ವಿಶ್ವದಾದ್ಯಂತ ಧರ್ಮಕೇಂದ್ರಗಳೆಂದರೆ ಅದೊಂದು ಬಗೆಯ ವಿಶಿಷ್ಟ ಸೆಳೆತ, ನಂಬುಗೆ, ಪ್ರೀತಿ, ಅಭಿಮಾನ, ಭಕ್ತಿ ಮತ್ತು ಅವ್ಯಕ್ತ ಭಯ. ಅದು ಹಿಂದೂ ದೇಗುಲಗಳಿರಬಹುದು, ಮುಸಲ್ಮಾನರ ಮಸೀದಿಯಿರಬಹುದು, ಕ್ರೈಸ್ತರ ಇಗರ್ಜಿಯಿರಬಹುದು, ಸಿಖ್ಖರ ಗುರುದ್ವಾರವಿರಬಹುದು, ಜೈನರ ಬಸದಿಗಳಿರಬಹುದು, ಬೌದ್ಧರ ಚೈತ್ಯಗಳಿರಬಹುದು- ಅವರವರ ಧರ್ಮಕೇಂದ್ರಗಳೆಂದರೆ ಅದರೆಡೆಗೆ ನಿಷ್ಠೆ, ಶ್ರದ್ಧೆ ಸ್ವಾಭಾವಿಕವಾಗಿಯೇ ಬೆಳೆದುಬಿಡುತ್ತದೆ.
ಧರ್ಮಕೇಂದ್ರಗಳಿಂದ ಹೊರಡುವ ಪ್ರತಿ ಸಂದೇಶವೂ ಅದು ದೇವರ ಸಂದೇಶವೆಂಬಂತೆಯೇ ಭಾವಿಸಿ ಪಾಲಿಸುವ ‘ಧರ್ಮ’ ಬುದ್ಧಿಯನ್ನು ಚಿಕ್ಕಂದಿನಿಂದಲೇ ರೂಢಿಸಿಬಿಡಲಾಗುತ್ತದೆ. ಗುಡಿಗಳಲ್ಲಿ ದೇವರನ್ನು ಪೂಜಿಸುವ ಪುರೋಹಿತರೆಂದರೆ ದೇವರೇ ನೇಮಿಸಿದ ಅವನ ಪ್ರತಿನಿಧಿಗಳೋ ಎಂಬಂತೆ ಅವರ ಮಾತು ವೇದವಾಕ್ಯವೆಂಬಂತೆ ತಿಳಿವ ಮಂದಿ ಬಹು ಹಿಂದಿನಿಂದಲೂ ಇಂದಿನವರೆಗೂ ಇದ್ದಾರೆ. ಅದು ಪ್ರಾಚೀನ ಕಾಲದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿತ್ತು. ನವೀನ ಕಾಲದ ವಿದ್ಯೆಯಿಂದ ಉಂಟಾದ ಜಾಗೃತಿ, ವಿಸ್ತೃತ ಜ್ಞಾನಶಾಖೆಗಳಿಂದುದಿಸಿದ ವಿವೇಚನಾಬುದ್ಧಿಯಿಂದಾಗಿ ಆ ಸಂಖ್ಯೆ ಸ್ವಲ್ಪ ಕುಸಿದಿದೆ.
ದೇವರೆಂದರೆ ಕೇವಲ ಗುಡಿಗಳೊಳಗೆ ಕುಳಿತ ಕಲ್ಲಿನ ಮೂರ್ತಿಯಲ್ಲ; ಜೋಯಿಸರೆಂದರೆ ದೇವರ ಪ್ರತಿಬಿಂಬವಲ್ಲ; ದೈವವೆಂದರೆ ನಮ್ಮ ಅಂತರಾತ್ಮದ ಶಕ್ತಿ, ಪ್ರಾಣವಾಯು, ಮಾನವತೆಯ ಪ್ರತೀಕ, ಕಾಯಕತತ್ವದ ಕ್ರಿಯಾಚೈತನ್ಯ, ಧನಾತ್ಮಕ ಚಿಂತನೆಯಿದುದ್ಭವಿಸುವ ಮನದ ಸದಭಿವ್ಯಕ್ತಿ ಎಂಬ ವಿಸ್ತಾರವಾದ ಚಿಂತನೆ, ಅನಿಸಿಕೆ, ಅಭಿಪ್ರಾಯ, ಲಹರಿಗಳು ಹೊಸ ಅಲೆಯಲ್ಲಿ ತೇಲಿಬರುತ್ತಿದೆ. ಹಾಗೆ ನೋಡಿದರೆ 12ನೇ ಶತಮಾನದ ವಚನ ಕ್ರಾಂತಿಯ ಕಾಲದಲ್ಲೇ ಅದರ ಮೊಳಕೆ ಒಡೆದದ್ದು. ಆದರೂ ಪ್ರಭುತ್ವದ ಹಿಡಿತದಲ್ಲಿ, ಪುರೋಹಿತಶಾಹಿ ಪದ್ಧತಿಯ ಮುಷ್ಠಿಯಲ್ಲಿ ಸಿಲುಕಿದ ಮನಸ್ಸು, ಚಿಂತನೆಗಳು ಅರಿವಿನ ದಿಕ್ಕಿನಲ್ಲಿ ಹೆಚ್ಚು ಅರಳಲು ಸಾಧ್ಯವಾಗಲಿಲ್ಲ. ಅಷ್ಟಾಗ್ಯೂ ಹಲವು ಸಾಹಿತಿಗಳು ದೈವತ್ವದ ಹಲ ಆಯಾಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಅವುಗಳಲ್ಲಿ ಕುವೆಂಪು ಅವರ ‘ಜಲಗಾರ’ ಮತ್ತು ಕಿ.ರಂ.ನಾಗರಾಜು ಅವರ ‘ಕಾಲಜ್ಞಾನಿ ಕನಕ’ ಎಂಬ ಎರಡು ನಾಟಕಗಳಲ್ಲಿ ದೇಗುಲ ಪ್ರವೇಶ, ಪುರೋಹಿತಶಾಹಿಯ ಸ್ವಾರ್ಥ, ಭಗವಂತನ ಇರವು ನಿತ್ಯ ಕಾಯಕದಲ್ಲಿನ ಶ್ರದ್ಧೆ ಹಾಗು ದೇವರು ಎಲ್ಲರೊಳಗೊಂದಾದವನು ಎಂಬುದನ್ನು ದಾಖಲಿಸುತ್ತದೆ.
ಮಲೆನಾಡ ಪ್ರಕೃತಿಯ ಮಡಿಲಲ್ಲೇ ಹುಟ್ಟಿ ಬೆಳೆದ ಕುವೆಂಪು ಅವರು ಸ್ವಾಭಾವಿಕವಾಗಿಯೇ ಪ್ರಕೃತಿಪ್ರಿಯರು. ಅವರು ಪ್ರಕೃತಿಯ ಅಣುವಣುವಿನಲ್ಲಿಯೂ ಭಗವಂತನ ಇರವನ್ನು ಕಾಣುವವರು. ಇವರ ‘ಜಲಗಾರ’ ನಾಟಕದಲ್ಲಿ ಪ್ರಕೃತಿಯಾರಾಧನೆಯ ಜೊತೆಗೆ ಕರ್ಮಾರಾಧನೆಗೆ ಹೆಚ್ಚಿನ ಒತ್ತು ನೀಡುತ್ತಾ ಪೂಜೆಯಲ್ಲಿನ ಆಡಂಬರವನ್ನು, ತೋರ್ಪಡಿಕೆಯ ಭಕ್ತಿಯನ್ನು, ಬೂಟಾಟಿಕೆಯನ್ನು ಖಂಡಿಸುತ್ತ ‘ಜಗದ ದೇಗುಲದಲ್ಲಿ ಜಗದುದಯ ಕಾರಣನ ಕಾಣದವನೆಂತು ಕಾಣ್ಬನು ಶಿವನ ಗುಡಿಯಲ್ಲಿ?’ ಎಂದು ಪ್ರಶ್ನಿಸುತ್ತಾರೆ.
‘ತಣ್ಗದಿರ ಬೆಂಗದಿರನರಿಲುಗಳೆ ಸೊಡರುಗಳು. ಸುಮಮಾಲೆ ಅಲರುಗಳ ಚೆಲ್ಲುತಿರುವಡವಿಗಳು ಮುನ್ನೀರು ತೊರೆ ಕೆರೆಗಳೇ ಪಂಚಪಾತ್ರೆ, ಬಿತ್ತರದ ಬಾಚಿದಳವೆ ಗೋಪ್ಯರಂ! ಹೊಳೆಗಳಲಿ ಹರಿವ ಸಲಿಲವೆ ತೀರ್ಥ; ಸುಮಗಂಧವೇ ಧೂಪ’ ಎಂದು ಪ್ರಕೃತಿಯ ಪ್ರತಿ ನಡೆಯಲ್ಲಿಯೂ ಅವರು ದೇವರ ಪೂಜೆಯನ್ನು ಕಾಣುತ್ತಾರೆ. ಇದನ್ನೂ ಮೀರಿ “ಎದೆಯೊಲವೆ ವರ ಧರ್ಮಶಾಸ್ತ್ರ; ಭಕ್ತಿಯೆ ದಿವ್ಯಾತ್ಮ ಯಜ್ಞ, ಎದೆಯ ಮಣೆಯೇ ಯಜ್ಞಶಾಲೆ! ನಲ್ವಾತುಗಳೆ ಮಂತ್ರಘೋಷ; ನೀತಿಯೆ ಪರಮವೇದ. ತಿರೆಗಿಂತ ದೇಗುಲವದೊಳದೇನ್?’ ಎಂದು ಹೃದಯದ ಭಾಷೆಯಲ್ಲಿ ಭಗವಂತನನ್ನು ವರ್ಣಿಸುತ್ತಾರೆ.
ಇನ್ನು ಕಿ.ರಂ.ನಾಗರಾಜು ಅವರು ಬೋಧಿಸಿದ್ದು ಅಪಾರ, ಬರೆದದ್ದು ಕಡಿಮೆ. ಕಡಿಮೆಯಾದರೂ ಮೌಲಿಕವಾದ ಬರಹಗಳು ಹೊರಬಂದಿವೆ. ಇವರ ‘ಕಾಲಜ್ಞಾನಿ ಕನಕ’ ನಾಟಕ ಕನಕದಾಸರ ವಿಶಾಲ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಈ ಕೃತಿಯು ಮನುಜಕುಲವನ್ನೇ ನಾಶಮಾಡುವ ಯುದ್ಧಮುಖೀ ಸಂಸ್ಕೃತಿಯಿಂದ ಮನುಜತ್ವದೆಡೆಗೆ ಹೆಜ್ಜೆಯಿಡುವ ಕಡೆಗೆ ಮೊಗಮಾಡಿದೆ.
ಕುವೆಂಪು ಅವರ ‘ಜಲಗಾರ’ ನಾಟಕ ಮತ್ತು ಕಿ.ರಂ.ನಾಗರಜು ಅವರ ‘ಕಾಲಜ್ಞಾನಿ ಕನಕ’ ನಾಟಕಗಳು ದೇಗುಲವೆಂಬ ಕಟ್ಟಡದೊಳಗಿನ ಭಗವಂತನನ್ನು ಜನಸಾಮಾನ್ಯರೆಡೆಗೆ ತರುವ ಪ್ರಯತ್ನ ಮಾಡುತ್ತದೆ.
ಜಲಗಾರ ಸೂರ್ಯೋದಯವನ್ನು ಕಂಡು ‘ ತೊಳಗಿ ಬಾ, ಬೆಳಗಿ ಬಾ, ಜಗದ ಕಣ್ಣೆ, ಬಾ ಬಾ..!’ ಎಂದು ಹಾಡುವಲ್ಲಿ ಸೂರ್ಯನಿಲ್ಲದೆ ಜಗತ್ತು ಕುರುಡಾಗುವುದು ಎಂಬ ಭಾವ ಮಾತ್ರವಲ್ಲದೆ ಜಲಗಾರನ ನಿತ್ಯ ಕಾಯಕವಾದ ತೊಳಗುವುದು, ಬೆಳಗುವುದು ಎಂಬ ಕರ್ತವ್ಯನಿಷ್ಠ ಪದ ಪ್ರಯೋಗ ಹಾಗು ‘ರೈತರೇ ಭೂಮಿಗಿಳಿದಿಹ ಕಾಮಧೇನುಗಳು; ರೈತರೇ ಧರೆಯೊಳಿಹ ಜಂಗಮ ಕಲ್ಪವೃಕ್ಷಗಳು’ ಎಂದು ನೇಗಿಲಯೋಗಿಯ ಮಹತ್ವ ಹೇಳುವುದು ಕುವೆಂಪು ಅವರ ಶ್ರಮ ಸಂಸ್ಸ್ಶೃತಿಯ ಬಗೆಗಿನ ಕಾಳಜಿಯನ್ನು ತೋರುತ್ತದೆ.
ಜಲಗಾರ ನಾಟಕದ ಆರಂಭದಲ್ಲಿ ರೈತ ಮತ್ತು ಜಲಗಾರನ ನಡುವಿನ ಸಂಭಾಷಣೆಯಲ್ಲಿ ಜಲಗಾರ ರೈತನಲ್ಲಿ ಅವನ ಕಾಯಕದಲ್ಲೇ ಭಗವಂತನನ್ನು ಕಾಣುವಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಾರೆ. ಗುಡಿಗೆ ಹೊರಟಿರುವೆನೆಂದು ಹೇಳುವ ರೈತನಿಗೆ ಜಲಗಾರ ‘ನಿನ್ನ ನೇಗಿಲ ಗೆರೆಯ ದಿವ್ಯಾಲಯದಿ ಶಿವನ ಕಾಣೆಯ ನೀನು? ಉಳುವಾಗ, ನೆಡುವಾಗ ಪೂಜೆಮಾಡುವೆ ನೀನು’ ಎನುವುದು ಕಾಯಕತತ್ವದ ಬಗೆಗಿನ ಪ್ರೀತಿಯನ್ನು ಎತ್ತಿ ತೋರುತ್ತದೆ. ‘ ನಿನ್ನೆ ದೇಗುಲದೆಡೆಗೆ ಹೋದೆನ್ನ ಕಂದನಂ ಬೈದಿರಿದು ನೂಕಿದರು. ಶಿವಗುಡಿಯ ಶಿವನು ಜೋಯಿಸರ ಶಿವನಂತೆ’ ಎಂದು ಜಲಗಾರನ ಬಾಯಲ್ಲಿ ಭೇದಭಾವವರಿಯದ ಕಂದನನ್ನು ದೇಗುಲದ ಒಳಗೆ ಬಿಡದೆ ಬೈದು ಓಡಿಸುವ ಜೋಯಿಸರ ಕೃತ್ಯವನ್ನು ಅತ್ಯಂತ ನೋವಿನಿಂದ ಹೇಳಿಸುತ್ತಾರೆ.
‘ದೇಗುಲದ ಪೂಜಕನು ಬೈಗಿನಲಿ ಬೆಳಗಿನಲಿ ಪೂಜಿಸಿದರೇನಂತೆ ನಮ್ಮ ಜೀವನವೆ ನಿಚ್ಚ ಪೂಜೆ, ನಮ್ಮ ಕರ್ಮವೆ ನಿತ್ಯಯೋಗ’ ಎನ್ನುವ ಮೂಲಕ ಕರ್ತವ್ಯವೆಂದು ದೇಗುಲದೊಳಗೆ ದೇವರನ್ನ್ನು ಪೂಜಿಸುವ ಪೂಜಾರಿಯ ಕಾಯಕಕ್ಕೂ, ಕಾಯಕವನ್ನೇ ನಿತ್ಯ ಪೂಜೆ ಎನ್ನುವಂತೆ ದುಡಿವ ಜಲಗಾರನ ಕಾಯಕಕ್ಕೂ ಇರುವ ಅಂತರವನ್ನು ಚಿತ್ರಿಸುತ್ತಾರೆ. ರೈತ ಜಲಗಾರನನ್ನೇ ಮೂದಲಿಸಿ ಗುಡಿಯ ಪೂಜೆಗೆ ಹೊರಡುವ ಸಂದರ್ಭ ಜಲಗಾರ’ಗುಡಿಯೊಳಗಿರಲು ದೇವ ಒಡೆಯನಾರೀ ಜಗವ ಕಾವ?’ ಎಂದು ವೈಚಾರಿಕ ಪ್ರಶ್ನೆಯನ್ನೆತ್ತುತ್ತಾನೆ. ಇಲ್ಲಿ ಜಲಗಾರ ಅಧ್ಯಾತ್ಮ ಸೂಕ್ಷ್ಮ ಅರಿತ ಕಾಯಕಯೋಗಿಯಾದರೆ, ರೈತ ಜನಸಾಮಾನ್ಯರ ಪ್ರತಿನಿಧಿಯಾಗಿ ರೂಪಿತವಾಗುತ್ತಾನೆ.
ವರ್ಣ ಸಂಘರ್ಷವನ್ನು ಎರಡೂ ನಾಟಕಗಳಲ್ಲಿ ಕಾಣುತ್ತೇವೆ. ಕಾಲಘಟ್ಟ, ಪಾತ್ರಧಾರಿಗಳು ಬೇರೆ ಬೇರೆಯಾದರೂ ಶೋಷಣೆ, ಮೇಲು-ಕೀಳೆಂಬ ಭೇದಭಾವ ಎರಡರಲ್ಲೂ ಒಂದೇ. ಎರಡರ ಮೂಲ ಗುಡಿಯೇ ಎಂಬುದು ಗಮನಾರ್ಹ. ಕಾಲಜ್ಞಾನಿ ಕನಕ ನಾಟಕದಲ್ಲಿ ದೇವಸ್ಥಾನ ಪ್ರವೇಶದ ಸಂದರ್ಭದಲ್ಲಿ ಸಂಘರ್ಷವನ್ನು ಕಾಣುತ್ತೇವೆ. ಪಾಠಶಾಲೆಗೂ ಪ್ರವೇಶ ಇಲ್ಲದ ಕನಕ ಮತ್ತು ಅವನ ಸಂಗಡಿಗರಿಗೆ ದೇವಸ್ಥಾನದ ಪ್ರವೇಶ ದಕ್ಕುವುದು ಅಷ್ಟು ಸುಲಭವಾಗಿರಲಿಲ್ಲ. ಕನಕನ ಸಂಗಡಿಗರು ಅತ್ಯಂತ ಸಾಮಾನ್ಯ ಜನರ ಹಾಗೆ ದೇವರು ಗುಡಿಯಲ್ಲಿಯೇ ಇದ್ದಾನೆಂದು ಅದರೊಳಗೆ ಪ್ರವೇಶ ಮಾಡುವ ಬಯಕೆ ಹೊಂದಿದ್ದರೆ, ಜ್ಞಾನಿ ಕನಕರೋ ‘ದೇವಸ್ಥಾನದಲ್ಲೇ ದೇವರಿದ್ದಾನೆ ಅಂತ ನಾನು ತಿಳಿದಿಲ್ಲ. ಬಹಿರಂಗದ ಜಂಜಾಟಕ್ಕೆ ಸಿಲುಕಿದ ಜನ ತಮ್ಮ ಮನಸ್ಸಿನ ನೆಮ್ಮದಿಗೆ ದೇವಸ್ಥಾನಕ್ಕೆ ಬರ್ತಾರೆ ಅನ್ನೋದನ್ನ ಕೇಳಿದ್ದೇನೆ. ಅವರಿಗೆ ದೇವಾಲಯ ಮುಕ್ತವಾಗಬೇಕು. ದೇವಾಲಯ ಎಲ್ಲರಿಗೂ ಸೇರಿದ್ದು. ಆದರೆ ಯಾರದೇ ಯಜಮಾನಿಕೆ ಇರಕೂಡದು’ ಎನ್ನುವಲ್ಲಿ ಆ ಕಾಲದಿಂದ ಈ ಕಾಲದವರೆಗೂ ದೇಗುಲಗಳು ಒಂದು ವರ್ಗದ ಹಿಡಿತದಲ್ಲೇ ಇದೆ ಮತ್ತು ಅವು ನಿರಂತರವಾಗಿ ಶೋಷಣೆಯ ಕೇಂದ್ರಬಿಂದುಗಳಾಗಿಯೇ ಇವೆ ಎಂಬುದನ್ನು ಸ್ಥಾಪಿಸುತ್ತಾ ಹೋಗುತ್ತವೆ. ‘ದಿನಾ ದೇವಸ್ಥಾನಗಳನ್ನು ಕಟ್ಟುತ್ತಾ ಹೋದರೆ ಅದಕ್ಕೆ ಕೊನೆ ಎಲ್ಲಿ?’ ಎಂಬ ಕನಕನ ಪ್ರಶ್ನೆ ಪ್ರಸ್ತುತ ದಿನಲೂ ಒಂದಿಲ್ರ್ಲೆಂದು ಕಡೆ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಗುಡಿಗಳ ಬಗೆಗೆ ಚಿಂತನೆಗೆ ಹಚ್ಚುತ್ತದೆ. ಅಷ್ಟೇ ಅಲ್ಲದೆ ‘ಅದರಿಂದ ಯಾವ ಪ್ರಯೋಜನವೂ ಇಲ್ಲ. ಧರ್ಮಜಾತಿಕುಲಗಳನ್ನು ಮೀರಿದ್ದು ದೇವಸ್ಥಾನ’ ಎನ್ನುವ ಕನಕರ ಮಾತಿನಲ್ಲಿ ಧರ್ಮಾಧಾರಿತ, ಜಾತಿಯಾಧಾರಿತ ವ್ಯವಸ್ಥೆಯ ಸಂಕೋಲೆಯಲ್ಲಿ ದೇಗುಲಗಳು, ಅದರ ಕಟ್ಟಳೆಗಳು ಕಟ್ಟಲ್ಪಟ್ಟಿದ್ದವೆಂಬುದನ್ನು ಸ್ಪಷ್ಟಪಡಿಸುತ್ತವೆ.
ಕೆಳ ಜಾತಿಯವನೆಂದರಿಯದೆ ಗಾಳಿಯಲಿ ತೇಲಿಬಂದ ಸುಸ್ವರವನ್ನು ‘ಯಾರೋ ದಿವ್ಯಾತ್ಮನಿರಬೇಕು. ಮಧುರತಮ ಗಾಯನವು ಅಮಲತಮ ಹೃದಯದಿಂದಲ್ಲದೆ ಹೊರಹೊಮ್ಮಲರಿಯದು!’ ಎಂದು ದೇವಸ್ಥಾನಕ್ಕೆ ಹೊರಟ ಹಾರುವರೇ ಆ ಹಾಡುಗಾರಿಕೆಯ ಒಡೆಯ ಜಲಗಾರನೆಂದು ತಿಳಿದೊಡನೆಯೇ ಬಣ್ಣ ಬದಲಿಸುತ್ತಾರೆ. ‘ಶೂದ್ರರೊಳ್ ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್? ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್? ಅಸದಳಂ!’ ಎನ್ನುವ ಅವರ ಮಾತುಗಳು ದೇಗುಲಗಳು ಜಾತಿ ಕಟ್ಟಳೆಗಳೊಳಗೆ ಎಲ್ಲರನ್ನೂ ಕಟ್ಟಿ ಮನಸ್ಸುಗಳು ವಿಕಸನವಾಗಲು ಬಿಡದ ಬಗೆಯನ್ನು ತೋರುತ್ತದೆ.
ಕನಕ ಮತ್ತು ಜಲಗಾರರಿಬ್ಬರೂ ದೇಗುಲದೊಳಗೆ ಪ್ರವೇಶಿಸುವ ಬಯಕೆ ತೋರುವುದಿಲ್ಲ. ಇದಕ್ಕೆ ಕಾರಣ ಅಲ್ಲಿ ಪೂಜೆಗೈವ ಜೋಯಿಸರು ಹತ್ತಿರ ಸೇರಿಸದೆ ಇವರನ್ನು ನಡೆಸಿಕೊಂಡಿಹ ರೀತಿ, ಜೊತೆಗೆ ತಾರ್ಕಿಕ ಬುದ್ಧಿಯನ್ನು ಮೀರಿದ ಆಧ್ಯಾತ್ಮಿಕ ಅನುಭವದ ಹಂತವೂ ಕಾರಣವೆಂದು ತೋರುತ್ತದೆ.
ಆದರೂ ಕನಕರು ಒಂದೆಡೆ ತಮ್ಮ ಸಂಗಡಿಗರೊಂದಿಗೆ ಕೇಶವ ದೇವಾಲಯವನ್ನು ಪ್ರವೇಶಿಸುವ ಸಂದರ್ಭದಲ್ಲಿ ‘ಇವರು ದೇವಸ್ಥಾನ ಪ್ರವೇಶಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರ ಆಗುತ್ತೆ ಎಂದು ನಾನು ನಂಬಿದವನಲ್ಲ. ದೇವಸ್ಥಾನ ಪ್ರವೇಶಿಸುವುದರಿಂದ ಇವರಿಗೆ ಸ್ಥೈರ್ಯ ಬರುತ್ತೆ. ನಾವೆಲ್ಲ ಒಂದು ಅನ್ನುವ ಭಾವನೆ ಬರುತ್ತೆ’ ಎನ್ನುವ ಮಾತುಗಳನಾಡುತ್ತಾರೆ. ಇಲ್ಲಿಯೂ ತಮ್ಮ ಸಂಗಡಿಗರ ಪರವಾಗಿ, ಅವರ ಸಮಾಧಾನಕ್ಕಾಗಿ ಮಾತ್ರ ದೇಗುಲ ಪ್ರವೇಶ ಎಂಬಂತೆ ಮಾತನಾಡುವುದು ಅವರು ದೇಗುಲದ ಹೊರತಾಗಿಯೂ ಭಗವಂತನ ಇರವನ್ನು ಕಂಡುಕೊಳ್ಳುವ ಮಾರ್ಗ ಅರಿತವರೆಂಬುದನ್ನು ಸೂಚಿಸುತ್ತದೆ. ಜೊತೆಗೆ ದೇವಸ್ಥಾನ ಪ್ರವೇಶ ಎನ್ನುವುದು ಕೆಳವರ್ಗದ ಜನರಿಗೆ ನೀಡುವ ಮಾನಸಿಕ ಸ್ಥೈರ್ಯ ದೊಡ್ಡದು ಎಂಬುದನ್ನು ಅತ್ಯಂತ ನೇರವಾಗಿ ಹೇಳುವ ಕನಕರು ಆ ಮೂಲಕ ಕೆಳವರ್ಗದ ಜನರು ದೈಹಿಕವಾಗಿ ಸಬಲರಾಗಿದ್ದರೂ ಮೇಲ್ವರ್ಗದ ದೈಹಿಕ ಅಬಲರ ಮುಂದೆ ಕುಬ್ಜರಾಗಿ ನಿಲ್ಲುವ ಕಾರಣ ಅವರಿಗೆ ದೇಗುಲ ಪ್ರವೇಶದ ನಿರಾಕರಣೆಯಿಂದ ಉಂಟಾದ ಕೀಳರಿಮೆ. ದೈವಕ್ಕೆ ಅವರು ಹತ್ತಿರದವರು-ನಾವು ದೂರ; ಅವರು ಮಡಿ-ನಾವು ಮೈಲಿಗೆ ಎಂಬೆಲ್ಲ ಭಾವನೆಗಳನ್ನು ಬುದ್ಧಿ ತಿಳಿದಾಗಿನಿಂದ ಮನದೊಳಗೆ ಬಿತ್ತಿಸಿಕೊಂಡ ಕೆಳವರ್ಗದವರ ಪಾಲಿಗೆ ಮೇಲ್ವರ್ಗದವರೆಂದರೆ ಭಯ-ಭಕ್ತಿ. ಅವರ ಮಾತೇ ವೇದವಾಕ್ಯ. ಅವರ ಬಾಯಿಂದ ಬಂತೆಂದರೆ ದೇವರೇ ಹೇಳಿಸಿದನೇನೋ ಎಂಬಷ್ಟು ನಂಬಿಕೆ. ಹಾಗಾಗಿಯೇ ಆ ಕೀಳರಿಮೆಯ ಭಾವವನ್ನು ಅವರಲ್ಲಿ ತೊಡೆದು ಮನುಷ್ಯರೆಲ್ಲರೂ ಒಂದೇ; ಜಾತಿ ಭೇದಗಳನ್ನು ರೂಢಿಸಿಕೊಂಡಿದ್ದು ನಾವು ನಾವೇ ಎಂಬ ಅರಿವನ್ನು ಮೂಡಿಸಲು ವಿಚಾರವಂತರಿಗೆ ಶತಮಾನಗಳೇ ಬೇಕಾಯಿತು. 12ನೇ ಶತಮಾನದ ವಚನಕ್ರಾಂತಿಯ ಕಾಲದಲ್ಲಿ ಆರಂಭವಾದ ವಿಚಾರಕ್ರಾಂತಿ, ಭಾಷಾಕ್ರಾಂತಿ, ಸಾಂಸ್ಕೃತಿಕ-ಸಾಮಾಜಿಕ ಕ್ರಾಂತಿಗಳು ಕೆಲ ಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿಸಿತು. ಹಲವರ ಗೊಣಗಾಟದ ನಡುವೆಯೂ ದೇಗುಲ ಪ್ರವೇಶ ಮುಕ್ತವಾಗುವ ಜೊತೆಗೇ ದೇಹದೇಗುಲ, ಕರಸ್ಥಲ ಲಿಂಗ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು. ಅಷ್ಟಾಗ್ಯೂ ತದನಂತರದ ದಾಸ ಪರಂಪರೆಯ ಕಾಲದಲ್ಲೂ ಕೆಳವರ್ಗದವರಿಗೆ ಮತ್ತೆ ದೇಗುಲ ಪ್ರವೇಶಕ್ಕೆ ಅಷ್ಟೊಂದು ವಿರೋಧವಿತ್ತೆಂದರೆ ಕೆಲವೇ ವರ್ಷಗಳೊಳಗೆ ಪದ್ಧತಿ-ಪರಂಪರೆ ಮತ್ತೆ ಹಿಂದಕ್ಕೇ ಮರಳಿ ಹೋದಂತಾಯಿತು. ಆದರೆ ಕನಕರಂಥ ಅನುಭಾವಿಗಳು ತಮಗಾಗಿಯಲ್ಲದಿದ್ದರೂ ತಮ್ಮ ಒಡನಾಡಿಗಳಿಗಾಗಿ ದೇಗುಲ ಪ್ರವೇಶದ ವಿಚಾರದಲ್ಲಿ ಪಂಡಿತರೊಂದಿಗೆ ವಾಗ್ವಾದಕ್ಕಿಳಿದು ‘ವಿಜಯನಗರದ ಪತನಕ್ಕೆ ಇಂಥ ಕ್ಷುಲ್ಲಕ ಕಚ್ಚಾಟಗಳೇ ಮೂಲ ಕಾರಣ. ಕುಲಕುಲಗಳ ನಡುವಣ ಬೆಂಕಿ ಆರುವ ತನಕ ಒಗ್ಗಟ್ಟು ಕನಸಿನ ಗಂಟು’ ಎಂದು ಹೇಳುವಲ್ಲಿ ಭೇದ ಭಾವ- ಒಳಜಗಳಗಳಿಂದಾಗಿ ಇಡೀ ಒಂದು ವೈಭವಯುತ ಸಾಮ್ರಾಜ್ಯವೇ ಪತನವಾಯಿತೆಂದರೆ ಇನ್ನು ಸಾಮಾನ್ಯರ ಪಾಡೇನು ಎಂಬ ಪ್ರಶ್ನೆಯನ್ನು ಎತ್ತುತ್ತಾರೆ.
ಎರಡೂ ನಾಟಕಗಳಲ್ಲಿನ ಮೇಲ್ವರ್ಗದ ಜನ ತಾವೇ ಶ್ರೇಷ್ಠರೆಂಬ ಅಹಂಭಾವ ಪೆÇೀಷಣೆ, ಆರ್ಥಿಕ ಲಾಭ, ವೈಯಕ್ತಿಕ ಹಿತಾಸಕ್ತಿಗಳನ್ನೇ ದೊಡ್ಡದು ಮಾಡಿ, ತಮ್ಮ ಲಾಭಕ್ಕೆಲ್ಲಿ ಸಂಚಕರ ಒದಗುವುದೋ ಎಂಬ ಭಯದಲ್ಲಿ ಕೆಳವರ್ಗದವರನ್ನು ದೇಗುಲಗಳಿಂದ ದೂರ ಇಡುವುದನ್ನು ಕಾಣುತ್ತೇವೆ. ಕಣ್ಣಿಲ್ಲದ ತಿರುಕನೊಬ್ಬ ದೇಗುಲದ ಭಟ್ಟರನ್ನು ಭಿಕ್ಷೆ ಬೇಡುತ್ತಾ ಆಕಸ್ಮಿಕವಾಗಿ ಮುಟ್ಟಲು ಕೋಪಾವೇಶದಿಂದ ಭಟ್ಟನು ‘ನೀ ಸತ್ತರೆ ನನಗೇನೋ? ಮಡಿಬಟ್ಟೆ ಮುಟ್ಟುವೆಯ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು ಹಂಗಿಸಿ ಮಾನವತ್ವವನ್ನು ಮರೆತು ನಡೆವ ಪರಿ ತಿರುಕನನ್ನು ಅಸಹಾಯಕತೆಗೆ ದೂಡುತ್ತದೆ. ‘ನೀನೇಕೆ ಗುಡಿಯೊಳಗೆ ಸೇರಿರುವೆಯಪ್ಪಾ, ಪರಮಾತ್ಮ? ಗುಡಿಗಳಿವು ಪಾಪಿಗಳ ಭೋಗಿಗಳ ಗೂಡುಗಳು! ಪೂಜೆಯೆಂಬುದೊ ಧರ್ಮಬುದ್ಧಿಯನು ಜೋಗುಳದಿ ಮಲಗಿಸುವ ಕಾಳಮಂತ್ರವು, ದೇವ!’ ಎನ್ನುವ ಮೊರೆ ಕೇವಲ ಆ ತಿರುಕನದ್ದಲ್ಲ- ಶೋಷಣೆಗೆ ಒಳಗಾದ, ವಂಚನೆಗೊಳಗಾದ ಎಲ್ಲರದ್ದೂ. ಅದು ಅತ್ಯಂತ ಸಹಜ ಕೂಡ. ‘ಮತದ ಮದ್ಯವ ಕುಡಿದು ತಲೆಕೆಟ್ಟಿಹುದು ಮಂದಿ’ ಎನ್ನುವಂತಾಡುವವರ ನಡುವೆ ಅಸಹನೀಯವಾಗಿ ಬದುಕುವ ಮಂದಿಗೆ ದೇವರು ಗುಡಿಯೊಳಗೇ ಸೇರಿಕೊಂಡುಬಿಟ್ಟರೆ ತಮ್ಮನ್ನು ಮತ್ತಿನ್ನಾರು ಕಾಪಾಡುವವರು ಎಂಬ ಅನುಮಾನ, ಭಯ ಕಾಡುವುದು ಸಹಜ. ಇದು ಹಿರಿತಲೆಗಳ ಮಾತಾದರೆ; ಜಲಗಾರ ನಾಟಕದಲ್ಲಿಯ ಒಬ್ಬ ಯುವಕ ಹಿರಿಯರ ತರ್ಕ ಅರ್ಥವಾಗದೆ “ಜಗದೊಡೆಯನೆಲ್ಲಿಯುಂ ಇರುವರೆಂಬರು ಒಮ್ಮೆ! ಗುಡಿಯಲರಸುವರೊಮ್ಮೆ! ನಿರಾಕಾರನವನೆಂದು ಸಾರುವರು ಒಮ್ಮೆ; ಮೂರ್ತಿಗಳ ಮಾಡಿ ಆರಾಧಿಸುವರಿನ್ನೊಮ್ಮೆ! ಒಂದು ಸಲ ಸರ್ವರೊಳು ಅವನಿರುವನೆನ್ನುವರು; ‘ಹೊಲೆಯ ನೀ ದೂರವಿರು’ ಎಂದೆಂಬರಿನ್ನೊಮ್ಮೆ! ನುಡಿಗೂ ನೆಗಳ್ತೆಗೂ ಸಂಬಂಧವೇ ಇಲ್ಲ!” ಎಂದು ಪರಿತಪಿಸುವುದನ್ನು ನೋಡಿದರೆ ಬದಲಾವಣೆಯ ಗಾಳಿ ಹೊಸ ಪರಂಪರೆಗೆ ಒಗ್ಗಿದೆ; ಆಮೂಲಾಗ್ರವಲ್ಲದಿದ್ದರೂ ಹೊಸ ಬೆಳಕು ಒಳಬಂದು ಹಳೆ ಕತ್ತಲನ್ನು ಸ್ವಲ್ಪವಾದರೂ ಕಳೆಯಬಹುದೇನೋ ಎಂಬ ಆಶಾಭಾವ ಮೂಡುತ್ತದೆ. ಆದರೆ ‘ಜೀವದ ದರಿದ್ರ ನಾರಾಯಣರ ಸೇವೆಯಲ್ಲಿದೆ ಪರಮಪೂಜೆ’ ಎನ್ನುವ ಆ ಯುವಕನೇ ಮರುನಿಮಿಷದಲ್ಲಿ ‘ದುಡಿಯಬಾರದೆ ಇವನು? ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೋ, ಠಕ್ಕ!’ ಎಂದು ಕಣ್ಣಿನ ರೆಪ್ಪೆ ಎಳೆದು ನೋಯಿಸುವ ಪರಿ ಮನುಷ್ಯತ್ವವ ಮರೆತ ಮನುಷ್ಯ- ಯಂತ್ರಮಾನವನಾಗುತ್ತಿದ್ದಾನೆಂಬುದರ ಕುರುಹನ್ನು ನೀಡುತ್ತದೆ. ಆಗಲೂ ಜಲಗಾರನೇ ಮರುಕಗೊಂಡು ಭಿಕ್ಷುಕನನ್ನು ಬಿಡಿಸುವುವನ್ನು ನೋಡಿದರೆ ಸನ್ನಡತೆಗೂ ವಿದ್ಯೆ, ವರ್ಣ, ವೃತ್ತಿಗೂ ನಂಟನ್ನೇನು ಕಾಣಲಾಗದೆಂಬುದು ಅರಿವಾಗುತ್ತದೆ. ಈ ನಾಟಕದಲ್ಲಿ ಜಲಗಾರ ದೊಡ್ಡ ಅನುಭಾವಿಯಂತೆ ಗೋಚರವಾಗುತ್ತಾನೆ ‘ಬಡವರಿಗೆ ಬಡವರಲ್ಲದೆ ಬೇರೆ ಗತಿಯುಂಟೆ?’ ಎಂಬ ಸತ್ಯವನ್ನು ಉದ್ಗರಿಸುತ್ತಲೇ ‘ಭಿಕ್ಷುಕನೆ, ನನ್ನನ್ನದೊಳೆ ಮುಷ್ಠಿ ನಿನಗಿಕ್ಕಿ, ಶಿವ ಪೂಜೆ ಮಾಡುವೆನು, ನೀನೆನ್ನ ಸೋದರ, ನೀನೆನ್ನ ದೇಗುಲ! ನೀನೆನಗೆ ಪರಶಿವ!’ ಎಂದು ನುಡಿಯುವುದು ಸಹಬಾಳ್ವೆಯ ತತ್ತ್ವಕ್ಕೆ ಹಿಡಿದ ಕನ್ನಡಿಯಂತೆ ಗೋಚರಿಸುತ್ತದೆ. ಜೊತೆಗೆ ಹಸಿದವನ ಹೊಟ್ಟೆಯಲ್ಲಿ ಶಿವನನ್ನು ಕಾಣುವ; ಪರರನ್ನೇ ದೇಗುಲ ಎನ್ನುವ ಪರಿ ಹೊಸದಾಗಿ ಕಾಣುತ್ತದೆ.
‘ಜೋಯಿಸರು ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ ದೇವರಿಂದತಿ ದೂರವಿಹ ಪಾಪಿಯೆಂಥವನು?’ ಎನ್ನುವ ಜಲಗಾರನ ಮಾತುಗಳನ್ನು ಗಮನಿಸಿದರೆ ದಿನನಿತ್ಯ ಪೂಜಿಸುವುದನ್ನೇ ಕಾಯಕ ಮಾಡಿಕೊಂಡಿದ್ದರೂ ದೈವದ ಬಗೆಗೆ ಮನದಾಳದ ಪ್ರೀತಿ, ಭಕ್ತಿಯಿರದ ಜೋಯಿಸರು ತಮ್ಮ ಸ್ವಾರ್ಥಕ್ಕಾಗಿ ದೇವಸ್ಥಾನಕ್ಕೆ ಹೋಗುವುದರಿಂದ ಶಿವನನ್ನೇ ಹೊರ ಹಾಕುತ್ತಾರೆ ಎಂಬ ವ್ಯಂಗ್ಯವಿದೆ. ಗುಡಿಯೊಳಿದ್ದರೂ ಮಾನಸಿಕವಾಗಿ ದೂರವಿರುವುದರಿಂದ ಅವರು ಪಾಪಿಗಳು ಎಂಬ ಮಾತಿನಿಂದ ಗುಡಿಯ ಹೊರಗಿದ್ದರೂ ಭಕ್ತಿಯಿಂದಾಗಿ ದೇವರ ಹತ್ತಿರವಿರುವವರದ್ದೇ ಪುಣ್ಯ ಎಂಬ ಭಾವವೂ ಇದೆ. ಎರಡೂ ನಾಟಕಗಳಲ್ಲಿ ನಾಟಕಕಾರರು ಪುರೋಹಿತಶಾಹಿ ಪದ್ಧತಿಯನ್ನು ತಿರಸ್ಕರಿಸುತ್ತ, ಶೋಷಣೆಯನ್ನೇ ತಮ್ಮ ಬಂಡವಾಳ ಮಾಡಿಕೊಂಡ ಪುರೋಹಿತರನ್ನು ‘ದೇವಸ್ಥಾನದ ಪಾರುಪತ್ಯದವರೇ ಕೇಶವನ ಶಕ್ತಿಯನ್ನು ಉಡುಗಿಸಿರುವವರು. ಇವರು ಕೃಷ್ಣನನ್ನು ಮೂಲೆಗೆ ತಳ್ಳಿ ಮೆರೆಯುವವರು’ ಎಂದು ಕನಕರ ಸಂಗಡಿಗರ ಬಾಯಲ್ಲಿ ಕುಟುಕಿಸುತ್ತಾರೆ.
ಕುವೆಂಪು ಅವರ ಕಾಣ್ಕೆ ಈ ನಿಟ್ಟಿನಲ್ಲಿ ಬಲು ದೊಡ್ಡದು. ರೂಪರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ವಿಶ್ವಮಾನವನಾಗುವ ಸಂದೇಶವನ್ನು ಸಾರಿದರು. ಎಲ್ಲ ನಿರ್ಬಂಧಗಳನ್ನು ಮೀರಿ ಮಾನವ ಕೇವಲ ಮಾನವನಾಗಿ ಮಾತ್ರವೇ ಬದುಕುವ ರೀತಿ, ದಾರಿಯ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಹಲರೂಪಗಳಲ್ಲಿ ಮಾಡಿದ್ದಾರೆ. ಅದರಲ್ಲಿ ಒಂದು ಕರ್ಮಾರಾಧನೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯ ಮುಂದುವರಿಕೆಯಂತೆ ಜಲಗಾರ ನಾಟಕದಲ್ಲಿ ಜಲಗಾರ ‘ಪುರಾಣ ಆದಿ ವೇದ ಯಾಗ ದಾನ ಮತಾಚಾರಾದಿ ಚಾಗಯೋಗ ಧ್ಯಾನ ಅಕರ್ಮ ಕರ್ಮ ಧರ್ಮ ದಾಸದಾಸ ನಾನರಿಯೆ’ ಎನ್ನುತ್ತ ಕಸದೊಳಗೆ ಶಿವನ ಕಾಣುವ ಕಾಯಕ ಯೋಗ ನಡೆಸುತ್ತಾನೆ. ಹಾಗೆ ಕಾಯಕದಲ್ಲೇ ಭಗವಂತನನ್ನು ಕಾಣುವುದರಿಂದಲೇ ‘ಜಲಗಾರ’ನ ರೂಪದಲ್ಲೇ ಶಿವ ಅವನ ಕಣ್ಮುಂದೆ ಬಂದು ನೀನು ಊರ ಜಲಗಾರನಾದರೆ ‘ನಾನೊಬ್ಬ ಜಗದ ಜಲಗಾರ’ ಎಂದು ಸೋದರ ವಾತ್ಸಲ್ಯ ತೋರುತ್ತಾನೆ. ಪಂಡಿತರ ವರ್ಣನೆಯ ಕೇಳಿದವರಿಗೆ ಜಲಗಾರರೂಪೀ ಶಿವ ಶಿವ ಹೌದೋ ಎಂಬ ಅನುಮಾನ. ಅದಕ್ಕೆ ಶಿವ ‘ಶಿವನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ ನಿಂತು, ನರ್ತನವೆಸಗುತಿಹ ತೋಟಿ ನಾನು! ನಿಜ ಶಿವನು ಜಲಗಾರ!’ ಎನ್ನುತ್ತ ಮಿಥ್ಯವನ್ನೊಡೆದು ಭ್ರಮೆಯನ್ನು ಕರಗಿಸಿ ದೈವ ಎಂಬುದು ಕಾಯಕ ನಂಬಿದ ಮನುಷ್ಯನ ಅಂತರಂಗದಲ್ಲಿರುವ ಶಕ್ತಿ ಎಂಬ ಸತ್ಯವನ್ನು ತೋರುತ್ತಾನೆ. ‘ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ, ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ. ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು, ಕುರುಡರನು, ದೀನರನು, ಅನಾಥರನು ಕೈಹಿಡಿದು ಪೆÇರೆಯುತಿಹನೆಡೆಯಿರುವೆ. ಆ ನನ್ನ ಭಕ್ತರಿಗೆ ನನ್ನ ನಿಜರೂಪದಿಂ ಮೈದೋರಿ ಸಲಹುವೆನು’ ಎನ್ನುವಲ್ಲಿ ಶ್ರಮ ಸಂಸ್ಕೃತಿ ಮತ್ತು ಕರುಣೆ ಅನುಕಂಪದ ಹೃದಯಗಳಿಗೆ ದೈವ ಇಂಬಾಗಿ ನಿಲ್ಲುವುದು ಎಂಬ ಶ್ರೇಷ್ಠ ತತ್ವವನ್ನು ಸಾರುತ್ತದೆ.
ಹಾಗೆಯೇ ಕಿ.ರಂ. ನಾಗರಾಜು ಅವರ ಕನಕರೂ ‘ಮನುಷ್ಯ ಜೀವನವನ್ನು ಆವರಿಸಿರುವ ದಾಸ್ಯ ಭಾವನೆಯನ್ನು ನಿರ್ಮೂಲನ ಮಾಡುವುದೇ ದಾಸರ ಗುರಿ’ ಎಂಬ ಧ್ಯೇಯವನ್ನಿರಿಸಿಕೊಂಡು ಕೀರ್ತನೆಗಳನ್ನು ಪ್ರಸಾರ ಮಾಡುತ್ತಾರೆ. ಹಾಗಾಗಿಯೇ ವ್ಯಾಸರಾಯರು ಕನಕರ ಕುರಿತು ‘ತನ್ನಲ್ಲೇ ಪರಮಾತ್ಮನನ್ನು ಎಲ್ಲ ಕಡೆ ಜೀವ ಚೈತನ್ಯವನ್ನು ನೋಡುವವನು’ ಎಂದು ಕನಕರ ಆಧ್ಯಾತ್ಮಿಕ ಔನ್ನತ್ಯವನ್ನು ಗುರುತಿಸುತ್ತಾರೆ.
‘ದೇವರು ಅನ್ನೋದು ಒಂದು ಕಲ್ಪನೆ. ಆ ಕಲ್ಪನೆಯಲ್ಲಿರುವ ಮನುಷ್ಯತ್ವ ದೊಡ್ಡದು’ ಎನ್ನುವುದು ಹಾಗು ಕೃಷ್ಣನಾಲಯದೊಳಗೆ ಪ್ರವೇಶ ನಿರಾಕರಣೆಯ ಸಂದರ್ಭದಲ್ಲಿ ಕನಕರು ಕೇಶವ ಬಯಲಿನೊಳಗೇ ಇದ್ದಾನೆ ಎಂದು ವಾದಿಸುತ್ತಲೇ ‘ಕೇಶವ ಆಲಯವನ್ನು ಬಿಟ್ಟು ಬಾ’ ಎಂದು ಕರೆಯುವುದು ಅಚ್ಚರಿ ತರುತ್ತದೆ.
ಆರ್ಥಿಕ ಲಾಭಕ್ಕಾಗಿ, ಸಾಮಾಜಿಕ ಸ್ಥಾನಮಾನಕ್ಕಾಗಿ ದೇಗುಲಗಳನ್ನು ಬಳಸಿಕೊಳ್ಳುವ ಮಂದಿಯ ವಿರುದ್ಧ ಎರಡೂ ನಾಟಕಕಾರರು ತಿರುಗಿಬೀಳುವುದನ್ನು ಕಾಣುತ್ತೇವೆ. ‘ಜಾತಿ ಮತವನ್ನು ಮುಂದೆ ಮಾಡಿ ಕಚ್ಚಾಡೋದು ಗೊತ್ತು. ದೇವಸ್ಥಾನವನ್ನು ನಿಮ್ಮ ವ್ಯಾಪಾರಕ್ಕೆ ಆಧಾರ ಮಾಡಿಕೊಳ್ಳೋದು ಗೊತ್ತು’ ಎನ್ನುವ ಕಾಲಜ್ಞಾನಿ ಕನಕ ನಾಟಕದಲ್ಲಿಯ ಪುರಂದರರ ಮಾತಿನಲ್ಲಿ ಹಾಗು ಜಲಗಾರ ನಾಟಕದಲ್ಲಿನ ಇಬ್ಬರು ಹಾರುವರು ‘ಇಂದಾದ ಲಾಭವೇ ಲಾಭ, ದಕ್ಷಿಣೆಯ ಹಬ್ಬ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡು, ಸುಲಿಗೆ ಮಾಡಿದ ದುಡ್ಡು’ ಎಂದು ಅವರವರು ಆಡುವ ಮಾತುಗಳಲ್ಲಿ ಸ್ವಾರ್ಥಕ್ಕಾಗಿ ದೇವರ ಹೆಸರನ್ನು ಬಳಸಿಕೊಳ್ಳುವವರ, ಬೂಟಾಟಿಕೆಯ ಭಕ್ತರ ಮತ್ತು ಜಾತಿವಾದಿಗಳ ಭಂಡತನದ ಬಣ್ಣವನ್ನು ಬಿಚ್ಚಿಡುತ್ತಾರೆ.
ಅದಕ್ಕಗಿಯೇ ಜಲಗಾರ ರೂಪೀ ಶಿವನು ‘ಕಲ್ಪನೆಯ ರೂಪವನು ತೆಗೆದೊಗೆದು ಬಂದಿಹೆನು. ನೋಡಲ್ಲಿ! ಚಂದ್ರನಂ ಬಿಸುಟಿಹೆನು ಗಗನಕ್ಕೆ! ಗಂಗೆಯನ್ನೆಸೆದಿಹೆನು ಹಿವಗಿರಿಗೆ! ಹಾವುಗಳ ಪಾತಾಳಕಟ್ಟಿಹೆನು! ಹಣೆಗಣ್ಣ ಹಂಚಿಹೆನು ನೇಸರ್ ಅರಿಲ್ಗಳಿಗೆ! ಭಯಂಕರದ ಮಸಣದಲಿ ಬಿದ್ದಿಹುದು ಜೋಯಿಸರು ಹಚ್ಚಿದಾ ಎನ್ನ ಮೈಬೂದಿ! ಚಟ್ಟಗಳ ಕಟ್ಟುತಿದೆ ಅವರೆನಗೆ ತೊಡಿಸಿದಾ ಯಜ್ನೋಪವೀತ! ಅವರಿತ್ತ ಪೆÇರಕೆಯಂದದ ಶೂಲ ಗುಡಿಸುತಿದೆ ಬ್ರಹ್ಮಗಳ ಬೀದಿಯನು! ಶಾಸ್ತ್ರಿಗಳು ಶಿವಗಿತ್ತ ದಾನಗಳು ತೊಲಗೆ, ಉಳಿಯುವನು ಜಗದ ಜಲಗಾರ!’ ಎಂದು ಶಾಸ್ತ್ರಿಗಳ ಶಿವನ ತೊಡುಗೆ ಕಳಚಿ ಜಗದ ತೋಟಿಯಾಗಿ ಉಳಿಯುವುದು ಮತ್ತು ಕನಕನ ಕೇಶವ ಗರ್ಭಗುಡಿಯಿಂದ ಹೊರಬಂದು ‘ನಾನು ಎಂದಿನಿಂದಲೂ ಅಲೆಮಾರಿ’ ಎನ್ನುತ್ತ ಜನಸಮೂಹದಲ್ಲಿ ಸೇರಿಹೋಗುವುದು.
‘ಮೂಡಣದೊಳಗಿಹನು ಹರಿ, ಪಡುವಲೊಳಿಹನು ಅಲ್ಲ, ಹೃದಯದೊಳು ನೀ ನೋಡೆ ಸಲೆ ವಿಚಾರವ ಮಾಡೆ ಅಲ್ಲಿರುವನು ಕರೀಮ ಅಲ್ಲೆ ತೋರ್ಪನು ರಾಮ’ ಎನ್ನುವ ಜಲಗಾರನ ಮಾತುಗಳು ಕಟ್ಟಡದೆಲ್ಲೆಯ ಮೀರಿದ ಭಗವಂತನನ್ನು ಪ್ರಕೃತಿಯ ವ್ಯಾಪಾರದಲ್ಲಿ ಮತ್ತು ಹೃದಯದ ಮಂದಿರದಲ್ಲಿ ಕಾಣಲು ಸಾಧ್ಯ ಎಂಬ ಬಗೆಯನ್ನು ತೋರುತ್ತದೆ. ಯಾವಾಗ ಭಗವಂತನನ್ನು ಗುಡಿಯ ಹೊರಗೂ ಕಾಣಲು ಸಾಧ್ಯವಾಗುವ ಮನಸ್ಥಿತಿಯನ್ನು ಹೊಂದಬಹುದೋ ಆಗ ಗುಡಿಗೆ ಹೋಗುವ ಪ್ರಮೇಯವನ್ನೇ ತೊಡೆದುಹಾಕಬಹುದು. ಕನಕನಾದರೋ ‘ದೇವಾಲಯದಲ್ಲಿ ಕೇಶವ ಇದಾನೆ ಎಂದು ತಿಳಿದಿರುವವರು ಒಂದು ಕಡೆ, ದೇವಾಲಯದ ಮೇಲೆ ಹಿಡಿತ ಸ್ಥಾಪಿಸಿಕೊಂಡಿರುವವರು ಇನ್ನೊಂದು ಕಡೆ. ಇವರ ಮಧ್ಯೆ ನಾನು ತಾನೆ ಏಕೆ ನಿಂತೆ?’ ಎಂದು ಪ್ರಶ್ನಿಸಿಕೊಳ್ಳುವುದು ನಮ್ಮೊಳಗನ್ನು ಕೆದಕುತ್ತದೆ. ಸಾಮಾನ್ಯ ಜನರ ಮೂಢತ್ವ, ಕೆಲವರ ದಬ್ಬಾಳಿಕೆಗೆ ತಲೆಬಾಗುವ ಮತಿಹೀನತೆಯ ನಡುವೆ ನಿಂತ ಅಸಹಾಯಕರ ಮತ್ತು ಈ ಜಂಜಡಗಳಿಂದ ಬಿಡಿಸಿಕೊಳ್ಳಲು ಹೆಣಗುವವರ ಪ್ರತಿನಿಧಿಯಾಗಿ ಕನಕ ಕಾಣುತ್ತಾನೆ. ಬುದ್ಧಿ ತರ್ಕಗಳಿಗೆ ಮೀರಿದ ಅನುಭಾವ ಸ್ಥಿತಿಗೆ ತಲುಪಿದಾಗ ಮಾನವ ಮತ್ತು ದೇವರು ಒಬ್ಬರೊಳಗೊಬ್ಬರು ಒಂದಾಗುತ್ತಾರೆ. ಮನುಜತ್ವವ ತುಂಬಿಕೊಂಡ ಹೃದಯವೇ ಭಗವಂತನ ಆವಾಸಸ್ಥಾನವಾಗುತ್ತದೆ.
ದೇವಸ್ಥಾನ ಧರ್ಮ ಜಾತಿಯನ್ನು ಮೀರಿದ್ದು ಎಂದು ದೇವಸ್ಥಾನದ ಸಾರ್ವತ್ರಿಕತೆಯನ್ನು ಒಪ್ಪುವ ಕನಕರೇ ಮತ್ತೊಮ್ಮೆ ದೇವಸ್ಥಾನವನ್ನು ಧಿಕ್ಕರಿಸಿ ಆ ಕತ್ತಲೊಳಗಿಂದ ದೇವರನ್ನು ಜನಸಾಮಾನ್ಯರೆಡೆಗೆ ಕರೆತರಬೇಕೆನ್ನುವ ನಿಲುವಿಗೆ ಬರುವುದು ಅವರ ಆತ್ಮೋನ್ನತಿಯನ್ನು ತೋರುತ್ತದೆ.
ಎರಡೂ ಕೃತಿಗಳಲ್ಲಿ ಪಂಡಿತರ ಸಂಸ್ಕೃತವನ್ನು ಬದಿಗಿರಿಸಿ ಜನಸಾಮಾನ್ಯರ ಭಾಷೆ ಕನ್ನಡಕ್ಕೆ ಮನ್ನಣೆ ಎಂಬುದನ್ನು ಸಾರಲಾಗಿದೆ.
ಎರಡೂ ನಾಟಕಗಳಲ್ಲಿನ ಮಹತ್ವದ ತಿರುವು ನಾಟಕದ ಅಂತ್ಯದಲ್ಲಿ ಕಾಣಬರುತ್ತದೆ. ಜಲಗಾರನ ಶಿವ ಮತ್ತು ಕನಕನ ಕೇಶವ ಇಬ್ಬರೂ ತಾವು ಪಂಡಿತರ ಜೋಯಿಸರ ದೇವರಲ್ಲ’ ಜನಸಾಮಾನ್ಯರ ದೇವರು. ಅವರಲ್ಲೊಬ್ಬರು- ಅವರಂತೆಯೇ ಇರುವರು; ಪ್ರತಿ ಮನುಷ್ಯನ ಅಂತರಾತ್ಮದ ದನಿಯಾಗಿ ಉಳಿವವರು ಎಂಬುದನ್ನು ಸ್ಪಷ್ಟಪಡಿಸುತ್ತದೆ.ಇದನ್ನು ಓದಿ –ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಎರಡೂ ನಾಟಕಗಳಲ್ಲಿಯೂ ದೇಗುಲ ನಿರಾಕರಣೆಯನ್ನು ಕಾಣುತ್ತೇವೆ. ಅಷ್ಟರ ಜೊತೆಗೆ ಗುಡಿಯೊಳಗಿನ ದೇವರು ಜನಸಾಮಾನ್ಯರೆಡೆಗೇ ಬಂದು ‘ಎಲ್ಲರೊಳಗೊಂದಾಗು’ವುದನ್ನು ಕಾಣುತ್ತೇವೆ. ಇಬ್ಬರೂ ನಾಟಕಕಾರರ ಮಹದುದ್ದೇಶವೂ ಅದೇ. ಭಗವಂತನ ಇರವನ್ನು ನಿತ್ಯ ಕಾಯಕದೆಡೆಗಿನ ನಿಷ್ಠೆ, ಜನರ ಬಗೆಗಿನ ಪ್ರೀತಿ, ಅನುಕಂಪ, ಸಹಾನುಭೂತಿ, ಕರುಣೆಗಳ ಮೂಲಕ ಕಾಣುವುದು ಮತ್ತು ಸಹೃದಯಿಗಳಾಗಬೇಕೆಂಬುದು. ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೇ. ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ’ ಎಂಬ ಜಿ.ಎಸ್.ಶಿವರುದ್ರಪ್ಪನವರ ಕಾವ್ಯದ ಸಾಲಿನಂತೆ ಪ್ರತಿ ಹೃದಯದೊಳಗಿರುವ ಪ್ರೀತಿ ಸ್ನೇಹಗಳ ಮೂಲಕವೇ ದೈವದ ಇರವನ್ನು ಕಾಣಬೇಕು. ಆಗ ಮಾತ್ರ ಈ ಜಗತ್ತೇ ಸುಂದರವಾದ ದೇಗುಲವಾಗಿರಲು ಸಾಧ್ಯ.
ಡಾ. ಶುಭಶ್ರೀ ಪ್ರಸಾದ್ ಮಂಡ್ಯ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು