December 23, 2024

Newsnap Kannada

The World at your finger tips!

november lasike

ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಗುರಿ : ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Spread the love

ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ವಯಸ್ಕರಿಗೂ ಎರಡೂ ಡೋಸ್ ಕೋವಿಡ್ ಲಸಿಕೆ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ ಲಸಿಕಾ ಅಭಿಯಾನದಲ್ಲಿ ಕಡಿಮೆ ಸಾಧನೆ ಮಾಡಿದ 23 ಜಿಲ್ಲೆಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಬಗ್ಗೆ ಹಾಗೂ ಈ ತಿಂಗಳೊಳಗೆ ಎಲ್ಲರಿಗೂ ಮೊದಲ ಡೋಸ್ ಪೂರ್ಣಗೊಳಿಸಲು ಸೂಚಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿ ತಲುಪಬೇಕೆಂದು ಸೂಚನೆ ನೀಡಲಾಗಿದೆ. ಜೊತೆಗೆ ಕೊರೊನಾ ಪರೀಕ್ಷೆ, ಆಕ್ಸಿಜನ್ ಘಟಕ ಆರಂಭ, ಸಿವಿಲ್ ಕಾರ್ಯ ಮೊದಲಾದವುಗಳ ಬಗ್ಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಕೂಡ ಹಲವು ಸಲಹೆ, ಸೂಚನೆ ನೀಡಿದ್ದಾರೆ ಎಂದರು.

ಕಳೆದ ವರ್ಷ ಹೆಚ್ಚು ಸೋಂಕಿತರಿದ್ದಾಗಲೂ ಸರಳ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಈ ವರ್ಷ 0.7% ಪಾಸಿಟಿವಿಟಿ ದರವಿದ್ದು, ಹೆಚ್ಚು ಸುರಕ್ಷತಾ ನಿಯಮ ಪಾಲಿಸಲು ಸೂಚಿಸಲಾಗಿದೆ. ಯಾವುದೇ ಜಿಲ್ಲೆಯಲ್ಲಿ 2% ಗಿಂತ ಹೆಚ್ಚಾದರೆ ಅಲ್ಲಿ ಬೇರೆ ಕ್ರಮ ವಹಿಸಲಾಗುತ್ತದೆ ಎಂದರು.

ಕೇರಳದಲ್ಲಿ ಒಬ್ಬ ಬಾಲಕನಿಗೆ ನಿಫಾ ವೈರಸ್ ಸೋಂಕು ಕಂಡುಬಂದಿದೆ. ಈ ಸೋಂಕು ರಾಜ್ಯದಲ್ಲಿ ಎಲ್ಲೂ ಹರಡದಂತೆ ಕ್ರಮ ವಹಿಸಲಾಗಿದೆ. ಗಡಿಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೂರನೇ ಅಲೆ ತಡೆಗಟ್ಟುವುದು ಮುಖ್ಯವಾದ ಗುರಿ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೊದಲು ಅಲೆಯನ್ನು ತಡೆಯಬೇಕಿದೆ ಎಂದರು.

ಅಭೂತಪೂರ್ವ ವಿಜಯ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಭೂತಪೂರ್ವ ವಿಜಯ ಸಿಕ್ಕಿದೆ. ಸುಮಾರು 25 ವರ್ಷಗಳ ಬಳಿಕ ಸ್ವತಂತ್ರವಾಗಿ ಆಡಳಿತ ನಡೆಸುವಂತೆ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಈ ಫಲಿತಾಂಶ ಬಂದಿದ್ದು, ಜನರು ಅವರ ನಾಯಕತ್ವ ಒಪ್ಪಿದ್ದಾರೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉತ್ತಮ ಆಡಳಿತವನ್ನು ಜನತೆ ಮೆಚ್ಚಿದ್ದಾರೆ. ಹೀಗಾಗಿ ಈ ವಿಜಯ ಸುಲಭವಾಗಿ ದೊರೆತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹಾಗೂ ಕಲಬುರಗಿಯಲ್ಲೂ ಉತ್ತಮ ನಿರೀಕ್ಷೆ ಇದೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಐತಿಹಾಸಿಕ ಗೆಲುವು ದೊರೆತಿದೆ. ಎಲ್ಲ ಪಕ್ಷಗಳಿಗಿಂತ ಹೆಚ್ಚು ಸ್ಥಾನ ನಮ್ಮ ಪಕ್ಷಕ್ಕೆ ಸಿಕ್ಕಿದೆ. ಅಲ್ಲಿ ಕೂಡ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವ ಕೆಲಸವಾಗಲಿದೆ ಎಂದರು.

ವಿರೋಧ ಪಕ್ಷದವರಿಗೆ ಸೋತಾಗ ಬೇರೇನೂ ಹೇಳಲು ಇರುವುದಿಲ್ಲ. ಅದಕ್ಕಾಗಿ ಅಧಿಕಾರ ದುರ್ಬಳಕೆ ಎಂದು ಹೇಳುತ್ತಾರೆ. ಇದನ್ನು ಬಿಟ್ಟು ಬೇರೇನಾದರೂ ವಿಶೇಷ ಕಾರಣ ಇದೆಯೇ ಎಂದು ಕೇಳಬೇಕು. ಗೆದ್ದಾಗ ಇದನ್ನು ಅವರು ಹೇಳುವುದಿಲ್ಲ. ಸೋತಾಗಲೂ ಸೋಲು ಒಪ್ಪದಿರುವುದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ ಇರುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಅವರ ಮೇಲೆ ಜನರಿಗೆ ಯಾವುದೇ ನಿರೀಕ್ಷೆ ಇಲ್ಲ. ಅದೇ ಈಗಲೂ ಮುಂದುವರಿದಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!