- ಮಾಧ್ಯಮದವರಿಗೆ ನಿರ್ಬಂಧ
- ಅನುಮಾನಾಸ್ಪದವಾದ ಅಧಿಕಾರಿಗಳ ನಡೆ
ಪಾಂಡವಪುರ ತಾಲೂಕಿನ ಬೇಬಿಬೆಟ್ಟಕ್ಕೆ ಜಾರ್ಖಂಡ್‌ನಿಂದ ಆಗಮಿಸಿದ್ದ ಸಿಎಸ್‌ಐಆರ್ – ಸಿಐಎಂಎಫ್‌ಆರ್ ಹಿರಿಯ ವಿಜ್ಞಾನಿ ಹಾಗೂ ತಂತ್ರಜ್ಞರು ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಸ್ಫೋಟದಿಂದ ಉಂಟಾಗುವ ಕಂಪನದಿಂದ ಕೆಆರ್‌ಎಸ್‌ಗೆ ಅಪಾಯ ಕುರಿತಾದ ಬಗ್ಗೆ ಬುಧವಾರ ಪರಿಶೀಲನೆ ನಡೆಸಿದರು.
ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತಲ್ಲಿನ ಪ್ರದೇಶಗಳಾದ ಬನ್ನಂಗಾಡಿ, ಬೇಬಿಬೆಟ್ಟದ ಕ್ವಾರಿಗಳು, ಕ್ರಷರ್‌ಗಳ ಪ್ರದೇಶಕ್ಕೆ ತೆರಳಿ ಜಾರ್ಖಂಡ್‌ನಿಂದ ಆಗಮಿಸಿದ್ದ ಸಿಎಸ್‌ಐಆರ್ – ಸಿಐಎಂಎಫ್‌ಆರ್ ಹಿರಿಯ ವಿಜ್ಞಾನಿ ಡಾ.ಸಿ.ಸೋಮಾಲೀನ, ಹಿರಿಯ ತಂತ್ರಜ್ಞ ರಾಕೇಶ್ ಕುಮಾರ್‌ಸಿಂಗ್ ಅವರು ಮಧ್ಯಾಹ್ನದವರೆಗೂ ಪರಿಶೀಲಿಸಿದರು.
ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಕಲ್ಲು ಸ್ಫೋಟದಿಂದ ಕೆಆರ್‌ಎಸ್‌ಗೆ ಅಪಾಯ ಎದುರಾಗಲಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಾರ್ಖಂಡ್‌ನಿಂದ ಕರೆಸಿದ್ದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ವಿಜಯ್‌ಕುಮಾರ್, ಕಾರ್ಯಪಾಲಕ ಅಭಿಯಂತರ ಎಂ.ಬಿ.ರಾಜು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪ, ಉಪವಿಭಾಗಾಧಿ ಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್ ಮತ್ತಿತರರು ಪೊಲೀಸ್ ಅಧಿಕಾರಿಗಳೊಂದಿಗೆ ತೆರಳಿ ಕ್ರಷರ್‌ಗಳು ಹಾಗೂ ಕಲ್ಲು ಕ್ವಾರಿಗಳನ್ನು ಪರಿಶೀಲಿಸಿದರು.
ಬುಧವಾರ ಬೆಳಿಗ್ಗೆ ಕೆಆರ್‌ಎಸ್‌ನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಜಾರ್ಖಂಡ್‌ನ ತಂತ್ರಜ್ಞರು, ಬಳಿಕ ಕೆಆರ್‌ಎಸ್ ಆಣೆಕಟ್ಟೆಯ ಎಡಭಾಗದಲ್ಲಿರುವ ಬನ್ನಂಗಾಡಿ ಅಕ್ಕಪಕ್ಕದಲ್ಲಿರುವ ಕಲ್ಲು ಕ್ವಾರಿಗಳಿಗೆ ತೆರಳಿ ವೀಕ್ಷಣೆ ನಡೆಸಿ, ನಂತರ ಅದೇ ಮಾರ್ಗವಾಗಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಸ್ಟೋನ್ ಕ್ರಷರ್‌ಗಳು ಹಾಗೂ ಐದಾರು ಕಲ್ಲು ಕ್ವಾರಿಗಳ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗಣಿಗಾರಿಕೆ ನಡೆಸಿ ಕೊರೆದಿದ್ದ ಬೃಹತ್ ಕಂದಕಗಳನ್ನು ಪರಿಶೀಲಿಸಿದರು.
ಮಾಧ್ಯಮದವರಿಗೆ ನಿರ್ಬಂಧ:
ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಫೋಟದ ಅಪಾಯದ ಬಗ್ಗೆ ಪರಿಶೀಲಿಸಿ ವರದಿ ನೀಡಲು ಆಗಮಿಸಿದ್ದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳನ್ನು ನಿರ್ಬಂಧಿಸಿದ್ದರು.
ಜಾರ್ಖಂಡ್‌ನಿಂದ ಆಗಮಿಸಿದ್ದ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಸ್ಥಳಕ್ಕೆ ಮಾಧ್ಯಮದವರನ್ನು ನಿರ್ಬಂಧಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಾಧ್ಯಮ ಪ್ರತಿನಿಧಿಗಳು ಫೋಟೋ, ವಿಡಿಯೋ ಚಿತ್ರಿಕರಣ ನಡೆಸಲು ಮುಂದಾದಾಗ ಕಾವೇರಿ ನೀರಾವರಿ ನಿಗಮದ ಎಇ ಎಂ.ಬಿ.ರಾಜು ಹಾಗೂ ಸಿಪಿಐ ಪ್ರಭಾಕರ್, ಎಸ್‌ಐ ಅವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ವೀಡಿಯೂ ಚಿತ್ರೀಕರಣ, ಫೋಟೋಗಳನ್ನು ತೆಗೆಯಬೇಡಿ ಎಂದು ಅಡ್ಡಿಪಡಿಸಿ ಮಾಧ್ಯಮದವರನ್ನು ಅಲ್ಲಿಂದ ಹೊರಗಟ್ಟಿದರು.
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ