December 27, 2024

Newsnap Kannada

The World at your finger tips!

deepa1

ಬದುಕಿನ ಸುರಕ್ಷತೆಯೇ ಇಲ್ಲ ಎಂದ ಮೇಲೆ ಸುಂದರ ಕನಸು ಇರುವುದಾದರೂ ಹೇಗೆ ?

Spread the love

ಮಾಗಿಯ ಚಳಿಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಬೆಳಗಿನ ಸುಖ ನಿದ್ರೆಯಲ್ಲಿ ಇರುವಾಗ ನಿಮ್ಮ ಎರಡು ವರ್ಷದ ಪುಟ್ಟ ಕಂದ ಎಚ್ಚರವಾಗಿ ಮಬ್ಬುಗತ್ತಲಿಗೆ ಸಣ್ಣಗೆ ಭಯಗೊಂಡು ನಿಮ್ಮನ್ನು ತಬ್ಬಿ ಹಿಡಿದು ಸಾವಿಲ್ಲದ ಚಿರಂಜೀವಿ ಎಂಬಷ್ಟು ಭದ್ರತೆಯಿಂದ ಮಲಗಿದಾಗ ಅದರ ಕದಲುವಿಕೆಯಿಂದ ಎಚ್ಚರಗೊಂಡ ನೀವು ಅದರ ನಿಷ್ಕಲ್ಮಶ ಮುದ್ದು ಮುಖವನ್ನು ನೋಡಿದಾಗ ಆಗುವ ಆನಂದ ಜೀವನದುದ್ದಕ್ಕೂ ಇರಬೇಕೆ ?

ಹಬ್ಬದ ದಿನ ನಿಮ್ಮ ಅತ್ಯಂತ ಪ್ರೀತಿಯ, ನಿಮ್ಮ ಪಾಲಿಗೆ ವಿಶ್ವ ಸುಂದರಿಯಷ್ಟು ಮನಮೋಹಕ ನೋಟದ ನಿಮ್ಮ ಪತ್ನಿ ಹದವಾಗಿ ಬಿಸಿಯಾದ ಐದಾರು ತೈಲ ಮಿಶ್ರಿತ ಅತ್ಯುತ್ತಮ ಆಯುರ್ವೇದ ಗುಣದ ಎಣ್ಣೆಯಿಂದ ನಿಮ್ಮನ್ನು ಪ್ರೀತಿಯಿಂದ ಮುದ್ದಿಸುತ್ತಾ ತನ್ನ ಕೋಮಲ ಕೈಗಳಿಂದ ಮಸಾಜ್ ಮಾಡುತ್ತಾ ನಿಮ್ಮ ಬಗ್ಗೆ ಅತೀವ ಪ್ರೀತಿ ತೋರುವ ಅತ್ಯದ್ಭುತ ಕ್ಷಣಗಳು ನಿರಂತರವಾಗಿ ಇರಬೇಕೆ ?

ತನ್ನೆಲ್ಲಾ ಸಂಕಷ್ಟಗಳ ನಡುವೆಯೂ ತಾನು ಜೀವನದಲ್ಲಿ ದುಡಿದ ಎಲ್ಲವನ್ನೂ ಒಬ್ಬಳೇ ಮಗಳಾದ ನಿಮಗಾಗಿ ಸಂಪೂರ್ಣ ಅರ್ಪಿಸಿ ನಿಮ್ಮಿಷ್ಟದ ಹುಡುಗನೊಂದಿಗೆ ತುಂಬು ಹೃದಯದಿಂದ ಮದುವೆ ಮಾಡಿ, ನಿಮಗೆ ನಿಮ್ಮ ಪ್ರೀತಿಯವ ತಾಳಿ ಕಟ್ಟುವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ನಿಮಗೆ ಅಕ್ಷತೆ ಹಾಕುವ ನಿಮ್ಮ ಪಪ್ಪನ ಸಾರ್ಥಕತೆಯ ಮುಖಭಾವಕ್ಕೆ ನೀವು ಕೃತಜ್ಞತೆ ಸಲ್ಲಿಸಬೇಕೆ ?

ಯೌವನದ ಉತ್ತುಂಗದಲ್ಲಿ – ಜೀವನದಲ್ಲಿ ಒಮ್ಮೆ ಮಾತ್ರ ಮೊದಲ ” ಆ ” ಕ್ಷಣ ಅನುಭವಿಸಬಹುದಾದ ನಿಮ್ಮ ಪ್ರೇಯಸಿ/ಪ್ರಿಯತಮನೊಂದಿಗೆ ಕಾಶ್ಮೀರದ ಗುಲ್ ಮಾರ್ಗ/ ಉತ್ತರಕಾಂಡದ ಮಸ್ಸೂರಿ/ ಹಿಮಾಚಲ ಪ್ರದೇಶದ ಸಿಮ್ಲಾ – ಕುಲು ಮನಾಲಿ/ಕೇರಳದ ಮೂನಾರ್/ಕನ್ನಡನಾಡಿನ ಕೊಡಗು ಮುಂತಾದ ಹಿಮಾಚ್ಚಾದಿತ ಗಿರಿಶಿಖರಗಳ ನಡುವೆ ಮೊದಲ ರಾತ್ರಿಯ ಸವಿ ಪಡೆಯುವ ಜೀವನಮಟ್ಟ ನಿಮ್ಮದಾಗಬೇಕೆ ?

ನಿಮ್ಮ ಉತ್ತರ ಹೌದು ಎಂದಾದಲ್ಲಿ ದಯವಿಟ್ಟು ಗಮನಿಸಿ……….

ಭಾರತದ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ನಿಮ್ಮ ಮೇಲಿನ ಕನಸುಗಳಿಗೆ ಅಡ್ಡಿಯಾಗಬಹುದಾದ ಸಾಧ್ಯತೆ ಹೆಚ್ಚಾಗಿದೆ. ಇದು ಈಗಲ್ಲದಿದ್ದರೂ ಇದೇ ವೇಗದಲ್ಲಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಸಂಭವಿಸಬಹುದು.

ಇರಾಕ್ ಸಿರಿಯಾ ಯೆಮನ್ ಆಪ್ಫನಿಸ್ತಾನ ಲಿಬಿಯಾ ಪಾಕಿಸ್ತಾನ ಇಥೋಪಿಯಾ ಉಗಾಂಡ ನೈಜೀರಿಯಾ ಮುಂತಾದ ದೇಶಗಳು ಬಹುತೇಕ ಜನರು ಈ ರೀತಿಯ ಕನಸು ಕಾಣುವ ಸ್ಥಿತಿಯಲ್ಲಿಯೇ ಇಲ್ಲ. ಬದುಕಿನ ಸುರಕ್ಷತೆಯೇ ಇಲ್ಲದಿರುವಾಗ ಸುಂದರ ಕನಸು ಇರುವುದಾದರೂ ಹೇಗೆ ?

ಆದರೆ ಭಾರತೀಯರಾದ ನಮ್ಮ ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ. ಇನ್ನೂ ನಮ್ಮ ಆಡಳಿತ ನಿಯಂತ್ರಣದಲ್ಲೇ ಇದೆ.
ಆದರೆ ದಾರಿ ತಪ್ಪುತ್ತಿರುವುದು ಮಾತ್ರ ವಾಸ್ತವ.

ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಅಜ್ಞಾನ ಮೂರ್ಖತನ ಮತ್ತು ದಿಡೀರ್ ದೊರೆತ ಹಣದ ದುರಹಂಕಾರ ಮತ್ತು ಸ್ವಾತಂತ್ರ್ಯ ಹಾಗೂ ಸ್ವೇಚ್ಚತೆಯ ನಡುವಿನ ಅಂತರ ಗುರುತಿಸುವಲ್ಲಿನ ವಿಫಲತೆ…..

ಎಡ – ಬಲ, ಕಾಂಗ್ರೆಸ್ – ಬಿಜೆಪಿ – ಕಮ್ಯುನಿಸ್ಟ್, ಹಿಂದು – ಮುಸ್ಲಿಂ – ಕ್ರಿಶ್ಚಿಯನ್, ಆರ್ಯ – ದ್ರಾವಿಡ, ಬ್ರಾಹ್ಮಣ – ದಲಿತ, RSS – VHP – SDPI – PFI – ABCD – ಅದು ಇದು ಹೀಗೆ ಅನೇಕ ಅನವಶ್ಯಕ ವಿಭಜನೆಗಳು ಇಂದು ತನ್ನ ಅಬ್ಬರ ಪ್ರದರ್ಶಿಸುತ್ತಿವೆ.
ಇದೆಲ್ಲವೂ ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ವ್ಯವಸ್ಥೆಗಳೇ ಹೊರತು ಬೇರೇನಲ್ಲ.

ಆದರೆ ಇಂದು ಅವುಗಳೇ ನಮ್ಮನ್ನು ನಿಯಂತ್ರಿಸಿ ನಮ್ಮನ್ನು ಅವುಗಳ ಗುಲಾಮರಾಗಿಸಿಕೊಂಡಿವೆ. ನಮ್ಮ ಸ್ವಂತಿಕೆಯನ್ನೇ ಕಿತ್ತುಕೊಂಡಿವೆ.
ನಮ್ಮ ನಿಯತ್ತು ನಿಷ್ಠೆ ಗೌರವ ಇರಬೇಕಾದುದು ಸೃಷ್ಟಿಗೇ ಹೊರತು ಈ ಸಂಸ್ಥೆ ಅಥವಾ ಸಿದ್ದಾಂತಗಳಿಗಲ್ಲ. ಅವು ನಮ್ಮ ಅಸ್ತಿತ್ವಕ್ಕೇ ಧಕ್ಕೆ ತರುತ್ತಿವೆ.

ಆದ್ದರಿಂದ ದಯವಿಟ್ಟು ಅವುಗಳ ಬಗ್ಗೆ ಎಚ್ಚರಿಕೆ ವಹಿಸೋಣ.

  • ವಿವೇಕಾನಂದ ಹೆಚ್ ಕೆ‌
Copyright © All rights reserved Newsnap | Newsever by AF themes.
error: Content is protected !!