ಆರ್ ಸಿಬಿ ಐಪಿಎಲ್ ನ ಕಳೆದ ೧೨ ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ನತದೃಷ್ಟ ತಂಡ. ಈ ಬಾರಿ ಕಪ್ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ತಂಡ ಭರ್ಜರಿ ತಾಲೀಮು ನಡೆಸುತ್ತಿದೆ. ಅದರಲ್ಲೂ ಟೀಮ್ ಇಂಡಿಯಾದ ‘ಭವಿಷ್ಯದ ಓಪನರ್’ ಎಂದು ಕ್ರಿಕೆಟ್ ಪಂಡಿತರು ಬಣ್ಣಿಸುತ್ತಿರುವ ಯುವಕ್ರಿಕೆಟಿಗನೊಬ್ಬನಿಗೆ ಪ್ಲೇಯಿಂಗ್ ಇಲವೆನ್ ನಲ್ಲಿ ಸ್ಥಾನ ಸಿಕ್ಕುತ್ತದೆಯೇ? ಸಿಕ್ಕರೂ ಆತ ಯಾವ ಕ್ರಮಾಂಕದಲ್ಲಿ ಆಡುತ್ತಾನೆ ಎಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ದೇವದತ್ ಪಡಿಕ್ಕಲ್… ಕಳೆದ ವರ್ಷಗಳಿಂದ ರಾಜ್ಯ ಕ್ರಿಕೆಟ್ ತಂಡವನ್ನು ಹಿಂಬಾಲಿಸುತ್ತಿರುವವರಿಗೆ ಈ ಎಡಗೈ ದಾಂಡಿಗನ ಬಗ್ಗೆ ತಿಳಿದೇ ಇರುತ್ತದೆ. ಈತ ರಾಜ್ಯ ತಂಡದಲ್ಲಿ ಅಕ್ಷರಶಃ ಬಿರುಗಾಳಿಯಂತೆ ಅಬ್ಬರಿಸುತ್ತಿದ್ದಾನೆ. ಕ್ರಿಕೆಟ್ಟಿನ ಎಲ್ಲಾ ಹೊಡೆತಗಳನ್ನು ಈತ ಪ್ರಯೋಗಿಸಬಲ್ಲ. ಮನಮೋಹಕ ಕವರ್ ಡ್ರೈವ್, ಲೀಲಾಜಾಲ ಪಿಕಪ್ ಶಾಟ್ ಗಳು, ಶಕ್ತಿಶಾಲಿ ಫುಲ್ ಶಾಟ್ ಗಳು ಈತನ ಬತ್ತಳಿಕೆಯಲ್ಲಿವೆ.
ಕಳೆದ ವರ್ಷದ ಸೈಯ್ಯದ್ ಮುಷ್ತಾಕ್ ಅಲಿ ಟಿ.೨೦ ಟ್ರೋಫಿಯಲ್ಲಿ ಕರ್ನಾಟಕ ಪರ ಪಾದರ್ಪಣೆ ಮಾಡಿದ್ದ ೨೯ ವರ್ಷದ ಆಟಗಾರ ಕೇವಲ ೧೨ ಪಂದ್ಯಗಳಲ್ಲಿ ೬೪.೪೪ ಆವರೇಜ್ ನಲ್ಲಿ ೫೮೦ ರನ್ ಗಳಿಸಿದ್ದರು. ಆ ಪಂದ್ಯಾವಳಿಯಲ್ಲಿ ಆತನ ಸ್ಟೈಕ್ ರೇಟ್ ೧೭೫.೭೫!
ವಿಜಯ್ ಹಜಾರೆ ಏಕದಿನ ಪಂದ್ಯಾವಳಿಯಲ್ಲಿಯೂ ಅಬ್ಬರಿಸಿದ್ದ ದೇವದತ್ ೧೧ ಪಂದ್ಯಗಳಲ್ಲಿ ೨ ಶತಕ, ೫ ಅರ್ಧಶತಕ ಸೇರಿದಂತೆ ೬೦೯ ರನ್ ಗುಡ್ಡೆಹಾಕಿ ಪಂದ್ಯಾವಳಿಯ ಗರಿಷ್ಟ ರನ್ ಸರದಾರನಾಗಿದ್ದರು.
ಯುವ ಆಟಗಾರನನ್ನು ಸಮರ್ಥವಾಗಿ ಬಳಸಿಕೊಳ್ಳುವುದೇ ಆರ್ ಸಿಬಿ ?:
ಆರ್ ಸಿ ಬಿ ಬ್ಯಾಟಿಂಗ್ ವಿಭಾಗ ಈ ಬಾರಿ ಬಲಿಷ್ಟವಾಗಿ ಕಾಣುತ್ತಿದೆ. ಫಿಂಚ್ ಹಾಗೂ ಪಾರ್ಥೀವ್ ಪಟೇಲ್ ಓಪನರ್ ಸ್ಥಾನದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಆರ್ಸಿಬಿ ಯುವ ಆಟಗಾರನನ್ನು ೧- ೫ ನೇ ಕ್ರಮಾಂಕದಲ್ಲಿ ಎಲ್ಲಿಯಾದರೂ ಆಡಿಸಬಹುದು. ಆದರೆ ದೇವದತ್ ಪಂದ್ಯದ ಮೊದಲ ಎಸೆತದಿಂದಲೇ ಬೌಲರ್ ಗಳನ್ನು ದಂಡಿಸುವ ಸಾಮರ್ಥವುಳ್ಳ ಆಟಗಾರ. ಒಂದೊಮ್ಮೆ ದೇವದತ್ ಪವರ್ ಪ್ಲೇನಲ್ಲಿ ರನ್ ರೇಟ್ ಉತ್ತಮವಾಗಿಟ್ಟರೆ ನಂತರ ಬರುವ ಕೊಹ್ಲಿ, ಡಿ ವಿಲ್ಲಿಯರ್ಸ್ ನಿರಾತಂಕವಾಗಿ ಆಡಬಹುದು. ಅಲ್ಲದೇ ಅದೆಷ್ಟೋ ಪ್ರತಿಭಾವಂತ ಕ್ರಿಕೆಟಿಗರು ಕೆಳಕ್ರಮಾಂಕದಲ್ಲಿ ಆಡಿ ರನ್ ರೇಟ್ ಏರಿಸುವ ಒತ್ತಡವನ್ನು ಭರಿಸಲಾಗದೆ ವಿಫಲರಾಗಿರುವುದನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ದೇವದತ್ ಓಪನರ್ ಆಗಿ ಆಡುವುದು ಸೂಕ್ತ. ಆತ ಎಡಗೈ ಆಟಗಾರನಾಗಿರುವುದರಿಂದ ಬ್ಯಾಟಿಂಗ್ ವಿಭಾಗದಲ್ಲಿ ವೈವಿಧ್ಯತೆ ಇರಲಿದೆ. ಅಲ್ಲದೇ ಪಾರ್ಥೀವ್ ಅಬ್ಬರ ಪವರ್ ಪ್ಲೇಗೆ ಸೀಮಿತವಷ್ಟೇ, ಒಂದೊಮ್ಮೆ ಎಬಿಡಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳುವುದಾದರೆ ದೇವದತ್ ಫಿಂಚ್ ಜೊತೆಗೆ ಒಪನರ್ ಆಗಿ ಕಣಕ್ಕಿಳಿಯುವುದು ಖಚಿತ. ಈ ಬಗ್ಗೆ ಟೀಂ ಮ್ಯಾನೆಜ್ ಮೆಂಟ್ ನಲ್ಲಿ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಆರ್ಸಿಬಿಯಲ್ಲಿ ‘ಸ್ಥಳೀಯ’ ಆಟಗಾರ ಕೊನೆಯಬಾರಿ ಆಡಿದ್ದು ೨೦೧೭ ರಲ್ಲಿ(ಎಸ್.ಅರವಿಂದ್) ಈ ಬಾರಿ ದೇವದತ್ ಆಡಿದರೆ ಆರ್ ಸಿಬಿಗೆ ಸ್ಥಳೀಯ ಅಭಿಮಾನಿಗಳಿಂದ ಹೆಚ್ಚಿನ ಬೆಂಬಲವೂ ಸಿಗಲಿದೆ.
More Stories
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ