November 26, 2024

Newsnap Kannada

The World at your finger tips!

WhatsApp Image 2022 06 29 at 4.34.35 PM

ಕಳಪೆ ಬಿತ್ತನೆ ಬೀಜ, ಗೊಬ್ಬರ ವಿತರಣೆಯಲ್ಲಿ ಲೋಪ ಕಂಡು ಬಂದಲ್ಲಿ ಕಠಿಣ ಕ್ರಮ – ಕೆ.ಗೋಪಾಲಯ್ಯ

Spread the love

ಮಂಡ್ಯ ಜಿಲ್ಲೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿ ತೊಂದರೆ ಉಂಟಾಗಬಾರದು. ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಅಥವಾ ಕಲಬೆರೆಕೆ ರಸಗೊಬ್ಬರ ವಿತರಣೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಗೋಪಾಲಯ್ಯ ಜಿಲ್ಲೆಯಿಂದ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಅಕ್ರಮವಾಗಿ ರಸಗೊಬ್ಬರ ಸಾಗಾಣಿಕೆಯಾಗಬಾರದು. ಈ ರೀತಿಯ ಪ್ರಕರಣಗಳು ಕಂಡುಬಂದರೆ ದಾಳಿ ನಡೆಸಿ ವಶ ಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಎಂದರು.

ಬಿತ್ತನೆ ಬೀಜ ಅಥವಾ ರಸಗೊಬ್ಬರದ ಅವಶ್ಯಕತೆಯನ್ನು ಪರಿಶೀಲಿಸಿಕೊಳ್ಳಿ ಕೊರತೆ ಇದ್ದಲ್ಲಿ ಗಮನಕ್ಕೆ ತಂದರೆ ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಬೇಡಿಕೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವುದಾಗಿ ತಿಳಿಸಿದರು.

ವಿ ಸಿ ನಾಲೆಗೆ ತಕ್ಷಣ ನೀರು ಬಿಡಿ :

ವಿ.ಸಿ.ನಾಲೆಯಿಂದ 15 ದಿನಗಳಿಂದ ನೀರು ಬಿಡುಗಡೆ ಮಾಡದೇ ರೈತರ ಬೆಳೆಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರು ಹಾಗೂ ಸಂಸದರು ಸಚಿವರಿಗೆ ತಿಳಿಸಿದಾಗ ನೀರು ನಿಲುಗಡೆಗೂ ಮುನ್ನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ವಿ.ಸಿ.ನಾಲೆ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸುತ್ತಾ ತಕ್ಷಣವೇ ನೀರು ಬಿಡುಗಡೆ ಮಾಡಿ ವರದಿ ನೀಡುವಂತೆ ತಿಳಿಸಿದರು.

ಶಾಲಾ ಕಾಲೇಜು‌ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ, ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್, ವಿಧಾನ ಸಭೆಯ ಸದಸ್ಯರುಗಳಾದ ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ಡಿ. ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಜಿ.ಪಂ ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾಥ್ ಮನೋಹರ್, ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ, ಜಿ.ಪಂ. ಸಿಇಒ ದಿವ್ಯ ಪ್ರಭು, ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಯತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!