ಹೆದರಿಸುವೆಯಾ ಸಾವೇ ನೀನು ನನ್ನನ್ನು, ಸದಾ ಕಾಡುತ್ತಲೇ ಇರುವೆಯಾ ಸಾವೇ ನನ್ನನ್ನು,
ಹೊಂಚು ಹಾಕುತ್ತಿರುವೆಯಾ ಸಾವೇ ಹೊತ್ತೊಯ್ಯಲು ನನ್ನನ್ನು,
ಅಯ್ಯೋ ಸಾವೆಂಬ ಶತ ಮೂರ್ಖನೇ……
ಅಪಘಾತ ಮಾಡಿಸುವೆಯಾ ನನ್ನನ್ನು,
ಅನಾರೋಗ್ಯಕ್ಕೆ ಒಳಪಡಿಸುವೆಯಾ ನನ್ನನ್ನು,
ಆತ್ಮಹತ್ಯೆಗೆ ಪ್ರಚೋದಿಸುವೆಯಾ ನನ್ನನ್ನು,
ಕೊಲೆಗಯ್ಯಲು ಪ್ರಯತ್ನಿಸುವೆಯಾ ನನ್ನನ್ನು,
ನೀರು ಗಾಳಿ ಬೆಂಕಿ ಗುಡುಗು ಸಿಡಿಲಿಗೆ ಬಲಿ ಪಡೆಯವೆಯಾ ನನ್ನನ್ನು,
ಕಾರಣವಿಲ್ಲದೆ ಮುನ್ಸೂಚನೆ ಕೊಡದೆ ನಿದ್ದೆಯಲ್ಲಿಯೇ ಇಲ್ಲವಾಗಿಸುವೆಯಾ ನನ್ನನ್ನು,
ವೈರಾಗ್ಯದಿಂದ ಸ್ವತಃ ನಾನೇ ಜೀವಂತ ಸಮಾಧಿಯಾಗುವಂತೆ ಮಾಡುವೆಯಾ ನನ್ನನ್ನು,
ವೈರಸ್ ಬ್ಯಾಕ್ಟೀರಿಯಾಗಳನ್ನು ಬಿಟ್ಟು ತಟಸ್ಥವಾಗಿಸುವೆಯಾ ನನ್ನನ್ನು,
ಅಯ್ಯೋ ಸಾವೆಂಬ ಪಕ್ಷಪಾತಿಯೇ….
ಬುದ್ದಿ ಇಲ್ಲವೇ ನಿನಗೆ ಸಾವು ಯಾರಿಗೆ ಯಾವಾಗ ಕೊಡಬೇಕೆಂದು,
ಅಲ್ಲೊಬ್ಬ ಭ್ರಷ್ಟ 90 ರಲ್ಲೂ ಇನ್ನೂ ಬದುಕಿದ್ದಾನೆ,
ಇಲ್ಲೊಬ್ಬ ಜಾತಿವಾದಿ 89 ರಲ್ಲೂ ಉಸಿರಾಡುತ್ತಿದ್ದಾನೆ,
ಮತ್ತೊಬ್ಬ ಮತಾಂಧ 88 ರಲ್ಲೂ ರಕ್ತ ಹೀರುತ್ತಿದ್ದಾನೆ,
ಮಗದೊಬ್ಬ ಅತ್ಯಾಚಾರಿ 87 ರಲ್ಲೂ ಅಸಹಾಯಕ ಹೆಣ್ಣಿಗಾಗಿ ಹುಡುಕಾಡುತ್ತಿದ್ದಾನೆ,
ಅವನೊಬ್ಬ ದೇಶ ದ್ರೋಹಿ 86 ರಲ್ಲೂ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾನೆ,
ಇವನೊಬ್ಬ ಹಣಕ್ಕಾಗಿ 85 ರಲ್ಲೂ ಅನ್ನಕ್ಕೆ ವಿಷವಿಕ್ಕುತ್ತಿದ್ದಾನೆ,
ಏಯ್ ಸಾವೇ ಹುಚ್ಚನೇ ನೀನು….
ಭ್ರೂಣವನ್ನೇ ಹತ್ಯೆ ಮಾಡುವೆಯಾ,
6 ತಿಂಗಳ ಕೂಸನ್ನೇ ಕೊಲ್ಲುವೆಯಾ,
20 ರ ಯುವಕನನ್ನೇ ಕೊಂಡೊಯ್ಯುವೆಯಾ,
ಹಸೆ ಮಣೆಯಾ ವಧುವನ್ನೇ ಬಲಿ ಪಡೆಯುವೆಯಾ,
ಪುಟ್ಟ ಮಕ್ಕಳ ತಂದೆಯನ್ನೇ ಇಲ್ಲವಾಗಿಸುವೆಯಾ,
ಕರುಣೆಯಿಲ್ಲದ ಕ್ರೂರಿ ಸಾವೇ,…
ಹೆದರುವುದಿಲ್ಲ ನಿನಗೆ ನಾನು,
ಎದುರಿಸುವೆನು ನಾನು ನಿನ್ನನ್ನು…
ಮಹಾ ಏನು ಮಾಡುವೆ ನೀನು…
ನೀನೇ ಶಕ್ತಿ ಶಾಲಿ ಎಂಬ ಭ್ರಮೆಯಲ್ಲಿರುವೆ…..
ನೀನೊಬ್ಬ ರಣಹೇಡಿ,
ಭಯಪಡುವುದಿಲ್ಲ ನಾನು ನಿನಗೆ,
ಉಸಿರು ನಿಂತ ಮಾತ್ರಕ್ಕೆ ಅದು ಸಾವೇ,
ಮತ್ತೆ ಮತ್ತೆ ಉಸಿರು ಪಡೆಯುತ್ತಲೇ ಇರುತ್ತೇನೆ,
ನಾನು ಅವನೊಬ್ಬ ಇನ್ನೊಬ್ಬ ಮತ್ತೊಬ್ಬ ಹೀಗೆ,
ನನ್ನ ಸಂಖ್ಯೆ ಕಾಲದೊಂದಿಗೆ ಬೆಳೆಯುತ್ತಲೇ ಇದೆ ಕೋಟಿಗಳ ಲೆಕ್ಕದಲ್ಲಿ,
ಯುದ್ದಗಳಾದವು,
ಭೂಕಂಪಗಳಾದವು,
ಸುನಾಮಿಗಳಾದವು,
ವೈರಸ್ ಗಳಾದವು,
ಆದರೂ ಬೆಳೆಯುತ್ತಲೇ ಇದ್ದೇನೆ ನಾನು……
ಸೋಲುತ್ತಲೇ ಇರುವೆ ನೀನು….
ಬದುಕಲು ಹೋರಾಡುತ್ತಿರುವವನು ನಾನು,
ಸಾಯಿಸಲು ಹೊಂಚು ಹಾಕುತ್ತಿರುವವನು ನೀನು….
ಎಲೈ ಮೋಸಗಾರ ಸಾವೇ,
ನಿನಗಿಂತ ನಾನೇ ಬಲಿಷ್ಠ,
ಆದರೂ ಕೈ ಮುಗಿದು ಕೇಳಿ ಕೊಳ್ಳುತ್ತೇನೆ,
ಉಳಿಸಿಬಿಡು ನನ್ನನ್ನು 100 ರವರೆಗೂ,
ನಾನೇ ಬರುತ್ತೇನೆ ನಿನ್ನೊಂದಿಗೆ ಆ ನಂತರ,
ಮಧ್ಯದಲ್ಲಿ ನೀನು ನನ್ನವರನ್ನು ನಿರ್ಜೀವವಾಗಿಸುವುದು ಸಹಿಸಲಾಗುತ್ತಿಲ್ಲ,
ಶರಣಾದೆನೆಂದು ಭಾವಿಸಿದೆಯಾ,
ಇಲ್ಲ ನನ್ನವರಿಗಾಗಿ ಒಂದು ಮನವಿ ಮಾತ್ರ….
ನೀನು ಕೇಳುವುದಿಲ್ಲ ಎಂದು ಗೊತ್ತು,
ನೀನೊಬ್ಬ ಸಾವಿನ ವ್ಯಾಪಾರಿ,
ನಾನು ಮಾತ್ರ ಬದುಕಿನ ಸಂಚಾರಿ……..
ಹೆದರುವುದಿಲ್ಲ ನಿನಗೆ ನಾನು,
ಎದುರಿಸುವೆನು ನಿನ್ನನ್ನು ನಾನು…….
- ವಿವೇಕಾನಂದ. ಹೆಚ್.ಕೆ.
9844013068
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ