1-2-3-4-5-ಕೋಡ್ ಗಳೇ ನಮ್ಮ ಹೆಸರಾದರೆ, ಸಮಾನತೆಯ ಬೆಸುಗೆ ಮಾನವ ಧರ್ಮ ಯುಗ ಆರಂಭ

Team Newsnap
1 Min Read

ಬಕ್ರೀದ್ ಹಬ್ಬದ ಶುಭಾಶಯಗಳೊಂದಿಗೆ……

ಬನ್ನಿ ನನ್ನ ಸಹಧರ್ಮೀಯ ಭಾಂಧವರೆ……….
ಒಗ್ಗಟ್ಟಾಗೋಣ ನಾವು ನೀವು,

ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ,
ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ,

ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ,
ಕಟ್ಟೋಣ ಬಲಿಷ್ಠ ಭಾರತವನ್ನು,
.
ನೀವೂ ನಮ್ಮಂತೆ, ನಾವೂ ನಿಮ್ಮಂತೆ,
ಅದೇ ರಕ್ತ ಮೂಳೆ ಮಾಂಸ ಚರ್ಮಗಳ ಹೊದಿಕೆ,

ಅದೇ ಭಯ ಭಕ್ತಿ ನೋವು ನಲಿವು ಸುಖ ದುಃಖ ಪ್ರೀತಿ ದ್ವೇಷ,
ಅದೇ ಗಾಳಿ ಬೆಳಕು, ಅನ್ನ ನೀರು, ನೆಲ,

ನಿಮ್ಮಲ್ಲೂ ನಮ್ಮಂತೆ ಮೌಡ್ಯವಿದೆ, ಅಂಧ ಭಕ್ತಿಯಿದೆ,
ನಿಮ್ಮಲ್ಲೂ ದಡ್ಡತನ, ಬಡತನ, ಅಸಮಾನತೆಯಿದೆ,

ಬದಲಾಗಬೇಕಿದೆ ನೀವು ಆಧುನಿಕತೆಯ ಹೊಸ ಮನ್ವಂತರಕೆ,

ಸ್ತ್ರೀ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಬೇಕಿದೆ,

ನಿಮ್ಮದೇ ಅನುಭವದ ಬೆಳಕಿನಲ್ಲಿ ಕತ್ತಲೆಯನ್ನು ಒದ್ದೋಡಿಸಿ,
.
ಭಕ್ತಿಯಿದ್ದರೆ ಇರಲಿ, ನಂಬಿಕೆಯಿದ್ದರೆ ಇರಲಿ,
ನಿಮ್ಮ ಆಚಾರ ವಿಚಾರ ಸಂಪ್ರದಾಯಗಳಲ್ಲಿ,

ಆದರೆ ಅದನ್ನು ಮೀರಿದ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ,
ಯೋಚಿಸುವ, ಪ್ರಶ್ನಿಸುವ ಚರ್ಚಿಸುವ ವಿಶಾಲ ಮನೋಭಾವ ನಿಮ್ಮದಾಗಲಿ,

ಭಕ್ತಿಯಿಂದ ಪೂಜಿಸುವುದಕ್ಕಿಂತ ಅದೇ ಅಂಶಗಳನ್ನು,
ಜೀವನದಲ್ಲಿ ಅಳವಡಿಸಿಕೊಳ್ಳುವುದು ಅದಕ್ಕೆ ನೀವು ಸಲ್ಲಿಸುವ ಗೌರವ,

ಹರಿದು ಬರಲು ಬಿಡಿ ಒಳ್ಳೆಯ ವಿಷಯಗಳನ್ನು ಎಲ್ಲಾ ಕಡೆಯಿಂದಲೂ,

ತಿರಸ್ಕರಿಸಿ ಕೆಟ್ಟ ಅಂಶಗಳನ್ನು ಅದು ಎಷ್ಟೇ ಪವಿತ್ರವಾಗಿದ್ದರೂ ,
ಸಮಾನತೆ, ಸ್ವಾತಂತ್ರ್ಯ, ಮಾನವೀಯತೆಗೆ

ನಾವಿದ್ದೇವೆ ನಿಮ್ಮೊಂದಿಗೆ ಎಂದೆಂದಿಗೂ,
ಈ ನೆಲ ನಮ್ಮೆಲ್ಲರದು,

ನಿಮ್ಮಲ್ಲೂ, ನಮ್ಮಲ್ಲೂ ಹಿಂಸೆ ದ್ವೇಷಗಳು ಮರೆಯಾಗಲಿ,
ಪ್ರೀತಿ ಸ್ನೇಹ ವಿಶ್ವಾಸ ಭ್ರಾತೃತ್ವಗಳು ಬೆಸೆಯಲಿ,

ನಿಮ್ಮನ್ನು ಅನುಮಾನಿಸುವವರಿಗೆ ನಾವು ಉತ್ತರಿಸುತ್ತೇವೆ,

ಇರಲಿ ನಿಮ್ಮ ನಂಬಿಕೆ ನಿಯತ್ತು ಭಾರತೀಯತೆಯೆಡೆಗೆ,
ಹಿಂದಿನಂತೆ, ಇಂದಿನಂತೆ ಮುಂದೆಯೂ,

ಮುಂದೊಂದು ದಿನ ನಮ್ಮ ನಡುವಿನ ಭಿನ್ನತೆಯ ಗುರುತು ಸಿಗದಿರಲಿ,

ನಮ್ಮ ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳ ಕಾಲಕ್ಕೆ,
ಶಾಸ್ತ್ರಿ, ಮಹಮದ್, ಗೌಡ, ಇಕ್ಬಾಲ್, ಶರ್ಮ, ಗೌಸ್, ಡೇವಿಡ್, ಆಚಾರ್ಯ, ಭಾಷಾ, ನಾರಾಯಣ
ಈ ಹೆಸರುಗಳೇ ಮರೆಯಾಗಲಿ,

ಸಂಖ್ಯೆ ಆಧಾರಿತ 1-2-3-4-5-…… ಕೋಡ್ ಗಳೇ ನಮ್ಮ ಹೆಸರಾಗಲಿ,
ಆಗ ಸಮಾನತೆಯ ಹೊಸ ಬೆಸುಗೆ ಮಾನವ ಧರ್ಮವಾಗುತ್ತದೆ,

ಆ ದಿನಗಳ ನಿರೀಕ್ಷೆಯಲ್ಲಿ .

ವಿವೇಕಾನಂದ. ಹೆಚ್ ಕೆ

Share This Article
Leave a comment