December 21, 2024

Newsnap Kannada

The World at your finger tips!

fa39b5fb a024 4b3e 9285 da0050881a86

500 ಕನ್ನಡ ಪುಸ್ತಕ ಸಗಟು ಖರೀದಿಗೆ ಕ್ರಮ – ಸುರೇಶ್ ಕುಮಾರ್

Spread the love

ಬೆಂಗಳೂರು:

ರಾಜ್ಯ ಗ್ರಂಥಾಲಯ ಇಲಾಖೆಯಿಂದ ವಾರ್ಷಿಕ ಸಗಟು ಖರೀದಿ ಯೋಜನೆಯಡಿ ಇನ್ನು ಮುಂದೆ ಕನ್ನಡ ಪುಸ್ತಕಗಳ 500 ಪ್ರತಿಗಳನ್ನು ಖರೀದಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಬುಧವಾರ ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶನಾಲಯದಲ್ಲಿ ನೂತನ ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಬರಹಗಾರರ ಮತ್ತು ಪ್ರಕಾಶಕರ ಸಂಘದ ಕೋರಿಕೆಯಂತೆ ಬಹುದಿನಗಳ ನಿರೀಕ್ಷೆಯಾಗಿದ್ದ ಕನ್ನಡದ 300 ಪ್ರತಿಗಳ ಖರೀದಿಯನ್ನು 500 ಪ್ರತಿಗಳಿಗೆ ಹೆಚ್ಚಿಸಲು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳ, ಗ್ರಂಥಗಳ ಮಹತ್ವದ ಕುರಿತು ತಿಳಿವಳಿಕೆ ಮೂಡಿಸಿ ಅಧ್ಯಯನದ ಅಭಿರುಚಿ ಬೆಳೆಸಲು ಕ್ರಮ ಕೈಗೊಳ್ಳುವ ಕುರಿತು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತಂತೆ ನಮ್ಮ ಪುಸ್ತಕ ಸಮಿತಿ ರೂಪುರೇಷೆ ಸಿದ್ದಪಡಿಸಬೇಕೆಂದು ಮನವಿ ಮಾಡಿದರು. ನಮ್ಮ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಪುಸ್ತಕಗಳನ್ನು ಓದದೇ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಓದುವಂತೆ ಅವರನ್ನು ಅಧ್ಯಯನ ಯೋಗ್ಯರನ್ನಾಗಿಸಬೇಕಾದ ಅಗತ್ಯವಿದೆ ಎಂದರು.

ಓದುಗರಿಗೆ ಹೊಸ ಪುಸ್ತಕಗಳು ದೊರೆಯುವಂತಾಗಲು ಬಾಕಿ ಇರುವ 2018 ಮತ್ತು 2019ನೇ ಸಾಲಿನ ಪುಸ್ತಕಗಳನ್ನು ಖರೀದಿಸಲು ಸರ್ಕಾರದಿಂದ ಅನುದಾನ ನೀಡಲಾಗುವುದು. ಕೋವಿಡ್-19ರ ಆರ್ಥಿಕ ಸಂಕಷ್ಟ ಸ್ಥಿತಿಯನ್ನು ಎದುರಿಸಲು ಲೇಖಕ/ ಪ್ರಕಾಶಕರಿಗೆ 202—21ನೇ ಸಾಲಿನ ಖರೀದಿ ಬಜೆಟ್ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ನಾಡಿನ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ನೇತೃತ್ವದ ರಾಜ್ಯ ಪುಸ್ತಕ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಕೆಲಸ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದ ಸಚಿವರು, ಹಳಬರೊಂದಿಗೆ ಒಳ್ಳೆಯ ಪುಸ್ತಕ ಬರೆದ ಹೊಸ ಲೇಖಕರ, ಅನಾಮಿಕರ ಪುಸ್ತಕಗಳನ್ನೂ ಖರೀದಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಿ ಎಂದು ಸಲಹೆ ನೀಡಿದರು.

ರಾಜ್ಯ ಪುಸ್ತಕ ಆಯ್ಕೆ ಸಮಿತಿ ಇನ್ನೂ ಪೂರ್ಣಗೊಂಡಿಲ್ಲ. ನಿಮಯಗಳಲ್ಲಿ ಅವಕಾಶವಿರುವ ಸಾಹಿತ್ಯವಲಯ, ಶಿಕ್ಷಣ ತಜ್ಞರ ವಲಯ, ವಿಭಾಗವಾರು, ಮಹಿಳೆ, ವಿಜ್ಞಾನ, ಮಾನವಿಕ ಶಾಸ್ತ್ರದ ವಲಯ, ಮಕ್ಕಳ ಸಾಹಿತ್ಯ, ಗ್ರಂಥಾಲಯ ವಿಜ್ಞಾನ ವಿಭಾಗಗಳಿಂದ ಖಾಲಿ ಇರುವ ಸ್ಥಾನಗಳನ್ನು ಸದ್ಯದಲ್ಲೇ ಭರ್ತಿ ಮಾಡಿ ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಸಮಿತಿ ಅಧ್ಯಕ್ಷ ಹಿರಿಯ ಸಾಹಿತಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ದೊಡ್ಡರಂಗೇಗೌಡ ಸಮಿತಿಯ ಸದಸ್ಯರಾದ ನಾವು ನಿಯಮಗಳಿಗೆ ಅಪಚಾರವಾಗದಂತೆ ನಡೆದುಕೊಳ್ಳೋಣ ಹಾಗೆಯೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ, ಅವರಲ್ಲಿ ಗ್ರಂಥಗಳ ಅಭಿರುಚಿ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಲಲಾಗುವುದು ಎಂದರು.

Copyright © All rights reserved Newsnap | Newsever by AF themes.
error: Content is protected !!