November 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 16

Spread the love

ಮೋಡಿಯ ಕಾದಂಬರಿಗಾರ್ತಿ ತ್ರಿವೇಣಿ

trivene


ತ್ರಿವೇಣಿ ಹೆಸರು ಕೇಳುತ್ತಲೇ ಕನ್ನಡ ಕಾದಂಬರಿ ಓದುಗರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಒಂದು ಭಾವವೇ ಹೊರಹೊಮ್ಮುತ್ತದೆ. ಸ್ತೀ ಸಂವೇದನೆಯನ್ನು ಗಟ್ಟಿಯಾಗಿ, ಮನಮೋಹಕವಾಗಿ ಕಟ್ಟಿಕೊಟ್ಟ, ಪಾತ್ರವೇ ತಾವಾಗಿ ಬಿಡುವಷ್ಟು ಸೆಳೆತ ಅಲ್ಲಿರುತ್ತೆ ಎಂಬ ಭಾವನೆ ಓದುಗರದ್ದಾಗಿರುತ್ತೆ. ಆಕೆಯ ಕಾದಂಬರಿ ಕೈಗೆ ಬಂದರೆ ಅದನ್ನು ಮಧ್ಯಕ್ಕೆ ಬಿಡದಷ್ಟು ಮೋಹ ಆವರಿಸಿಕೊಳ್ಳುತ್ತದೆ ಎಂಬ ಮಾತು 1960-70ರದಶಕದಲ್ಲೆ ಕೇಳಿಬಂದಿತ್ತು. ಈಗಿನ ಪೀಳಿಗೆಯವರು ಮೊಬೈಲ್‍ಗೆ ಹೇಗೆ ಅಂಟಿಕೊಂಡಿರುತ್ತಾರೆ ಆ ರೀತಿಯ ಹುಚ್ಚು ಓದುಗ ಅಭಿಮಾನಿಗಳು ತ್ರಿವೇಣಿಗೆ ಇದ್ದರು ಎಂದರೆ ಅವರ ಬರವಣಿಗೆಯ ಶೈಲಿ ಎಂತಹದ್ದು ಎಂದು ಗೊತ್ತಾಗುತ್ತೆ.

ಬೆಳ್ಳಿಮೋಡ ಮತ್ತು ಶರಪಂಜರ ಕಾದಂಬರಿಗಳು ಓದುಗರ ಮನಸ್ಸನ್ನು ವಿಪರೀತವಾಗಿ ಕಾಡಿದ್ದವು ಎಂದರೇ ಅವರ ನಿರೂಪಣಾ ಶೈಲಿಯ ಬಗ್ಗೆ ಪತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದನ್ನು ಇಲ್ಲಿ ಗಮನಿಸಬೇಕು,1959ರಲ್ಲಿ ಬೆಳ್ಳಿಮೋಡ ಬರೆದರೆ, 1962ರಲ್ಲಿ ಶರಪಂಜರ ಕಾದಂಬರಿ ಹೊರಬಂದಿದ್ದು. ಆ ಕಾಲಕ್ಕೆ ಅಂತಹ ವಿಷಯವನ್ನು ಕಾದಂಬರಿಯನ್ನಾಗಿಸಬಹುದು ಅದರಲ್ಲೂ ಕನ್ನಡ ಭಾಷೆಯಲ್ಲಿ ಎನ್ನುವುದನ್ನು ಗಮನಿಸಿದರೆ ತ್ರಿವೇಣಿಯಲ್ಲಿನ ಕಾದಂಬರಿಗಾರ್ತಿಯ ಸಾಮಥ್ರ್ಯದ ಪರಿಯಚಯವಾಗುತ್ತದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹೆಣ್ಣಿನ ಪಾತ್ರವನ್ನು ತಮ್ಮ ಚಿತ್ರಗಳಲ್ಲಿ ಆಕರ್ಷಕವಾಗಿ ಚಿತ್ರಿಸುತ್ತಿದ್ದ ಅಪರೂಪದ ವ್ಯಕ್ತಿ ಎನ್ನಲು ತ್ರಿವೇಣಿಯವರ ಕಾದಂಬರಿಗಳು ಕಾರಣ ಎಂದು ನಿಸ್ಸಂಶವಾಗಿ ಹೇಳಬಹುದು. ಏಕೆಂದರೆ ಪುಟ್ಟಣ್ಣ ಅವರು ಕಾದಂಬರಿಪ್ರಿಯರಾಗಿದ್ದರು.


1928 ಸೆಪ್ಟೆಂಬರ್ 1ರಂದು ತ್ರಿವೇಣಿ ಹುಟ್ಟಿದ್ದು. ತಂದೆ ಬಿ.ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ಮೊದಲಿಗೆ ಇವರ ಹೆಸರು ಭಾಗೀರಥಿ. ಆದರೆ ಶಾಲೆಯಲ್ಲಿ ಅನಸೂಯ ಎಂಬ ಹೆಸರು ದಾಖಲಾಯಿತು .ವಕೀಲರಾಗಿದ್ದ ತಂದೆ ತಮ್ಮ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಅನುಸೂಯಗೆ ತ್ರಿವೇಣೆ ಎಂಬ ಹೆಸರು ಏಕೆ ಬಂತು ಎಂಬುದಕ್ಕೆ ಒಂದರೆಡು ವಾದಗಳಿದ್ದು, ಅದರಲ್ಲಿ ಒಂದೆಂದರೆ, ಈಕೆ ತಮ್ಮ ಕಥೆಯನ್ನು ಪತ್ರಿಕೆಯೊಂದಕ್ಕೆ ತ್ರಿವೇಣಿ ಹೆಸರಿನಲ್ಲಿ ಕಳುಹಿಸಿದರು. ಪೆನ್‍ನೇಮ್ ಇಟ್ಟುಕೊಳ್ಳುವುದು ಒಂದು ಫ್ಯಾಷನ್ ಎಂಬುದು ಆಗಿನ ಕಾಲದಲ್ಲಿ ಇತ್ತೆಂದು ತೋರುತ್ತೆ. ಪತ್ರಿಕೆ ಸಂಪಾದಕರಿಗೆ ಲೇಖಕಿಯ ಮೂಲ ಹೆಸರು ತಿಳಿದರೂ ತ್ರಿವೇಣಿ ಹೆಸರೇ ಚೆನ್ನಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಅದನ್ನೇ ಮುಂದುವರಿಸಿ ಎಂಬ ಸಲಹೆ ಮೇರೆಗೆ ತಮ್ಮ ಬರಹವನ್ನು ಮುಂದುವರಿಸಿದ ಅನುಸೂಯಗೆ ಸಾಹಿತ್ಯ ಕ್ಷೇತ್ರದಲ್ಲಿ ತ್ರಿವೇಣಿ ಕಾವ್ಯನಾಮವೇ ಚಿರಸ್ಥಾಯಿಯಾಗುವಂತಾಯಿತು. ಅಡ್ಡ ಹೆಸರುಗಳು ಆಗ ಚಾಲ್ತಿಯಲ್ಲಿತ್ತು ಎಂಬುದಕ್ಕೆ ತ್ರಿವೇಣಿ ಅವರನ್ನು ಆತ್ಮೀಯರು ಅಂಚು ಎಂದು ಪ್ರೀತಿಯಿಂದ ಕರೆಯುತ್ತಿದ್ದರಂತೆ.


ಮಂಡ್ಯದಲ್ಲಿ ಜನಿಸಿದ ತ್ರಿವೇಣಿ ಅವರ ಪ್ರೌಢಶಿಕ್ಷಣ ಅಲ್ಲೇ ಆಯಿತು. ಕಾಲೇಜು ಮೆಟ್ಟಿಲೇರಲು ಮೈಸೂರಿಗೆ ಬಂದರು. ಮಹಾರಾಣಿ ಕಾಲೇಜಿನಲ್ಲಿ 1947ರಲ್ಲಿ ಪದವಿ ಪಡೆದರು. ಅವರ ಐಚ್ಛಿಕ ವಿಷಯ ಮನಃಶಾಸ್ತ್ರ, ಸಮಾಜ ಶಾಸ್ತ್ರ ಹಾಗೂ ರಾಜ್ಯಶಾಸ್ತ್ರ. ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಸಿದ್ದೇಗೌಡ ಚಿನ್ನದ ಪದಕವು ಇವರಿಗೆ ದೊರೆಯಿತು. ಅಲ್ಲದೆ ತಾತಯ್ಯ ಪ್ರಶಸ್ತಿ ಲಭಿಸಿತು. ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲೇ ತ್ರಿವೇಣಿ ಅವರಿಗೆ, ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಎಸ್. ಎನ್. ಶಂಕರ್ ಪರಿಚಯವಾಯಿತು. ಇಬ್ಬರಿಗೂ ಸಾಹಿತ್ಯದಲ್ಲಿ ಆಸಕ್ತಿ ಇದ್ದರಿಂದ ಚರ್ಚೆಗಳು ನಡೆಯುತ್ತಿದ್ದು ಇಬ್ಬರೂ ಆತ್ಮೀಯರಾದರು. ತದ ನಂತರ ಮತ್ತೆ ತ್ರಿವೇಣಿ ಮಂಡ್ಯಕ್ಕೆ ಬಂದು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾದರು.


ತ್ರಿವೇಣಿ ಅವರ ವಿವಾಹ 1951ರಲ್ಲಿ ಶಂಕರ್ ಅವರೊಡನೆ ಆಯಿತು. ಅವರು ಮೈಸೂರಿನ ಶಾರದಾವಿಲಾಸ ಮಹಾವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಪತಿಯಿಂದ ಬರವಣಿಗೆಗೆ ದೊರೆತ ಅತಿಯಾದ ಪ್ರೋತ್ಸಾಹದಿಂದ ತ್ರಿವೇಣಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮಗಿಷ್ಟವಾದ ಬರವಣಿಗೆಗೆ ಮುಂದಾದರು. ತಮ್ಮ ಸಣ್ಣವಯಸ್ಸಿನಿಂದಲ್ಲೇ ಪುಸ್ತಕಗಳನ್ನು ಓದುವುದರಲ್ಲಿ ಹೆಚ್ಚಿನ ಆಸಕ್ತಿ ಇಟ್ಟುಕೊಂಡಿದ್ದು ಅವರ ಮುಂದಿನ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ನೆರವಾಯಿತು. ಮೊದ ಮೊದಲು ತ್ರಿವೇಣಿ ತಾವು ಬರೆದ ಕಥೆಗಳನ್ನು ಹಾಗೆಯೇ ಇಡುತ್ತಿದ್ದರು. ಆದರೆ ಅವರ ತಾಯಿ ಅದನ್ನು ನೋಡಿ ಓದಿ ಪತ್ರಿಕೆಗಳಿಗೆ ಕಳಿಸಲು ತಿಳಿಸಿದ್ದು ಓದುಗರಿಗೆ ಹೊಸ ಲೇಖಕಿಯ ಪರಿಚಯವಾಯಿತು.
ತ್ರಿವೇಣಿಯ ಕೌಟುಂಬಿಕ ಹಿನ್ನೆಲೆ ನೋಡಿದರೆ ಅವರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದರಲ್ಲಿ ಅಚ್ಚರಿಯಾಗದು. ಕನ್ನಡದ ಕಣ್ವರೆಂದು ಖ್ಯಾತರಾದ ಬಿ.ಎಂ.ಶ್ರೀಕಂಠಯ್ಯ ಇವರ ದೊಡ್ಡಪ್ಪ. ಹೆಸರಾಂತ ಕಾದಂಬರಿಗಾರ್ತಿ ಆಯಾರ್ಂಬ ಪಟ್ಟಾಭಿ ಇವರ ತಂಗಿ. ಮತ್ತೊಬ್ಬ ಪ್ರಸಿದ್ಧ ಕಾದಂಬರಿಗಾರ್ತಿ ‘ವಾಣಿ’ (ಬಿ.ಎಸ್.ಸುಬ್ಬಮ್ಮ) ಇವರ ಚಿಕ್ಕಮ್ಮ. ಕತೆಗಾರ ‘ಅಶ್ವತ್ಥ’ ಅವರು ತ್ರಿವೇಣಿ ಪತಿ ಶಂಕರ್‍ರ ಭಾವ. ಹೀಗೆ ಅವರ ಸುತ್ತಲೂ ಅಕ್ಷರಬ್ರಹ್ಮರೇ ಇದ್ದರು.


ನವೋದಯ ಮಾರ್ಗದಲ್ಲಿ ಬರೆಯಲು ಆರಂಭಿಸಿದ ಪ್ರಮುಖರಲ್ಲಿ ತ್ರಿವೇಣಿಯೂ ಒಬ್ಬರು. ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆ ತೋರಿದ ಲೇಖಕಿ. ಸುಮಾರು 12 ವರ್ಷಗಳ ಅವರ ಸಾಹಿತ್ಯ ಕೃಷಿಯಲ್ಲಿ ಮೂಡಿಬಂದ ಕಥೆ, ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು ಎಂದರೆ ಅವರು ತೆಗೆದುಕೊಳ್ಳುತ್ತಿದ್ದ ವಿಚಾರಗಳು. ಕನ್ನಡಕ್ಕೆ ಹೊಸತದ ಕಥಾವಸ್ತುವಿನ ಕಥೆ, ಕಾದಂಬರಿಗಳು ಜನಪ್ರಿಯವಾದವು. ಅವರ ಅನೇಕ ಕೃತಿಗಳು ಮನಶಾಸ್ತ್ರಯಕ್ಕೆ ಸಂಬಂಧಪಟ್ಟವು. ಇದಕ್ಕೆ ಸಂಬಂಧಿಸಿದ ಅಧ್ಯಯನ ಮತ್ತು ಉದಾಹರಣೆಗಳು ಅವರ ಅನೇಕ ಸಣ್ಣಕಥೆಗಳು, ಕಾದಂಬರಿಗಳಲ್ಲಿ ಕಂಡು ಬರುತ್ತವೆ. ಇವರ ಕಾದಂಬರಿಗಳನ್ನು ಮನೋವೈಜ್ಞಾನಿಕ, ಸಾಮಾಜಿಕ ಎಂದು ವಿಂಗಡಿಸಲಾಗಿದೆ. ಹೂವುಹಣ್ಣು ಇವರ ಮೊದಲ ಕಾದಂಬರಿ. 21 ಕಾದಂಬರಿ ಬರೆದಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಓದುಗರ ಮನದಲ್ಲಿ ನೆಲೆಯೂರಿದ್ದಾರೆ. ಕೌಟುಂಬಿಕ ಜೀವನ ಇವರ ಕಥಾ ವಸ್ತುಗಳಾಗಿದ್ದವು. ಪರಿಣಾಮ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಬೇಗನೆ ವಿಶೇಷ ಸ್ಥಾನಗಳಿಸಿ ಜನಪ್ರಿಯರಾದರು.


ಹೆಣ್ಣು ಮಗು ಪಡೆದ 10 ದಿನಗಳಲ್ಲೇ, 35ನೇ ವಯಸ್ಸಿನಲ್ಲಿ, 1963 ಜುಲೈ 29ರಂದು ತ್ರಿವೇಣಿ ಅವರು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಇಹಲೋಕದ ಯಾತ್ರೆ ಮುಗಿಸಿದರು. ಸಾಹಿತ್ಯಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಈ ಲೇಖಕಿ ಸಣ್ಣವಯಸ್ಸಿನಲ್ಲೇ ತಮ್ಮ ಬರವಣಿಗೆಗೆ ಪೂರ್ಣವಿರಾಮ ಇಟ್ಟಿದ್ದು ಮಾತ್ರ ವಿಪರ್ಯಾಸ.

ಕಾದಂಬರಿಗಳು

  1. ಬೆಳ್ಳಿಮೋಡ
  2. ಶರಪಂಜರ
  3. ಮುಕ್ತಿ
  4. ಹೂವು ಹಣ್ಣು
  5. ಸೋತು ಗೆದ್ದವಳು
  6. ಹಣ್ಣೆಲೆ ಚಿಗುರಿದಾಗ
  7. ಕಂಕಣ
  8. ಕಾಶಿಯಾತ್ರೆ
  9. ದೂರದ ಬೆಟ್ಟ
  10. ಬೆಕ್ಕಿನ ಕಣ್ಣು
  11. ಬಾನು ಬೆಳಗಿತು
  12. ಹೃದಯಗೀತೆ
  13. ಕೀಲುಗೊಂಬೆ
  14. ಅಪಸ್ವರ
  15. ಅಪಜಯ
  16. ತಾವರೆಯ ಕೊಳ
  17. ಮುಚ್ಚಿದ ಬಾಗಿಲು
  18. ಮೊದಲ ಹೆಜ್ಜೆ
  19. ಅವಳ ಮನೆ
  20. ವಸಂತಗಾನ
  21. ಅವಳ ಮಗಳು
    (ಈ ಕಾದಂಬರಿ ಅರ್ಧದಲ್ಲಿದ್ದಾಗ ತ್ರಿವೇಣಿಯವರು ನಿಧನರಾದರು. ಶ್ರೀಮತಿ ಎಂ.ಸಿ.ಪದ್ಮಾ ಇದನ್ನು ಪೂರ್ಣಗೊಳಿಸಿದರು.)

ಕಥಾಸಂಕಲನಗಳು

  • ಸಮಸ್ಯೆಯ ಮಗು
  • ಎರಡು ಮನಸ್ಸು
  • ಹೆಂಡತಿಯ ಹೆಸರು

ಅನುವಾದಗೊಂಡ ಕೃತಿಗಳು

“ಅಪಸ್ವರ”ಮತ್ತು “ಅಪಜಯ” ಕಾದಂಬರಿಗಳನ್ನು ಮತ್ತು “ತ್ರಿವೇಣಿ ಸಪ್ತಕ್” ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಂ.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ.

ಮೀರಾ ನರ್ವೆಕರ್ ಎಂಬುವರು “ಶರಪಂಜರ”ವನ್ನು ದಿ ಮ್ಯಾಡ್ ವುಮೆನ್ ಎಂಬ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.

“ಬೆಕ್ಕಿನ ಕಣ್ಣು ” ಕಾದಂಬರಿಯನ್ನು ಶರ್ವಾಣಿ ತೆಲುಗಿಗೆ ಅನುವಾದಿಸಿದ್ದಾರೆ.

ಚಲನಚಿತ್ರಗಳಾದ ಕಾದಂಬರಿ

  • ಬೆಳ್ಳಿಮೋಡ
  • ಹಣ್ಣೆಲೆ ಚಿಗುರಿದಾಗ
  • ಶರಪಂಜರ
  • ಕಂಕಣ
  • ಮುಕ್ತಿ
  • ಹೂವು ಹಣ್ಣು

ಪುರಸ್ಕಾರ
ತಾವರೆಯಕೊಳ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವಳ ಮನೆ ಕಾದಂಬರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ. ಸಣ್ಣಕತೆಗಳ ಸಂಕಲನವಾದ ಸಮಸ್ಯೆಯ ಮಗು ಪುಸ್ತಕಕ್ಕೆ ‘ದೇವರಾಜ್ ಬಹದ್ದೂರ್ ಪ್ರಶಸ್ತಿ’ ದೊರೆತಿದೆ.
ಬೆಕ್ಕಿನ ಕಣ್ಣು ಕಾದಂಬರಿಯನ್ನು ಕನ್ನಡದಲ್ಲಿ ಚಲನಚಿತ್ರ ಮಾಡಲು ಪುಟ್ಟಣ್ಣಕಣಗಾಲ್ ಬಯಸಿದ್ದರು, ಆದರೆ ಅದು ಕೈಗೂಡಲಿಲ್ಲ.ಆದರೆ ಪೂಚಕಣ್ಣಿಯಾಗಿ ಮಲೆಯಾಳಿಯಲ್ಲಿ ಚಿತ್ರ ನಿರ್ದೇಶಿಸಿದರು.

kcsp
ಕೆ.ಸಿ.ಸತ್ಯಪ್ರಕಾಶ್
ಹಿರಿಯ ಪತ್ರಕರ್ತರು

Copyright © All rights reserved Newsnap | Newsever by AF themes.
error: Content is protected !!