March 5, 2025

Newsnap Kannada

The World at your finger tips!

WhatsApp Image 2023 05 27 at 6.46.41 PM

ಕ್ಷಮೆಯಿರದ ತಪ್ಪುಗಳ ಚಕ್ರವ್ಯೂಹದೊಳಗೆ….

Spread the love

ಮನುಷ್ಯ ಅಂದಮೇಲೆ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಯಾವುದೋ ಒಂದು ತಪ್ಪನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುತ್ತಾರಲ್ಲವೇ ?

ತಾನು ಎಂದಿಗೂ ತಪ್ಪೇ ಮಾಡಿಲ್ಲವೆಂದು ಹೇಳಿಕೊಳ್ಳುವವರು ಬಹುಶಃ ಮನುಷ್ಯರಾಗಿರಲು ಸಾಧ್ಯವೇ ಇಲ್ಲವೆನ್ನುವಷ್ಟು “ತಪ್ಪು” ಎನ್ನುವುದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಹೆಜ್ಜೆ ಹೆಜ್ಜೆಯಲ್ಲಿಯೂ ಬೆರೆತು ಬಂದಿದೆ. ತಪ್ಪುಗಳಲ್ಲಿ ಕೆಲವು ದೊಡ್ಡ ತಪ್ಪುಗಳಾದರೆ ಮತ್ತೇ ಕೆಲವು ಚಿಕ್ಕಪುಟ್ಟ ತಪ್ಪುಗಳಾಗಿದ್ದಿರಬಹುದು. ಕೆಲವನ್ನು ತಪ್ಪೆಂದು ಗೊತ್ತಿದ್ದೂ ಮಾಡಿರುತ್ತೇವೆ ಮತ್ತೇ ಕೆಲವನ್ನು ಮಾಡಿದ ನಂತರ ಅದು ತಪ್ಪೆಂದು ಗೊತ್ತಾಗುತ್ತದೆ. ಅಂತೂ ಯಾರೇ ಆಗಿರಲಿ, ಎಂದಾದರೂ ಒಂದು ತಪ್ಪು ಮಾಡಿರೋದು ಮಾತ್ರ ಗ್ಯಾರಂಟಿ ! ತಪ್ಪುಗಳ ಗಾತ್ರ, ಆಕಾರ, ಪರಿಣಾಮ, ಪವರ್, ವಿಭಿನ್ನವಾಗಿದ್ದರೂ ತಪ್ಪು ತಪ್ಪೇ ಅಲ್ಲವೇ..?

ಕೆಲವರು ತಪ್ಪೆಂದು ತಿಳಿದಮೇಲೆ ಆ ಬಗ್ಗೆ ಅರಿತು ಕ್ಷಮೆಯಾಚಿಸಿದರೆ ಅಥವಾ ಪಶ್ಚಾತ್ತಾಪ ಪಟ್ಟು ಈ ರೀತಿಯ ತಪ್ಪುಗಳು ಮತ್ತೆಂದೂ ಆಗದಂತೆ ನೋಡಿಕೊಳ್ಳುವ ಪ್ರಬುದ್ಧತೆ ಮೆರೆದರೆ ಮತ್ತೇ ಕೆಲವರು ತಪ್ಪೆಂದು ತಿಳಿದೂ ತಿಳಿದೂ ಆ ಬಗ್ಗೆ ಎಂದಿಗೂ ಕ್ಷಮೆ ಕೋರುವುದಿರಲಿ ತಪ್ಪನ್ನೇ ಸರಿ ಎಂದೇ ವಾದಿಸುತ್ತಾರೆ. ಈ ಎಲ್ಲವೂ ಆಯಾ ವ್ಯಕ್ತಿಗಳ ಗುಣ ಸ್ವಭಾವ ಪರಿಸ್ಥಿತಿಗಳ ಮೇಲೆ ನಿಂತಿರುತ್ತದೆ.

ಒಂದೇ ಸಾಲಿನಲ್ಲಿ ಹೇಳುವುದಾದರೆ ತಪ್ಪು ಮಾಡದವ್ರು ಯಾರರ್ವ್ರೇ ?

ಆದರೆ ಸಧ್ಯ ನಾನೀಗ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುವ ವಿಷಯದ ಎಳೆ ಇದಲ್ಲ. ನೆನಪಿಡಿ , ಈ ಪ್ರಪಂಚದಲ್ಲಿ ಕ್ಷಮಿಸಲಾಗದ ತಪ್ಪುಗಳು ಅಂತಾನೂ ಇವೆಯಲ್ಲವೇ..? ಹಾಗಾದರೆ ಅವು ಯಾವುವು ? ಅಂತಹಾ ತಪ್ಪುಗಳನ್ನು ಮಾಡಿದವರಿಗೆ ಯಾವ ಶಿಕ್ಷೆ, ಪ್ರಾಯಶ್ಚಿತ್ತ ಇರಬಲ್ಲದು ? ಅಂತಹಾ ತಪ್ಪಿಗೆ ಕ್ಷಮೆಯೇ ಇಲ್ಲವೆಂದ ಮೇಲೆ ಜೀವನದಲ್ಲಿ ಅಂಥವರ ಪಾಡೇನು ? ಅವರಿಗೆ ತಿದ್ದಿಕೊಳ್ಳುವ ಅವಕಾಶವೂ ಇರೋಲ್ಲವೇ.? ಇವು ಸಧ್ಯಕ್ಕೆ ಕಾಡುತ್ತಿರುವ ಸಂದಿಗ್ಧತೆಯ ಸಂದೇಹಗಳು.

ಸಾಮಾನ್ಯವಾಗಿ ಒಂದು ತಪ್ಪಿಗೆ ಕ್ಷಮೆಯಿಲ್ಲವೆಂಬ ಅರಿವಿದ್ದೂ ಮಾಡಿರಬಹುದಾದ ಪ್ರಮಾದಗಳಿಗೆ ಪರಿಹಾರವೆಂಬುದು ಅಸಾಧ್ಯ ಸರಿ . ಆದರೆ ಅರಿಯದೇ ಆದಂತಹ, ಕ್ಷಮಿಸಲಾಗದಂತಹ ತಪ್ಪಿಗೆ ಯಾವ ರೀತಿಯ ಪರಿಹಾರ ಎಂಬ ಜಿಜ್ಞಾಸೆ ಕಾಡಲು ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ನಿಮ್ಮೊಂದಿಗೆ ಒಂದು ಚಿಕ್ಕ ಸ್ವಗತ/ ಸಂವಾದ…

ನಾನಿಲ್ಲಿ ಅಪರಾಧ ಹಿನ್ನೆಲೆಯಲ್ಲಿ ಮಾಡಿರಬಹುದಾದ ಕ್ಷಮಿಸಲಾಗದ ತಪ್ಪುಗಳ ಬಗೆಗೆ ಚರ್ಚಿಸಲು ಹೋಗೋಲ್ಲ. ಏಕೆಂದರೆ ಅದಕ್ಕಾಗಿ ಅಂತಾನೇ ಕಾನೂನು ಕಟ್ಟಳೆ ಅಂತೆಲ್ಲಾ ಇವೆ. ಅದಕ್ಕೆ ಕ್ಷಮೆಯಿದೆಯೋ ಇಲ್ಲವೋ ಅದನ್ನು ಕಾನೂನು ತೀರ್ಮಾನಿಸುತ್ತೆ. ಮೇಲಾಗಿ ಗಲ್ಲು ಶಿಕ್ಷೆಗೊಳಗಾದ ವ್ಯಕ್ತಿಗೂ ಕ್ಷಮಾದಾನ ನೀಡಬಹುದಾದ ಅವಕಾಶವನ್ನು ಕಾನೂನೇ ಕೊಟ್ಟಿರುವಾಗ ಆ ಬಗೆಗಿನ ವಿಸ್ತೃತ ಚರ್ಚೆಯನ್ನು ಸಧ್ಯದ ಟಾಪಿಕ್ಕಿಗೆ ಲಿಂಕ್ ಮಾಡುವುದು ಅಪ್ರಸ್ತುತ.

ಆದರೆ ಅಪರಾಧ ಸ್ವರೂಪಗಳಲ್ಲದೆಯೂ ಕೆಲವೊಂದು ಸಂಧರ್ಭಗಳಲ್ಲಿ ನಮ್ಮಿಂದ ಸಾಮಾನ್ಯ ಸ್ವರೂಪದ ಕೆಲ ಪ್ರಮಾದಗಳು, ಅವಗಢಗಳು, ತಪ್ಪುಗಳೂ ನಮ್ಮ ಕೈಮೀರಿಯೂ ಜರುಗಿರಬಲ್ಲವು ….ಅಲ್ಲವೇ ? ಅವು ನಮ್ಮೆಲ್ಲರ ಬದುಕಿನ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ನೇಹವಲಯದಲ್ಲಿ, ಉದ್ಯೋಗ ಮಾಡುವ ಸ್ಥಳಗಳಲ್ಲಿ, ಸಾರ್ವಜನಿಕ ಬದುಕಿನಲ್ಲಿ ಅಥವಾ ಇನ್ನಾವುದೇ ಸಂಬಂಧ- ಬಾಂಧವ್ಯಗಳಲ್ಲಿ ನಿರೀಕ್ಷಿತವಾಗಿಯೋ ಅಥವಾ ಅನಿರೀಕ್ಷಿತ ವಾಗಿಯೋ ಘಟಿಸಬಲ್ಲವು.

ವಿಪರ್ಯಾಸವೆಂದರೆ ಅಂತಹಾ ತಪ್ಪುಗಳ ಪರಿಣಾಮ ಎಷ್ಟು ಘೋರಾತಿಘೋರವೆಂದರೆ ಕೆಲವೊಂದರ ಪರಿಣಾಮ ಕೊಲೆಮಾಡಿದ್ದ ಕ್ಕಿಂತಲೂ ಹೆಚ್ಚು ಭಯಾನಕವಾಗಿದ್ದು ಮನಸನ್ನು ಹದ್ದಿನಂತೆ ಕಿತ್ತು ತಿನ್ನುತ್ತವೆ ಹಾಗೂ ನಮ್ಮಿಂದಾದ ಅಂತಹ ತಪ್ಪಿಗೆ ಕೊನೇ ಉಸಿರಿರುವ ತನಕವೂ ಅವು ಬೆಂಬಿಡದ ನೆರಳಾಗಿ ಕಾಡುತ್ತವೆ. ಈ ತರಹದ ತಪ್ಪುಗಳು ಯಾವ ಸ್ವರೂಪದ್ದಾದರೂ ಆಗಿರಬಹುದು. ಆ ಕ್ಷಣಕ್ಕೆ ಅದು ಅಂತಹಾ ತಪ್ಪೆನಿಸದಿರಬಹುದು. ತಮಾಷೆ ಎಂದರೆ ಕೆಲವು ಗೋಮುಖ ವ್ಯಾಘ್ರರಿಗೆ ಮಾಡಿದ ಸಹಾಯ, ಉಪಕಾರವೂ ಅಥವಾ ಅಂಥವರನ್ನು ನಮ್ಮ ಅಮಾಯಕತನದಿಂದಲೋ, ಮುಠಾಳತನ ದಿಂದಲೋ ಬೆಳೆಸಿ ಬೆಂಬಲಿಸಿದ್ದೂ ಸಹಾ ಕ್ಷಮೆಯಿರದ ತಪ್ಪಾಗಿಯೇ ಮುಂದೆ ಅನಿಸಲೂ ಬಹುದು .

ನೀವು ಮಾಡಿರಬಹುದಾದ ಒಂದು ತಪ್ಪಿಗೆ ಅಂತ ಯಾವುದೋ ಒಂದು ಬಾರಿ ವಿಧಿಸುವ ಶಿಕ್ಷೆಯಾದರೆ ಅದನ್ನು ಅನುಭವಿಸಿ ಪಾಪ ಕಳೆದುಕೊಳ್ಳಬಹುದು ಅಥವಾ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿ ಮನಸನ್ನು ನಿರ್ಮಲವಾಗಿಟ್ಟು ಕೊಳ್ಳಬಹುದು . ಆದರೆ ಕೆಲವೊಂದು ಕ್ಷಮೆಯಿರದ ತಪ್ಪಿಗೆ ಇತ್ತ ಒಂದು ಬಾರಿಯ ಶಿಕ್ಷೆಯೂ ಇಲ್ಲದೇ ಅತ್ತ ಪ್ರಾಯಶ್ಚಿತ್ತಕ್ಕೂ ಅವಕಾಶವಿಲ್ಲದೇ ಅತಂತ್ರರಾಗಿ ಕೊನೆಯ ಉಸಿರಿನವರೆಗೂ ನರಳುತ್ತಲೇ ಇದ್ದು ಬಿಡುತ್ತೇವೆ. ಇದು ಅಂಥವರ ಬದುಕಿನ ಅತ್ಯಂತ ಘನ ಘೋರವಾದ ಸ್ಥಿತಿ !

ಬಹುಶಃ ಅನೇಕರ ಬದುಕಿನಲ್ಲಿ ಈ ತರಹದ ಕ್ಷಮೆಯಿಲ್ಲದ ತಪ್ಪುಗಳು ಆಗಿದ್ದಿರಬಹುದು . ಅದನ್ನು ಅವರು ಅವರದ್ದೇ ಆದ ರೀತಿಯಲ್ಲಿ ಅನುಭವಿಸುತ್ತಲೂ ಇರಬಹುದು ಅಥವಾ ಅದನ್ನು ಪ್ರಸ್ತುತ ವಾಸ್ತವ ಬದುಕಿನ ಜಂಜಾಟಗಳ ಗುಂಗಿನಲ್ಲಿ ಪಕ್ಕಕ್ಕೆ ಸರಿಸಿರಲೂ ಬಹುದು ಇಲ್ಲವೇ ಎಂದೋ ಆದಂತಹಾ ಈ ರೀತಿಯ ತಪ್ಪಿಗಾಗಿ ಈಗಲೂ ಪರಿತಪಿಸುತ್ತಿರುವ ಭಾವಜೀವಿಗಳೂ ಇರಬಹುದು. ಬದುಕಿನ ವ್ಯಂಗ್ಯವೆಂದರೆ ನಿಮ್ಮಿಂದಾಗಿರಬಹುದಾದ ಅಂತಹಾ ತಪ್ಪುಗಳನ್ನು ಅರಿತು ಪಶ್ಚಾತ್ತಾಪ ಪಟ್ಟು ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೂ ಕ್ಷಮಿಸಬೇಕಾದವರೇ ನಿಮ್ಮನ್ನು ಕ್ಷಮಿಸಲು ಒಪ್ಪದಿರುವುದು ಒಂದೆಡೆಯಾದರೆ , ಕ್ಷಮಿಸಬೇಕಾದ ವ್ಯಕ್ತಿಯೇ ಕಣ್ಣೆದುರಿಗೆ ಇರದಿರುವುದು ಇನ್ನೊಂದು ರೀತಿಯ ದುರಂತ !

ಈ ಎಲ್ಲಾ ತಪ್ಪುಗಳ ಕೂಡು ಕಳೆಯುವಿಕೆಯ ಲೆಕ್ಕಾಚಾರದಲ್ಲಿ ಕೊನೆಗೆ ಮನುಷ್ಯನಾದವನ ಅತ್ಯಂತ ಸಹಜ ನಿವೇದನೆಯೆಂದರೆ ದೇವರ ಮೇಲೆ ಭಾರ ಹಾಕಿ, ಆದ ತಪ್ಪಿಗಾಗಿ ಅವನಲ್ಲೇ‌ ನಿರ್ಮಲಂತಃಕರಣದಿಂದ ಕ್ಷಮೆ ಬೇಡಿ‌ ಮನಸನ್ನು ಹಗುರವಾಗಿಸಿಕೊಳ್ಳುವುದು !

ಕ್ಷಮೆಯಿರದ ತಪ್ಪುಗಳು ನಮ್ಮೆಲ್ಲರ ಬದುಕಿನ‌ಲ್ಲಿ ನಿರಂತರವಾಗಿ ಕಾಡುವ, ಎಚ್ಚರಿಸುವ, ಪೆಟ್ಟು ಕೊಡುತ್ತಾ ಸರಿದಾರಿಯಲ್ಲಿ ಹೆಜ್ಜೆ ಇರಿಸುವ ಅಪ್ತ ಬಂಧುಗಳಂತೆಯೂ ಇರಬಲ್ಲವು…!

ಏನೇ ಇದ್ದರೂ.. ಅವುಗಳ ಕರಿನೆರಳು ಮಾತ್ರ ಕ್ರೂರ !!

ಮರೆಯುವ ಮುನ್ನ ನಿಮ್ಮೆಲ್ಲರ ಜೀವನದಲ್ಲಿ ಈ ತರಹದ ತಪ್ಪುಗಳಾಗಿವೆಯೋ ಇಲ್ಲವೋ ಅದು ನಿಮ್ಮಂತರಂಗಕ್ಕೇ ಗೊತ್ತು. ಆದರೆ ನನ್ನ ಬದುಕಿನಲ್ಲಿ ಮೂರು ಬಾರಿ ಎಸಗಿದ ಇಂತಹಾ ಕ್ಷಮೆಯಿರದ ತಪ್ಪುಗಳಿಗಾಗಿ ಇಂದಿಗೂ ಆಗಾಗ್ಗೆ ಪರಿತಪಿಸುತ್ತಿದ್ದೇನೆ. ಅದರಲ್ಲಿ ” ಅಪಾತ್ರ ದಾನಗಳ ಅಕ್ಷಮ್ಯ” ವೂ ಸೇರಿದಂತೆ, ಉಳಿದ ಮತ್ತೆರೆಡು ಸಂಧರ್ಭಗಳಲ್ಲಿ ಕ್ಷಮಿಸಬೇಕಾದವರು ಕ್ಷಮಿಸಲು ಮನಸು‌ ಮಾಡದಿರುವುದು ಹಾಗೂ ಕ್ಷಮಿಸಬೇಕಾದವರೇ ಕಣ್ಣೆದುರಿಗಿಲ್ಲದಿರುವುದು ನನ್ನ ದೌರ್ಭಾಗ್ಯ.

ಒಂದು ಪ್ರಾಮಾಣಿಕ ನಿವೇದನೆಯೆಂದರೆ ಆ ಮೂರೂ ತಪ್ಪುಗಳು ಮುಂದೊಂದು ದಿನ ಕ್ಷಮೆಯಿರದ ತಪ್ಪುಗಳಾಗಬಲ್ಲವು ಎಂಬ ಯಃಕಿಂಚಿತ್ ಸುಳಿವೂ ಆಗ ನನ್ನ ಬಳಿ ಇರಲಿಲ್ಲ. ಅಸಲಿಗೆ ಅವಾವುವೂ ಅಂದಿಗೆ ತಪ್ಪೆಂದು ಅನಿಸಲಿಕ್ಕೆ ಅರ್ಹವಾದ ಘಟನೆಗಳೇ ಅಲ್ಲ ! ಬಹುಶಃ ಅವು ನನ್ನಂಥವನಿಗಾಗಿಯೇ ಹುಡುಕಿಕೊಂಡು ಬಂದು ನನ್ನೊಡಲಲ್ಲಿಯೇ ಬೆಚ್ಚಗೆ ಹೊದ್ದು ಮಲಗಿ ನನ್ನ ಕಾಡಿಸಲಿಕ್ಕಾಗಿಯೇ ನನ್ನಲ್ಲಿಯೇ ಉಳಿದ ಕ್ಷಮೆಯಿರದ ತಪ್ಪಿನ ಸ್ವರೂಪದ ಸನ್ನಿವೇಶಗಳೇನೋ……. !

ಗಾಡ್ ಓನ್ಲೀ ನೋಸ್ !

ಅದರ ಕಹಿ ನೆನಪುಗಳು ಪ್ರತೀ ಹಂತದಲ್ಲೂ ನಿತ್ಯ ನಿರಂತರವಾಗಿ ಕಾಡುತ್ತಾ ಆಗಾಗ್ಗೆ ತಪ್ಪಿತಸ್ಥ ಭಾವನೆಯನ್ನು ಬಿತ್ತುತ್ತಾ ಬೆಳೆಯುತ್ತಲಿವೆ ಅಥವಾ ಬೆಳೆಸುತ್ತಲೇ ಇದ್ದೇನೆ. ಆದರೆ ಅಂತರಂಗವನ್ನು ಪರಿಶುದ್ಧವಾಗಿಟ್ಟುಕೊಂಡರೂ ನಮ್ಮಿಂದ ಅಥವಾ ನಮ್ಮ ಕಡೆಯಿಂದಾದ ಕೆಲ ಘಟನೆಗಳು ಮುಂದೆ ಕ್ಷಮೆಯಿರದ ತಪ್ಪುಗಳಾಗಿ ಪರಿಣಮಿಸುವುದೂ ಒಂಥರಾ ನನ್ನಂಥವರ ದುರದೃಷ್ಟವಲ್ಲವೇ..?

ಮತ್ತೊಂದು ವಿಷಯ. ಒಂದು ತಪ್ಪನ್ನು ತಪ್ಪು ಎನ್ನುವುದಾಗಲೀ ಅಥವಾ ಕ್ಷಮೆಯಿರದ ತಪ್ಪೆಂದು ವರ್ಗೀಕರಿಸುವುದೂ ಬಿಡುವುದಾಗಲೀ , ಪಶ್ಚಾತ್ತಾಪ- ಪ್ರಾಯಶ್ಚಿತ್ತಗಳ ಕುರಿತಾದ ಚಿಂತನೆಗಳಾಗಲೀ ಅವರವರ ಆತ್ಮಸಾಕ್ಷಿಗೆ ಅಥವಾ ಭಾವುಕತೆಗೆ ಬಿಟ್ಟ ವಿಷಯ. ಒಬ್ಬರಿಗೆ ತಪ್ಪು ಅನಿಸಿದ್ದು ಮತ್ತೊಬ್ಬರಿಗೆ ಹಾಗನಿಸದಿರಬಹುದು.

ಈ ಹಿನ್ನೆಲೆಯಲ್ಲಿ ನಿಮ್ಮಿಂದಾಗಿರಬಹುದಾದ ಕ್ಷಮೆಯಿರದ ತಪ್ಪುಗಳ ವಾಸ್ತವಿಕ ಅನಾಲಿಸಿಸ್ ನತ್ತ ,ಮತ್ತದರ ಪರಿಹಾರದತ್ತ ನಿಮ್ಮ ಮನಸ್ಸು ಕೊಂಚವೇ ಹೊರಳಿದಲ್ಲಿ ಈ ಬರಹ ಅರ್ಥವಾದಂತೆ ! ಇದನ್ನು ಓದಿ –ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ

ಪ್ರೀತಿಯಿಂದ….

HIRITYRU PRAKASH 1

ಹಿರಿಯೂರು ಪ್ರಕಾಶ್.

Copyright © All rights reserved Newsnap | Newsever by AF themes.
error: Content is protected !!