January 4, 2025

Newsnap Kannada

The World at your finger tips!

deepa1

ಹುಡುಕುತ್ತಿದ್ದೇನೆ ನಾನು ಹೊಸ ಲೋಕವನ್ನು

Spread the love

Birth certificate ಗು
Death certificate ಗು ಲಂಚ ಕೇಳದ,

ಓಟಿಗಾಗಿ ಹಣ ಕೊಡದ,

ಮತಕ್ಕಾಗಿ ಹೆಂಡ ಸ್ವೀಕರಿಸದ,

ವರದಕ್ಷಿಣೆಗಾಗಿ ಹೆಣ್ಣು ಸುಡದ,

ಹಣಕ್ಕಾಗಿ ತಲೆ ಹೊಡೆಯದ,

ಸೂಟು ಬೂಟಿಗೆ ಬೆಲೆ ಕೊಡದ,

ಹರಿದ ಬಟ್ಟೆಯವರನ್ನು ಆಚೆಗೆ ನೂಕದ,

ದುಡ್ಡಿಗೆ ಬೆಲೆ ಕೊಡದ,

ಪ್ರತಿಭೆಗಳಿಗೆ ಅವಕಾಶ ಕೊಡುವ,

ಹೊಸ ಲೋಕವೊಂದನ್ನು ಹುಡುಕುತ್ತಿದ್ದೇನೆ…….

ಅಕ್ಕಿ, ರಾಗಿ, ಗೋದಿ, ಜೋಳ, ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆಯುವವರು ಶ್ರೀಮಂತರಾಗುವ,

ಮೊಬ್ಯೆಲ್, ಕಂಪ್ಯೂಟರ್, ಇಂಟರ್ ನೆಟ್ ಮಾರುವವರು ಎಲ್ಲರಂತೆ ಸಾಮಾನ್ಯರಾಗುವ,

ಮಂದಿರ, ಮಸೀದಿ, ಚರ್ಚು, ಮಠಗಳು ಅಪರೂಪವಾಗುವ,

ಶಾಲೆ, ಗ್ರಂಥಾಲಯ, ಆಸ್ಪತ್ರೆ, ಕೆರೆಕಟ್ಟೆ, ಕಾಡುಗಳು ಎಲ್ಲೆಲ್ಲೂ ಕಾಣುವ,

ಜಾತಿ, ಭಾಷೆ, ಧರ್ಮಗಳು ಭಾರತೀಯವಾಗುವ,

ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆ ಧರ್ಮವಾಗುವ,

ಬೆವರು ಸುರಿಸಿ ಶ್ರಮ ಪಡುವವರು ಹೆಚ್ಚು ಸಂಬಳ ಪಡೆಯುವ,

ಏಸಿ ರೂಮಿನಲ್ಲಿ ಕುಳಿತವರು ಸಾಮಾನ್ಯರಂತಿರುವ,

ಸಾಮರ್ಥ್ಯಕ್ಕೆ ತಕ್ಕ ಹಣ, ಅಂತಸ್ತು, ಅಧಿಕಾರ ಪಡೆಯುವ,

ದುಷ್ಟ, ಭ್ರಷ್ಟ, ವಂಚಕರಿಗೆ ತಕ್ಕ ಶಿಕ್ಷೆ ದೊರೆಯುವ,

ಹೊಸ ಲೋಕವೊಂದನ್ನ ಹುಡುಕುತ್ತಿದ್ದೇನೆ,……

ಸಹಾಯ ಮಾಡಬಲ್ಲಿರಾ,

ಸಲಹೆ ನೀಡಬಲ್ಲಿರಾ,

ಸಹಕರಿಸಬಲ್ಲಿರಾ,

ಕನಸಿನಾಲೋಕದ ದೂರದರಮನೆಗೆ ಜೊತೆಯಾಗಬಲ್ಲಿರಾ,

ಖಂಡಿತವಾಗಿಯೂ ನಿಮ್ಮೆಲ್ಲರ ನಿರೀಕ್ಷೆಯಲ್ಲಿ .

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!