November 23, 2024

Newsnap Kannada

The World at your finger tips!

koushly

ಗ್ರಾಮ ಮಟ್ಟದ ಪುಸ್ತಕ ಬರಹಗಾರರ ಗೌರವ ಧನ ನೇರ ಖಾತೆಗೆ ಜಮೆ – ಅಶ್ವತ್ಥ ನಾರಾಯಣ ‌

Spread the love
  • ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟ

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಪ್ರಧಾನ ಪುಸ್ತಕ ಬರಹಗಾರರಾಗಿ (ಎಂಬಿಕೆ) ಕೆಲಸ ಮಾಡುತ್ತಿರುವ ಎಲ್ಲರಿಗೂ ಗೌರವ ಧನವನ್ನು ಇನ್ನು ಮುಂದೆ ಅವರ ಬ್ಯಾಂಕ್ ಖಾತೆಗೇ ನೆರವಾಗಿ ಜಮೆ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಂಗಲ್ ಕೊಪ್ಪಲು ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಗುಂಪುಗಳ ಮಹಿಳೆಯರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿ ಬಂದ ದೂರಿಗೆ ಪ್ರತಿಯಾಗಿ ಸಚಿವರು ಈ ಸಂಗತಿ ಪ್ರಕಟಿಸಿದರು.

ಪ್ರಧಾನ ಪುಸ್ತಕ ಬರಹಗಾರರಿಗೆ ಮಾಸಿಕ 5,000 ರೂ. ಗೌರವಧನ ನೀಡಲಾಗುತ್ತಿದ್ದು, ಅದನ್ನು ಸಕಾಲಕ್ಕೆ ನೀಡುತ್ತಿಲ್ಲ ಹಾಗೂ ಅನೇಕ ತಿಂಗಳಾದರೂ ಈ ಮೊತ್ತ ನಮ್ಮ ಕೈಗೆ ಸಿಗುವುದಿಲ್ಲ ಎಂದು ಸದಸ್ಯೆಯರು ಸಚಿವರಲ್ಲಿ ದೂರಿದರು.

ಸ್ಥಳದಲ್ಲೇ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಶ್ವತ್ಥನಾರಾಯಣ ಅವರು, ಈ ತಿಂಗಳಿಂದಲೇ ಸಾರ್ವಜನಿಕ ನಿಧಿ ನಿರ್ವಹಣಾ ವ್ಯವಸ್ಥೆ ಅಡಿ ಆನ್ ಲೈನ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ, ಪಾರದರ್ಶಕವಾಗಿ ಮೂರನೆಯವರ ಪ್ರಮೇಯ ಇಲ್ಲದೇ ಗೌರವ ಧನ ಜಮೆ ಆಗುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇಲಾಖೆ ಅಧಿಕಾರಿಗಳ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಡಿಸಿದ ಸಚಿವರು, ಈ ಬಗ್ಗೆ ಕೂಡಲೇ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ವಹಿಸುವೆ. ಇನ್ನು ಮುಂದೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಸಮುದಾಯ ಬಂಡವಾಳ ನಿಧಿ ಹೆಚ್ಚಳಕ್ಕೂ ಕ್ರಮ:

ಸಂಜೀವಿನಿ ಘಟಕಗಳಿಗೆ ನೀಡಲಾಗುತ್ತಿರುವ ಸಮುದಾಯ ಬಂಡವಾಳ ನಿಧಿ ಹೆಚ್ಚಳ ಮಾಡುವಂತೆಯೂ ಸ್ವ ಸಹಾಯ ಗುಂಪುಗಳ ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಈ ಬಗ್ಗೆ ಅನುದಾನದ ಪ್ರಮಾಣ ನೋಡಿಕೊಂಡು ಕ್ರಮ ವಹಿಸಲಾಗುವುದು. ಅಗತ್ಯಬಿದ್ದರೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಹೆಚ್ಚಿನ ಅನುದಾನ ಕೋರಲಾಗುವುದು. ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಹೇಳಿದರು.

ಮಹಿಳೆಯರ ಸಾಧನೆ ಬಗ್ಗೆ ಮೆಚ್ಚುಗೆ:

ಕೆಂಗಲ್ ಕೊಪ್ಪಲು ಗ್ರಾಮದ ಶ್ರೀ ಮೂಕಾಂಬಿಕಾ ಸ್ತ್ರೀಶಕ್ತಿ ಸ್ವಹಾಯ ಗುಂಪಿನ  ಮಹಿಳೆಯರು ಎಳನೀರು ಸಂಸ್ಕರಿಸಿ, ಅವುಗಳನ್ನು ಅತ್ಯುತ್ತಮವಾಗಿ ಪ್ಯಾಕ್ ಮಾಡಿ ದೊಡ್ಡ ದೊಡ್ಡ ಆಹಾರೋತ್ಪನ್ನ ಕಂಪನಿಗಳಿಗೆ ಪೂರೈಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದೆಲ್ಲವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಸಚಿವರು ಮಹಿಳೆಯರ ಉದ್ಯಮಶೀಲತೆ ಕಣ್ಣಾರೆ ಕಂಡು ಮೆಚ್ಚಿಕೊಂಡರು.

ಈ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸ್ವಂತ ಬಂಡವಾಳ ಹೂಡುವುದರ ಜತೆಗೆ, ಸಂಜೀವಿನಿ ಸಹಕಾರದಿಂದ ಸಮುದಾಯ ಬಂಡವಾಳ ನಿಧಿಯನ್ನೂ ಪಡೆದಿದ್ದಾರೆ. ಬ್ಯಾಂಕ್ ಮತ್ತು ಆಂತರಿಕ ಸಾಲವೂ ಸೇರಿ ಒಟ್ಟು 17 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಎಳನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಎಲ್ಲರೂ ಸಹಕಾರ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಇದು ಮಹಿಳೆಯರ ಉದ್ಯಮಶೀಲತೆಗೆ ಅತ್ಯುತ್ತಮ ಉದಾಹರಣೆ ಎಂದು ಡಾ.ಅಶ್ವತ್ಥನಾರಾಯಣ ಅವರು ಶ್ಲಾಘಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಬಿಜೆಪಿ‌ ಮುಖಂಡರೂ ಆದ ರೈತ ನಾಯಕ ನಂಜುಂಡೇಗೌಡ ಇದ್ದರು.

Copyright © All rights reserved Newsnap | Newsever by AF themes.
error: Content is protected !!