December 18, 2024

Newsnap Kannada

The World at your finger tips!

WhatsApp Image 2024 12 07 at 11.10.40 AM

” ಕರ್ಮ ರಿಟರ್ನ್ಸ್ ” ಅಂದ್ರೆ ಇಷ್ಟೇ ನೋಡಿ…..

Spread the love

ಹಾಗೇ ಸುಮ್ಮನೇ ನೆನಪು ಮಾಡಿಕೊಳ್ಳಿ.

ಈ ದುನಿಯಾದಲ್ಲಿ ನಮ್ಮ ಸಂಪರ್ಕಕ್ಕೆ ಬರುವ ಒಂದಷ್ಟು ಜನ ಅವರದ್ದೇ ಆದ ಕಾರಣಗಳಿಗಾಗಿ ನೆನಪಲ್ಲಿ ಉಳೀತಾರಲ್ಲವೇ ? ಕೆಲವರು ತಮ್ಮ ಒಳ್ಳೆಯ ವ್ಯಕ್ತಿತ್ವ,‌ ನಿಷ್ಕಲ್ಮಶ ಸ್ನೇಹ, ಆದರ್ಶ ನಡವಳಿಕೆ, ಪ್ರತಿಭೆ, ಸಾಧನೆ, ಸಹಾಯ, ಸಹಕಾರ, ಸಹಾನುಭೂತಿ ಇತ್ಯಾದಿ ಗುಣಗಳಿಂದ ಮನಸಿಗೆ ಆಪ್ಯಾಯವಾದರೆ ಮತ್ತೇ ಕೆಲವರು ನಮ್ಮ ಅವನತಿಯನ್ನೇ ಬಯಸುವ, ಅಸೂಯೆ ದ್ವೇಷ, ಮತ್ಸರ ಕಾರುವ , ಇಲ್ಲವೇ ನೋಡಲು ಮೇಲೆ ಚೆನ್ನಾಗಿದ್ದು ಒಳಗೊಳಗೇ ವಿಷ ಕಾರುವ ನಯವಂಚಕತನದ ಗುಣಗಳಿಂದಾಗಿ, ನಂಬಿಕೆ ದ್ರೋಹ ಇವೇ ಮುಂತಾದ ಬೇಡದ ಕಾರಣಗಳಿಗಾಗಿ ಮರೆಯಲಾಗದ ವ್ಯಕ್ತಿಗಳಾಗಿ ಮನದಲ್ಲಿ ಉಳಿದು ಬಿಡುತ್ತಾರೆ.

ಇವೆಲ್ಲಕ್ಕಿಂತ ಇನ್ನೂ ಒಂದು ವಿಶೇಷ ವರ್ಗವಿದೆ.ಅವರ ರೋಲ್ ಏನೆಂದರೆ ಯಾವುದೋ ಕಾರಣಕ್ಕೆ ಅಥವಾ ವಿನಾಕಾರಣ ನಿಮ್ಮ ಬಗೆಗೆ ಸುಳ್ಳು ಹೇಳಿಕೊಂಡೇ ನಿಮ್ಮನ್ನು ಸಮಾಜದ ದೃಷ್ಟಿಯಲ್ಲಿ ವಿಲನ್ ಗಳನ್ನಾಗಿ ಚಿತ್ರಿಸುವುದು . ಇವರ ಕೃತ್ಯಗಳು ಯಾವ ಮಟ್ಟಕ್ಕೆ ಮುಟ್ಟಿರುತ್ತದೆಯೆಂದರೆ ಇಡೀ ಸಮಾಜದ ಮುಂದೆ ನಿಮ್ಮ ವ್ಯಕ್ತಿತ್ವವೇ ಉಲ್ಟಾ ಆಗುವಷ್ಟು.!

ಹಾಗೇ ಒಂದು ನಿಮಿಷ ಈ ಬಗ್ಗೆ ಯೋಚಿಸಿ .ನಿಮ್ಮ ಬಗೆಗೆ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ, ನಿಮ್ಮ ವ್ಯಕ್ತಿತ್ವದ ಬಗ್ಗೆ ಅಪಪ್ರಚಾರ ಮಾಡಿ, ನಿಮ್ಮ ಮುಖಕ್ಕೆ ಮಸಿ ಬಳಿಯುವ ಅಥವಾ ಚಾರಿತ್ರ್ಯವಧೆ ಮಾಡುವ ಮೂಲಕ ನಿಮ್ಮ ಬದುಕನ್ನೇ ನಾಶ ಮಾಡುವ ಪ್ರಯತ್ನ ಎಂದಾದರೂ ನಡೆದಿದೆಯಾ….? ನಡೆದಿದ್ದರೆ ಅದು ಯಾರಿಂದ ? ಹೇಗೆ.. ಯಾವ ರೀತಿ ? ಅಂತಹ ಸಂಧರ್ಭಗಳನ್ನು ಹೇಗೆ ಎದುರಿಸಬೇಕು ? ಕೇವಲ ಸುಳ್ಳುಗಳನ್ನು ಹರಡಿ ನಮ್ಮ‌ ವ್ಯಕ್ತಿತ್ವಹರಣ ಮಾಡುವ ಅಯೋಗ್ಯರನ್ನು ಹೇಗೆ ತರಾಟೆಗೆ ತೆಗೆದುಕೊಳ್ಳಬೇಕು..?

ಇವೇ ಮುಂತಾದ ಕೆಲವೊಂದು ವಿಚಾರಗಳು ಒಮ್ಮೊಮ್ಮೆ ನಿಮ್ಮ ತಲೆಕೆಡಿಸಿ ಗೊಬ್ಬರ ಮಾಡಿಬಿಡುತ್ತವೆಯಲ್ಲವೇ ?

ನಿಮ್ಮದೇನೂ ತಪ್ಪಿಲ್ಲದಿದ್ದರೂ , ನೀವು ಯಾರೊಬ್ಬರ ತಂಟೆಗೆ ಹೋಗದೇ ಇದ್ದರೂ, ಯಾರಿಗೇನು ಅನ್ಯಾಯ ಮಾಡದೇ ಇದ್ದರೂ, ಇತರರಿಗೆ ಕೇಡು ಬಯಸದೇ ಇದ್ದರೂ .. ಒಟ್ಟಾರೆ ನೀವೇನೇ ಒಳ್ಳೆಯ ಕೆಲಸ ಮಾಡಿದರೂ ನಿಷ್ಕಾರಣವಾಗಿ ಒಬ್ಬರ ಬಾಯಿಂದ ಅಪಪ್ರಚಾರಕ್ಕೆ ಆಹಾರವಾಗುವ ಸೀನುಗಳಿವೆಯಲ್ಲಾ ಅವು ಜೀವನದಲ್ಲಿ ಸಾಕಷ್ಟು ನೋವು ತಂದೊಡ್ಡುವ ಸಂಧರ್ಭಗಳು.

ಇಂತಹ‌ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ಬಾರಿ ಆಗಿರಬಲ್ಲದು ಅಥವಾ ಇನ್ನೂ ಆಗಿಲ್ಲವೆಂದರೆ ಮುಂದೊಂದು‌ ದಿನ‌ ತಪ್ಪದೇ ಆಗುವುದಂತೂ ಗ್ಯಾರಂಟೀ , ಡೋಂಟ್ ವರೀ ! ಏಕೆಂದರೆ ನಾವಿರುವ ಇಂದಿನ ಜಗತ್ತಿನಲ್ಲಿ ಸವಿಯಾದ ಸುಳ್ಳುಗಳನ್ನು ಹೇಳಿಕೊಂಡೇ ತಮ್ಮ ಬದುಕು ಕಟ್ಟಿಕೊಂಡಿರುವ ಸಾಫ಼್ಟ್ ಮುಖವಾಡದ ವರ್ಸ್ಟ್ ಕಿರಾತಕರೇ ಹೆಚ್ಚು ! ಅಂಥವರ ಬಾಯಿಗೆ ಬೀಳದಿರುವವರೇ ಕಡಿಮೆ.

ಹೀಗೆ ಎಲ್ಲೆಡೆ ನಿಮ್ಮ ಬಗ್ಗೆ ಸುಳ್ಳುಸುದ್ದಿ ಹರಡಿ ನಿಮ್ಮ ಹೆಸರು ಕೆಡಿಸುವ ಊಸರವಳ್ಳಿಗಳ, ನಯವಂಚಕರ ಹಾಗೂ ನರಾಸತ್ ನಾಮರ್ದರ ದುರುದ್ದೇಶಗಳೇನೆಂಬುದು ನಿಮ್ಮ ಊಹೆಗೂ ನಿಲುಕದು ! ಏಕೆಂದರೆ ಇಂಥವರು ಅಕ್ಕಪಕ್ಕದಲ್ಲೇ ಇದ್ದರೂ ಅದು ನಿಮಗೆ ಅರ್ಥವಾಗದು. ಸಿಂಪಲ್ಲಾಗಿ ಹೇಳೋದಾದರೆ ನೀವು ಜೀವನದಲ್ಲಿ ಚೆನ್ನಾಗಿದ್ದಷ್ಟೂ ಈ ತರಹದವರ ಕಾಟ ಜಾಸ್ತೀನೇ !

ಹೀಗೆ ಸುಳ್ಳು ಹೇಳಿ ಹೆಸರು ಕೆಡಿಸುವವರ ಉದ್ದೇಶಗಳು, ತಂತ್ರ-ಕುತಂತ್ರಗಳು ಅಥವಾ ಯೋಜನೆಗಳು ಒಬ್ಬೊಬ್ಬರ ಕೇಸಿನಲ್ಲಿ ಒಂದೊಂದು ರೀತಿ ಇದ್ದರೂ ಅವರ ಒಟ್ಟಾರೆ ಕೃತ್ಯದ ಹಿಂದೆ ಮುಖ್ಯವಾಗಿ ಅಸೂಯೆ, ದ್ವೇಷ, ಮತ್ಸರ,‌ ಕೀಳರಿಮೆ ಹಾಗೂ ಅಪ್ಪಟ ಸ್ವಾರ್ಥಗಳಷ್ಟೇ ಇರಲಿಕ್ಕೆ ಸಾಧ್ಯ .

ವಿಪರ್ಯಾಸವೆಂದರೆ “ಸತ್ಯ” ವೆಂಬುದು ಇನ್ನೂ ಮನೆ ಕದ ತೆರೆದು ಹೊರಗೆ ಹೆಜ್ಜೆ ಇಡುವುದರೊಳಗಾಗಿ ಸುಳ್ಳೆಂಬುದು ಇಡೀ ಜಗತ್ತನ್ನೇ ಸುತ್ತಿಬರುವ ಇಂದಿನ ಕಾಲಘಟ್ಟದಲ್ಲಿ ಅಂತಹಾ ಕಿಡಿಗೇಡಿಗಳ ಸುಳ್ಳುಗಳೇ ಬಹುಬೇಗ ಪ್ರಿಯವಾಗುವುದು.

ಯಾರ ಹಂಗಿಲ್ಲದೇ ತನ್ನ ಕಾಲ ಮೇಲೆ ತಾನು ನಿಂತು ದುಡಿದು ಉಣ್ಣುವವರು, ಛಲದಿಂದ ಏನಾದರೊಂದು ಸಾಧನೆ ಮಾಡಿ ಜೀವನದಲ್ಲಿ ಮೇಲೆ ಬರುವವರು, ಅಪ್ಪಟ ಸ್ವಾಭಿಮಾನಿಗಳು, ನೇರವಂತಿಕೆಯುಳ್ಳವರು, ಗುಲಾಮಗಿರಿಗೆ ಒಗ್ಗದವರು, ಮೌನಿಗಳು, ಅಪಾರ ತಾಳ್ಮೆಯುಳ್ಳವರು, ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವವರು, ಕಷ್ಟಪಟ್ಟು ದುಡಿದು ಚೆನ್ನಾಗಿ ಸಂಪಾದಿಸಿರುವವರು, ವೃತ್ತಿಯಲ್ಲಿ ಸಾಧನೆ ಮಾಡಿ ಉನ್ನತ ಹಂತಕ್ಕೇರಿದವರು…..ಇವೇ ಮೊದಲಾದ ವರ್ಗದಲ್ಲಿ ನೀವಿದ್ದಲ್ಲಿ, ಮೈಂಡ್ ಯೂ… ಇತರರ ಸುಳ್ಳುಗಳ ಬಾಯಿಗೆ ಬಹುಬೇಗ ಟಾರ್ಗೆಟ್ ಆಗುವವರು ನೀವಾಗಿರುತ್ತೀರಿ.

ಈ ರೀತಿಯ ಸುಳ್ಳು ಆರೋಪಗಳನ್ನು ಎದುರಿಸುವುದು ಅವರವರ ವೈಯಕ್ತಿಕ ಸ್ವಭಾವಕ್ಕೆ ಸಂಬಂಧಿಸಿದ ವಿಚಾರ. ಸುಳ್ಳು ಹೇಳಿದವರು ಇಂಥವರೆಂದು ಗೊತ್ತಾದರೆ ಅವರನ್ನೇ ನೇರ ತರಾಟೆಗೆ ತೆಗೆದುಕೊಳ್ಳಬಹುದು, ಕೊಚ್ಚೆ ಮೇಲೇಕೆ ಕಲ್ಲು ಎಂದು ಸುಮ್ಮನಾಗಲೂ ಬಹುದು, ಸ್ವಲ್ಪ ಕಾಲ ತಾಳ್ಮೆಯಿಂದ ಇರಲೂ ಬಹುದು. ಬಹಳಷ್ಟು ಮಂದಿಯ ಆಯ್ಕೆಯೆಂದರೆ ” ಅವರು ಮಾಡಿದ ಕರ್ಮ ಅವರೇ ಅನುಭವಿಸುತ್ತಾರೆ” ಎಂಬ ಸ್ವಯಂ ಸಮಾಧಾನದಿಂದ ಮೌನವಹಿಸುವುದು !

ಒಂದು ವಿಷಯ ಚೆನ್ನಾಗಿ ನೆನಪಿರಲಿ. ಕೆಲವರ ಸುಳ್ಳುಗಳು ನಿಮ್ಮ ವ್ಯಕ್ತಿತ್ವ ಹಾಗೂ ಬದುಕಿನ ಸ್ವರೂಪವನ್ನೇ‌ ಬದಲಾಯಿಸುವಂತಿದ್ದಲ್ಲಿ, ತಕ್ಷಣವೇ ಆ ಬಗ್ಗೆ ಗಂಭೀರವಾಗಿ ಗಮನಹರಿಸಿ ಹತ್ತಿಕ್ಕುವುದು ಒಳ್ಳೆಯದು. ಏಕೆಂದರೆ ಈ ಸಮಾಜ ನಿಮ್ಮ ಧೀರ್ಘ ಮೌನವನ್ನು, ಅಸಹಾಯಕತೆಯನ್ನೂ ದೌರ್ಬಲ್ಯವೆಂದೇ ಭಾವಿಸುವ ಅಪಾಯವೇ ಹೆಚ್ಚು. ಅದನ್ನು ಬಿಟ್ಟರೆ, ಸ್ವತಃ ವೈಯಕ್ತಿಕ ಮೌಲ್ಯವಿಲ್ಲದ ಕೆಲವು ಬಾಯಿಹರುಕರು ನಾಲಿಗೆ ಚಪಲಕ್ಕಾಗಿ ಹರಡುವ ಅಪಪ್ರಚಾರಗಳಿಂದ ತಾತ್ಕಾಲಿಕ ಹಿನ್ನಡೆಯಾಗಿ ನೋವುಂಟಾದರೂ ಅಂತಿಮವಾಗಿ ಅದನ್ನು ನಿರ್ಲ್ಯಕ್ಷಿಸುವುದೇ ಒಳ್ಳೆಯದು.

ನೆನಪಿಡಿ. ಎಲ್ಲಿಯವರೆಗೆ ಜೀವನದಲ್ಲಿ ನೀವಿಡುವ ಹೆಜ್ಜೆ ಸರಿಯಾದ ಹಾದಿಯಲ್ಲಿರುತ್ತದೆಯೋ, ಎಲ್ಲಿಯವರೆಗೆ ನಿಮ್ಮೊಳಗಿನ ಸ್ವಾಭಿಮಾನ, ನಿಯತ್ತು, ನಿಷ್ಠೆ ಹಾಗೂ ಶುದ್ಧ ಪ್ರಾಮಾಣಿಕತೆಗಳು ಅಕ್ಷರಶಃ ಸದಾ ಬೆಳಗುತ್ತಲೇ ಇರುತ್ತವೆಯೋ…. ಅಲ್ಲಿಯವರೆಗೆ ಯಾರ ಸುಳ್ಳುಗಳಿಗೂ, ಎಂತಹ ಸಂಧರ್ಭಗಳಿಗೂ ತಲೆ ಕೆಡಿಸಿಕೊಳ್ಳುವ ದರ್ದು ಬಾರದು.

ಏಕೆಂದರೆ ಇದು ” ಸತ್ಯಮೇವ ಜಯತೆ” ಯ ನಾಡು..

  • ಮರೆಯುವ ಮುನ್ನ

ಅಸಲಿಗೆ ಕರ್ಮ ಏನು ಗೊತ್ತಾ ?

ನೀವು ಮಾಡಿರಬಹುದಾದ ಒಳ್ಳೆಯ ಕೆಲಸಗಳಿಗೆ ಪ್ರತಿಫಲ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ.ಇದನ್ನು ಓದಿ –ಸುಬ್ರಹ್ಮಣ್ಯ ಷಷ್ಠಿ

ಆದರೆ , ನೀವು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದರಿಂದ ಒಬ್ಬರ ಜೀವನವನ್ನು ನಾಶ ಮಾಡಿದಲ್ಲಿ ಅಥವಾ ಹಾಳು ಮಾಡಲು ಪ್ರಯತ್ನಿಸಿದಲ್ಲಿ ಅದು ಸಾಲವಾಗಿ ನಿಮಗೇ ತಿರುಗಿ ಬರುತ್ತದೆ. ಅಷ್ಟೇ ಅಲ್ಲ….ನೆನಪಿಡಿ, ಆ ಸಾಲವನ್ನು ನೀವು ಚಕ್ರಬಡ್ಡಿ ಸಹಿತ ವಾಪಾಸು ಮಾಡಲೇ ಬೇಕಾಗುತ್ತದೆ.

ಇದನ್ನೇ ” ಕರ್ಮ ರಿಟರ್ನ್ಸ್ “….. ಎನ್ನುವರೇನೋ..?

HIRIYURU PRAKASH

ಹಿರಿಯೂರು ಪ್ರಕಾಶ್.

Copyright © All rights reserved Newsnap | Newsever by AF themes.
error: Content is protected !!