ರೀ…. ರೀ….. ರ್ರೀ…..
ನನ್ನ ಸತೀಶಿರೋಮಣಿಯ ಕೂಗು ಶೃತಿಯಲ್ಲೂ, ಕಾಲಗತಿಯಲ್ಲೂ ಏರುತ್ತ (ಅಂದ್ರೆ ಸಂಗೀತದಲ್ಲಿ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ ಅಂತ ವೇಗ ಹೆಚ್ಚಿಸುತ್ತಾರಲ್ಲ) ಜೊತೆಗೆ ಸೊರಸೊರ ಎನ್ನುವ ತಾಳಮದ್ದಳೆಯೂ ಸೇರುತ್ತ ಎರಡು ದಿನಗಳಿಂದ ಶೇವಿಲ್ಲದೆ ಪುರುಚಲು ಗಡ್ಡದಿಂದ ಒರಟಾದ ನನ್ನ ಕೆನ್ನೆಯ ಎರಡೂ ಪಕ್ಕದಲ್ಲಿ ‘ಓ’ ಎಂದು ಬಾಯ್ಬಿಟ್ಟುಕೊಂಡಿರುವ ನನ್ನ ಕರ್ಣಂಗಳು ಪಾವನವಾದವು.
ದಿನವೂ ಧಾವಂತವೇ. ಬೆಳಿಗ್ಗೆ ಎದ್ದು ಗಟಗಟ ಅಂತ ಕಾಫಿಯನ್ನು ಗಂಟಲಿಗೆ ಸುರುವಿಕೊಂಡು, ದಢ ಬಢ ಅಂತ ಹೆಂಡ್ತಿ ಕೊಟ್ಟಿದ್ದನ್ನು ತಿಂದು, ಸಿಟಿ ಬಸ್ಸಿನಲ್ಲಿ ತೂರಿಕೊಂಡು, ಕೂತುಕೊಳ್ಳಲು ಜಾಗ ಇಲ್ಲ್ದಿದ್ದ್ರೆ ನೇತಾಡುತ್ತ ಉಸ್ಸಪ್ಪಾ ಅಂತ ನಿಟ್ಟುಸಿರಿಟ್ಟು ಆಫೀಸಿಗೆ ಕಾಲಿಡೋದೇ ತಡ ಆ ಕೆಲ್ಸ ಈ ಕೆಲ್ಸ ಆಂತ ಮುಳುಗಿ ಸಂಜೆಯಾಗೋದೇ ಗೊತ್ತಾಗೋಲ್ಲ. ಮತ್ತದೇ ಬಸ್ಸಿನಲ್ಲಿ ನೇತಾಡುತ್ತ ಮನೆಗೆ ಬರುವ ಹೊತ್ತಿಗೆ ಸೂರ್ಯ ಗೊರಕೆ ಹೊಡೀತಿರ್ತಾನೆ. ಲೇಟಾದ ದಿನ ಹೆಂಡತಿಯ ಮುಖ ಗಡಿಗೆ ಗಾತ್ರವೇ ಆಗಿರುತ್ತೆ. ರಾತ್ರಿ ಬಡಿಸೋ ಊಟ ಸಶಬ್ದವಾಗಿರುತ್ತಷ್ಟೇ..
ಈವತ್ತು ಭಾನುವಾರ. ಸಿಗೋದೊಂದೇ ಭಾನುವಾರ ವಾರಕ್ಕೆ. ಅಪರೂಪಕ್ಕೆ ಎನುವಂತೆ ನಿಧಾನವಾಗಿ ಸೊರ್ ಸೊರ್ ಅಂತ ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುತ್ತ, ನ್ಯೂಸ್ ಪೇಪರಿನ ಮೇಲೆ ಗತ್ತಿನಿಂದ ಕಣ್ಣಾಡಿಸುತ್ತ, ನಿರುಮ್ಮಳವಾಗಿ ಓದೋಣ ಅಂತ ಕನ್ನಡಕ ಏರಿಸಿ ಕುಳಿತಿದ್ರೆ, ನನ್ನಾಕೆಯ ಏರುದನಿಯ ‘ರ್ರೀ’ಕಾರ ನನ್ನನ್ನು ಪೇಪರ್‍ಇಂದ ಹೊರಗಿಣುಕಿಸಿತು.
ಇನ್ನೂ ಇಲ್ಲೇ ಕೂತಿದ್ರೆ ಭಾನುವಾರದ ರುಚಿಯಾದ ತಿಂಡಿಗೆಲ್ಲಿ ಸಂಚಕಾರ ಬರುತ್ತೋ ಅಂತ ಹೆದರಿ ಅಡುಗೆ ಮನೆಕಡೆಗೆ ಹೋದೆ. ನನ್ನ ಹೆಂಡತಿ ಸಾಕ್ಷಾತ್ ಅನ್ನಪೂರ್ಣೆಯೇ. ಏನು ಮಾಡಿದ್ರೂ ಅಚ್ಚುಕಟ್ಟಾಗಿ ರುಚಿಶುಚಿಯಾಗಿ ಮಾಡ್ತಾಳೆ. ಆದ್ರೆ ‘ಏನ್ ಮಾಡೋದು’ ಎಷ್ಟಾದರೂ ಹೆಣ್ಣಲ್ಲವೇ? ಸಿಟ್ಟು ಬಂದಾಗ ಕಾದ ಕಾವಲಿಯಂತೆಯೂ, ಪ್ರೀತಿ ಹೆಚ್ಚಾದಾಗ ರಸಗುಲ್ಲಾದಂತೆಯೂ, ದುಃಖವಾದಾಗ ಗಂಗಾ ಧಾರೆಯಂತೆಯೂ ಅವತಾರ ಎತ್ತುತ್ತಿರುತ್ತಾಳೆ.
ಅಡುಗೆ ಮನೆಯಲ್ಲಿ ಅಚ್ಚುಕಟ್ಟಾಗಿ ಆಂಡಾಳಮ್ಮನ ಥರ ಚಕ್ಕಳಮಕ್ಕಳ ಹಾಕಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ನೋಡಿ ನನಗೆ ನಗೂನೂ, ಗಾಬರೀನೂ. ಹೆಂಡ್ತಿ ಗಂಭೀರವಾಗಿದ್ದಾಗ ಗಂಡ ನಕ್ಕರೆ ಕೆಲ್ಸ ಕೆಡುತ್ತೆ ಅಂತ ಗೊತ್ತು. ಅದೇ ನಾವು ದಡಬಡ ಅನ್ನೋವಾಗ, ಸೀರಿಯಸ್ ಆಗಿದ್ದಾಗ ನಮ್ಮ ಅವಾಂತರ ನೋಡಿ ಕಿಸಕ್ಕನೆ ನಕ್ಕ್ರೂ ನಾವು ಕೋಪ ಮಾಡ್ಕೊಳ್ಳೋ ಹಾಗಿಲ್ಲ. ಗಂಡಸರ ಪಾಡೇ…
ನಗೆಯನ್ನು ಅಡಗಿಸುತ್ತಾ “ಏನ್ರೀ ಮಹಾರಾಣಿಯವರೇ,, ಆಷ್ಟೂ ಜೋರಾಗಿ ಕೂಕೋತಿದ್ರೀ… ಏನ್ಸಮಾಚಾರ? ಏನಾದ್ರೂ ತರಬೇಕಿತ್ತಾ?” ಅಂತ ಕೇಳಿದೆ. “ಇಲ್ಲಾರೀ ಅದೂ…..” ಅಂತ ರಾಗ ಎಳೆದಳು. ಅವ್ಳು ರಾಗ ಎಳೆದಳೂಂದ್ರೆ ನನಗೋ, ನನ್ನ ಜೇಬಿಗೋ ಸಂಚಕಾರ ಬಂತೂ ಅಂತಾನೇ. ಮೆಲ್ಲಗೆ “ಏನಮ್ಮಾ” ಅಂದೆ. “ರೀ ನಮ್ಮಪ್ಪಅಮ್ಮ… ನನ್ ತಮ್ಮನ ಹೆಂಡತಿಯ ಚಿಕ್ಕಪ್ಪನ ಮಗಳ ಮದ್ವೆಗೆ ಹೋಗ್ತಾ ಇದಾರಂತೆ. ಊರಿಗೆ ಹೋಗೋ ದಾರೀಲೇ ತಾನೇ ನಮ್ ಮನೆ. ಅದ್ಕೇ ಎಲ್ರೂ ತಿಂಡಿಗೆ ಇಲ್ಲಿಗೇ ಬನ್ನಿ. ಮಧ್ಯಾಹ್ನ ಊಟ ಮುಗಿಸಿ ರೆಸ್ಟ್ ಮಾಡಿ ಸಂಜೆ ವರಪೂಜೆಯ ಹೊತ್ತಿಗೆ ಹೋಗೀವ್ರಂತೆ ಅಂದೆ. ಎಷ್ಟೋಂದಿನ ಆಗಿತ್ತಲ್ಲ್ವಾ ಅವ್ರೆಲ್ಲಾ ಬಂದೂ. ನಂಗಂತೂ ಎಷ್ಟು ಖುಷಿಯಾಗಿದೆ ಗೊತ್ತಾ?” ಆಂತ ತುಟಿಯನ್ನು ಈ ಕಿವಿಯಿಂದ ಆ ಕಿವಿಯ ತನಕ ಹಿಗ್ಗಿಸಿ ಹೇಳಿದಳು. ನಾನಾಗ್ಲೇ ಭೂಮಿಗೆ ಕುಸಿಯತೊಡಗಿದೆ.
ಅಯ್ಯೋ ಹಾಗಂದ್ರೆ ನಾನು ಅವಳಪ್ಪಅಮ್ಮನ ವಿರೋಧಿ ಅಂತಲ್ಲ ಕಣ್ರೀ. ಅಪ್ಪೀ ತಪ್ಪೀ ತಮಾಷೆಗಾದ್ರೂ ಈ ಮಾತು ನನ್ನ ಮನದನ್ನೆ ಕಿವಿಗೆ ಬಿದ್ರೆ ನನ್ನ ಗತಿ ಗೋವಿಂದ. ಆದ್ರೆ ಅವಳ ಕೆಪ್ಪ ತಮ್ಮ, ಅವನ ತುಂಟ ಮಗು ಮಾಡೋ ಚೇಷ್ಟೆ,,, ರಾಮಾ.. ಕಳೆದ ಸಲ ಅವರು ಎರಡು ಗಂಟೆ ಇದ್ದು ಹೋದ ಮೇಲೆ ಮನೆ ಸುಧಾರಿಸೋಕೆ ನಾನು ಒಂದು ತಿಂಗಳು ಹೆಣಗಾಡಬೇಕಾಯಿತು. ಆದರೆ ಹೆಣ್ಣುಮಕ್ಕಳಿಗೆ ತವರೂ ಅಂದ್ರೆ ಪ್ರಾಣ. ಅದಕ್ಕೆ ನಾ ಬಾಯಿ ಮುಚ್ಚಿಕೊಳ್ಳಲೇಬೇಕು.
“ರೀ. ಎಷ್ಟು ಅಪರೂಪಕ್ಕೆ ಬರ್ತಿದಾರೆ, ಏನ್ ತಿಂಡಿ ಮಾಡ್ಲಿ ಹೇಳ್ರೀ, ಅಡುಗೆ ಏನು ಮಾಡ್ಲಿ,??” ಎಂದು ಸಂಭ್ರಮದಿಂದ ತೊದಲುತ್ತಿದ್ದರೆ, ನನಗೆ ಆ ಮಗುವಿನ ಚೇಷ್ಟೆ ನೆನೆದು ದಿಗಿಲಿನಿಂದ ತೊದಲುವಂತಾಗಿತ್ತು.
ನಿಂತ ಕಡೆ ನಿಲ್ಲದ, ನಿಮಿಷ ಬಾಯಿ ಮುಚ್ಚದ ಆ ತುಂಟ ಹೋದ ಸಲ ನನ್ನ ಕಾಸ್ಟ್ಲೀ ಮೊಬೈಲನ್ನು ವಿಕಲಚೇತನ ಮಾಡಿತ್ತು, ನಮ್ಮನೆ ಟಿ.ವಿಯ ಸೆಟ್‍ಟಾಪ್‍ಬಾಕ್ಸಿನ ಬಾಯಿಯನ್ನೇ ತೆರೆದಿತ್ತು. ಮನೆಯ ಎಲ್ಲ ವಸ್ತುಗಳೂ ಅಸ್ತವ್ಯಸ್ತ. ನಮಗೆ ಇನ್ನೂ ಮಕ್ಕಳಿಲ್ಲ. ನನ್ನಾಕೆಗೋ ತನ್ನ ತವರಿನ ಏಕೈಕ ಚಿಗುರು ಆಂತ ಅದು ಮಾಡಿದ್ದಕ್ಕೆಲ್ಲ ಅಸ್ತು ಅಸ್ತು ಅಂತಾಳೆ. ಅದೇ ನಾನು ಬಿಡೋ ಚಪ್ಪಲಿ ಸ್ವಲ್ಪ ಹಿಂದು ಮುಂದಾದ್ರೂ ‘ಅದ್ಯಾಕ್ರೀ ಹೀಗೆ ಬಿಟ್ಟಿದ್ದೀರಾ? ಸ್ವಲ್ಪಾನೂ ಶಿಸ್ತಿಲ್ಲಪ್ಪಾ. ನಾ ನಿಮ್ಮನ್ನು ಮದುವೇ ಆದ್ಮೇಲೇನೇ ನೀವು ಸ್ವಲ್ಪಾನಾದ್ರೂ ಸುಧಾರಿಸಿರೋದು’ ಅಂತ ಸೋಟೆ ತಿವೀತಿರ್ತಾಳೆ.
ಸರಿ ಬೆಳಿಗ್ಗೆಗೆ ಪೂರಿ ಸಾಗು ಮಧ್ಯಾಹ್ನಕ್ಕೆ ಹಬ್ಬದಡುಗೆ ಮಾಡೋದಂತ ನಿರ್ಧಾರ ಆಯ್ತು. ನನ್ನ ಬಿಸಿ ಕಾಫಿ, ಪೇಪರ್ ಸ್ವಾದ ಎರಡೂ ಅರ್ಧಕ್ಕೇ ನಿಂತು ಹೋಯ್ತು. ನಾ ಅಂಗಡಿಗೆ ಓಡಿದೆ.
ಸರಿ ಹತ್ತಕ್ಕೆ ಅವರೆಲ್ಲಾ ಕಾರಿನಿಂದ ಇಳಿದು ಪಾದಾರ್ಪಣೆ ಮಾಡಿದ್ರು. ಎಲ್ಲರನ್ನೂ ಮಾತಾಡಿಸಿ ಒಳಗೆ ಕರೆತಂದೆ. ನನ್ನಾಕೆಯ ಸಡಗರ ಸಂಭ್ರಮ ನೋಡೇ ತೀರ್ಬೇಕು ಕಣ್ರೀ. ಅವ್ರ ತಿಂಡಿ ತೀರ್ಥ ಆಗೋತನ್ಕ ನಂಗೆ ಪೂರಿಯ ವಾಸನೆಯೇ ಗತಿಯಾಯ್ತು. ಇರ್ಲಿ.. ದಿನಾ ‘ತಿನ್ನಿ ತಿನ್ನಿ’ ಆಂತ ಬಲವಂತವಾಗಿ ಬಡಿಸೋ, ಕೆಲವೊಮ್ಮೆ ಲೇಟಾಗಿದ್ದಾಗ ತಾನೇ ತಿನ್ನಿಸೋ ಸತಿ, ತವರಿನ ಸಂಭ್ರಮದಲ್ಲಿ ನನ್ನ ಮರ್ತಿದಾಳೆ. ಅಡ್ಜಸ್ಟ್ ಮಾಡ್ಕೊಳ್ಳೇಬೇಕಲ್ಲ.. ಇಂದಿನ ತಿಂಡಿ ಅದೇನು ರುಚಿ ಅಂತೀರಿ. ಅವಳಮ್ಮನನ್ನ ನೋಡಿದ ಖುಷೀಲಿ ರುಚಿ ಹೆಚ್ಚಾಗಿರ್ಬೇಕು. ನನ್ನಾಕೆ ತಿಂಡಿಯೂ ತಿನ್ನದೆ ಮಧ್ಯಾಹ್ನದ ಅಡುಗೆಗೆ ಶುರುವಿಟ್ಟಳು. ನನಗೋ ಹೊಟ್ಟೆಯಲ್ಲಿ ಸಂಕಟ. ಅವಳು ಹಸಿದು ಎಲ್ಲರನ್ನೂ ತಣಿಸ್ತಿದಾಳಲ್ಲಾ ಅಂತ. ಅವಳಿಗೆ ಅದರ ಕಡೆ ಗಮನ ಇದ್ರೆ ತಾನೇ?
ಅಮ್ಮ ಮಗಳು ಮಾತಾಡ್ಕೊಳ್ಳಲಿ ಅಂತ ಬಿಟ್ಟು ನನ್ನ ಪಾಡಿಗೆ ಹಾಲಿಗೆ ಬಂದೆ. ನನ್ನ ಭಾವಮೈದುನ ಪಟ್ಟಾಗಿ ಟಿ.ವಿ. ಮುಂದೆ ಕೂತಿದ್ದ. ಮಾವ ಆಗಲೇ ಪವಡಿಸಿದ್ದರು. ಇರೋ ಒಬ್ಬ ಭಾವಮೈದುನನ್ನಾದರೂ ಮಾತಾಡಿಸದೇ ಮೌನವಾಗಿ ಕೂರೋಕಾಗುತ್ಯೇ? “ಏನಪ್ಪಾ ಭಾವಮೈದುನಾ ಊರಿನ ಕಡೆ ಎಲ್ಲಾ ಕುಶಲಾನಾ?” ಅಂತ ಲೋಕಾಭಿರಾಮವಾಗಿ ಕೇಳಿದೆ. ಸ್ವಲ್ಪ ಕೆಪ್ಪು ಅಂತ ಮೊದಲೇ ಹೇಳಿದ್ದೆ ಅಲ್ವಾ? “ಓ ಬಾತ್ ರೂಮಿಗೆ ಹೋಗ್ಬೇಕಾ? ಹೋಗ್ಬನ್ನಿ ಭಾವ. ನಂಗೇನರ್ಜೆಂಟಿಲ್ಲ” ಅಂದ. ಅವ್ನಿಗೆ ಕೇಳ್ಸಿದ್ದು ‘ಬಾ’ ಅಕ್ಷರ ಒಂದೇ ಇರ್ಬೇಕು. ‘ಸು’ ಅಂದ್ರೆ ಸುವ್ವಿ ರಾಗ ಅಂತ ಅದನ್ನೇ ಹೀಗೆ ಅರ್ಥೈಸಿಕೊಂಡು ಯಡವಟ್ಟು ಮಾತಾಡ್ತಿರ್ತಾನೆ. ಅಷ್ಟರಲ್ಲಾಗಲೇ ತುಂಟ ನಮ್ಮ ಸೋಫಾ ಮೇಲೆ ಕರಿದ ಪೂರಿಯನ್ನು ಪುಡಿ ಮಾಡಿ ಉಂಡೆ ಕಟ್ಟುತ್ತಿದ್ದ. ಕಳೆದ ತಿಂಗಳು ತಾನೇ ತಂದಿದ್ದ ಹೊಸ ಸೋಫದ ಗತಿ ನೋಡಿ ನನಗೆ ತಲೆ ಗಿರ್ ಅಂತು. ನನ್ನ ಹೆಂಡತೀನ ಮೆಲ್ಲಗೆ ಕರೆದು ತೋರಿಸಿದೆ. ಅವಳಿಗೂ ಹೇಳಲಾರದ-ಸುಮ್ಮನಿರಲಾರದ ಇಬ್ಬದಿ. ಆಕೆ ನನ್ನಂಥಲ್ಲ. ಬಲುಜಾಣೆ. “ಬಾ ಚಿನ್ನೂ… ನಿನ್ ಕೈಲಿರೋ ಬಳೆ ಯಾವ್ದು?” ಕೇಳಿದಳು. ಅದು ಪೂರಿಯನ್ನು ಉಂಡೆಕಟ್ಟೋದನ್ನು ಮರ್ತು “ಅದಾ ನಿಮ್ಗೆ ಅನ್ಪೂರ್ಣ ಗೊತ್ತಾ?” ಅಂತ ಕೇಳಿತು. ಅಮ್ಮನ ಅಕ್ಕಪಕ್ಕದ ಯಾವುದೋ ಮಗು ಇರ್ಬೇಕು ಆನ್ನಿಸಿಯೂ ನನ್ನವಳು ಸುಮ್ಮನೆ ರೇಗಿಸೋಕೆ “ಹೊರನಾಡಿನ ಅನ್ನಪೂರ್ಣೆನಾ?” ಅಂದಳು. ಅದು ಪ್ರಾಮಾಣಿಕವಾಗಿ “ಔದು ಅತ್ತೆ. ಅದೇ ಕಟೀಲಿಂದ ಸ್ಟ್ರೈಟ್ ಬಲ್ಗಡೆ ತಿರ್ಗಿದ್ರೆ ಅನ್ಪೂರ್ಣ. ಅಲ್ಲೇ ತ್ರಿಶೂಲ ಮಾಮಿ, ಸುಬ್ರ, ಶಿವಮಾಮಿ. ಕಟೀಲಮ್ಮಮಾಮಿ ಎಲ್ಲಾ ಇರ್ತಾರೆ ಅದೂ ಈ ಬಳೆ (ಕಡಗ)” ಅಂತು. ನನ್ನವಳಿಗೋ ಹಿರೀಹಿರೀ ಹಿಗ್ಗು. ತನ್ನಳಿಯ ಎಷ್ಟು ಚಂದ ಮಾತಾಡ್ತಾನೆ ಅಂತ. ನನ್ನ ಮುಂದೆ ಹೆಗ್ಗಳಿಕೆ ತೋರ್ಸೋಕೆ “ನಿಂಗೆ ಹಾಡೋಕೂ ಬರುತ್ತಾ ಪುಟ್ಟಾ?” ಅಂತ ಕೇಳಿದ್ಳು. ಇರಲಾರದೆ ಇರುವೆ ಬಿಟ್ಕೊಳೋದ್ರಲ್ಲಿ ನನ್ನಾಕೆ ಎಕ್ಸ್ಪರ್ಟು. ಮೊದ್ಲೇ ತುಂಟ ಇನ್ನು ಅತ್ತೆಯ ಪೂಸಿ ಸಿಕ್ಕರೆ ಕೇಳ್ಬೇಕಾ “ನಾ ಸಂಗೀತ ಆಡ್ತೀನಿ. ನೀವೆಲ್ಲ ಕಣ್ ಮುಚ್ಕೋಬೇಕಪ್ಪಾ. ಯಾರೂ ಮಾತಾಡ್ಬಾರ್ದು” ಅಂದು “ಸ ರಿ ಡ ಮ ಪ ದ ನಿ ಷಾ.. ಸಾ ನಿ ದ ಪ ಮ ದ ರಿ ಸಾ” ಅಂತ ಹಾಡಿದ್ದೇ ಹಾಡಿದ್ದು. ನನ್ನಾಕೆಯ ಕಣ್ಣಲ್ಲಿ ಆನಂದ ಭಾಷ್ಪ. ನಾನೂ ಸುಮ್ಮನಿರಲಾರದೆ ಅದೇನು ಪುಟ್ಟಾ “ಮ ದ ರಿ ಸಾ.. ಮದರ್ ಅಂದ್ರೆ ಅಮ್ಮ ಗೊತ್ತು, ಮದರಸಾ ಗೊತ್ತು. ಇದ್ಯಾವ್ದು ಮದರಿಸಾ” ಆಂದೆ. ಆ ಮಗೂಗೆ ಎಷ್ಟೂ ಅರ್ಥ ಆಗ್ದಿದ್ದ್ರೂ ನನ್ ಜೋಕಿಂದ ನನ್ನಾಕೆಯ ಶ್ವೇತವದನ ಚೆಂಗುಲಾಬಿಯಂತಾಯ್ತು. ಪಕ್ಕಕ್ಕೆ ಹೋಗಿದ್ರೆ ಮುಳ್ಳೂ ಚುಚ್ಚುತ್ತಿತ್ತೂನ್ನಿ. ವಿಷಯಾಂತರ ಮಾಡೋಕೇಂತ “ಇನ್ನೂ ಆಡುಗೆ ಆಗ್ಬೇಕಲ್ಲ ಡುಮ್ಮಿ” (ನಾವಿಬ್ರೇ ಇರೋವಾಗ ನನ್ನಾಕೆಯನ್ನು ನಾ ಪ್ರೀತಿಯಿಂದ ಹಾಗೇ ಕರ್ಯೋದು. ಹಾಗೆ ಕರ್ಯೋದು ಅವ್ಳಿಗೂ ತುಂಬ ಪ್ರೀತಿ)ಅಂದೆ. ಆದ್ರೆ ರೂಢಿಯಿಂದ ಬಾಯಿತಪ್ಪಿ ಎಲ್ಲರೆದುರೂ ಹಾಗೆ ಕರ್ದದ್ದಕ್ಕೆ ಮರುಮಾತಾಡದೇ ಧುಮುಗುಡುತ್ತ ಅಡುಗೆ ಮನೆ ಕಡೆ ಓಡಿದಳು.
ಅಡುಗೆಯಾಗಿ ಅವರೆಲ್ಲ ತೃಪ್ತಿಯಾಗಿ ತಿಂದರು(ನಾನೂ ತಿಂದೇ ಅನ್ನಿ…). ಅವರನ್ನೆಲ್ಲ ಸ್ವಲ್ಪ ಮಲಗಿ ಅಂತ ಹೇಳಿ ಬಲವಂತವಾಗಿ ನನ್ನವಳಿಗೆ ಊಟ ಬಡಿಸಿದೆ. ಸಂಭ್ರಮದಲ್ಲಿದ್ದ ಆಕೆಗೆ ಊಟದ ಕಡೆ ಗಮನ ಇದ್ದ ಹಾಗೇ ಇರಲಿಲ್ಲ. ಸಂಜೆ ಅವರೆಲ್ಲ ಅಲಂಕಾರ ಮಾಡಿಕೊಂಡು ಊರಿಗೆ ಹೊರಟಾಗ ಇವಳ ಕಣ್ಣಲ್ಲಿ ಕಾವೇರಿ ಪ್ರತ್ಯಕ್ಷ ಆದಳು. ನನಗೋ ಅವಳ ಕಣ್ಣೀರು ಕಂಡು ಸಂಕಟ. ಅವರೆಲ್ಲ ಹೊರಟ ಮೇಲೆ ಮಂಕಾಗಿ ನನ್ನ ಪಕ್ಕ ಕೂತಳು. “ಯಾಕೇ ಚಿನ್ನಾ ಮಂಕಾಗಿದೀಯಾ, ಅವ್ರೆಲ್ಲ ಹೋದ್ರು ಅಂತಾನಾ? ನಾನಿದೀನಲ್ವಾ ನಿಂಗೆ, ಸ್ವಲ್ಪ ನಗ್ಬಾರ್ದಾ? ನೀ ಹೀಗಿದ್ರೆ ನಂಗೆ ಕೈಕಾಲೇ ಓಡಲ್ಲ” ಅಂದೆ. “ಯಾರಿದ್ರೂ ಅಪ್ಪ ಅಮ್ಮ ಇದ್ದಂಗಾಗುತ್ತಾ?” ಅಂತ ಸವಾಲೆಸೆದಳು. ಆಪ್ತ ಸಮಯದಲ್ಲಿ ‘ನೀವೊಬ್ರು ಇದ್ರೆ ನಂಗೆ ಇನ್ಯಾರೂ ಬೇಡ ಕಣ್ರೀ’ ಅನ್ನೋವಾಕೆ ಇವಳೇನಾ ಅಂತ ಅಚ್ಚರಿಯಾಯ್ತು. ಅವಳ ನಗೆ ಕಂಡರೆ ನನಗೆ ಹಬ್ಬ, ನನ್ನ ನಗೆ ಕಂಡರೆ ಅವಳಿಗೆ ಸಂಭ್ರಮ. ನನ್ನ ಮುಖ ಬಾಡಿದಾಗ ಅವಳ ಕಣ್ಣಲ್ಲಿ ನೀರು. ಅವಳ ಕಣ್ಣಲ್ಲಿ ನೀರು ಜಿನುಗಿದರೂ ನನಗೆ ಹೃದಯದಲ್ಲಿ ಕತ್ತರಿಯಾಡಿಸಿದ ಕಸಿವಿಸಿ. ಅವಳೊಬ್ಬಳು ಮನೆಯಲ್ಲಿ ನಗ್ತಾನಗ್ತಾ ಇದ್ದು ಅವಳ ಕಾಲ್ಗೆಜ್ಜೆಯ ಸದ್ದು, ಕೈ ಬಳೆಯ ದನಿ ಇನಿದಾಗಿ ಕೇಳ್ತಾ ಇದ್ದರೆ ಸ್ವರ್ಗ ನಮ್ಮನೆಯಲ್ಲೇ ಅನಿಸುತ್ತೆ. ಅವ್ಳೂ ಹಾಗೇ ಅಂತಿರ್ತಾಳೆ ‘ನೀವು ಆರೋಗ್ಯವಾಗಿ, ನೆಮ್ಮದಿಯಾಗಿ, ಖುಷಿಯಾಗಿದ್ರೆ ಸಾಕೂರೀ ಎಂಥ ಕಷ್ಟ ಬೇಕಾದ್ರೂ ಸಹಿಸಿಕೊಳ್ತೀನಿ’ ಅಂತ. ದಾಂಪತ್ಯವೆಂದರೆ ಇದೇ ಅಲ್ವಾ? ಎಲ್ಲ ಕಷ್ಟ ನಷ್ಟಗಳ ನಡುವೆಯೂ ಒಬ್ಬರಿಗೊಬ್ಬರು ನಗೋದು, ಸಂಕಟಗಳಿದ್ರೂ ತೋರಿಸದೆ ಇನ್ನೊಬ್ಬರಿಗಾಗಿ ಸಂಭ್ರಮಿಸೋದು.
ನನಗಿದೇ ಒಗಟು. ಈ ಹೆಣ್ಣು ಮಕ್ಕಳು ಎಷ್ಟು ಸಣ್ಣಸಣ್ಣ ವಿಷಯಕ್ಕೂ ಸಂತೋಷಪಡ್ತಾರೆ, ಅಷ್ಟೇ ಬೇಗ ಕಣ್ಣೀರು ಹಾಕ್ತಾರೆ, ನನ್ನ ಆಫೀಸಿನವರು ನಿಮ್ಮ ಹೆಂಡತಿ ಎಷ್ಟು ಗಂಭೀರ ಅನ್ನೋ ಇವಳು ಮಕ್ಕಳು ಸಿಕ್ಕಾಗ ತಾನೂ ಇಹದ ಪರಿವೆಯೇ ಇಲ್ಲದೆ ಮಗುವಾಗ್ತಾಳೆ, ಒಮ್ಮೆ ಹೂವಿನಂಗೆ ಮೆದುವಾಗ್ತಾಳೆ, ಮತ್ತೊಮ್ಮೆ ಕಬ್ಬಿಣದಂತೆ ಕಠೋರ ಅನಿಸ್ತಾಳೆ.
‘ನೀವ್ಯಾಕ್‍ಹೀಗೆ’ ಅನ್ನೋ ಪ್ರಶ್ನೆಗೆ ‘ನಾವ್ ಹೀಗೇನೇ.. ಏನ್ ಮಾಡೋದು.. ಅಂದ್ಲು.
ಹೆಚ್ಚು ಯೋಚಿಸಿದರೆ ತಲೆ ಕೆಡುತ್ತೆ ಅಂತ ಸುಮ್ಮನಾದೆ. ನನ್ನೊರಗಿದ ಅವಳ ಮುಡಿಯಲ್ಲಿದ್ದ ಅವಳಪ್ಪಅಮ್ಮ ತಂದುಕೊಟ್ಟ ಜಾಜಿಯ ಪರಿಮಳದಲ್ಲಿ ಕಳೆದುಹೋದೆ..
‘ಏನ್ ಮಾಡೋದು.. ನಾವ್ ಹೀಗೇನೇ…”
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ