(ಬ್ಯಾಂಕರ್ಸ್ ಡೈರಿ)
ಆಕೆಯ ಹೆಸರು ರಮಾಮಣಿ (ಹೆಸರನ್ನು ಬದಲಿಸಲಾಗಿದೆ). ಸುಮಾರು ಒಂದೂವರೆ ವರ್ಷದ ಪರಿಚಯ. ಆಗೀಗ ಚಿನ್ನದ ಸಾಲಕ್ಕೆ ಎಂದು ಬರುತ್ತಿದ್ದಾಕೆ. ಸದಾ ನಗುಮುಖ. ಒಮ್ಮೆ ಯಾವಾಗಲೋ “ನಾನು ಹಿಂದೆ ಬ್ಯಾಂಕಿನಲ್ಲಿಯೇ ಇದ್ದೆ, ಬಿಟ್ಟುಬಿಟ್ಟೆ” ಎಂದಿದ್ದರು. ಈಗ ಆಕೆ ಸರ್ಕಾರಿ ಶಾಲೆಯ ಶಿಕ್ಷಕಿ.
“ಅಯ್ಯೋ ಬ್ಯಾಂಕಿನ ಕೆಲಸದಲ್ಲಿದ್ದು ಬಿಟ್ಟು ಬಂದು ಟೀಚರ್ ಆಗಿದ್ದೀರಾ? ಏಕೆ?” ಎಂದು ಅಚಾನಕ್ಕಾಗಿ ಕೇಳಿದ್ದೆ. “ದೂರದ ಬಳ್ಳಾರಿಯಲ್ಲಿ ನನಗೆ ಪೋಸ್ಟಿಂಗ್ ಆಗಿದ್ದು. ಕಡೆಯ ಪಕ್ಷ ಐದಾರು ವರ್ಷಗಳಾದರೂ ಈ ಕಡೆಗೆ ವರ್ಗ ಸಿಗುವುದಿಲ್ಲ ಎಂದು ತಿಳಿದು ಹೇಗೂ ಸರಕಾರಿ ನೌಕರಿ ಸಿಕ್ಕಿತಲ್ಲಾ ಎಂದು ಅದನ್ನು ಬಿಟ್ಟು ಟೀಚರ್ ಆಗಿ ಕೆಲಸಕ್ಕೆ ಸೇರಿದ್ದೇನೆ. ಈಗ ಹೇಗೋ ನಮ್ಮೂರಿನಲ್ಲಿಯೇ ಇದ್ದೀನಲ್ಲ” ಎಂದಿದ್ದರು.
ಒಂದರ್ಥದಲ್ಲಿ ಅದು ನಿಜವೇ. ಕಾಣದ ಊರಿನಲ್ಲಿ ಒಂಟಿಯಾಗಿ ಇರುವುದಕ್ಕಿಂತ ಪರಿಚಯಸ್ಥರ ನಡುವೆ ಹತ್ತಿರದಲ್ಲಿರುವುದು ಒಳ್ಳೆಯದೇ ಅಲ್ಲವೇ ಎಂದು ನಾನು ಸುಮ್ಮನಾಗಿದ್ದೆ.
ಅನೇಕ ಬಾರಿ ಆಕೆ ಬಂದಾಗ “ನಾನೂನೂ ಬ್ಯಾಂಕರ್” ಎಂದು ತಮಾಷೆ ಮಾಡಿ ನಗುತ್ತಿದ್ದರು. ನಮಗೂ ವಿಶೇಷ ಅಭಿಮಾನ ಬ್ಯಾಂಕರ್ ಎಂದು. “ನನಗೂ ನಿಮ್ಮ ಕೆಲಸಗಳು ಗೊತ್ತು, ಕಷ್ಟಗಳೂ ಗೊತ್ತು” ಎನ್ನುತ್ತಿದ್ದರು.
ಸಾಮಾನ್ಯವಾಗಿ ಆಕೆ ಬರುತ್ತಿದ್ದಿದ್ದು ಸಂಜೆ ಐದರ ನಂತರ ಶಾಲೆಯನ್ನು ಮುಗಿಸಿ. ನಾನು ಕೂಡ ಅಷ್ಟೇ… ಅನಿವಾರ್ಯವಲ್ಲದಿದ್ದರೆ ಸಂಜೆ ಕೆಲಸ ಮುಗಿಸಿ ಬನ್ನಿ ಎಂದೇ ಬಹುತೇಕರಿಗೆ ಹೇಳುವುದು. ಹಾಗೆ ಹೇಳಿದಾಗ ಗ್ರಾಹಕರಿಗೆ ಆಶ್ಚರ್ಯ. “ಅಷ್ಟು ಹೊತ್ತು ನೀವು ಬ್ಯಾಂಕಿನಲ್ಲಿ ಕೆಲಸ ಮಾಡುತ್ತೀರಾ? ನಾಲ್ಕಕ್ಕೆ ಬಾಗಿಲು ಹಾಕಿದರೆ ನೀವೆಲ್ಲ ಹೊರಟು ಹೋಗುತ್ತೀರಾ ಎಂದು ಭಾವಿಸಿದ್ದೆವು” ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಬ್ಯಾಂಕಿನ ಒತ್ತಡಗಳು ಕೆಲಸದ ಸಮಯಗಳು ಎಲ್ಲವೂ ಗೊತ್ತು.
ಸಾಲ ತೆಗೆದುಕೊಳ್ಳಲಾದರೆ ಆಕೆ ಬೆಳಿಗ್ಗೆ ಬಂದು ಚಿನ್ನವನ್ನು ಅಪ್ರೈಸ್ ಮಾಡಿಸಿ ಹೊರಟು ಹೋಗುತ್ತಿದ್ದರು. ಸಂಜೆ ಬಂದು ಡಾಕ್ಯುಮೆಂಟ್ ಸೈನ್ ಮಾಡುವುದಿತ್ತು. ಕೆಲವೊಂದು ಸಲ ಬಿಡಿಸಿಕೊಳ್ಳಲು ಸಹ ಶಾಲೆ ಮುಗಿಸಿ ಬಂದದ್ದು ಉಂಟು. ಆಕೆ ಅಂತ ಅಲ್ಲ. ಗ್ರಾಹಕರು ಒಂದರ್ಧ ಗಂಟೆಯ ಕೆಲಸಕ್ಕಾಗಿ ಒಂದಿಡೀ ದಿನ ರಜೆ ಹಾಕುವುದು ನನ್ನ ಮನಸ್ಸಿಗೆ ಸಮ್ಮತವಲ್ಲ. ಹಾಗಾಗಿ ಸಂಜೆ ಬಂದರೆ ಆದೀತು, ಅದೇ ರಜೆಯನ್ನು ಅವರು ಅನಿವಾರ್ಯ ಕೆಲಸಕ್ಕೆ ಬಳಸಿಕೊಳ್ಳಲಿ ಎನ್ನುವ ಸದುದ್ದೇಶ ನನ್ನದು. ಅದೊಂದು ದಿನ ಶನಿವಾರ ಎಂದು ನೆನಪು. ಆಕೆ ಅರ್ಧ ದಿನ ಶಾಲೆ ಇತ್ತು ಎಂದು ಬಂದವರು ಚಿನ್ನದ ಸಾಲದ ಖಾತೆಯನ್ನು ರಿನ್ಯೂ ಮಾಡಬೇಕಿತ್ತು ಎಂದು ಹೇಳಿ ಪತ್ರಗಳನ್ನು ಕೊಟ್ಟರು. “ನನ್ನ ಎಸ್ ಬಿ ಖಾತೆಯ ನಾಮಿನಿ ಚೇಂಜ್ ಮಾಡಬೇಕು” ಎಂದಾಕೆ ಹೇಳಿದರು. ಸರಿ ಎಂದು ಹಳೆಯದನ್ನು ಕ್ಯಾನ್ಸಲ್ ಮಾಡಲು ಮತ್ತು ಹೊಸತನ್ನು ಮಾಡಲು ಅರ್ಜಿಯನ್ನು ಕೊಟ್ಟೆ. “ಹೊಸತನ್ನು ಯಾರಿಗೆ ಮಾಡಬೇಕು ಹೇಳಿ” ಎಂದು ಕೇಳಿದೆ. ಕೇಳಿದ ಕೂಡಲೆ ಯಾರಿಗೆ ಮಾಡಬೇಕು ಎಂದು ತೋಚದ ಹಾಗೆ ನಿಂತರು.
“ಯಾರ ಹೆಸರಿನ ನಾಮಿನಿ ಕ್ಯಾನ್ಸಲ್ ಮಾಡಬೇಕು” ಎಂದು ಕೇಳಿದೆ . “ನನ್ನ ಗಂಡನ ಹೆಸರಿನದು ಕ್ಯಾನ್ಸಲ್ ಮಾಡಬೇಕು” ಎಂದರು. “ಮತ್ಯಾರಿಗೆ ಮಾಡುತ್ತೀರಿ” ಎಂದೆ. “ಮಗ ಅಥವಾ ಮಗಳು” ಎಂದರು. ಅವರು ಮೈನರ್ ಎಂದು ಗೊತ್ತಿತ್ತು. ಹಾಗಾಗಿ “ಹಾಗಿದ್ದರೆ ಗಾರ್ಡಿಯನ್ ಮತ್ತೆ ನಿಮ್ಮ ಗಂಡನೇ ಆಗುತ್ತಾರಲ್ಲ” ಎಂದೆ. ಕೂಡಲೇ “ಬೇಡ ಅವರು ಗಾರ್ಡಿಯನ್ ಆಗುವುದು ಬೇಡ. ನನಗೆ ಡೈವರ್ಸ್ ಆಗಿದೆ” ಎಂದರು .
“ಹೋಗಲಿ ನಿಮ್ಮ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಯಾರನ್ನಾದರೂ ಗಾರ್ಡಿಯನ್ ಮಾಡಿ” ಎಂದು ಹೇಳಿದೆ. ಒಂದು ನಿಟ್ಟುಸಿರಿನ ನಂತರ “ ನನ್ನ ಅಪ್ಪ ಅಮ್ಮನೂ ತೀರಿಕೊಂಡಿದ್ದಾರೆ. ನಾನು ಒಬ್ಬಳೇ ಮಗಳು ಅಣ್ಣ ತಮ್ಮ ಅಕ್ಕ ತಂಗಿ ಯಾರೂ ಇಲ್ಲ. ನನಗೆ ಯಾರು ಇಲ್ಲ ಎಂದೇ ನನ್ನ ಗಂಡ ಬಾಲ ಬಿಚ್ಚಿರುವುದು” ಎಂದು ಸಿಡಿಮಿಡಿಗುಟ್ಟುತ್ತಾ ಹೇಳಿದರು .
ಸದಾ ಖುಷಿ ಖುಷಿಯಲ್ಲಿ ಮಾತನಾಡುವ ಆ ನಗುವಿನ ಹಿಂದೆ ಎಷ್ಟು ನೋವಿದೆಯೋ ಎಂದು ಆಶ್ಚರ್ಯವಾಯಿತು. ಕೇಳುವುದು ಬೇಡವೋ ಎನ್ನುವ ಗೊಂದಲ ನನ್ನಲ್ಲಿ .ಏಕೆಂದರೆ ಅನೇಕ ಬಾರಿ ಮಾತನಾಡಿ ತುಸು ಸಲುಗೆಯೂ ಬೆಳೆದಿತ್ತು.
“ಏನಾಯ್ತು?” ಎಂದು ಸಾಂತ್ವನದ ಧ್ವನಿಯಲ್ಲಿ ಕೇಳಿದೆ. ಯಾವಾಗ ನನ್ನ ಧ್ವನಿಯಲ್ಲಿ ಸಾಂತ್ವನದ ಸದ್ದು ಕೇಳಿತೋ ಆಕೆಯ ಕಣ್ಣಿಂದ ನೀರು ದಳದಳ ಸುರಿಯಲು ಶುರುವಾಯಿತು.
“ಮದುವೆಗೆ ಮುಂಚೆ ಆ ಕಂಪನಿ ಈ ಕೆಲಸ ಎಂದು ಏನೇನೋ ಹೇಳಿದ್ದರು. ಆದರೆ ನನಗೆ ಅವರು ಯಾವ ಕೆಲಸಕ್ಕೂ ಹೋದದ್ದು ಇಷ್ಟು ವರ್ಷಗಳಲ್ಲಿ ನೆನಪಿಲ್ಲ. ಉಂಡಾಡಿ ಗುಂಡನ ಹಾಗೆ ಊರಿನ ತುಂಬಾ ತಿರುಗುತ್ತಾ ಇರುತ್ತಾರೆ. ಹೋಗಲಿ ಕೆಲಸವಿಲ್ಲದಿದ್ದರೆ ಏನಂತೆ? ನಾನು ದುಡಿಯುತ್ತಿದ್ದೇನೆ. ಅವರ ಪಿತ್ರಾರ್ಜಿತ ಆಸ್ತಿ ಇಂದ ಬರುವ ಬಾಡಿಗೆ ಜೀವನಕ್ಕೆ ಸಾಕಾಗುತ್ತದೆ. ಆದರೆ ಮೇಡಂ ತುಂಬಾ ಕೀಳು ಮಟ್ಟದ ನಡವಳಿಕೆ ಮತ್ತು ಸ್ವಭಾವ ಆತನದ್ದು.
ಎಷ್ಟು ಬಾರಿ ನನ್ನ ಮೇಲೆ ಕೈ ಮಾಡಿದ್ದಿದೆ ಗೊತ್ತಾ? ನಾನು ಹೊರಗೆ ಕೆಲಸಕ್ಕೆ ಹೋಗುವವಳು ಎಂದು ತುಂಬಾ ಅನುಮಾನದಿಂದ ನೋಡುವ ಸ್ವಭಾವವೂ ಇದೆ. ಹೋಗಲಿ ಕೆಲಸ ಬಿಟ್ಟುಬಿಡೋಣ ಎಂದರೆ ಯಾವ ಧೈರ್ಯದಿಂದ ನಾನು ಮುಂದೆ ಬದುಕಬಹುದು? ಏಕೆಂದರೆ ಆತ ನಡೆಸಿಕೊಳ್ಳುತ್ತಿದ್ದ ರೀತಿ ಹಾಗಿತ್ತು. ತುಂಬಾ ಪ್ರೀತಿಯಿಂದ, ಸುರಕ್ಷಿತವಾಗಿ ನಡೆಸಿಕೊಳ್ಳುವ ಗಂಡನಾಗಿದ್ದರೆ ಅನುಮಾನ ಪರಿಹಾರಕ್ಕೆಂದಾದರೂ ನಾನು ಕೆಲಸ ಬಿಡಬಹುದಿತ್ತು.
ಆದರೆ ಹೊಡೆಯುವುದು ಬಡಿಯುವುದು ಮಾತ್ರವಲ್ಲದೆ ತುಚ್ಛವಾಗಿ ಮಾತನಾಡುವುದೂ ಇದೆ. ಇಷ್ಟೆಲ್ಲ ಇದ್ದಾಗ ಅವರ ಸಂಶಯ ಪರಿಹಾರಕ್ಕೆ ಎಂದು ನಾನು ಕೆಲಸ ಬಿಟ್ಟು ಮನೆಯಲ್ಲಿ ಕುಳಿತರೂ ಅನುಮಾನ ಬರುವುದಿಲ್ಲ ಎಂದು ಏನು ಖಾತರಿ? ಏಕೆಂದರೆ ಅನುಮಾನದ ಪಿಶಾಚಿ ಹೊಕ್ಕವರು ಎಲ್ಲದರಲ್ಲೂ ಅನುಮಾನವನ್ನೇ ಕಾಣುತ್ತಾರೆ. ಕುಳಿತರೂ ಅನುಮಾನ, ನಿಂತರೂ ಅನುಮಾನ, ಯಾರದಾದರೂ ಫೋನ್ ಬಂದರೂ ಅನುಮಾನ, ಮೆಸೇಜ್ ಬಂದರೂ ಅನುಮಾನ, ಯಾರ ಜೊತೆ ಮಾತನಾಡಿದರೂ ಅನುಮಾನ.
ಅನುಮಾನ ಎನ್ನುವುದು ರಕ್ತದಲ್ಲಿ ಸೇರಿಬಿಟ್ಟರೆ ಅದು ಕಾಮಾಲೆ ಕಾಯಿಲೆ ಇದ್ದಂತೆ. ಕಾಣುವುದೆಲ್ಲ ಹಳದಿಯೇ ಆಗಿರುತ್ತದೆ. ಆದರೆ ಜೊತೆಯಲ್ಲಿ ಇರುವವರಿಗೆ ಆಗುವ ಮಾನಸಿಕ ಚಿತ್ರ ಹಿಂಸೆ ಇದೆಯಲ್ಲ ಅದು ಬೇರೆಯವರ ಕಣ್ಣಿಗೆ ಕಾಣಲು ಸಾಧ್ಯವಿಲ್ಲ. ಅನುಭವಿಸುವವರಿಗೇ ಗೊತ್ತು ಆ ಮಗ್ಗುಲು ಮುಳ್ಳಿನ ನೋವು. ಒಂದೋ ದುಃಖಿಸುತ್ತಾ ಅನುಭವಿಸಬೇಕು, ಇಲ್ಲವಾದರೆ ಧೈರ್ಯವಾಗಿ ಬಿಟ್ಟು ನಡೆದು ದೂರ ಹೋಗಬೇಕು ಇವೆರಡೂ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ನಾನು ಧೈರ್ಯವಾಗಿ ಒಂಟಿಯಾಗಿ ಬದುಕುವುದನ್ನು ಆಯ್ದುಕೊಂಡೆ.
ಮೇಡಂ ನನಗೆ ಡೈವರ್ಸ್ ತೆಗೆದುಕೊಳ್ಳಬೇಕು ಎಂದು ನಿಜವಾಗಿಯೂ ಇರಲಿಲ್ಲ. ಹೇಗೋ ಮಕ್ಕಳಿಗಾಗಿ ಇದ್ದುಬಿಡೋಣ ಎಂದುಕೊಂಡಿದ್ದೆ. ಆತ ಡೈವರ್ಸ್ ನೋಟಿಸ್ ಕೊಟ್ಟಿದ್ದು ನನ್ನ ಕೈ ಸೇರಿದಾಗಲೇ ತಿಳಿದಿದ್ದು. ಡೈವರ್ಸ್ ನೋಟಿಸ್ ಬಂದದ್ದು ನೋಡಿ ಗಾಬರಿಯಿಂದ ಏನಿದು ಎಂದು ಕೇಳಿದಾಗ ಯಾವುದೋ ಕೆಟ್ಟಗಳಿಗೆ ಕೊಟ್ಟುಬಿಟ್ಟೆ. ನಾನು ಅದನ್ನು ಹಿಂಪಡೆಯುತ್ತೇನೆ. ನೀನೇನು ಕೋರ್ಟಿಗೆ ಬರುವುದು ಬೇಡ ಎಂದು ಹೇಳಿದರು.
ಗಂಡನನ್ನು ನಂಬದೇ ಇನ್ಯಾರನ್ನು ನಂಬಬೇಕು ಮೇಡಂ? ಹೋಗಲಿ ಯಾವುದೋ ವಿಷ ಗಳಿಗೆ ಇರಬೇಕು. ಎರಡು ಮಕ್ಕಳ ತಂದೆ ಅಲ್ವಾ ಹಾಗಾಗಿ ಡ್ರೈವರ್ಸ್ ಕೊಡುವುದು ಬೇಡ ಎಂದುಕೊಂಡಿರಬೇಕು. ಏಕೆಂದರೆ ಡೈವರ್ಸ್ ಎನ್ನುವುದು ಮಕ್ಕಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದು ನನಗೆ ಗೊತ್ತು. ಹಾಗಾಗಿ ಹೋಗಲಿ ಬಿಡು ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ಸುಮ್ಮನಾದೆ. ಎಷ್ಟೋ ತಿಂಗಳಾದ ಮೇಲೆ ನನಗೆ ತಿಳಿಯಿತು ಕೋರ್ಟಿನಲ್ಲಿ ಕೇಸ್ ನಡೆಯುವಾಗ ನಾನು ಹೋಗದೆ ಇದ್ದುದರಿಂದ ಅವರು ಕೋರ್ಟಿಗೆ ಹೋಗಿ ಅವರ ಪರವಾಗಿ ಹೇಳಿಕೊಂಡು ಡೈವೋರ್ಸ್ ಆಗಿ ಹೋಗಿತ್ತು. ಡೈವರ್ಸ್ ಆಗಿರುವುದು ನನಗೆ ಗೊತ್ತಿಲ್ಲದೆ ಅದಾದ ಮೇಲೆಯೂ ತಿಂಗಳುಗಟ್ಟಲೆ ಒಂದೇ ಮನೆಯಲ್ಲಿ ಇದ್ದೆವು.
ಯಾವಾಗ ಡೈವರ್ಸಿನ ವಿಷಯ ನನಗೆ ತಿಳಿಯಿತೋ ಅಸಹ್ಯವಾಗಿ ನಾನು ಬೇರೆ ಮನೆ ಮಾಡಿಕೊಂಡು ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ. ನೋಡಿ ಮೇಡಂ ಅವರ ಅನುಮಾನ ಮತ್ತು ಕೆಟ್ಟ ಬುದ್ಧಿ ಎಷ್ಟಿದೆ ಎಂದು” ಎಂದು ಒಂದು ಪತ್ರವನ್ನು ತೋರಿದರು. ಅದು ಇವರು ಕೆಲಸ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರ. ’ನಿಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಇಂತಿಂಥ ಹೆಂಗಸು ತುಂಬಾ ಕೆಳಮಟ್ಟದ ನಡವಳಿಕೆ ಉಳ್ಳವಳು, ಅವಳಿಗೆ ನಿಮ್ಮ ಶಾಲೆಯ ……….. ಹೆಸರಿನ ಜವಾನನೊಂದಿಗೆ ಅನೈತಿಕ ಸಂಬಂಧವಿದೆ, ಈ ಹಿಂದೆಯೂ ಇದ್ದ ಶಾಲೆಯಲ್ಲೂ ………. ಇಂಥವರ ಜೊತೆ ಅನೈತಿಕ ಸಂಬಂಧವಿತ್ತು. ನಿಮ್ಮ ಮಕ್ಕಳ ಭವಿಷ್ಯ ಇಂಥವರ ಕೈಗೆ ಕೊಡುವುದು ಸರಿಯೇ? ಹಾಗಾಗಿ ಈಕೆಯನ್ನು ಶಾಲೆಯಿಂದ ಉಚ್ಛಾಟಿಸಿ ಅವರಿಗೆ ಯಾವ ಕೆಲಸವೂ ಇರದ ಹಾಗೆ ನೋಡಿಕೊಳ್ಳಿ’ ಎಂದು ಬರೆದಿತ್ತು. ಎಷ್ಟು ಸುದೀರ್ಘ ಪತ್ರವೆಂದರೆ ಅದನ್ನು ಓದುತ್ತಾ ಓದುತ್ತಾ ಬಳಸಿದ ಪದಗಳನ್ನು ನೋಡಿ ನನಗೇ ಅಸಹ್ಯ ಅನಿಸಿತು.
“ನೋಡಿ ಮೇಡಂ ನಾನು ಬೇರೆ ಇದ್ದು ನೆಮ್ಮದಿಯಾಗಿ ಬದುಕುತ್ತೇನೆ ಎಂದರೂ ಆ ನೆಮ್ಮದಿಗೂ ಕಲ್ಲು ಇಡುತ್ತಾರೆ. ನಾನು ನೆಮ್ಮದಿಯಾಗಿ ಇರುವುದು ಅವರಿಗೆ ಸಹಿಸುವುದಿಲ್ಲ. ಇಂಥವರು ಮದುವೆ ಯಾಕೆ ಆಗಬೇಕಿತ್ತು?
ನನ್ನ ಮತ್ತು ಅವರ ಹೆಸರಿನಲ್ಲಿ ಜಂಟಿಯಾಗಿ ಸಾಲ ಮಾಡಿ ಒಂದು ಮನೆ ಖರೀದಿ ಮಾಡಿದ್ದೆವು. ಅದರ ಸಾಲದ ವಂತಿಕೆಯನ್ನು ನಾನೇ ಕಟ್ಟುತ್ತಿದ್ದೆ” ಎಂದರು.
“ಸರಿ ನೀವೇ ಕಂತನ್ನು ಕಟ್ಟುವುದಕ್ಕೆ ಸಾಕ್ಷಿ ಇದ್ದರೆ ಆ ಮನೆ ನಿಮಗೆ ಸಿಗುತ್ತಲ್ಲಾ. ಹೋಗಲಿ ಬಿಡಿ ಅದಾದರೂ ಸಿಗುತ್ತದಲ್ಲಾ” ಎಂದೆ.
“ಇಲ್ಲ ಮೇಡಂ ಆತ ಎಷ್ಟು ಕ್ರಿಮಿನಲ್ ಎಂಬುದು ನನಗೆ ಈಗ ತಿಳಿಯುತ್ತಿದೆ. ಸಾಲದ ಖಾತೆ ಜಂಟಿಯಾಗಿದ್ದರೂ ನನ್ನ ಖಾತೆಯಿಂದ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಕೊಡಿಸಿರಲಿಲ್ಲ. ನನ್ನ ಎಟಿಎಂನಿಂದ ಹಣ ಪಡೆದು ಅವರೇ ಹೋಗಿ ಸಾಲದ ಖಾತೆಗೆ ನೇರವಾಗಿ ಕ್ಯಾಶ್ ಜಮಾ ಮಾಡುತ್ತಿದ್ದರು. ನಾನು ಸಾಲದ ಇಎಂಐ ಕಟ್ಟಿದ್ದಕ್ಕೆ ಯಾವ ಸಾಕ್ಷಿಯೂ ಇಲ್ಲದಂತೆ ಮಾಡಿದ್ದಾರೆ. ಮುಂದೊಂದು ದಿನ ಹೀಗೆ ಡೈವರ್ಸ್ ಆಗಬಹುದು ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಕಡೆಯ ಪಕ್ಷ 75ರಿಂದ 80 ಲಕ್ಷ ರೂಪಾಯಿ ಬೆಲೆ ಬಾಳುವ ಆ ಮನೆಯಅದರ ಪೂರ್ತಿ ಕಂತನ್ನು ನಾನೇ ಕಟ್ಟಿದ್ದೇನೆ. ಆದರೂ ಈಗ ಆ ಮನೆ ನನಗೆ ಬರುವುದು ಅನುಮಾನ. ನನಗೆ ಅದು ಬೇಕಾಗೂ ಇಲ್ಲ ಬಿಡಿ ಮೇಡಂ. ಏನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ, ನನ್ನ ತಂಟೆಗೆ ಬರದಿದ್ದರೆ ಸಾಕು ಎನಿಸಿದೆ” ಎಂದು ಕಣ್ಣು ಒರೆಸಿಕೊಂಡರು.
“ಹೋಗ್ಲಿ ಬಿಡಿ ನಿಮ್ಮ ಬಗ್ಗೆ ನಿಮ್ಮ ಸಹೋದ್ಯೋಗಿಗಳಿಗೆ ಗೊತ್ತಿದೆಯಲ್ಲ. ಯಾಕೆ ಚಿಂತೆ ಮಾಡುತ್ತೀರಿ. ನಿಮ್ಮ ಮಕ್ಕಳಿಗೆ ಒಂದಲ್ಲಾ ಒಂದು ದಿನ ಅರ್ಥವಾಗುತ್ತದೆ. ಅವರು ನಿಮ್ಮ ಪರವಾಗಿ ನಿಲ್ಲುತ್ತಾರೆ. ಸಮಾಧಾನ ಮಾಡಿಕೊಳ್ಳಿ” ಎಂದೆ.
“ಎಲ್ಲಿ ಸಮಾಧಾನ ಮೇಡಂ? ಮಕ್ಕಳ ಶಾಲೆ ಬಿಡುವ ಹೊತ್ತಿಗೆ ಅವರು ಶಾಲೆಯ ಬಳಿಗೆ ಹೋಗಿ ಅವರನ್ನು ಚೆನ್ನಾಗಿ ಮಾತನಾಡಿಸುತ್ತಾರೆ. ಕರೆದುಕೊಂಡು ಹೋಗಿ ಐಸ್ ಕ್ರೀಮ್ ಚಾಕಲೇಟ್ ಕೊಡಿಸಿ ಹೋಟೆಲಿಗೆ ಹೋಗಿ ತಿಂಡಿ ತಿನಿಸುತ್ತಾರೆ. ಮಕ್ಕಳಿಗೆ ಇಬ್ಬರಿಗೂ ಮೊಬೈಲ್ ಕೊಡಿಸಿದ್ದಾರೆ. ಆಗಾಗ ಮೊಬೈಲ್ನಲ್ಲಿ ಮಾತನಾಡುತ್ತಾ ಇರುತ್ತಾರೆ. ಎಷ್ಟೊಂದು ದಿನ ಮಧ್ಯರಾತ್ರಿ ಕರೆ ಮಾಡಿ ಮಕ್ಕಳಿಗೆ ಹೊರಗೆ ಬನ್ನಿ ಅನ್ನುತ್ತಾರೆ. ಮಕ್ಕಳು ಬಾಗಿಲು ತೆಗೆದುಕೊಂಡು ಹೊರಗೆ ಹೋದರೆ ಅವರಪ್ಪ ಅವರ ಮನೆಗೆ ಕರೆದುಕೊಂಡು ಹೊರಟು ಹೋಗುತ್ತಾರೆ. ನನಗೇನಾದರೂ ಗಾಢವಾದ ನಿದ್ದೆ ಆಗಿಬಿಟ್ಟರೆ ಮನೆ ಬಾಗಿಲು ತೆರೆದು ಮಕ್ಕಳು ಹೋದರೂ ನನಗೆ ಗೊತ್ತಾಗುವುದಿಲ್ಲ. ಯಾವ ಭದ್ರತೆಯಿಂದ ನಾನು ಮನೆಯಲ್ಲಿ ಮಲಗಬೇಕು? ಹಾಗಾಗಿ ನಾ ಒಳ್ಳೆಯ ನಿದ್ದೆ ಮಾಡಿ ಅದೆಷ್ಟು ದಿನಗಳು ಆಗಿವೆಯೋ. ಅಷ್ಟೊಂದು ಅಕ್ಕರೆ ತೋರಿ ಮಕ್ಕಳಿಗೆ ಅದೂ ಇದೂ ಕೇಳಿದ್ದೆಲ್ಲ ಕೊಡಿಸಿ ಅವರಿಗೆ ಒಳ್ಳೆಯವರಾಗುತ್ತಿದ್ದಾರೆ. ಈಗ ನಾ ಹೇಳುವುದೇನೆನ್ನೂ ಮಕ್ಕಳು ಕೇಳುವುದಿಲ್ಲ. ನಾನು ದುಡಿಯುತ್ತಿರುವುದು ಮಕ್ಕಳಿಗಾಗಿ ಅಲ್ಲವೇ ಮೇಡಂ? ಈಗ ಮಕ್ಕಳ ಮೇಲೂ ನನಗೆ ಎಲ್ಲಾ ಆಸೆಗಳು ಬಿಟ್ಟು ಹೋಗುತ್ತಿವೆ. ಅವರು ಯಾವಾಗ ಅಲ್ಲಿಯೇ ಹೋಗಿಬಿಡುತ್ತಾರೋ ಗೊತ್ತಿಲ್ಲ. ತಾಯಿಯಾಗಿ ನಾನು ಕರ್ತವ್ಯ ನಿರ್ವಹಿಸುತ್ತಾ ಇದ್ದೇನೆ ಅಷ್ಟೇ”
ಇಷ್ಟು ಹೇಳುವ ಹೊತ್ತಿಗೆ ಆಕೆಗೆ ತುಸು ಸಮಾಧಾನ ಬಂದ ಹಾಗಿತ್ತು. ಯಾರ ಮುಂದಾದರೂ ಹೇಳಿಕೊಂಡು ಅತ್ತು ಬಿಟ್ಟರೆ ಎದೆಭಾರ ಅರ್ಧವಾದರೂ ಕಡಿಮೆಯಾಗಿ ಬಿಡುತ್ತದೆ.
ನನಗೆ ನಿಜಕ್ಕೂ ಶಾಕ್ ಆಯ್ತು ಏಕೆಂದರೆ ಅವಳೇ ಸಾಲ ಕಟ್ಟಿದ ಮನೆಯ ಮೇಲೆ ಆಕೆಗೆ ಹಕ್ಕಿರುವುದಿಲ್ಲ, ಅಷ್ಟು ಪ್ರಿಪ್ಲ್ಯಾಂಡ್ ಆಗಿ ಆತ ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವಳೇ ಹೆತ್ತ ಮಕ್ಕಳ ಜೊತೆಗೂ ನಂಟಿನ ಗಂಟನ್ನು ನಿಧಾನವಾಗಿ ಬಿಡಿಸುವ ಕೆಲಸವನ್ನು ಆತ ಮಾಡುತ್ತಿದ್ದಾನೆ ಎಂದರೆ ಗಂಡ ಹೆಂಡತಿಯ ಸಂಬಂಧ ಎಷ್ಟು ಜಾಳಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿತು.
ಯಾರನ್ನು ಹೇಗೆ ನಂಬುವುದು ಎನ್ನುವ ದೊಡ್ಡ ಭಯ ಇಂಥ ಘಟನೆಗಳಿಂದ ಸಮಾಜದ ಮುಂದೆ ಬಂದು ನಿಲ್ಲುತ್ತದೆ.
ಸಣ್ಣಪುಟ್ಟ ಹಣಕ್ಕಾಗಿ ಅಜ್ಜಿತಾತನನ್ನು ಕೊಲ್ಲುವ ಮೊಮ್ಮಕ್ಕಳು; ಆಸ್ತಿಗಾಗಿ ಅಣ್ಣ-ತಮ್ಮಂದಿರನ್ನೇ ಕೊಲ್ಲುವ ಸಹೋದರರು, ಪ್ರೀತಿಸಿದವರನ್ನು ಚೂರು ಚೂರು ಮಾಡಿ ಕತ್ತರಿಸಿ ಫ್ರಿಜ್ಜಿನಲ್ಲಿ ಇಡುವುದು; ಪ್ರಿಯಕರನಿಗಾಗಿ ತನ್ನ ಪತಿಯನ್ನು ಕೊಲ್ಲುವ ಪತ್ನಿ – ಇವೆಲ್ಲವನ್ನೂ ನೋಡಿದಾಗ ಸಂಬಂಧಗಳಿಗೆ ಏನು ಬೆಲೆ ಮತ್ತು ಯಾವ ರಕ್ಷಣೆ? ಯಾವ ಧೈರ್ಯದಿಂದ ಕಣ್ಮುಚ್ಚಿ ನಿದ್ರಿಸಬಹುದು? ಎಂಬ ಭಯ ಆತಂಕ ಕೇಳಿದ ನೋಡಿದ ಓದಿದ ಸಮಾಜದ ಎಲ್ಲರನ್ನು ಕಾಡುವುದು ತೀರಾ ಸಹಜವಾಗಿದೆ.
ಹಣ ಒಂದೇ ಬದುಕಿನ ದೊಡ್ಡ ಸಾಧನೆಯೇ ಎಂಬ ಪ್ರಶ್ನೆಯನ್ನು ಕೂಡ ಮೂಡಿಸುತ್ತದೆ.
ಯೋಚಿಸಿ ಮುಂದಿನ ಹೆಜ್ಜೆ ಇಡಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ.
-ಡಾ. ಶುಭಶ್ರೀಪ್ರಸಾದ್, ಮಂಡ್ಯ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು