November 22, 2024

Newsnap Kannada

The World at your finger tips!

WhatsApp Image 2024 09 04 at 11.35.26 AM

ಗುರು ಎಂಬೊ ಅರಿವಿನ ವಿಸ್ತಾರ….

Spread the love

‘ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ”.
ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಬಹು ಹಿಂದೆಯೇ ಹೇಳಿದ್ದಾರೆ,  ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನಿಗೆ  ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ.

ಅಂತಹ ನಮ್ಮ ಪರಂಪರೆಯಲ್ಲಿ ಗುರುವನ್ನು-
ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ….

ಎಂಬ ನಾಮಸ್ಮರಣೆಯ ಮೂಲಕ ದಿನವು ನನೆಯುಕೆಲಸಕ್ಕಿಂತ ವಿದ್ಯಾಭ್ಯಾಸದ ಅವಧಿಯಲ್ಲಿ ಹಲವರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಜೀವನದ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ, ಗುರುವಿನ ಇರುವಿಕೆ, ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿದೆ.
ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಶಿಕ್ಷಕರನ್ನು ನೆನೆಸಿಕೊಂಡು ಈ ಪ್ರೇರಣೆಯನ್ನು ಸದಾ ಹಸಿರಾಗಿರಿಸಲು ವರ್ಷದಲ್ಲೊಂದು ದಿನ ನಮ್ಮ ಗುರುಗಳಿಗಾಗಿ ಮೀಸಲಿಡುವ ಮೂಲಕ ಇವರನ್ನು ಸದ್ಗುರುವಿನ ರೂಪದಲ್ಲಿ ಸ್ಮರಿಸುತ್ತೇವೆ.


ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಎಲ್ಲಾ ಶಿಕ್ಷಕರಿಗೆ ಗೌರವಪೂರ್ವಕವಾಗಿ ಮುಡಿಪಾಡಿಗಲಾಗಿದೆ.ಶಿಕ್ಷಕರ ದಿನಾಚರಣೆಯನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನ, ದಿನಾಂಕದಂದು ಆಚರಿಸಲಾಗುತ್ತದೆ. ಭಾರತದಲ್ಲಿ, ಇದನ್ನು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಪ್ರಸಿದ್ಧ ವಿದ್ವಾಂಸ, ಭಾರತ ರತ್ನ ಪುರಸ್ಕೃತ, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.


ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯ ಹುದ್ದೆಯನ್ನೂ ಅಲಂಕರಿಸಿದ್ದರು. ರಾಷ್ಟ್ರಪತಿಯಾದ ಬಳಿಕ ಅವರ ಅಭಿಮಾನಿಗಳು ಐದರಂದು ಅವರ ಜನ್ಮದಿನ ಆಚರಿಸಲು ಉತ್ಸುಕರಾಗಿದ್ದಾಗ ಇವರು ಈ ಮನವಿಯನ್ನು ನಯವಾಗಿಯೇ ತಿರಸ್ಕರಿಸಿ ಈ ದಿನವನ್ನು ತಮ್ಮ ಜನ್ಮದಿನಕ್ಕೂ ಮಿಗಿಲಾಗಿ ಶಿಕ್ಷಕರ ದಿನವಾಗಿ ಆಚರಿಸಿದರೆ ತಮಗೆ ಹೆಚ್ಚು ಗೌರವ ಲಭಿಸಿದಂತಾಗುತ್ತದೆ ಎಂದಿದ್ದರು. ಈ ಮನವಿಯನ್ನು ಮನ್ನಿಸಿದ ಸರ್ಕಾರ 1962ರಿಂದ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ. ಸಾಧನೆಗೈದ ಶಿಕ್ಷಕರನ್ನು ಗುರುತಿಸಿ ಅವರಿಗೆ ಸನ್ಮಾನ,ಪ್ರಶಸ್ತಿ ನೀಡಿ ಅಧಾರಿಸುವ ಕಾರ್ಯವು ಸರ್ಕಾರ, ಮತ್ತು ಸಮಾಜ ಸಂಘಟನೆಗಳು ಈ ದಿನ ಮಾಡುತ್ತವೆ.


ಭಾರತದ ಮೇಧಾವಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಬೇಕು ಎಂಬ ನಂಬಿಕೆಯನ್ನು ಹೊಂದಿದ್ದ ರಾಧಾಕೃಷ್ಣನ್ ರವರು ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಇವರ ಸೇವೆಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಪ್ರಾರಂಭಿಸಿದ- ‘Radhakrishnan Chevening Scholarships’ ವಿದ್ಯಾರ್ಥಿ ವೇತನ ಪ್ರಮುಖವಾಗಿದೆ.

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ “ರೋಲ್ ಮಾಡೆಲ್”, ಅವರೇ “ಸೂಪರ್ ಮ್ಯಾನ್”. ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರ ಸ್ಥಿತಿ

ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ ಮಕ್ಕಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿತವ್ಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟಕರ,
ಗುರು ಶಿಷ್ಯ ಪರಂಪರೆಗೆ ಹೆಸರಾದ ಈ ಸಮಾಜದಲ್ಲಿ  ಶಿಕ್ಷಕರ ಇಂದಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. 
ಇಂದಿನ ಸಮಾಜದಲ್ಲಿ ಶಿಕ್ಷಕರಿಗೆ ಶಿಷ್ಯರಿಂದಾಗಲಿ ಅಥವಾ ಅವರ ಪೋಷಕರಿಂದಾಗಲಿ ಯಾವುದೇ ದೊಡ್ಡ ಗೌರವವನ್ನು ಪಡೆಯುವ ಸಂದರ್ಭಗಳಿಲ್ಲ.


ಶಿಕ್ಷಕರನ್ನು ಕಾರಣಕ್ಕೆ ಅತ್ಯಂತ ಗುಮಾನಿಯಿಂದ ತಾತ್ಸಾರದಿಂದ ಕಾಣುವ ಸಂದರ್ಭಗಳೇ ಹೆಚ್ಚಾಗಿವೆ. 
ಆಸಕ್ತಿ ಇಲ್ಲದ ಕೆಲವು ಶಿಕ್ಷಕರು ಇಂದು ಸಂಯಮ, ಸಹನೆ, ಆದರ್ಶ, ಪ್ರೀತಿ, ವಾತ್ಸಲ್ಯ ಎಂಬ ಬಹುಮುಖ್ಯ ಮೌಲ್ಯಗಳನ್ನು ಮರೆತಿರುವುದಂತೂ ಅಪ್ಪಟ ಸತ್ಯ. 


ಶಿಕ್ಷಕರು ಪಾಠ ಹೇಳುವ ಕೆಲಸಕ್ಕಿಂತ ಅವರನ್ನು ಬಿಸಿಯೂಟ ನಿರ್ವಹಣೆ, ಜನಗಣತಿ ಕಾರ್ಯ, ಮತದಾರರಪಟ್ಟಿ ಪರಿಷ್ಕರಣೆ, ವರದಿ ತಯಾರಿಸುವುದು, ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಅಗಿದಿಯೋಇಲ್ಲವೋ ದಾಖಲಿಸುವ ಕೆಲಸ,ಕಚೇರಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.


ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ಶಾಲೆಯಲ್ಲಿದ್ದರೂ ಸರಿಯಾದ ಕ್ರಮದಲ್ಲಿ ತರಗತಿಗಳನ್ನು ತೆಗೆದು ಕೊಳ್ಳದಿರುವುದು ಅವುಗಳ ಜಾಗದಲ್ಲಿ, ರಾಜಕಾರಣ, ಜಾತಿ ಪ್ರೀತಿ ಬೆಳೆಸಿಕೊಳ್ಳುವುದು
ಹಿರಿಯ ಅಧಿಕಾರಿಗಳ ಜೊತೆ ನಂಟು, ಒಳಗೊಳಗೇ ಏನೋ ಒಡಂಬಡಿಕೆ, 
ಅಸೋಸಿಯೇಷನ್ಗಳ ಹೆಸರಲ್ಲಿ ಓಡಾಟ, ಪಾಠ ಮಾಡುವುದಕ್ಕಿಂತ ಶಿಕ್ಷಕರ ಸಮಸ್ಯೆಗಳ ಹೈಲೈಟ್ ಮಾಡೋದು  ತಮ್ಮ ಸಂಬಳ ಸಾರಿಗೆ ಬಡ್ತಿಗಳ ವಿಷಯಕ್ಕೆ ತಿಂಗಳಲ್ಲಿ ಹದಿನಾಲ್ಕು ದಿವಸವೂ ಬಿಎಓ ಆಫೀಸುಗಳಿಗೆ ಅಲೆದಾಟ,
ಆಯಾ ದಿನದ ಪಾಠ ಮಾಡುವ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಮಾಡಿ ಮುಗಿಸುವುದಷ್ಟೇ ತಮ್ಮ ಶಿಕ್ಷಕ ವೃತ್ತಿಯ ಸೀಮಿತ ಎಂದು ಅರಿತುಕೊಂಡಂತಿದೆ. 


ಮಕ್ಕಳು ಗಲಾಟೆ ಮಾಡುತ್ತಿದ್ದರೆ ಪಾಠ ಮಾಡಲು ಹೇಗಾಗುತ್ತದೆ. ಅದಕ್ಕಾಗಿ ಈ ಶಿಕ್ಷಕರು ಶಿಕ್ಷಿಸಲು ಮುಂದಾಗುತ್ತಾರೆ. ಸಿಟ್ಟಿನ ಭರದಲ್ಲಿ ತಮ್ಮ ದಂಡನೆಯ ಸ್ವರೂಪ ಹೇಗಿರುತ್ತದೆ ಎಂದರೆ ಅರಿಯಲಾಗದಷ್ಟು ವಿವೇಚನೆ ಕಳಕೊಂಡು ಬಿಡುತ್ತಾರೆ.


ಕಲಿಯಲು ಶಾಲೆಗಳಿಗೆ ಬಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಅನೇಕ ಶಿಕ್ಷಕರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ.

ಶಿಕ್ಷಕರ  ಸವಾಲುಗಳು ಮೊದಲಿಗೆ ನಮ್ಮ ವೃತ್ತಿಗಿರುವ ಪ್ರಾಮುಖ್ಯತೆಯನ್ನು ಮನಗಾಣಬೇಕಿದೆ. ಅಷ್ಟೇ ಅಲ್ಲ ಅದನ್ನು ತಮ್ಮ ಕಾರ್ಯಗಳ ಮೂಲಕ ಪ್ರಕಟಮಾಡಬೇಕಿದೆ.


ನಾವು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿದ್ದೇವೆ.  ಎಜುಸ್ಯಾಟ್ ಮೂಲಕ ಸಿಗುತ್ತಿರುವ ಪಾಠಗಳು, ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಅನಂತವಾದ ಮಾಹಿತಿ ಸಿಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಕಾಲಕ್ಕೆ ಅನುಗುಣವಾದ ವಿಷಯಜ್ಞಾನ ಹಾಗೂ ಸಂವಹನ ತಂತ್ರ, ಕಲಿಕೆಯ ಮಾದರಿಗಳನ್ನು ಹುಡುಕಿಕೊಳ್ಳಬೇಕಿದೆ.


ಬೆಳಗಿನ ವಿಷಯ ಸಂಜೆಗೆ ಹಳತೆನಿಸುವ ಈ ಕಾಲದಲ್ಲಿ ದಿನದಿನವೂ ಹೊಸಹೊಸದನ್ನು ಕಲಿತರೆ ಮಾತ್ರವೇ ನಮ್ಮ ಅಸ್ತಿತ್ವ ಉಳಿಯುತ್ತದೆ. ಇಲ್ಲವಾದರೆ  ಸಂಬಳಕ್ಕೆ ಮಾತ್ರ ದುಡಿಯುವ ಶಿಕ್ಷಕರೆನಿಸಿಕೊಳ್ಳುತ್ತೇವೆ.ಗುರು ಎಂದೂ ಲಘುವಾಗಬಾರದು. ಗುರು ಎಂದೂ ಸ್ವತಃ ಶಿಷ್ಯವರ್ಗದಿಂದ ಗೌರವಕ್ಕಾಗಿ ಹಾತೊರೆಯಬಾರದು; ಬದಲಾಗಿ ಗೌರವವನ್ನು ಸಂಪಾದಿಸಬೇಕು.


ಡಾ.ರಾಧಾಕೃಷ್ಣನ್, ಕುದ್ಮುಲ್ ರಂಗರಾಯರು, ಜ್ಯೋತಿಬಾಪುಲೆ,ಸಾವಿತ್ರಿ ಬಾಪುಲೆರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ, ಸವೆಸುತ್ತಲು ಇದ್ದಾರೆ.


ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆಯು ಶಿಕ್ಷಕನ ಶ್ರಮ ಇದ್ದೆ ಇರುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೊ, ಮಕ್ಕಳ ಭೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಸಹ ಅಷ್ಟೇ ಮುಖ್ಯ. ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಮುಂತಾದವುಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುವನೇ ಆದರ್ಶ ಶಿಕ್ಷಕ.


ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಟುವಟಿಕೆ ಆಧಾರಿತ ಕಲಿಕಾ ಕ್ರಮವನ್ನು ರೂಢಿಸಿಕೊಂಡ ಶಿಕ್ಷಕ, ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅವರನ್ನು ಶಾಲೆಯತ್ತಾ ಆಕರ್ಷಿಸುತ್ತಾನೆ. ಶಿಕ್ಷಕನು ಕಲಿಸುವಿಕೆಗೆ ಬೇಲಿಹಾಕಿ ಕೊಂಡರೆ ಯಾವುದೇ ವ್ಯಕ್ತಿಯು ಪರಿಪೂರ್ಣ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ನಮ್ಮ ಎಷ್ಟೊ ರಾಷ್ಟ್ರ ನಾಯಕರು ತಮ್ಮ ಕೆಲಸದಲ್ಲಿ ಬಿಡುವು ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುವುದರಲ್ಲಿ ಇರುವ ಸವಿಯನ್ನು ಅನುಭವಿಸಿದ್ದಾರೆ.


ಜನರ ರಾಷ್ಟ್ರಪತಿ ಎಂದೇ ಪ್ರಸಿದ್ಧರಾದ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ ರವರು ತಮ್ಮ ಜೀವನದ ಅಂತಿಮ ಕ್ಷಣವನ್ನು ಶಿಲ್ಲಾಂಗ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟನಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಲೆ ಕೊನೆಯುಸಿರೆಳೆದರು. ಶಿಕ್ಷಕರೆಂದು ನೆನಪಿಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು ಅದು ಈಡೆರಿತು.

ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ?.ಎಂಬುದನ್ನು ಕೂಡ ಯೋಚಿಸಬೇಕಿದೆ.


ವಿದ್ಯಾಭ್ಯಾಸದ ಅವಧಿಯಲ್ಲಿ ಹಲವಾರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಜೀವನದ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ, ಗುರುವಿನ ಇರುವಿಕೆ, ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿದೆ .


ಗುರು ಎಂದೂ ಲಘುವಾಗಬಾರದು. ಗುರು ಎಂದೂ ಸ್ವತಃ ಶಿಷ್ಯವರ್ಗದಿಂದ ಗೌರವಕ್ಕಾಗಿ ಹಾತೊರೆಯಬಾರದು; ಬದಲಾಗಿ ಗೌರವವನ್ನು ಸಂಪಾದಿಸಬೇಕು.


ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ, ಗೌರವ ನೀಡಲು ನಮಗೆ ಶಿಕ್ಷಕರ ದಿನವೇ ಬೇಕೆಂದಿಲ್ಲ. ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ ಎನ್ನುತ್ತಾ.


ಶಿಕ್ಷಕ ದಿನಾಚರಣೆಯ ಶುಭಾಶಯಗಳು.

image 1

ಡಾ.ಗುರುಪ್ರಸಾದ ರಾವ್ ಹವಲ್ದಾರ್
ಉಪನ್ಯಾಸಕರು ಮತ್ತು ಲೇಖಕರು

Copyright © All rights reserved Newsnap | Newsever by AF themes.
error: Content is protected !!