‘ವಿದ್ಯಾಗಮ’ ಯೋಜನೆಯ ಬಗ್ಗೆ ಎಚ್‌‌ಡಿಕೆ ಕಿಡಿ; ಧರಣಿಯ ಎಚ್ಚರಿಕೆ

Team Newsnap
1 Min Read

ಸರ್ಕಾರದ ವಿದ್ಯಾಗಮ‌ ಯೋಜನೆಯಲ್ಲಿನ ಅವ್ಯವಸ್ಥೆಗಳ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಕುರಿತಂತೆ ಶನಿವಾರ ಸರಣಿ ಟ್ವೀಟ್ ಮೂಲಕ ತಕ್ಕ ಆಕ್ರೋಶವನ್ನು ವ್ಯಕ್ತಪಡಿಸಿರುವ ಕುಮಾರಸ್ವಾಮಿ,
‘ಮಕ್ಕಳು ಮತ್ತು ಶಿಕ್ಷಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ‌. ರಾಜ್ಯಸರ್ಕಾರ ಸೋಮವಾರದೊಳಗೆ ವಿದ್ಯಾಗಮನ ಶಿಕ್ಷಣದ ಅವ್ಯವಸ್ಥೆಗಳನ್ನು ನಿಲ್ಲಿಸದಿದ್ದರೆ ವಿಧಾನಸೌಧ ಇಲ್ಲವೇ ಸ್ವಾತಂತ್ರ್ಯ ಉದ್ಯಾನದ ಬಳಿ ಅಹೋರಾತ್ರಿ ಧರಣಿ ಕೂರುತ್ತೇನೆ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಕೊರೋನಾ ಸಂಕಷ್ಟ ಸಂದರ್ಭದಲ್ಲಿ ವಿದ್ಯಾಗಮ ಶಿಕ್ಷಣದ ಹೆಸರು ಹೇಳಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ? ವೇತನ ಹಾಗೂ ಸೌಲಭ್ಯಗಳ ಕಡಿತದ ಬೆದರಿಕೆ ಒಡ್ಡಿ ಸಾವಿನ ದವಡೆಗೆ ನೂಕಿದ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಆ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಬೇಕು’ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಮಕ್ಕಳಿಗೆ ಶಿಕ್ಷಣ ಕೊಡುವ ಸೋಗಿನಲ್ಲಿ ಶಿಕ್ಷಣ ಸಚಿವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಖಂಡನೀಯ ಹಾಗೂ ಅಮಾನವೀಯ.
ಈ ವರ್ಷ ಶಾಲೆ ಆರಂಭಿಸದಿದ್ದರೆ ದೇಶ ಮುಳುಗಿ ಹೋದೀತೆ? ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ’ ಎಂದು ಕಿಡಿ ಕಾರಿದ್ದಾರೆ.

‘ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಈ ಸರ್ಕಾರ ಕನಿಷ್ಠ ಆಕ್ಸಿಜನ್ ಒದಗಿಸಲು ಪರದಾಡುತ್ತಿದೆ.
ಜನಪ್ರತಿನಿಧಿ ಇರಲಿ, ಸಾಮಾನ್ಯ ಪ್ರಜೆ ಇರಲಿ, ಜೀವ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಮೊದಲ ಆದ್ಯತೆ ಮತ್ತು ಕರ್ತವ್ಯ. ಜೀವ ಉಳಿದರೆ ತಾನೇ ಬದುಕು?’ ಎಂದು ಸರ್ಕಾರವನ್ನು ಹೀಯಾಳಿಸಿದ್ದಾರೆ.

Share This Article
Leave a comment