ಬಿಜೆಪಿ ಜೊತೆಗೆ ಚೆನ್ನಾಗಿ ಇದ್ದರೆ ಇವತ್ತಿಗೂ ನಾನೇ ಸಿಎಂ- ಎಚ್ ಡಿ ಕೆ

Team Newsnap
2 Min Read

ಈ ಕಾಂಗ್ರೆಸ್ ಸಹವಾಸವೇ ಸಾಕು. ಏಕೆಂದರೆ ಕಾಂಗ್ರೆಸ್ ನಿಂದ ನಾವು ಸರ್ವ ನಾಶವಾದೆವು. ಬಿಜೆಪಿ ಜೊತೆ ಚೆನ್ನಾಗಿದ್ದಿದ್ದರೆ ಈಗಲೂ ನಾನೇ ಸಿಎಂ ಆಗಿರುತ್ತಿದ್ದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳುವುದರ ಮೂಲಕ ಬಿಜೆಪಿ ಸಖ್ಯ ಸುಖವಾಗಿರುತ್ತದೆ ಎಂದು ಬಣ್ಣಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ
ಕಾಂಗ್ರೆಸ್‌ ಸಹವಾಸದಿಂದ ನಮ್ಮ ಶಕ್ತಿಯೂ ಕುಂದಿದೆ. ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆಯ ಹೆಸರು ಮಾಡಿದ್ದೆ. ಈ ಸಿದ್ದರಾಮಯ್ಯ ಮತ್ತು ಅವರ ತಂಡದಿಂದ ಆ ವರ್ಚಸ್ಸು ಹಾಳಾಗಿದೆ. ಪೂರ್ವಯೋಜನೆ ಮಾಡಿ ನನ್ನ ಹೆಸರು ಹಾಳು ಮಾಡಿದರು ಎಂದು ನೊಂದು ಹೇಳಿದರು.

RAM 8007
Photo Credits : Shree Ram

ದೇವೇಗೌಡರ ಮಾತು ಕೇಳಬಾರದಿತ್ತು:

ಕಾಂಗ್ರೆಸ್‌ನಿಂದಲೇ ಎಲ್ಲವೂ ಸರ್ವನಾಶವಾಯಿತು. ಭಾವನಾತ್ಮಕ ಟ್ರ್ಯಾಪ್‌ಗೆ ನಾವು ಬಲಿಯಾದೆವು. ಎಚ್‌.ಡಿ.ದೇವೇಗೌಡರ ಮಾತು ಕೇಳಿ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದೆ. ಅವರ ಮಾತು ಕೇಳಬಾರದಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಬಲವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡಿದರು ಎಂದು ಕಿಡಿಕಾರಿದರು.

ಸಿದ್ದುಗೆ ಮರು ಜನ್ಮ ಕೊಟ್ಟವರು….

ರಾಜಕೀಯದಲ್ಲಿ ಅನಾಥರಾದಾಗ ಮರುಜೀವ ಕೊಟ್ಟವರ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರ ಪೋಟೋ ಇಟ್ಟುಕೊಳ್ಳುತ್ತೇನೆ ಅಂತಾರೆ. ನನ್ನನ್ನು ಟೀಕೆ ಮಾಡುತ್ತಾರೆ. ನಾನು ಏನು ತಪ್ಪು ಮಾಡಿದ್ದೇನೆ? ನಮ್ಮ ಕುಟುಂಬಕ್ಕೆ ಶಾಪ ಇದೆ. ನಾವು ಯಾರನ್ನು ಬೆಳೆಸುತ್ತೇವೆ, ಅವರೇ ನಮ್ಮ ಬಗ್ಗೆ ಮಾತನಾಡುತ್ತಾರೆ. ಈ ಶಾಪ ವಿಮೋಚನೆ ಹೇಗೆ ಅಂತಾ ಕಂಡುಹಿಡಿಯಬೇಕು. ಇದರ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತ

ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತ ವಾಗುತ್ತದೆ . ಇದಕ್ಕೆ ವೇದಿಕೆ ಅವರೇ ಸಿದ್ಧ ಮಾಡಿಕೊಂಡಿದ್ದಾರೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಬಗ್ಗೆ ಸಭೆಯಾಗುತ್ತಿದೆ. ಕೆಸಿಆರ್ ಈ ಬಗ್ಗೆ ನನಗೆ ಕರೆ ಮಾಡಿದ್ದರು. ಬಿಜೆಪಿ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಎದ್ದು ನಿಲ್ಲುತ್ತವೆ ಎಂಬ ವಿಶ್ವಾಸ ಇದೆ ಎಂದು ಆಶಯ ವ್ಯಕ್ತಪಡಿಸಿದರು.

ಸರ್ಕಾರ ಬಂದು 15 ತಿಂಗಳಾಗಿದೆ. ನೆರೆ ಹಾವಳಿ, ಕೊರೊನಾ ಸಮಸ್ಯೆಯಾಗಿದೆ. ಗ್ರಾ ಪಂ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಮೂರರಿಂದ ನಾಲ್ಕು ಮಂತ್ರಿಗಳಿಂದ ಚುನಾವಣಾ ತಯಾರಿಯಾಗುತ್ತಿದೆ. ಆದರೆ, ಜನರ ಸಮಸ್ಯೆಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಯಾವ ಇಲಾಖೆಗೆ ಯಾವ ಮಂತ್ರಿಗಳಿದ್ದಾರೆ ನಮಗೇ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನದಿಂದ ಹೇಳಿದರು.

ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲ:

ಬಿಜೆಪಿ ಪಕ್ಷದ ಸರ್ಕಾರದ ಬಗ್ಗೆ ಮೃದು ಧೋರಣೆ ಇಲ್ಲ. ಅದು ಪಕ್ಷದ ಸರ್ಕಾರ ಅಲ್ಲ ರಾಜ್ಯದ ಸರ್ಕಾರ. ಒಳ್ಳೇ ಕೆಲಸಕ್ಕೆ ಸದಾ ಸಹಕಾರ ನೀಡುತ್ತೇನೆ. ಆದರೆ, ಈಗ ಸಾಗುತ್ತಿರುವ ದಾರಿ ಸರಿಯಲ್ಲ. ಕೊರೊನಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬೇಕಾಗಿರಲಿಲ್ಲ ಎಂದು ವಿರೋಧಿಸಿದರಲ್ಲದೇ, ಕೇಂದ್ರ ಸರ್ಕಾರ ನಿಮ್ಮನ್ನು ಲೆಕ್ಕಕ್ಕೆ ಇಟ್ಟಿಲ್ಲ. ಬಿಜೆಪಿ ಸಿಎಂ ಇದ್ದಾರೆ ಅನ್ನೋದನ್ನು ಕೇಂದ್ರ ಮರೆತುಬಿಟ್ಟಿದೆ ಎಂದು ಯಡಿಯೂರಪ್ಪ ಅವರ ವಿರುದ್ಧ ವ್ಯಂಗ್ಯವಾಡಿದರು.

ರಾಜ್ಯದ ಚಿತ್ರಣವನ್ನು ಬದಲಾಯಿಸುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪನವರೇ ಸಂಕುಚಿತ ಕೀಳುಮಟ್ಟದ ರಾಜಕೀಯವನ್ನು ಬಿಡಿ. ಇನ್ನು ಮುಂದೆಯಾದರೂ ಜನರಿಗಾಗಿ ಕೆಲಸ ಮಾಡಿ ಎಂದು ಹರಿಹಾಯ್ದರು.

Share This Article
Leave a comment