December 22, 2024

Newsnap Kannada

The World at your finger tips!

guru sisya

ಕತ್ತಲೆಯಿಂದ ಬೆಳಕಿಗೆ ದಾರಿ ತೋರುವಾತನೆ ಗುರು …….

Spread the love
  • ಇಂದು ಗುರು ಪೂರ್ಣಿಮೆ

ಗುರುರ್ಬ್ರಹ್ಮ, ಗುರುರ್ವಿಷ್ಣು | ಗುರುರ್ದೇವೋ ಮಹೇಶ್ವರಾ||
ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀ ಗುರವೇ ನಮಃ||

ನಮ್ಮೆಲ್ಲರ ಜೀವನದ ಮೊಟ್ಟ ಮೊದಲ ಗುರು ತಾಯಿ, ತಿಳಿದೋ ತಿಳಿಯದೆಯೋ ಮಾಡಿದ ಪ್ರಮಾದಗಳಿಗೆ ಕ್ಷಮೆಯಾಚಿಸಿ ಕೃತಜ್ಞತಾಪೂರ್ವಕವಾಗಿ ನಮನಗಳನ್ನು ಸಲ್ಲಿಸುವ ಮೂಲಕ ಗುರುಪೂರ್ಣಿಮೆಯನ್ನು ಶುಭಾರಂಭ ಮಾಡೋಣ ಹಾಗೂ ನಮ್ಮ ಬದುಕಿಗೆ ದಾರಿ ದೀಪವಾದ ಗುರುಗಳಿಗೆ ವಂದಿಸುವುದರ ಮೂಲಕ ಈ ಗುರುಪೂರ್ಣಿಮೆಯ ಆಚರಣೆಯನ್ನು ಮಾಡೋಣ. ಈ ಗುರುಪೂರ್ಣಿಮೆ ಹಿಂದೂ ಸಂಸ್ಕೃತಿಯಲ್ಲಿ ಬಹಳ ಪವಿತ್ರವಾದ ಹಬ್ಬವಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ, ಇದನ್ನು ಆಷಾಢ ಪೂರ್ಣಿಮಾ ಮತ್ತು “ವ್ಯಾಸ ಪೂರ್ಣಿಮಾ” ಎಂದೂ ಕರೆಯುತ್ತಾರೆ. ಚಾತುರ್ಮಾಸದಲ್ಲಿ ಬರುವ ಈ ಗುರುಪೂರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ.

ಸಂತ ಕಭೀರರ ಪ್ರಕಾರ ಗುರು ಹಾಗೂ ಗೋವಿಂದರು ಜೊತೆ ಜೊತೆಯಾಗಿ ಬಂದು ನಿಂತರೆ ಮೊದಲು ಗುರುವಿಗೆ ನಮಸ್ಕರಿಸಬೇಕು, ಏಕೆಂದರೆ ಭಗವಂತನ ಇರುವಿಕೆಯನ್ನು ತೋರಿಸುವ ಮಾರ್ಗದರ್ಶಕರವರು, ಗುರುಗಳಿದ್ದರೆ ಮಾತ್ರ ದೇವರನ್ನು ಕಾಣಬಹುದು, ಯಾವುದೇ ವ್ಯಕ್ತಿ ಯಶಸ್ಸನ್ನು ಕಾಣಬೇಕಾದರೆ ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಇದೆ, ನಮ್ಮ ಮೊದಲ ಗುರು ತಾಯಿಯು ಜೀವನದ ಸಾರವನ್ನು ಅರ್ಥೈಸಿದರೆ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಗುರುಗಳು ನೀಡುತ್ತಾರೆ, ಸಕಲ ವಿದ್ಯಾ ಪಾರಂಗತರಾಗಲು ಗುರುವಿನ ಮಾರ್ಗದರ್ಶನ ಬೇಕೇಬೇಕು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವ ದಾಸವಾಣಿಯಲ್ಲಿ ದಾಸಶ್ರೇಷ್ಟರಾದ ಪುರಂದರದಾಸರು ಮನುಷ್ಯನ ಜೀವನದಲ್ಲಿ ಗುರುವಿನ ಶ್ರೇಷ್ಟತೆ ಹಾಗೂ ಮಹತ್ವವನ್ನು ಸಾರಿ ತಿಳಿಸಿದ್ದಾರೆ.

“ಗುರು” ಎಂದರೆ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವರು, ಗುರು ಅನ್ನುವ ಶಬ್ದ “ಗು” ಮತ್ತು “ರು” ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು” ಅಂದರೆ ಅಂಧಕಾರ ಅಥವಾ ಅಜ್ಞಾನ, “ರು” ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ, ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ಕಳೆಯುವವರೆಂದರ್ಥ. ಗುರು ಎಂದರೆ ಸನ್ನಿಧಿ, ಸಾನಿಧ್ಯ ಮಾತ್ರ ಬಾಂದವ್ಯವಲ್ಲ, ಗುರುವಿನ ಸಾನಿಧ್ಯವು ಮಹತ್ತಾದ ವಿಶಾಲತೆಯಿಂದ ಕೂಡಿದ್ದು ಅಂತ್ಯವಿಲ್ಲದಂತದ್ದು, ನಿರಂತರವಾಗಿರುವುದು, ಸುಸ್ಥಿರವಾಗಿರುವಂತದ್ದು ಹಾಗೂ ಕೇಂದ್ರೀಕೃತವಾಗಿರುವಂತದ್ದು, ಭಗವಂತ ನಮ್ಮೊಡನೆ ಇದ್ದಾನೆ ಎಂಬುದನ್ನು ಅರ್ಥಪಡಿಸುವಂತಹ, ಧೈರ್ಯ ತುಂಬುವಂತಹ ಒಂದು ಸ್ಥಿತಿ ಏನಿದೆ ಅದನ್ನೇ ಗುರು ಸಾನಿಧ್ಯ ಎಂದು ಹೇಳಬಹುದು.

ಸಂಪೂರ್ಣ ಮಾನವ ಕುಲದ ಗುರುಗಳಾದ ಗುರು ವೇದವ್ಯಾಸರು ಜನಿಸಿದ್ದು ಇದೇ ದಿನದಂದು. ದ್ವಾಪರಾಯುಗದ ಮಹಾಭಾರತದ ಕತೃಗಳಾದ ಮಹಾಗುರು ವ್ಯಾಸ ಮಹರ್ಷಿಗಳು ಪರಾಶರ ಋಷಿಗಳು ಹಾಗೂ ಸತ್ಯವತಿಯ ಪುತ್ರರಾಗಿ ಆಷಾಡಮಾಸದ ಪೂರ್ಣಿಮೆಯ ದಿನದಂದು ಜನಿಸಿದರು, ಇವರು ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸರೆಂದು ನಾಮಾಂಕಿತಗೊಳ್ಳುತ್ತಾರೆ, ಬ್ರಹ್ಮ ಸೂತ್ರವನ್ನು ಬರೆಯಲು ಪ್ರಾರಂಭಿಸಿದ್ದು ಸಹ ಆಷಾಡ ಮಾಸದ ಪೌರ್ಣಮಿಯ ದಿನದಂದೇ, ವೇದವ್ಯಾಸರನ್ನು ಸಂಪೂರ್ಣ ಮಾನವ ಕುಲದ ಗುರುಗಳೆಂದೇ ಗೌರವಿಸಲಾಗುತ್ತದೆ, ಇವರ ಗೌರವಾರ್ಥವಾಗಿ ಆಷಾಡಮಾಸದಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆಂಬ ಉಲ್ಲೇಖವಿದೆ, ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ್ದರೆಂದು ಹೇಳಲಾಗಿದೆ, ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿದೆ.

“ವರ್ಣ ಮಾತ್ರಂ ಕಲಿಸಿದಾತಂ ಗುರು” ಎಂದರೆ ಒಂದಕ್ಶರ ಕಲಿಸಿಕೊಟ್ಟವರೂ ಕೂಡ ಗುರುವೇ ಆಗುತ್ತಾರೆಯೆಂದ ಮೇಲೆ ನಮ್ಮ ಜೀವನದ ಪಯಣದಲ್ಲಿ ನಮಗೆ ಜ್ನಾನ, ವಿದ್ಯೆ ಹಾಗೂ ಮಾರ್ಗದರ್ಶನ ನೀಡಿರುವ ಎಲ್ಲ ಗುರುಗಳನ್ನು ಸ್ಮರಿಸಬೇಕಾದ ದಿನವಿದು, ಗುರು-ಶಿಷ್ಯ ಸಂಬಂಧವು ಅತ್ಯಂತ ದೃಢವಾದ ಮತ್ತು ಶುದ್ಧವಾದ ಸಂಬಂಧವಾಗಿದೆ. ಗುರುವಿಲ್ಲದೆ ನಮ್ಮ ಗುರಿ ತಲುಪುವುದು ತುಂಬಾ ಕಷ್ಟ, ಯಾವುದೇ ಮನುಷ್ಯನು ಜೀವನದಲ್ಲಿ ದೊಡ್ಡವರಾಗಬೇಕು, ಯಶಸ್ಸು ಗಳಿಸಬೇಕು ಎಂದರೆ ಎತ್ತರದ ಗುರಿಯಿರಬೇಕು, ಗುರಿಯಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ನಮ್ಮ ಗುರುಗಳ ಮೇಲೆ ನಂಬಿಕೆ ಶ್ರದ್ದೆಯಿರಬೇಕು, ಒಬ್ಬ ಗುರುವಿಗೆ ತನ್ನ ಶಿಷ್ಯನ ಪೂರ್ತಿ ಜೀವನವನ್ನು ಬದಲಾಯಿಸಿಬಿಡುವ ಸಾಮರ್ಥ್ಯವಿರುತ್ತದೆ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯ ಯಶಸ್ವಿಯಾಗಲು ಸಾಧ್ಯ.

ಯಾವುದೇ ವ್ಯಕ್ತಿಯು ಎಷ್ಟೇ ಶಾಸ್ತ್ರಗಳನ್ನು ಓದಿದ್ದರೂ ಸಹ ಆ ವ್ಯಕ್ತಿಯು ತನ್ನ ಗುರುಗಳಿಗೆ ತನ್ನನ್ನು ತಾನು ಸಮರ್ಪಿಸದಿದ್ದರೆ ಯಾವುದೇ ಪ್ರಯೋಜನವಿಲ್ಲ. ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದಾದದ್ದು, ನಾವು ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಮಹಾನ್ ವ್ಯಕ್ತಿಗಳೆಲ್ಲಾ ತಮ್ಮ ಹಿಂದೆ ಗುರುವನ್ನು ಹೊಂದಿದ್ದರೆಂಬುದು ನಮ್ಮ ಅರಿವಿಗೆ ಬರುತ್ತದೆ, ಅವರು ಯಶಸ್ವಿಯಾಗಲು ಮತ್ತು ಎಲ್ಲಾ ಕೌಶಲ್ಯಗಳನ್ನು ಪಡೆಯಲು ಸಾಧ್ಯವಾದದ್ದು ಗುರುವಿನ ಮಾರ್ಗದರ್ಶನದಿಂದ ಮಾತ್ರ. ಉದಾಹರಣೆಗೆ ಹೇಳುವುದಾದರೆ ಶ್ರೀರಾಮ-ವಶಿಷ್ಟ, ವಿಶ್ವಾಮಿತ್ರ, ಶ್ರೀಕೃಷ್ಣ-ಸಾಂದೀಪನಿ, ಅರ್ಜುನ್-ದ್ರೋಣ, ಚಂದ್ರಗುಪ್ತ-ಚಾಣಕ್ಯ, ಶಿವಾಜಿ-ಸಮರ್ಥರಾಮದಾಸ್, ಸ್ವಾಮಿ ವಿವೇಕಾನಂದ-ಶ್ರೀರಾಮಕೃಷ್ಣ ಪರಮಹಂಸ..ಇತ್ಯಾದಿ.

“ನಹಿಃ ಜ್ಞಾನೇನ ಮುಕ್ತಿಃ” ಜ್ಞಾನವಿಲ್ಲದೆ ಮುಕ್ತಿ ಲಭಿಸದೆಂದು ಮಹಾತ್ಮರು ಮಾನವನಿಗೆ ದಾರಿ ತೋರಿದ್ದಾರೆ, ಜನ್ಮಜನ್ಮಾಂತರದಿಂದ ಕರ್ಮ ಸಂಸ್ಕಾರಗಳ ಜಂಜಾಟದೊಳಗೆ ಮುಳುಗಿರುವ ಮಾನವನು ಕರ್ಮ ಬಂಧನದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಬ್ರಹ್ಮನಲ್ಲಿ ಐಕ್ಯವಾಗಲು ಸಾಧ್ಯವಿಲ್ಲ, ಆದರೆ ಈ ಕರ್ಮ ಬಂಧನದ ಸಂಕೋಲೆಯನ್ನು ಸದ್ಗುರುವು ತೋರುವ ಆಧ್ಯಾತ್ಮಿಕ ಮಾರ್ಗದಿಂದ ಕಳಚಿಕೊಳ್ಳಲು ಸಾಧ್ಯವಾಗುವುದು. ಆಧ್ಯಾತ್ಮಿಕ ಜ್ಞಾನ ಮತ್ತು ಪಾರಮಾರ್ಥಿಕ ಜ್ಞಾನವನ್ನು ತಿಳಿಸಿಕೊಡುವಂತಹ ಸದ್ಗುರುಗಳು ಮಾತ್ರ ಮುಕ್ತಿ ಮಾರ್ಗದಲ್ಲಿ ನಮ್ಮನ್ನು ಕರೆದೊಯ್ಯಲು ಸಾಧ್ಯ. ಶಿಷ್ಯನ ಮನದಾಳದ ತೊಳಲಾಟವನ್ನು ಗ್ರಹಿಸಿ ಸಮಸ್ಯೆಗಳನ್ನು ಪರಿಹರಿಸಿ ಪರಬ್ರಹ್ಮನಲ್ಲಿ ಪ್ರೀತಿ ಗುರುವಿನಲ್ಲಿ ಭಕ್ತಿ ಮೂಡಿಸುತ್ತಾರೆ.ಇದನ್ನು ಓದಿ – ‘ಈಕು’ ಈಗ ನೆನಪು ಮಾತ್ರ……

ಗುರುಪೂರ್ಣಿಮೆಯಂದು ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಪಠಣ ಮಾಡುವುದರ ಮೂಲಕ ಹಾಗೂ ಅವರ ಭೋಧನೆಗಳನ್ನು ಮನನ ಮಾಡುವುದರ ಮೂಲಕ ಗುರುಗಳಿಗೆ ಗೌರವವನ್ನು ಸಲ್ಲಿಸಬೇಕು. ಹಲವು ದೇವಾಲಯಗಳಲ್ಲಿ, ಮಠಗಳಲ್ಲಿ, ಆಶ್ರಮಗಳಲ್ಲಿ, ಗುರು ಪೀಠಗಳಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಹೋಮ ಹವನಾಧಿಗಳನ್ನು ಆಯೋಜಿಸಿರುತ್ತಾರೆ. ಆಧ್ಯಾತ್ಮಿಕ ಪಥದಲ್ಲಿ ಸಾಗಲು ಗುರುವಿನ ಮಾರ್ಗದರ್ಶನವು ತುಂಬಾ ಅತ್ಯಗತ್ಯ. ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ವೃಂದದಲ್ಲೂ ಮಹತ್ವವಿದೆ, ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಸ್ಮರಿಸುವ ಮೂಲಕ ಈ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ ಹಾಗೆ ನಾವು ಕೂಡ ನಮ್ಮ ಬದುಕಿನ ಯಶಸ್ಸಿಗೆ ದಾರಿ ದೀಪವಾದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ಗುರುಗಳನ್ನು ಸ್ಮರಿಸುತ್ತಾ ಗುರುಗಳ ಕೃಪೆಗೆ ಪಾತ್ರರಾಗೋಣ.

shobavati R

✍🏻️ಶೋಭಾವತಿ ಆರ್
ಕುಣಿಗಲ್

Copyright © All rights reserved Newsnap | Newsever by AF themes.
error: Content is protected !!