಭಿಡೆಯಿಂದ ಟೀಕಿಸಿದ್ದಾರೆ.
ಹಾಗೆಯೇ ತಾವೇ ಸ್ವತಃ ಜನಪ್ರಿಯ ಸಾಹಿತಿಯಾದರೂ, ಜೀವನತತ್ವಗಳನ್ನು ಹಾಸ್ಯಮಯವಾಗಿ ಹೇಳುತ್ತಿದ್ದರೂ, ಅವರು ಇನ್ನೊಬ್ಬರ ಮಹಾನತೆಯನ್ನು ಬಹಳ ಸುಲಭವಾಗಿ ಒಪ್ಪಿಕೊಳ್ಳುತ್ತಿದ್ದರು ಎಂಬುದಕ್ಕೆ ಈ ಮಾತೇ ಸಾಕ್ಷಿ. “ನನ್ನ ತಿಂಮನಿಗೂ ಗುಂಡಪ್ಪನವರ ತಿಮ್ಮನಿಗೂ ಕೇವಲ ಹೊರಹೋಲಿಕೆ ಅಷ್ಟಿಷ್ಟು ಇರಬಹುದಾದರೂ, ಇಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ, ನನ್ನ ತಿಂಮ ಬೆಡ್ ಲ್ಯಾಂಪ್!!”
ಅವರ ಆತ್ಮಚರಿತ್ರೆ ‘ನನ್ನ ಭಯಾಗ್ರಪಿ” ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ನಿಜವಾದ ಅರ್ಥದಲ್ಲಿ ಅದು ಆತ್ಮಚರಿತ್ರೆ. ಬೀಚಿಯವರು ತಮ್ಮ ಜೀವನದ ಸಿಹಿ ಕಹಿ, ತಪ್ಪು ಒಪ್ಪು ಎಲ್ಲವನ್ನು ನಿಸ್ಸಂಕೋಚವಾಗಿ ಬರೆದಿದ್ದಾರೆ. ನೋವಿನ ಸಂಗತಿಗಳನ್ನೂ ಸಹ ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಎಲ್ಲ ರೀತಿಯ ಘಟನೆಗಳನ್ನೂ ಚಿತ್ರೀಕರಿಸಿದ್ದರೂ ಎಲ್ಲಿಯೂ ಅಶ್ಲೀಲತೆಯ ಎಳೆ ಕಾಣುವುದಿಲ್ಲ. ಅದನ್ನು ಅವರು ತಮ್ಮ ಜೀವನದ ತತ್ವವನ್ನು ವಿವರಿಸಲು ಬಳಸಿಕೊಂಡ ಪುಸ್ತಕವಾಗಿದೆ ಎನ್ನಬಹುದು.
ಬೀಚಿಯವರು ಅನಾರೋಗ್ಯದಿಂದ 1980ರಲ್ಲಿ ಮರಣ ಹೊಂದಿದರು. ಭಾರತದ ಅಂಚೆ ಇಲಾಖೆ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಅವರ ಪುಸ್ತಕಗಳು ಎಷ್ಟೋ ಮುದ್ರಣ, ಮರುಮುದ್ರಣಗಳನ್ನು ಕಂಡಿವೆ. ಅವರ ತಿಂಮ ಜನಜನಿತನಾಗಿದ್ದಾನೆ. ತಮ್ಮ ಆತ್ಮಚರಿತ್ರೆಯ ಕೊನೆಯ ಪುಟದಲ್ಲಿ ಅವರು ಬರೆದಿರುವ ಈ ಸಾಲುಗಳು ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗದರ್ಶನ ನೀಡುವಂತಿದೆ:
“ಯಾವನ ಬಾಳೂ ಬಾಳಲಾರದಷ್ಟು ಕಷ್ಟವಲ್ಲ, ಕನಿಷ್ಟವೂ ಅಲ್ಲ; ಬಾಳಿನಿಂದ ಓಡಿಹೋಗಬೇಡ. ಅದನ್ನು ಇದಿರಿಸು, ಅದನ್ನೇ ಬಾಳು. ಇದು ಬಾಳಿನಿಂದ ನಾ ಕಲಿತ ಪಾಠ. ನಿನ್ನ ಬಾಳು ನಿನ್ನಷ್ಟು ಕೆಡುಕಲ್ಲ. ಅದನ್ನು ಪ್ರೀತಿಸು. ಪ್ರೀತಿ ನಿನ್ನ ಬಾಳ ಹೊರೆಯನ್ನು ಹಗುರಮಾಡುತ್ತದೆ. ನಿನ್ನ ಹೃದಯದಲ್ಲಿ ದ್ವೇಷಕ್ಕೆ ಮಾತ್ರ ಎಂದೂ ಇಂಬು ಕೊಡಬೇಡ. ಪ್ರೇಮವೇ ಬೆಳಕು. ದ್ವೇಷವೇ ಕತ್ತಲು. ನೀನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ನೀನೇ ದಾರಿ ತಪ್ಪೀಯಾ! ಎಡವಿ ಬಿದ್ದೀಯಾ! ಎಚ್ಚರಿಕೆ ಎಂದು ಆಗಾಗ ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಹಾಗೆಯೇ ಬಾಳುತ್ತಿದ್ದೇನೆ! ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ!”
ಬೀಚಿಯವರ ಕೃತಿಗಳು
ದಾಸ ಕೂಟ, ಬೆಳ್ಳಿ ತಿಂಮ ನೂರೆಂಟು ಹೇಳಿದ, ತಿಂಮನ ತಲೆ, ತಿಂಮಾಯಣ, ಅಂದನಾ ತಿಂಮ, ತಿಂಮ ರಸಾಯನ) ತಿಂಮ ಸತ್ತಾಗ, ತಿಮ್ಮಿಕ್ಷನರಿ, ಸತೀಸೂಳೆ, ಮೇಡಮ್ಮನ ಗಂಡ, ಹೆಣ್ಣು ಕಾಣದ ಗಂಡು, ಸರಸ್ವತಿ ಸಂಹಾರ, ಮಾತನಾಡುವ ದೇವರುಗಳು, ದೇವರಿಲ್ಲದ ಗುಡಿ, ಮಾತ್ರೆಗಳು, ಸತ್ತವನು ಎದ್ದು ಬಂದಾಗ, ಟೆಂಟ್ ಸಿನೆಮಾ, ಬೆಂಗಳೂರು ಬಸ್ಸು, ಖಾದಿ ಸೀರೆ, ಬಿತ್ತಿದ್ದೆ ಬೇವು, ಆರಿದ ಚಹ, ನರಪ್ರಾಣಿ, ಬ್ರಹ್ಮಚಾರಿ, ಎಲ್ಲಿರುವೆ ತಂದೆ ಬಾರೋ, ಸುಬ್ಬಿ, ಬ್ರಹ್ಮಚಾರಿಯ ಮಗ, ಸರಸ್ವತಿ ಸಂಹಾರ, ಸಕ್ಕರೆ ಮೂಟೆ, ಕಾಮಲೋಕ, ಚಿನ್ನದ ಕಸ, ದೇವನ ಹೆಂಡ, ಏರದ ಬಳೆ, ಅಮ್ಮಾವ್ರ ಕಾಲ್ಗುಣ, ಆಗಿಷ್ಟು, ಈಗಿಷ್ಟು, ಹುಚ್ಚು ಹುರುಳು, ಕಾಣದ ಸುಂದಾರಿ, ಬಂಗಾರದ ಕತೆ
ರೇಡಿಯೋ ನಾಟಕಗಳು
ಹನ್ನೊಂದನೆಯ ಅವತಾರ, ಮನುಸ್ಮೃತಿ, ಏಕೀಕರಣ, ವಶೀಕರಣ, ಏಕೋದರರು, ಸೈಕಾಲಜಿಸ್ಟ್ ಸಾರಂಗಪಾಣಿ, ದೇವರ ಆತ್ಮಹತ್ಯೆ
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)