೧. ಮುಖವಾಡದ ಬದುಕು:-
ನಮ್ಮ ನಗರದ ಕೊನೆಯ ಬೀದಿಯ ತಿರುವಿನಲ್ಲೊಂದು ದೇವಿಯ ಗುಡಿ. ಆ ಗುಡಿಯ ದೇವರಿಗೊಂದು ಮುಖವಾಡ. ಮುಖವಾಡವನ್ನು ಧರಿಸಿದ ದೇವಿಯದ್ದು ದಿನಕ್ಕೊಂದು ಪವಾಡ. ಈ ಮುಖವಾಡ ದೇವಿಯ ನಿಜರೂಪವನ್ನು ಮರೆಸುವುದು ಕಣ್ಣಿಗೆ ಕಾಣುವುದಕ್ಕೆ. ದೇವರಿಗೂ ಮುಖವಾಡವನ್ನು ತನ್ನಂತೆಯೆ ತೊಡಿಸಿದ್ದು ಮನುಷ್ಯನ ಹೆಗ್ಗಳಿಕೆ. ಅಸಲಿಗೆ, ದೇವರ ಹೆಸರಿನಲ್ಲಿ ಲೂಟಿ ಮಾಡುವ ಹಣಕ್ಕೆ ಲೆಕ್ಕವಿಲ್ಲ. ಉಸುರುವ ನಾಲ್ಕು ಮಂತ್ರಗಳು ಕೇಳಲು ಕಿವಿಗೆ ಬಹಳ ಚೆಂದ ಇನ್ನು ಅಲ್ಪ ಸ್ವಲ್ಪ ಅರ್ಥ ತಿಳಿದ ನಮ್ಮ ನಿಮ್ಮಂಥವರು ಆ ಅಧ್ಯಾತ್ಮ ಜೀವಿಗೆ ಶರಣಾಗಿ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದು ಬರುತ್ತೇವೆ. ಅಸಲಿಗೆ ನಾವು ನಮಸ್ಕರಿಸುವ ದೇವರು, ಆ ದೇವರನ್ನು ಪೂಜಿಸುವ ಅಧ್ಯಾತ್ಮಗುರು ಈ ಇಬ್ಬರದ್ದೂ ಮುಖವಾಡವೇ!
೨. ವಸುದೈವ ಕುಟುಂಬಕಂ:-
ಮಹಾ ಉಪನಿಷತ್ ನಲ್ಲಿ ಬರುವ ಈ ಶ್ಲೋಕ ಕೇಳಲು ಬಹಳ ಹಿತಕರ. ಅವನು ಮೇಲು, ಇವನು ಕೀಳು ಎಂದು ಹೇಳುವವನು ಅಲ್ಪ ಬುದ್ಧಿಯುಳ್ಳ ಮಾನವ. ತಿಳಿದವರು ಈ ಪ್ರಪಂಚವೇ ಭಗವಂತನ ಕುಟುಂಬ ನಾವೂ – ನೀವೂ ಎಲ್ಲರೂ ಈ ಕುಟುಂಬದಲ್ಲಿನ ಸದಸ್ಯರು ಎನ್ನುವ ಅರ್ಥ ಈ ಶ್ಲೋಕದ್ದು. ಒಂದೇ ಕುಟುಂಬದಲ್ಲಿರುವ ಅಣ್ಣ ತಮ್ಮಂದಿರ ದಾಯಾದಿ ಕಲಹ ಮಹಾಭಾರತದಿಂದ ತಿಳಿದಿದೆ ನಮಗೆ. ಮಹಾಭಾರತ ಶ್ರೀಕೃಷ್ಣನ ಅವತಾರ ಮತ್ತು ಆತನ ಲೀಲಾವಿನೋದಗಳನ್ನಷ್ಟೆ ಅಲ್ಲ, ತುಂಡು ಭೂಮಿಗೆ ತನ್ನವರನ್ನೆ ಕೊಂದು ಕಾದಾಡುವ ಅಲ್ಪ ಬುದ್ಧಿಯ ಮನುಷ್ಯರು ಈ ಭರತ ಭೂಮಿಯಲ್ಲಿ ಐದು ಸಾವಿರ ವರ್ಷದ ಹಿಂದೆ ಇದ್ದರೂ ಮತ್ತು ಮುಂದೆಯೂ ಇರುತ್ತಾರೆ ಎನ್ನುವುದನ್ನು ಸಾರುತ್ತದೆ. ಅದೇನೆ ಇರಲಿ ಎಂದಿಗೂ ಸತ್ಯವಾಗದ “ವಸುದೈವ ಕುಟುಂಬಕಂ” ಎನ್ನುವ ಈ ಪರಿಕಲ್ಪನೆ, ಕಲ್ಪನೆಯಲ್ಲಿ ಅತಿಸುಂದರ. ಮನಸ್ಸಿಗೆ ಹಚ್ಚಿಕೊಳ್ಳದೆ ಕಲ್ಪನಾವಿಹಾರದಲ್ಲಿ ಸಂಚರಿಸಿ ಆನಂದಿಸಿ.
೩. ದೇವರು ಮನುಷ್ಯನ ಸುಂದರ ಕಲ್ಪನೆ:-
ಕಾಲ ಎಂದರೇನು ಎಂದು ಹೇಳುವ ಕಾರ್ಲ್ ಮಾರ್ಕ್ಸ್ ಕಾಲ ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸಲು ಗಡಿಯಾರದ ಅಂಗಡಿಯವರು ಕಂಡು ಹಿಡಿದ ಸುಂದರ ಕಲ್ಪನೆ ಎನ್ನುತ್ತಾನೆ. “ದೇವರು” ಮತ್ತು “ದೇವಸ್ಥಾನ”, ಶೃತಿ – ಸ್ಮೃತಿ ಈ ಎಲ್ಲವೂ ಮನುಷ್ಯನ ಸೃಷ್ಟಿ ಎನ್ನುವುದನ್ನು ಮತ್ತು ಓರೆ ಹಚ್ಚಿ ನೋಡಬೇಕಿಲ್ಲ. ಕಾಲದ ಗತಿಯಲ್ಲಿ ಹಿಂದೆ ಎಲ್ಲೊ ಯಾರೊ ಬದುಕು ದೂಡಲು ಕಂಡುಕೊಂಡ ಒಂದು ವಿಧಾನವೆಂದರೂ ತಪ್ಪಾಗಲಾರದೇನೊ. ಅಸಲಿಗೆ ಇಂದು ನಾವು ಮಾಡುವ ಆಚರಣೆಗೂ ದೇವರಿಗೂ ಯಾವ ಸಂಬಂಧವೂ ಇಲ್ಲ. ” ಸುವರ್ಣ ಪುಷ್ಪಂ ಸಮರ್ಪಯಾಮಿ” ಎಂದು ತುಳಸೀದಳವನ್ನು ಎಸೆದು ದೇವರಿಗೂ ಕಣ್ಣುಕಟ್ಟುವ ಚಾಣಾಕ್ಯರು ನಾವು. ದೇವರ ಅಸ್ಥಿತ್ವವನ್ನು ಒಪ್ಪಿಕೊಳ್ಳೋಣವಾದರೂ ಆ ಭಗವಂತನಿಗೆ ನಮ್ಮಿಂದಾಗಬಹುದಾದ ಯಾವ ಕೆಲಸವೂ ಇಲ್ಲ. ಲಕ್ಷಗಟ್ಟಲೆ ವ್ಯಯಿಸಿ ಅಲಂಕಾರ ಮಾಡಿದರೆ ಆತ ಸಂತುಷ್ಟನಾಗುವುದೂ ಇಲ್ಲ. ಭಗವಂತನ ಇರುವು ಮತ್ತು ಆತನ ದೃಷ್ಟಿ “ಇತರರಿಗೆ ಸಾಧ್ಯವಾದಷ್ಟೂ ಒಳಿತನ್ನು ಮಾಡು” ಎನ್ನುವುದಾಗಿದೆ. ಮನುಷ್ಯನ ಹುಚ್ಚುತನಕ್ಕೆ ಎಲ್ಲೆಯೇ ಇಲ್ಲ.ಇದನ್ನು ಓದಿ –ಬೆಳ್ಳಂಬೆಳಗ್ಗೆ ಬೆಂಗಳೂರಿನ ಪ್ರೆಸ್ಟೀಜ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
೪. ಬದುಕನ್ನು ಬದುಕಿ ನೋಡಿ:-
ನಿತ್ಯವೂ ಒಂದಷ್ಟು ಪೂಜೆ, ಸಂಕಲ್ಪ, ಪಾರಾಯಣ ಇತ್ಯಾದಿ ಇವುಗಳಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆಯೇ? ಧ್ಯಾನದಿಂದ?. ದೊರಕಿದರೂ ಇದು ಕೇವಲ ತಾತ್ಕಾಲಿಕ. ಮನಸ್ಸು ನಮ್ಮದು ಅದರ ಹಿಡಿತ ನಮ್ಮಲ್ಲಿದೆ. ಕಣ್ಣುಮುಚ್ಚಿ ಧ್ಯಾನ ಕಲಿಸುವ ಯಾವ ಅಧ್ಯಾತ್ಮಯೋಗಿಯೂ ನಮ್ಮಲ್ಲಿಲ್ಲ. ನನ್ನೊಳಗಿರುವ ನನ್ನನ್ನು ನಾನೇ ಹುಡುಕಬೇಕು. ಇದು ಸರ್ವಕಾಲೀಕ ಸತ್ಯ. ಭಗವಾನ್ ಶ್ರೀಕೃಷ್ಣನೇ ಜೊತೆಯಲ್ಲಿದ್ದರೂ ಪಾಂಡವರು ರಾಜ್ಯ ತ್ಯಾಗ ಮಾಡಿಹೊರಟರು. ಆಚರಣೆ ಆಚರಣೆಯಷ್ಟೆ ಅನುಕರಣೆ ಅನುಕರಣೆಯಷ್ಟೆ. ಅಪ್ಪ ಕಲಿಸಿದ ಮಂತ್ರ, ಆಚರಣೆ ಆಚರಿಸಲಿಕ್ಕೆ ಮಾತ್ರ ಬರುವುದು, ಅಧ್ಯಾತ್ಮಗುರು ಕಲಿಸುವ ಯೋಗ, ಧ್ಯಾನ ಮತ್ತು ಕುಂಡಲೀನೀ ಇತ್ಯಾದಿ ಅನುಕರಿಸುವುದಕ್ಕೆ ಮಾತ್ರ ಬರುವುದು. ಸುತ್ತಲಿನ ಬದುಕನ್ನು ನೋಡಿ ಅರಿತು ನಮ್ಮಂತೆಯೇ ಇತರರು ಎನ್ನುವ ನಿಷ್ಕಲ್ಮಷ ಭಾವನೆ ನಮ್ಮೊಳಗೆ ಉದಿಸದ ಹೊರತು ಯಾವ ಗುರುವೂ ಯಾವ ದೇವರೂ ಏನನ್ನೂ ಮಾಡಲಾರ. ಇದು ನಿತ್ಯಶುದ್ಧ ಬದುಕಿನ ಮೂಲಮಂತ್ರ.
ಡಾ. ಭಾಸ್ಕರ ಮಾಳ್ವ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು