‘ಡಿಕೆಶಿ ನನ್ನ ಬಹಳ ದಿನದ ಸ್ನೇಹಿತರು. ಮೊನ್ನೆ ಅವರ ಮನೆ ಸೇರಿ 14 ಕಡೆ ದಾಳಿ ಮಾಡಿದ್ದರಿಂದ ಅವರು ನೊಂದುಕೊಂಡಿದ್ದಾರೆ. ಹಾಗಾಗಿ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಸದಾಶಿವನಗರದ ಡಿಕೆಶಿ ಮನೆಯಲ್ಲಿ ಅವರನ್ನು ಭೇಟಿಯಾದ ಜಿ.ಟಿ. ದೇವೇಗೌಡ ಅವರು 1 ಗಂಟೆಗೂ ಹೆಚ್ಚು ಕಾಲ ಅವರ ಜೊತೆ ಚರ್ಚೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ನನ್ನ ಹಾಗೂ ಡಿಕೆಶಿ ಅವರ ಸ್ನೇಹ ಬಹಳ ದಿನಗಳದ್ದು. ಜೆಡಿಎಸ್-ಕಾಂಗ್ರೆಸ್ ಸಂಮಿಶ್ರ ಸರ್ಕಾರವಿದ್ದಾಗ ನಾವು ಇಬ್ಬರೂ ಸಚಿವರಾಗಿ ಕೆಲಸ ಮಾಡಿದ್ದೇವೆ. ಆಗ ಶಾಸಕರು ಪಕ್ಷಾಂತರ ಆಗುವ ಉದ್ದೇಶದಿಂದ ಬಾಂಬೆ ಮತ್ತು ಹೈದರಾಬಾದ್‌ಗಳಿಗೆ ಹೋಗಿ ಕುಳಿತಿದ್ದರು. ಅವರನ್ನು ಕರೆತರುವ ಪ್ರಯತ್ನವನ್ನು ನಾವಿಬ್ಬರೂ ಮಾಡಿದ್ದೆವು. ಇಂತಹ ಸಮಯದಲ್ಲಿ ಸಿಬಿಐ ರೈಡ್ ಆಗಬಾರದಿತ್ತು. ಇದು ತಪ್ಪು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಹೇಳಿದರು.
ಪ್ರಸ್ತುತ ಜಿಟಿಡಿ ಜೆಡಿಎಸ್ ಶಾಸಕರಾಗಿದ್ದರೂ ಪಕ್ಷದಿಂದ ಹಿನ್ನೆಲೆಯಲ್ಲಿ ಉಳಿದುಕೊಂಡಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು ‘ನನಗೆ ಉಪಮುಖ್ಯಮಂತ್ರಿಯಾಗುವ ಆಸೆ ಇರಲಿಲ್ಲ. ಆಗುವ ಹಾಗಿದ್ದರೆ ಬಿಜೆಪಿಯಿಂದಲೇ ಆಗುತ್ತಿದ್ದೆ. ನನಗೇ ಮೊದಲ ಆಫರ್ ಬಂದಿತ್ತು. ಆದರೆ ನಾವೆಲ್ಲ ಸೇರಿಕೊಂಡು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿದೆವು. ಅಂತಹ ನಾವೇ ಅವರನ್ನು ಕುರ್ಚಿಯಿಂದ ಕೆಳಗಡೆ ಇಳಿಸ್ತೀವಾ?’ ಎಂದು ಹೇಳಿ ಜೆಡಿಎಸ್ ಮೇಲೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮುಂದಿನ ಚುಣಾವಣೆಯ ಬಗ್ಗೆ ಮಾತನಾಡಿದ ಅವರು, ‘ಚುಣಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಜನರು ನನ್ನನ್ನು ಒಂದೂವರೆ ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ನಾನು ಆವಾಗ ಯಾವ ಪಕ್ಷದ ಮೂಲಕ ಚುಣಾವಣೆಗೆ ನಿಲ್ಲುತ್ತೇನೋ? ಅದು ಕ್ಷೇತ್ರದ ಮತದಾರರಿಗೆ ಬಿಟ್ಟದ್ದು’ ಎಂದು ಮಾರ್ಮಿಕವಾಗಿ ಹೇಳಿದರು.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ