ಬೆಂಗಳೂರು: ಚೀನಾದಲ್ಲಿ ಹಾವಳಿಯನ್ನೆಬ್ಬಿಸಿರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಈ ವೈರಸ್ ಪತ್ತೆಯಾಗಿದೆ. ಮಗುವಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ.
HMPV ಎಂದರೇನು?
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ ಉಸಿರಾಟ ಸಂಬಂಧಿತ ವೈರಸ್ ಆಗಿದ್ದು, 2001ರಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟಿತು. ಆದರೂ, ಈ ವೈರಸ್ 60 ವರ್ಷಗಳಿಂದಲೂ ಮಾನವರಲ್ಲಿ ಅಸ್ತಿತ್ವದಲ್ಲಿದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. HMPV ಪ್ರಪಂಚದಾದ್ಯಂತ ಕಾಣಸಿಗುತ್ತಿದ್ದು, ಎಲ್ಲ ವಯಸ್ಸಿನವರಿಗೂ ತೊಂದರೆ ಉಂಟುಮಾಡುತ್ತದೆ. ಚಿಕ್ಕ ಮಕ್ಕಳು, ಹಿರಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯುಳ್ಳವರು ಈ ವೈರಸ್‌ಗೆ ಹೆಚ್ಚು ಎದೆಗುಂದುತ್ತಾರೆ.
HMPV ಲಕ್ಷಣಗಳು
- ಕೆಮ್ಮು
- ಜ್ವರ
- ಮೂಗು ಸೋರುವಿಕೆ ಅಥವಾ ಉಸಿರುಗಟ್ಟುವಿಕೆ
- ಗಂಟಲು ಕೆರತ
- ಉಬ್ಬಸ
- ಉಸಿರಾಟದ ತೊಂದರೆ
- ದೇಹದಾದ್ಯಂತ ದದ್ದುಗಳು
ಎಚ್‌ಎಂಪಿವಿ ಹೇಗೆ ಹರಡುತ್ತದೆ?
HMPV ವೈಯಕ್ತಿಕ ಸಂಪರ್ಕದ ಮೂಲಕ ಅಥವಾ ಕಲುಷಿತ ವಸ್ತುಗಳನ್ನು ಮುಟ್ಟುವುದರಿಂದ ಹರಡುತ್ತದೆ.
- ಕೆಮ್ಮು ಮತ್ತು ಸೀನುವಿಕೆ: ಹಾವಳಿ ಹೆಚ್ಚು ವಿಸ್ತರಿಸುತ್ತದೆ.
- ಸಂಪರ್ಕ: ಕೈಕುಲುಕುವುದು, ತಬ್ಬಿಕೊಳ್ಳುವುದು, ಚುಂಬಿಸುವುದು.
- ವಸ್ತುಗಳು: ಫೋನ್, ಡೋರ್ ಹ್ಯಾಂಡಲ್, ಕೀಬೋರ್ಡ್ ಅಥವಾ ಆಟಿಕೆಗಳಂತಹ ವಸ್ತುಗಳನ್ನು ಸ್ಪರ್ಶಿಸುವುದು.
ತಡೆಯುವ ಮಾರ್ಗಗಳು
ವೈರಸ್ ಹರಡುವುದನ್ನು ತಡೆಯಲು ತಜ್ಞರು ಈ ಕೆಳಗಿನ ಕ್ರಮಗಳನ್ನು ಶಿಫಾರಸು ಮಾಡುತ್ತಾರೆ:
- ಮುಖವಾಡ ಧರಿಸುವುದು.
- ನಿಯಮಿತವಾಗಿ ಕೈ ತೊಳೆಯುವುದು.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸುವುದು.
- ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ತಪ್ಪಿಸುವುದು.
ಚಿಕಿತ್ಸೆಯಲ್ಲಿನ ಎಚ್ಚರಿಕೆ
HMPV ನಿರ್ವಹಣೆಗೆ ಪ್ರಸ್ತುತ ಯಾವುದೇ ಲಸಿಕೆ ಅಥವಾ ವಿಶೇಷ ಆಂಟಿವೈರಲ್ ಔಷಧಗಳು ಲಭ್ಯವಿಲ್ಲ. ತಜ್ಞರು ಅನಾವಶ್ಯಕವಾಗಿ ಔಷಧಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದು, ಈ ವೈರಸ್‌ನ ಲಕ್ಷಣಗಳು ಸಾಮಾನ್ಯ ಶೀತವನ್ನು ಹೋಲುವಂತಿವೆ. ಸರಿಯಾದ ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಯಾವುದೇ ಚಿಕಿತ್ಸೆ ಕೈಗೊಳ್ಳುವುದು ಅಪಾಯಕಾರಿ ಎಂದು ತಜ್ಞರು ಸೂಚಿಸಿದ್ದಾರೆ.ಇದನ್ನು ಓದಿ –ಮಳೆ ನಿಂತರೂ ಮರದ ಹನಿ ನಿಲ್ಲದು
ಎಚ್‌ಎಂಪಿವಿ ವಿರುದ್ಧ ಪ್ರತಿರೋಧಕ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಬಹುದು.
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ