(ಬ್ಯಾಂಕರ್ಸ್ ಡೈರಿ)
ಅಂದು ಬ್ಯಾಂಕಿನಲ್ಲಿ ಪಿಂಚಣಿಯ ದಿನವಾದ್ದರಿಂದ ಬಹುತೇಕ ವಯಸ್ಸಾದವರೇ ತುಂಬಿದ್ದರು.
ಅಂದು ನಾನು ಕ್ಯಾಶ್ ಕೌಂಟರ್ ನಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು ಸರಿ ಎಲ್ಲರ ಹಾಗೆಯೇ ಒಬ್ಬ ನಿವೃತ್ತರು ಬಂದು ನನ್ನ ಮುಂದೆ ನಿಂತು ತಮ್ಮ ಪಿಂಚಣಿಯನ್ನು ಪಡೆಯುತ್ತಿದ್ದರು.
ಅದೇಕೋ ಏನೋ ಅವರ ಕಣ್ಣಾಲಿಗಳು ತುಂಬಿದ್ದವು ಬಹುತೇಕ ಸಮಯಗಳಲ್ಲಿ ಎತ್ತರದ ಕ್ಯಾಶ್ ಕೌಂಟರ್ ಇದ್ದರೆ ಮಾತನಾಡಲು ಸರಿಯಾಗುವುದಿಲ್ಲ ಆದರೆ ನಾನು ಅಂದು ಪುಟ್ಟ ಕೌಂಟರ್ ನಲ್ಲಿ ಕುಳಿತಿದ್ದೆ ಅದು ಪರ‍್ಣ ಗಾಜಿನದು ಹಾಗಾಗಿ ಅವರ ಕಣ್ಣು ತುಂಬಿದ್ದು ಸುಲಭವಾಗಿ ಕಾಣುತ್ತಿತ್ತು . ಸುಮ್ಮನಿರಲಾರದೆ ಹೋದೆ ಏನಾಯಿತು ಯಾಕೆ ದುಃಖಿತರಾಗಿದ್ದೀರಿ ಎಂದು ಕೇಳಿದೆ.
ಬೆಳಗಿನ ಸಮಯವಾಗಿದ್ದರೆ ಹಾಗೆ ಕೇಳಲು ಸಾಧ್ಯವೇ ಆಗುತ್ತಿರಲಿಲ್ಲ ಏಕೆಂದರೆ ಅಷ್ಟು ರಶ್ ಇರುತ್ತಿತ್ತು. ಆದರೆ ಅದು ಮಧ್ಯಾಹ್ನ ಊಟದ ಸಮಯ. ಬಹುತೇಕ ಪಿಂಚಣಿದಾರರು ತಮ್ಮ ತಮ್ಮ ಮನೆಗಳಿಗೆ ಹೊರಟು ನಿಂತಿದ್ದರು. ನನ್ನದು ಊಟದ ಸಮಯವೇ ಆಗಿತ್ತು. ಆ ಕೊನೆಯ ಕ್ಷಣದಲ್ಲಿ ಈತ ಬಂದಿದ್ದರಿಂದ ಜನರು ಕಡಿಮೆ ಇದ್ದಿದ್ದರಿಂದ ನಾನು ಹಾಗೆ ಕೇಳಬಹುದಾದೆ.
ಆತ ನನಗೆ ಅಪರಿಚಿತ ಏನಲ್ಲ. ಆಗಾಗ ಭೇಟಿಯಾಗುತ್ತಾ ಇರುತ್ತದೆ. ನಾನು ಚಿನ್ನದ ಸಾಲದ ವಿಭಾಗದಲ್ಲಿದ್ದಾಗ ಆತ ಎರಡು ಮೂರು ಬಾರಿ ಚಿನ್ನದ ಸಾಲವನ್ನು ಪಡೆದಿದ್ದರು. ಹಾಗಾಗಿ ಅವರನ್ನು ನಾನು ವೈಯಕ್ತಿಕವಾಗಿಯೂ ಬಲ್ಲೆ. ಅವರ ಮಗಳು ನನ್ನ ಮಗನ ಸಹಪಾಠಿ. ಆ ಸಲುಗೆಯಲ್ಲಿ ಮಗಳು ಏನು ಮಾಡುತ್ತಿದ್ದಾಳೆ ಹೇಗಿದ್ದಾಳೆ ಎಂದು ಕೇಳುವುದು ವಾಡಿಕೆ. ಆತ ನಿವೃತ್ತಿಯ ತುಸು ಸಮಯದ ಮುಂಚೆಯೇ ಹತ್ತಿರದ ಯಾರೋ ಸ್ನೇಹಿತರ ಸಾಲಕ್ಕೆ ಗ್ಯಾರಂಟಿಯಾಗಿ ಆ ಸ್ನೇಹಿತ ಹೇಳದೆ ಕೇಳದೆ ಊರು ಬಿಟ್ಟು ಹೋಗಿ ಇವರ ನಿವೃತ್ತಿಯ ಹಣವೆಲ್ಲ ಆ ಸ್ನೇಹಿತನ ಸಾಲ ಎಂದು ವಜಾ ಆಗಿ ಹೋಗಿತ್ತು. ಸುಮಾರು ೧೫ ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಆತ ದಿಗ್ಭ್ರಾಂತರಾಗಿ ಹೋಗಿದ್ದರು ಎಷ್ಟೋ ಬಾರಿ ನನ್ನ ಮುಂದೆಯೇ ತಲೆಗೆ ಕೈಹೊತ್ತು ಕುಳಿತಿದ್ದನ್ನು ನೋಡಿದ್ದೆ.
ಅದೇ ಕಾರಣಕ್ಕೆ ಸಂಸಾರ ನಿರ‍್ವಹಣೆಗೆಂದು ನಿವೃತ್ತಿಯ ನಂತರವೂ ಯಾವುದೋ ಪ್ರತಿಷ್ಠಿತ ಶಾಲೆಯಲ್ಲಿ ಅಕೌಂಟ್ಸ್ ಕೆಲಸಕ್ಕೆ ಎಂದು ಸೇರಿದ್ದರು. ಬರುತ್ತಿದ್ದು ಕೇವಲ ೩೦೦೦ ಪಿಂಚಣಿ ಸಂಸಾರ ನಡೆಸುವುದು ಹೇಗೆ ?
ಈ ಬಾರಿ ಬಂದಾಗ ಕಣ್ಣಾಲಿ ತುಂಬಿದ್ದರೂ ನಗುಮುಖ ಧರಿಸಿ “ಮೇಡಂ ಮಗಳಿಗೆ ಮದುವೆ ಗೊತ್ತಾಗಿದೆ ಇನ್ವಿಟೇಶನ್ ಪ್ರಿಂಟ್ ಆದ ಕೂಡಲೇ ತಂದು ಕೊಡುತ್ತೇನೆ. ಮದುವೆ ಧರ‍್ಮಸ್ಥಳದಲ್ಲಿ ರಿಸೆಪ್ಶನ್ ಇದೇ ಊರಿನಲ್ಲಿ. ನೀವು ತಪ್ಪದೆ ಬರಲೇಬೇಕು” ಎಂದು ಹೇಳಿದರು.
ಖಂಡಿತ ಬರುತ್ತೇನೆ. ನೀವೊಂದು ಒಳ್ಳೆಯ ಕೆಲಸವನ್ನು ಮಾಡಿದಿರಿ ಇಷ್ಟು ಹಣ ಕಳೆದುಕೊಂಡಿದ್ದರಿಂದ ಈಗ ಧರ‍್ಮಸ್ಥಳದಲ್ಲಿ ಸರಳ ವಿವಾಹ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯದು” ಎಂದು ಸಂತೋಷವನ್ನು ವ್ಯಕ್ತಪಡಿಸಿದೆ ಆದರೆ ಆ ಮನುಷ್ಯ ಹೇಳಿದ ಮಾತು ಕೇಳಿ ಒಂದು ಕ್ಷಣ ಅವಾಕ್ಕಾದೆ “ಸರಳ ಎಲ್ಲಿ ಮೇಡಂ, ಧರ‍್ಮಸ್ಥಳದಲ್ಲಿ ಸರಳ ಮದುವೆ ಆದರೆ ಮಗಳ ಶಾಪಿಂಗ್ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಿ” ಎಂದರು. “ಮದುಮಗ ನನ್ನ ಹೆಂಡತಿಯ ಅಣ್ಣನ ಮಗನೇ. ಆತನ ಡಿಮ್ಯಾಂಡ್ ಏನೂ ಇಲ್ಲ. ಆದರೆ ಡಿಮ್ಯಾಂಡ್ ಎಲ್ಲಾ ಮಗಳದ್ದೇ” ಎಂದರು.
ಹೌದೇ, ಎಂಥ ಶಾಪಿಂಗ್ ಅದು ಹಾಗಿದ್ದರೆ” ಎಂದು ಕೇಳಿದೆ ಅದಕ್ಕೆ ಅವರು “ಚಿನ್ನವನ್ನು ಕೊಳ್ಳಲು ಎಂದು ಅಂಗಡಿಗೆ ಹೋದಾಗ ನನ್ನ ಪರಿಸ್ಥಿತಿ ಗೊತ್ತಿದ್ದರೂ ಮಗಳು ೬೦ ಗ್ರಾಂ ನ ಒಂದು ದೊಡ್ಡ ಹಾರವನ್ನು ನೋಡಿದ್ದೇನೆ ಅಪ್ಪ ಕೊಡಿಸಿ ಎಂದಳು “
೬೦ ಗ್ರಾಂ ಹಾರಕ್ಕೇ ಆದರೆ ಓಲೆ ಉಂಗುರ ಬಳೆ ಎಲ್ಲವನ್ನೂ ಸರಿದೂಗಿಸಬೇಕಲ್ಲಾ ಎಂದು ನನ್ನ ಚಿಂತೆ. ಮರುದಿನ ಅದೇ ಅಂಗಡಿಗೆ ಹೋಗಿ ಆರ್ಡರ್ ಕಂಫಾರ್ಮೇಷನ್ ಗೆ ಎಂದು ಹೋದಾಗ ಇನ್ನೊಂದು ನೆಕ್ಲೆಸ್ ಅನ್ನು ನೋಡಿದಳಂತೆ.
ಮನೆಗೆ ಬಂದವಳೇ ಅಪ್ಪ ಮುವ್ವತ್ತು ಗ್ರಾಂ ನ ಒಂದು ನೆಕ್ಲೆಸ್ ನೋಡಿದ್ದೇನೆ ಎಂದಳು ನನಗೆ ತುಂಬಾ ಖುಷಿಯಾಯಿತು ಮಗಳಿಗೆ ಇಷ್ಟಾದರೂ ಅರ‍್ಥವಾಯಿತಲ್ಲ ೩೦ ಗ್ರಾಂ ಚಿನ್ನ ಪರವಾಗಿಲ್ಲಾ ನನಗೆ ಅನುಕೂಲವಾಯಿತು ಎಂದುಕೊಂಡೆ. ನಿಧಾನಕ್ಕೆ ಹೇಳಿದಳು, ಅಪ್ಪ ಆ ಹಾರ ನೆಕ್ಲೆಸ್ ಎರಡನ್ನು ಒಟ್ಟಿಗೆ ಹಾಕಿಕೊಂಡರೆ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು . ಉಸಿರೆತ್ತಲಾಗದೆ ಹೋದೆ. ಇನ್ನೇನು ಸರಳ ಮೇಡಂ” ಎಂದರು.
ಆಗ ನಾನು ಸಲುಗೆ ಇದ್ದ ಕಾರಣದಿಂದ ತುಸು ಸಿಟ್ಟಿನಿಂದ “ತಪ್ಪು ನಿಮ್ಮದೇ ಸರ್ ನಿಮಗೆ ಕಷ್ಟ ಇದೆ ಎಂದು ಅವಳಿಗೆ ಗೊತ್ತಿದೆಯಲ್ಲ ನೀವೇ ಬಾಯಿ ಬಿಟ್ಟು ಹೇಳಬೇಕಿತ್ತು ನನಗೆ ಇಷ್ಟು ಸಾಧ್ಯವಿಲ್ಲ ಎಂದು ತಪ್ಪು ನಿಮ್ಮದೇ. ತಂದೆ ತಾಯಿಯಾಗಿ ಮಕ್ಕಳನ್ನು ಸರಿದಾರಿಗೆ ತರುವುದು ನಮ್ಮ ಜವಾಬ್ದಾರಿ. ನಮ್ಮ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವುದು ನಮ್ಮ ಹೊಣೆ. ಹೇಗೆ ಗುರುಗಳು ಮಕ್ಕಳನ್ನು ತಿದ್ದುತ್ತಾರೋ… ತಿದ್ದುವಾಗ ಬೈಯಬಹುದೋ ಹೊಡೆಯಬಹುದೋ ಅವೆಲ್ಲವೂ ಅವರ ಏಳಿಗೆಗಾಗಿಯೇ ತಾನೇ. ಅಂತೆಯೇ ನೀವೂ ನಿಧಾನವಾಗಿಯಾದರೂ ಹೇಳಬೇಕಿತ್ತು” ಎಂದೆ
“ಮಕ್ಕಳು ತಾವೇ ಅರ್ಥ ಮಾಡಿಕೊಳ್ಳಬೇಕು ಮೇಡಂ. ದೊಡ್ಡ ಮಕ್ಕಳು ಗದರಿಸಲು ಸಾಧ್ಯವೇ ?
ಅದೇ ನನ್ನ ಚಿಕ್ಕ ಮಗಳು ಅಕ್ಕನ ಮದುವೆಗೆಂದು ತನ್ನ ಆಫೀಸಿನಲ್ಲಿ ೨೦ ಲಕ್ಷ ಸಾಲ ಮಾಡಿ ನನ್ನ ಬೆನ್ನಿಗೆ ನಿಂತಿದ್ದಾಳೆ.
ಅವಳು ಇಲ್ಲದಿದ್ದರೆ ನಾನು ಎಲ್ಲಿ ಹೋಗಬೇಕಿತ್ತು, ಇಬ್ಬರನ್ನು ಒಂದೇ ರೀತಿಯಲ್ಲಿ ಬೆಳೆಸಿದ್ದೇನೆ. ಆದರೆ ಅವರು ಬೆಳೆಯುವ ರೀತಿ ಅವರವರಿಗೆ ಬಿಟ್ಟಿದ್ದು” ಎಂದರು. ಆದರೂ ನಾನು ಬೇಸರದಿಂದಲೇ ಹೇಳಿದೆ “ನೀವು ಬಾಯಿ ಬಿಟ್ಟು ಹೇಳದಿದ್ದರೆ ಅರ್ಥವಾಗದವರಿಗೆ ಅರ್ಥವಾಗುವುದು ಹೇಗೆ? ಕೆಲವರು ಸೂಕ್ಷ್ಮ ಇರುತ್ತಾರೆ ಅರ್ಥ ಮಾಡಿಕೊಳ್ಳುತ್ತಾರೆ ಕೆಲವರಿಗೆ ಬಾಯಿ ಬಿಟ್ಟೇ ಹೇಳಬೇಕು. ನೀವು ಹೇಳಿಯೂ ಅವಳು ಕೇಳದಿದ್ದರೆ ಅದು ಎರಡನೇ ವಿಚಾರ. ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ನಾವು ಎಡವುತ್ತಿದ್ದೇವೆ ಎಂದು ನನಗೆ ಅನುಮಾನ ಬಂದಿದೆ” ಎಂದು ಹೇಳಿದೆ. ಆತ ಏನು ಮಾತನಾಡಲಾರದೆ ಕಣ್ಣು ತುಂಬಿ ತಲೆಯನ್ನು ತಗ್ಗಿಸಿ ಜೇಬಿನಿಂದ ಕರ್ಚೀಫು ತೆಗೆದು ಕೊಂಡು ಒರೆಸಿಕೊಳ್ಳತೊಡಗಿದರು.
ಅದೇ ಕ್ಷಣದಲ್ಲಿ ನನ್ನ ಮುಂದೆ ಎಜುಕೇಶನ್ ಲೋನ್ ವಿಚಾರಕ್ಕೆ ಎಂದು ನಿಂತಿದ್ದ ಹುಡುಗಿ ಒಬ್ಬಳು “ಮೇಡಂ ಏನ್ ಮೇಡಂ ಎಂಥ ಮಕ್ಕಳು ಗಂಡು ಮಕ್ಕಳಿಗೆ ಕೆಲವೊಮ್ಮೆ ಅರ್ಥವಾಗುವುದಿಲ್ಲ ಎಂದರೆ ಸರಿ ಆದರೆ ಹೆಣ್ಣು ಮಕ್ಕಳು ತಂದೆ ತಾಯಿಯರ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡು ಹೀಗಾದರೆ ಹೇಗೆ? ನಾನು ಪರದೇಶದಲ್ಲಿ ವಿದ್ಯೆ ಕಲಿಯಬೇಕೆಂದು ಹೊರಡುತ್ತಿದ್ದೇನೆ ಅದಕ್ಕಾಗಿ ಸಾಲ ಕೇಳಲು ಬಂದಿದ್ದೆ. ಕೆಲಸ ಸಿಗುವ ತನಕ ಅಪ್ಪ ಬಡ್ಡಿಯನ್ನು ಕಟ್ಟುತ್ತಾರೆ ಕೆಲಸ ಸಿಕ್ಕ ನಂತರ ನಾನು ಅಸಲನ್ನು ತೀರಿಸುವುದು ಎಂದು ನಾನು ಭಾವಿಸಿದ್ದೆ ಆದರೆ ಇವರ ಮಾತು ಕೇಳಿ ನನಗೆ ರಿಯಲೈಸ್ ಆಗಿದೆ. ಅಪ್ಪ ಟೆಂಪೋ ಇಟ್ಟುಕೊಂಡಿದ್ದಾರೆ. ಅವರಿಗೆ ಬಡ್ಡಿ ಕಟ್ಟಲು ಎಷ್ಟು ಕಷ್ಟವಾಗಬಹುದು? ಆದ್ದರಿಂದ ನಾನು ಕೆಲಸಕ್ಕೆ ಸೇರಿದ ಮೇಲೆ ಅಪ್ಪ ಕಟ್ಟಿದ ಅಷ್ಟು ಬಡ್ಡಿಯನ್ನು ಅಪ್ಪನಿಗೆ ಹಿಂತಿರುಗಿಸಬೇಕು ಎಂದು ಅವರ ಮಾತು ಕೇಳಿ ನನಗೆ ಗೊತ್ತಾಗಿದೆ. ತಂದೆ ತಾಯಿಯರು ತಮ್ಮ ಜೀವ ಸವೆಸಿ ನಮ್ಮನ್ನು ಬೆಳೆಸುವಾಗ ನಾವು ಹೀಗೆ ನಿರ್ದಯಿಗಳಾಗುವುದು ಎಷ್ಟು ಸರಿ ಎನ್ನುವ ಪ್ರಶ್ನೆ ನನಗೆ ಈಗ ಅನ್ನಿಸುತ್ತಿದೆ” ಎಂದು ಹೇಳಿದಳು.
ಒಬ್ಬರ ನೋವಿನಿಂದ ಮತ್ತೊಬ್ಬರು ಪಾಠ ಕಲಿತರಲ್ಲ ಇದಕ್ಕಿಂತ ದೊಡ್ಡ ಪರಿವರ‍್ತನೆ ಬೇರೆ ಬೇಡವೇ ಬೇಡ ಎಂದು ನನಗೆ ಆ ಕ್ಷಣ ಅನಿಸಿತು. ಬ್ಯಾಂಕ್ ಎಂದರೆ ಕೇವಲ ಹಣ ಕೊಟ್ಟು ಕೊಡುವುದಲ್ಲ ಇಂತಹ ಅನೇಕ ಪ್ರಸಂಗಗಳಿಗೂ ಸಾಕ್ಷಿಯಾಗುತ್ತದೆ . . . ಸಾರ‍್ಥಕವಾಯಿತು ಎನಿಸಿತು.
ಈ ಎಲ್ಲ ಸಂಭಾಷಣೆ ನಡೆಯುವಾಗ ಅಲ್ಲಿ ೭೦ರ ವಯಸ್ಸಿನ ಒಬ್ಬರು ಪಿಂಚಣಿದಾರರು ಕುಳಿತಿದ್ದರು. ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು.
ಕಳೆದ ವಾರ ಅವರ ಮನೆಗೆ ಅವರ ಇಬ್ಬರು ಶಿಷ್ಯೆಯರು ತಮ್ಮ ಮಕ್ಕಳೊಂದಿಗೆ ಇವರನ್ನು ನೋಡಲು ಮಾತನಾಡಿಸಲು ಬಂದಿದ್ದರು.
ಸುಮಾರು ೨ ಗಂಟೆಗಳ ಹರಟೆ ನಡೆಯಿತು. ಮಕ್ಕಳಿಗೂ ಅದೇನೋ ಸಂಭ್ರಮ ನಮ್ಮ ಟೀಚರ್ ನಮಗೆ ಗೊತ್ತು ನಮ್ಮ ತಾಯಿಯ ಟೀಚರು ಇದ್ದಾರೆ. ಅವರು ಹೇಗಿದ್ದಾರೆ ಎನ್ನುವ ಕುತೂಹಲ ಜೊತೆಗೆ ಅದೇನೋ ಆಸಕ್ತಿ. ಇವರೊಂದಿಗೆ ಮಕ್ಕಳಂತೆ ಬೆರೆತ ಆ ಟೀಚರ್ ನೋಡಿ ಈ ಪುಟ್ಟ ಮಕ್ಕಳಿಗೂ ತುಂಬಾ ಖುಷಿಯಾಯಿತು. ಶಿಷ್ಯೆಯರ ಮಕ್ಕಳನ್ನು ತಮ್ಮ ಮೊಮ್ಮಕ್ಕಳ ಹಾಗೆ ಪ್ರೀತಿಯಿಂದ ಮಾತನಾಡಿಸಿದಾಗ ಅವೂ ಇವರಿಗೆ ಹೊಂದಿಕೊಂಡು ಇವರ ಜೊತೆ ಆ ಆಟ ಈ ಆಟ ಎಂದೆಲ್ಲ ಆಡಿದವಂತೆ .
ಇವರು ಮಾಡಿಕೊಟ್ಟ ತಿಂಡಿಯನ್ನು ತಿಂದು ಅಜ್ಜಿ ಮಾಡಿಕೊಟ್ಟ ತಿಂಡಿಯಂತೆ ಎಂದು ಸಂಭ್ರಮಿಸಿದರಂತೆ .
ಹೊರಡುವಾಗ ಒಂದು ಮಗು ಆಶೀರ‍್ವಾದ ಮಾಡಿ ನನಗೆ- ನಾನು ನಿಮ್ಮಂತೆ ಟೀಚರ್ ಆಗಬೇಕು ಎಂದು ಆಶೀರ‍್ವದಿಸಿ ಎಂದು ಕೇಳಿದಂತೆ.
ಮತ್ತೊಂದು ಮಗು ತನ್ನ ಕೈಯಲ್ಲಿದ್ದ ಪೆನ್ನನ್ನು ಇವರಿಗೆ ನೀಡಿ ನಾನು ದೊಡ್ಡ ಲೇಖಕನಾಗಬೇಕು ಎಂದು ಹಾರೈಸಿ ಅಜ್ಜಿ ಎಂದು ಕೇಳಿದಂತೆ.
ಅಜ್ಜಿ ಎಂದು ಕರೆದ ಮಾತು, ನಾನು ಟೀಚರ್ ಆಗಬೇಕು ಎನ್ನುವ ಆ ಆದರ್ಶದ ಮಾತು ಹಾಗೂ ದೊಡ್ಡ ಲೇಖಕನಾಗಬೇಕು ಎಂದು ಬಯಸಿ ಹಿರಿಯರಿಗೆ ನಮಸ್ಕರಿಸಿ ಆಶೀರ‍್ವಾದ ಕೇಳಿದ ಅವರ ಸಂಸ್ಕಾರ ನೋಡಿ ಇವರಿಗೆ ಕಣ್ತುಂಬಿ ಬಂದಿತ್ತಂತೆ, “ಮನಸ್ಸು ತುಂಬಿ ಹಾರೈಸಿದೆ. ಮಕ್ಕಳು ಅವರ ಆಸೆಯಂತೆಯೇ ಆಗಲಿ, ದೊಡ್ಡ ಹೆಸರು ಮಾಡಲಿ, ಯಶಸ್ಸು ಕೀರ‍್ತಿ ಗಳಿಸಲಿ ಎಂದು ತಲೆ ಸವರಿ ಆಶೀರ‍್ವದಿಸಿದೆ” ಎಂದರು.
ತಮ್ಮ ಮಕ್ಕಳಿಗೆ ತಮ್ಮ ಶಿಷ್ಯರು ಕಲಿಸಿರುವ ಸಂಸ್ಕಾರ ನೋಡಿ ಗುರುಗಳಿಗೆ ಮನಸ್ಸು ತುಂಬಿತಂತೆ. ಅದನ್ನು ನಮ್ಮೊಂದಿಗೆ ಹಂಚಿಕೊಂಡರು. ಪ್ಯಾರಿಸ್ ಒಲಂಪಿಕ್ಸ್ 2024: ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದ ಮನು ಭಾಕರ್
ಈ ಎರಡು ಮೂರು ಘಟನೆಗಳು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ನಾವು ಪೋಷಕರಾಗಿ ಎಡವುತ್ತಿದ್ದೇವೆಯೋ ಅಥವಾ ಗುರುಗಳಾಗಿ ಎಡವುತ್ತಿದ್ದೇವೆಯೋ ಅಥವಾ ಸಮಾಜ ಹಾಗೆ ಹಾದಿ ತಪ್ಪಿಸುತ್ತಿದೆಯೋ..? ಎಲ್ಲಿ ತಪ್ಪಾಗುತ್ತಿದೆ..? ಎಲ್ಲಿ ಸರಿ ಮಾಡಬೇಕು..? ಏನು ಮಾಡಿದರೆ ಎಲ್ಲರೂ ಆ ಪುಟ್ಟ ಮಕ್ಕಳಂತೆ ಆಗುತ್ತಾರೆ ಎಂಬ ಪ್ರಶ್ನೆ ಈಗಲೂ ಕೊರೆಯುತ್ತಿದೆ ಉತ್ತರಕ್ಕೆ ಹೊಸ ದಾರಿ ಹುಡುಕಬೇಕಿದೆ.
-ಡಾ.ಶುಭಶ್ರೀಪ್ರಸಾದ್
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು