ಕನ್ನಡಿಗರಿಗೆ ಉದ್ಯೋಗ; ವಿಧೇಯಕ ಮಂಡನೆಗೆ ಹಕ್ಕೊತ್ತಾಯ

Team Newsnap
1 Min Read

ಖಾಸಗೀ ರಂಗದಲ್ಲಿ, ಇತರೆ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಲುವಾಗಿ ಕರಡು ವಿಧೇಯಕ ಸಿದ್ಧಪಡಿಸಿ ವರ್ಷ ಕಳೆದಿದೆ. ಆದರೆ ವಿಧಾನಸಭೆಯ ಅಧಿವೇಶನದಲ್ಲಿ‌ ಈ ಕುರಿತು ವಿಷಯ ಮಂಡನೆಯಾಗೇ ಇಲ್ಲ. ಮೂರು ಸರ್ಕಾರಗಳು ಬಂದರೂ ಸದನದಲ್ಲಿ‌ ಮಂಡಿಸಲು, ಯಾವ ಸರ್ಕಾರಕ್ಕೂ ಬಿಡುವೇ ಸಿಕ್ಕಿಲ್ಲ.

ಕೈಗಾರಿಕೋದ್ಯಮ, ನವೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ವಾಣಿಜ್ಯ ಸಂಸ್ಥೆ, ಖಾಸಗಿ ವಿವಿ, ಬಹುರಾಷ್ಟ್ರೀಯ ಕಂಪನಿ ಇಲ್ಲೆಲ್ಲ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವಂತೆ ವರ್ಷದಿಂದ ವರ್ಷಕ್ಕೆ ಹಕ್ಕೊತ್ತಾಯ ಹೆಚ್ಚಾಗುತ್ತಿದ್ದರೂ, ಸರ್ಕಾರಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಖಾಸಗೀ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿರುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರವು ಘೋಷಣೆ ಹೊರಡಿಸಿತ್ತು. ಆ ನಂತರ ಬಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಸಂಪುಟ ಸಭೆಯಲ್ಲಿ ‘ಕರ್ನಾಟಕ ಉದ್ಯೋಗಿಕ ಕೈಗಾರಿಕೆಗಳ ನಿಯಮಾವಳಿಗಳ ನಿಯಮಗಳು – ೨೦೧೯’ ಕ್ಕೆ ಅನುಮೋದನೆಯನ್ನೂ ನೀಡಲಾಗಿತ್ತು. ಆದರೆ ಈ ವರೆಗೆ ಸದನದಲ್ಲಿ ಅದರ ಬಗ್ಗೆ ಚರ್ಚೆಯೇ ಆಗಿಲ್ಲ.

ಖಾಸಗೀ ಉದ್ಯಮಗಳಲ್ಲಿ‌, ಕನ್ನಡಿಗರಿಗೆ ಗ್ರುಪ್ ಸಿ ಮತ್ತು ಡಿ‌ ಹುದ್ದೆಗಳಲ್ಲಿ ಶೇ.೩೦, ಉನ್ನತ ಹುದ್ದೆಗಳಲ್ಲಿ‌ ಶೇ ೮೦ ಹಾಗೂ ಕ್ಯಾಂಪಸ್ ಸಂದರ್ಶನದಲ್ಲಿ‌ ಸರ್ಕಾರದ ಒಬ್ಬ ಪ್ರತಿನಿಧಿ ಇರಲೇಬೇಕೆಂದು ಹಕ್ಕೊತ್ತಾಯ ಮಾಡಲಾಗಿದೆ.

ಈ ಸಂಬಂಧ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಟಿ.ಎಸ್. ನಾಗಾಭರಣ ‘ಈ ಬಾರಿ ವಿಧೆಯಕ ಮಂಡನೆಯಾಗುವ ವಿಶ್ವಾಸವಿದೆ. ಕೆಲ ದಿನಗಳ ಹಿಂದೆ ಕಾರ್ಮಿಕ ಸಚಿವರ ಭೇಟಿಯಾಗಿ ಮಾತನಾಡಲಾಗಿದೆ’ ಎಂದರು.

ಈ ಬಾರಿಯಾದರೂ ಸದನದಲ್ಲಿ‌ ವಿಧೇಯಕ ಮಂಡನೆಯಾಗಿ, ಕನ್ನಡಿಗರಿಗೆ ಖಾಸಗೀ ಕ್ಷೇತ್ರದ ಉದ್ಯೋಗಗಳಲ್ಲಿ ಮೀಸಲಾತಿ ಸಿಗುವಂತಾಗಲಿ.

Share This Article
Leave a comment