December 27, 2024

Newsnap Kannada

The World at your finger tips!

eshwar khandre karnataka minister

ಅರಣ್ಯ-ಕಂದಾಯ ಭೂಮಿ ಸಮಸ್ಯೆ ನಿವಾರಣೆಗೆ ಜಂಟಿ ಸರ್ವೇ- ಸಚಿವ ಖಂಡ್ರೆ

Spread the love

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗಳ ಪರಿಹಾರಕ್ಕೆ ಜಂಟಿ ಸರ್ವೆಯ ಮಾಡಿಸಲಾಗುವುದು. ಅಲ್ಲದೇ ಪರಿಭಾವಿತ ಅರಣ್ಯ ಎಂದು ಘೋಷಿಸಲಾಗಿರುವ ಸರ್ವೆ ನಂಬರ್ ಮತ್ತು ಲಭ್ಯ ನಕ್ಷೆಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಜಿಲ್ಲೆಯ ಶಾಸಕರುಗಳೊಂದಿಗೆ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದ ಖಂಡ್ರೆ ಅವರು, ಪರಿಭಾವಿತ (ಡೀಮ್ಡ್)ಅರಣ್ಯದ ವಿಚಾರದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. 3.3 ಲಕ್ಷಕ್ಕೂ ಹೆಚ್ಚು ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಅಂತಿಮಗೊಳಿಸಲಾಗಿದೆ.

ಇದರಲ್ಲೂ ಕೆಲವು ಪಟ್ಟಾ ಭೂಮಿ ಇದೆ, ಶಾಲೆ ಇದೆ ಎಂದು ಹೇಳಲಾಗುತ್ತಿದ್ದು, ಈಗ ಪ್ರತಿ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ಮಾಡಿಸಿದಲ್ಲಿ ಎಲ್ಲಾ ಮಾಹಿತಿಯನ್ನೂ ಕ್ರೋಡೀಕರಿಸಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಬಹುದು. ಆಗ ಮಾತ್ರ ಈ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.

ಡೀಮ್ಡ್ 1 ಎಂದು ಘೋಷಿಸಲಾಗಿದ್ದನ್ನು ಈಗಾಗಲೇ ಕೈಬಿಡಲಾಗಿದೆ. ಡೀಮ್ಡ್ 2 ಎಂದು ಘೋಷಿಸಿರುವುದು ಅಂತಿಮವಾಗಿದ್ದು, ಇದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಲಾಗುವುದು, ಜಂಟಿ ಸಮೀಕ್ಷೆ ಪೂರ್ಣವಾಗುವವರೆಗೆ 4(1) ಪ್ರಕ್ರಿಯೆ ನಡೆಸದಂತೆ ಸೂಚಿಸುವುದಾಗಿ ಚಿಕ್ಕಮಗಳೂರು ಭಾಗದ ಶಾಸಕರುಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಕಾಡಾನೆ ಸಮಸ್ಯೆಗೂ ಪರಿಹಾರ:

ಮಳೆ ಕೊರತೆಯಿಂದ ಕಾಡಾನೆಗಳ ಹಾವಳಿಯೂ ಹೆಚ್ಚಳವಾಗುತ್ತಿದ್ದು, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಇದಕ್ಕೆ ಸೂಕ್ತ ಪರಿಹಾರ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದರು.

ಚಿಕ್ಕಮಗಳೂರು ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಪುಂಡಾನೆಯನ್ನು ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.ಚೆಕ್‍ ಮೂಲಕ 3.5 ಲಕ್ಷ ರು ಲಂಚ ಸ್ವೀಕಾರ – ಲೋಕಾ ಬಲೆಗೆ ಅಧಿಕಾರಿ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿ, ಒಂದು ವಾರದೊಳಗೆ ಪರಿಭಾವಿತ ಅರಣ್ಯ, ಮೀಸಲು ಅರಣ್ಯದ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗುವುದು. ಈಗ ಅತ್ಯಾಧುನಿಕ ಡ್ರೋನ್ ನಂತಹ ಸಲಕರಣೆ ಇದ್ದು, ಜಂಟಿ ಸರ್ವೆಯನ್ನು ಮಾಡಲು ಸಹಕರಿಸಲಾಗುವುದು ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!