ಗುರುಬ್ರಹ್ಮ ಗುರುರ್ವಿಷ್ಣುಃ, ಗುರುದೇವೋ ಮಹೇಶ್ವರಃ, ಗುರುಸಾಕ್ಷಾತ್ ಪರ ಬ್ರಹ್ಮ, ತಸ್ಮೈಶ್ರೀ ಗುರವೇ ನಮಃ
ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಮಹತ್ವ ನೀಡಲಾಗಿದೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆಷಾಡ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆಯಂದು ಗುರುಪೌರ್ಣಿಮಾ ಆಚರಿಸಲಾಗುತ್ತದೆ.
ವೇದವ್ಯಾಸರು ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು.ವೇದ ವ್ಯಾಸರು ಉತ್ತಮ ಲೇಖಕ, ಜ್ಞಾನಿ, ಗುರು ಹಾಗೂ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಇವರ ಪಾತ್ರ ಶ್ರೇಷ್ಠವಾಗಿದೆ. ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.
ಗುರುವಿನ ಆಶೀರ್ವಾದ ಅಥವಾ ಹಾರೈಕೆಯು ಇದ್ದರೆ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು” ಅಂದರೆ ಅಂಧಕಾರ ಅಥವಾ ಅಜ್ಞಾನ. “ರು” ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ.
ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪುರಂದರದಾಸರು ಹೇಳಿರುವ ಹಾಗೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂಬುದು ಇದರ ಅರ್ಥ.
ಚಾತುರ್ಮಾಸ
ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.
ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಗುರು ಪೂರ್ಣಿಮಾ ಮಹತ್ವ
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.
ತಾಯಿಯೇ ಮಗುವಿನ ಮೊದಲ ಗುರು
ಹುಟ್ಟಿದ ಮಗುವಿಗೆ ಆರಂಭದಲ್ಲಿ ಎಲ್ಲವನ್ನೂ ತಿಳಿಸಿಕೊಡುವವಳು ತಾಯಿ. ತಾಯಿಯೇ ಮಗುವಿನ ಮೊದಲ ಗುರು. ತಾಯಿ ಉತ್ತಮ ಜ್ಞಾನ ಹಾಗೂ ಸಂಸ್ಕಾರದ ವರ್ತನೆಯನ್ನು ತಿಳಿದಿದ್ದರೆ ಮಗುವು ಸಹ ಅವುಗಳನ್ನು ಕಲಿಯುತ್ತದೆ. ಜೀವನದಲ್ಲಿ ಅತ್ಯುತ್ತಮ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಂತರದ ಹಂತದಲ್ಲಿ ವಿದ್ಯೆ ಕಲಿಸುವ ಗುರುವು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಮನುಷ್ಯನನ್ನು ಅತ್ಯಾಧುನಿಕ ವ್ಯಕ್ತಿಯನ್ನಾಗಿ ಮಾಡಲು ಉತ್ತಮ ಗುಣಗಳನ್ನು ಮತ್ತು ಅವರ ಬೋಧನೆಗಳನ್ನು ನೀಡುವವರು ಗುರುಗಳು.
ವ್ಯಕ್ತಿಯ ಮೊದಲ ಗುರು ಶಿಕ್ಷಕ ಅಥವಾ ತಾಯಿ
ಒಬ್ಬ ವ್ಯಕ್ತಿಯ ಮೊದಲ ಗುರು ಶಿಕ್ಷಕ ಅಥವಾ ತಾಯಿ. ತಾಯಿ ಮಗುವಿಗೆ ಜೀವನದ ನಿಜವಾದ ಮೌಲ್ಯವನ್ನು ಅರ್ಥಮಾಡಿಸಿಕೊಡುತ್ತಾಳೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ತಿಳಿಸಿಕೊಡುವಳು. ಬಾಲ್ಯದಲ್ಲಿ ಅವಳು ನೈತಿಕ ಮೌಲ್ಯಗಳನ್ನು ಅವನಲ್ಲಿ ತುಂಬುತ್ತಾಳೆ, ನಂತರ ಶಿಕ್ಷಕರ ರೂಪದಲ್ಲಿ ಗುರುಗಳಿಂದ ಮಗುವಿಗೆ ಭೋದನಾ ಶಿಕ್ಷಣ ದೊರೆಯುತ್ತದೆ. ಆದ್ದರಿಂದ ಗುರುಗಳನ್ನು ಗೌರವಿಸುವ ಮೂಲಕ ಈ ದಿನದ ಆಚರಣೆ ಅತ್ಯಗತ್ಯವಾಗುತ್ತದೆ. ಗುರುಗಳು-ಪೋಷಕರು, ಶಿಕ್ಷಕರು ಮತ್ತು ನಮ್ಮ ಹಿತೈಷಿಗಳ ಸರಿಯಾದ ಬೋಧನೆಗಳು ಮತ್ತು ಆಶೀರ್ವಾದಗಳು ಮಾತ್ರ ನಮ್ಮನ್ನು ಸುಸಂಸ್ಕೃತ ಮತ್ತು ಪರಿಷ್ಕೃತ ವ್ಯಕ್ತಿಯನ್ನಾಗಿ ಮಾಡಬಹುದು.
ಗೌತಮ ಬುದ್ಧನ ಪ್ರಥಮ ಧರ್ಮೋಪದೇಶ
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧ ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ.
ಒಟ್ಟಿನಲ್ಲಿ ಮನುಷ್ಯ ಸರಿಯಾದ ದಾರಿಯಲ್ಲಿ ನಡೆದು ಬದುಕಿನಲ್ಲಿ ಏನಾದರೂ ಮಹತ್ತರ ಸಾಧಿಸಲು ಅವನ ಮುಂದೆ ನಿಶ್ಚಲವಾದ ಗುರಿ ಬೇಕು. ಹಿಂದೆ ಬೆಂಗಾವಲಾಗಿದ್ದು ಮನ್ನಡೆಸಲು ಸರಿಯಾದ ಗುರು ಇದ್ದೇ ಇರಬೇಕು. ಯಾರು ಸರಿಯಾದ ಗುರು ಮತ್ತು ಗುರಿಯನ್ನು ಆರಿಸಿಕೊಳ್ಳುತ್ತಾರೋ ಅವರ ಜೀವನ ನಿಜಕ್ಕೂ ಧನ್ಯ! ಯಶಸ್ಸು ಅವರ ಪಾಲಿಗೆ ಶತಸಿದ್ದ .
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್