January 7, 2025

Newsnap Kannada

The World at your finger tips!

rain 1

ರಾಜಧಾನಿಯಲ್ಲಿ ವರುಣನ ಆರ್ಭಟ: ಹಬ್ಬದ ಖರೀದಿಗೆ ಬ್ರೇಕ್, ಆಟಿಕೆಗಳಂತೆ ತೇಲಿದ ವಾಹನಗಳು!

Spread the love

ನಿನ್ನೆ ಸಂಜೆ ಎದೆ ನಡುಗಿಸುವ ಗುಡುಗು-ಸಿಡಿಲಿನೊಂದಿಗೆ ಸತತವಾಗಿ ಮೂರು ತಾಸು ಆರ್ಭಟಿಸಿದ ಮಳೆಗೆ ರಾಜಧಾನಿ ಜನತೆ ನಲುಗಿ ಹೋದರು. ಧಾರಾಕಾರವಾಗಿ ಸುರಿದ ದಾಖಲೆ ಮಳೆಗೆ ಹಲವು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾದವು. ರಸ್ತೆಗಳು ಹೊಳೆಗಳಾಗಿ ವಾಹನಗಳು ತೇಲಿ ಹೋದವು.

ಬಿಬಿಎಂಪಿಯ ದಕ್ಷಿಣ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ವಲಯಗಳಲ್ಲಿ ವರುಣನ ಅಬ್ಬರ ಜೋರಾಗಿತ್ತು. ಇದರಿಂದ ಭಾರಿ ಪ್ರಮಾಣದ ಹಾನಿ ಉಂಟಾಯಿತು. ಕೋರಮಂಗಲ, ಜೆ.ಪಿ.ನಗರ, ವಿಲ್ಸನ್‌ಗಾರ್ಡನ್‌, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರದ ಬೆಮೆಲ್‌ ಲೇಔಟ್‌, ಐಡಿಯಲ್‌ ಹೋಮ್ಸ್‌, ಸರ್‌ ಎಂ.ವಿ.ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಮಳೆ ನೀರಿನೊಂದಿಗೆ ಮನೆಗೆ ಹರಿದು ಬಂದ ಕೊಳಚೆಯನ್ನು ಹೊರಹಾಕಲು ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು.

ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕೆಲವು ಭಾಗದಲ್ಲಿ ದಾಖಲೆ ಮಳೆಯೂ ಬಿದ್ದಿದೆ. ಆದರೆ, ಶುಕ್ರವಾರದ ಮಳೆ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಕರಾವಳಿ, ಮಲೆನಾಡಿನಂತೆ ಧಾರಾಕಾರ ಸುರಿದದ್ದು ವಿಶೇಷವಾಗಿತ್ತು. ತಗ್ಗು ಪ್ರದೇಶಗಳಲ್ಲಿನ ಹಲವು ಬಡಾವಣೆಗಳು ಜಲದಿಗ್ಭಂಧನಕ್ಕೆ ಒಳಗಾಗಿದ್ದವು. ಕೆರೆ, ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ಅಕ್ಕಪಕ್ಕದ ವಸತಿ ಪ್ರದೇಶಗಳಿಗೆ ನೀರು ನುಗ್ಗಿತು.

ರಸ್ತೆಗಳಲ್ಲಿಅಡಿಗಟ್ಟಲೇ ನೀರು ನಿಂತಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಬಸವನಗುಡಿ, ಕೋರಮಂಗಲ, ಜೆ.ಪಿ.ನಗರ ಸೇರಿದಂತೆ ಇತರೆಡೆ ರಸ್ತೆಗಳಲ್ಲಿನಿಲ್ಲಿಸಿದ್ದ ವಾಹನಗಳು ಸಂಪೂರ್ಣ ಮುಳುಗಿ ಹೋಗಿದ್ದವು. ಅಂಡರ್‌ಪಾಸ್‌ಗಳು ಕೂಡ ಭರ್ತಿಯಾಗಿದ್ದವು. ಇದರಿಂದ ತಾಸುಗಟ್ಟಲೇ ಟ್ರಾಫಿಕ್‌ಜಾಮ್‌ ಆಗಿ ವಾಹನ ಸವಾರರು ಪರದಾಡಿದರು.

ನವರಾತ್ರಿ ಸಂಭ್ರಮ, ವ್ಯಾಪಾರ ವಹಿವಾಟಿಗೂ ಈ ಮಳೆ ಹೊಡೆತ ನೀಡಿತು. ರಸ್ತೆ ಬದಿಯಲ್ಲಿಮಾರಾಟಕ್ಕಿದ್ದ ಕುಂಬಳ, ಬಾಳೆ ಕಂಬ ಸಹಿತ ಹಲವು ವಸ್ತುಗಳು ನೀರಿನಲ್ಲಿಕೊಚ್ಚಿ ಹೋದವು. ಎಚ್ಚೆತ್ತ ಬಿಬಿಎಂಪಿಯು ಎನ್‌ಡಿಆರ್‌ಎಫ್‌ನ 20 ಮಂದಿಯ ನ ತಂಡವನ್ನು ಪ್ರವಾಹ ಉಂಟಾಗಿದ್ದ ಪ್ರದೇಶಗಳಿಗೆ ರವಾನಿಸಿತು. ಇದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿತು.

Copyright © All rights reserved Newsnap | Newsever by AF themes.
error: Content is protected !!