“ಬೇಸರದ ಸಂಜೆಗೆ
ಬೇಕೆನಗೆ ನಿನ್ನ ಜೊತೆ”
ಎಂದವನಿಗೆ ಅವಳ ಮಾತು
ಸಂಗೀತದ ಸರಿಗಮವಾಯಿತು.
ಸಂಜೆಯೂ ಹಿತವಾಯಿತು.
“ಬೆಳ್ಳಿ ರಥದಲಿ ಸೂರ್ಯ ಕಿರಣ”ದ ಹಾಡಿಗೆ ಕಿವಿಯಾದವಳ ತನ್ಮಯತೆಗೆ ಅವನ ಭಾವನೆ ರಂಗು ತಂದಿತು.
“ಹೊತ್ತಲ್ಲದ ಹೊತ್ತಲ್ಲಿ ಮನಸಿಗೆ ಕಚಗುಳಿ ಇಡುವ ಅಲೆಮಾರಿ ನೆನಪುಗಳಿಗೆ ಭಾವನೆಗಳು ಅನ್ನುತ್ತಾರ”? ಎನ್ನುವ ಆಕೆಯ ಮುಗ್ಧ ಪ್ರಶ್ನೆಗೆ, “ಭಾವನೆಯಿಲ್ಲದೇ ಬದುಕು ಸಾಧ್ಯವೇ ಹೇಳು, ಭಾವನೆಗಳಿಗೆ ಬಾಡುವ ಹಂಗಿಲ್ಲ ಕಣೇ” ಎಂದವನ ಮಾತಿಗೆ,”ಅಯ್ಯೋ ಬಾಡಬಾರದು ಕಣೋ, ಬಾಡಿದರೆ ನಾವು ಸತ್ತಂತೆ” ಎಂದವಳಲ್ಲಿ ಆತಂಕವಿತ್ತು.
ಅವರಿಬ್ಬರ ಬಳಲಿದ ಮನಸುಗಳಿಗೆ ಅಲ್ಲಿಯ ತಂಪನೆಯ ತಂಗಾಳಿಯೇ ಪ್ರೀತಿಯ ಮಡಿಲಾಯಿತು. ಅವಳು ಮಾತು ಮುಂದುವರೆಸಿದಳು.
“ನಾವು ಬದುಕಿರುವುದೇ ಭಾವುಕತೆಯಿಂದ ಅನ್ಸುತ್ತೆ ಅಲ್ವಾ ಗೆಳೆಯ, ನೋಡಲ್ಲಿ ದಡದ ಬಯಲಿಗೆ ಅಲೆಗಳು ಅಪ್ಪಳಿಸಿ ಅಪ್ಪಳಿಸಿ ಕಚಗುಳಿ ಹುಟ್ಟಿಸುತ್ತಿವೆ,ದಡಕ್ಕೂ ಜೀವಂತಿಕೆ ಬರುವಷ್ಟು..”
ಅವಳ ಒಲವ ನುಡಿಗೆ ಆತನೂ ನಲ್ಮೆಯ ಉಸಿರಾದ “ಅಲೆಯಿಲ್ಲದ ದಡಕ್ಕೆ ಬೆಲೆ ಎಲ್ಲಿದೆ ಹೇಳು? ಇರುವಷ್ಟು ಹೊತ್ತು ಒಟ್ಟೊಟ್ಟಿಗೆ ಸಾಗಲಿ ಅವುಗಳ ಜೀವಯಾನ..
“ಇನ್ನೂಮಾತು ಮುಗಿದಿರಲಿಲ್ಲ ಆಗಲೇ ಅವನ ಆಲಿಂಗನದಲ್ಲಿ ಗುಬ್ಬಚ್ಚಿಯ ಭದ್ರತಾ ಭಾವ ಆಕೆಗೆ.
✍️ಉದಯ್ ಕುಂದಾಪುರ (ಮುಂಬೈ)
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು