January 14, 2026

Newsnap Kannada

The World at your finger tips!

Dr K Sudhakar 1581670361

sudhakar picture

ಗ್ರಾಪಂ ಚುನಾವಣೆ ಮುಂದೂಡುವುದೇ ಲೇಸು : ಆರೋಗ್ಯ ಸಚಿವ ಡಾ.ಕೆ. ಸುಧಾಕರ್

Spread the love

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಹಬ್ಬ. ಆದರೆ ಕೋವಿಡ್ ಸಾಂಕ್ರಾಮಿಕದ ಈ ಸಮಯದಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್ ವರೆಗೂ ಗ್ರಾಪಂ( ಸ್ಥಳೀಯ ಸಂಸ್ಥೆಗಳ) ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರು ಚುನಾವಣೆ ಮೂಲಕ ತಮ್ಮ ಸೇವೆ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಈ ರೀತಿ ಜನಾದೇಶದ ಮೂಲಕ ನಡೆಯುವ ವ್ಯವಸ್ಥೆ ಪ್ರಜೆಗಳ ಪರವಾಗಿರುತ್ತದೆ. ಆದರೆ ಈ ಸಂದರ್ಭ ದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಎಲ್ಲ ಚಟುವಟಿಕೆಗಳಿಗೂ ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ಕೋವಿಡ್ ಸೋಂಕು ಮತ್ತಷ್ಟು ಹರಡುವ ಆತಂಕವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮಾರ್ಚ್ ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸರಿಯಲ್ಲ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಯಾವ ಕಾಲದಲ್ಲಿ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇನ್ನೂ ಅಧ್ಯಯನಗಳಾಗುತ್ತಿವೆ. ಚಳಿಗಾಲದಲ್ಲಿ ವೈರಸ್ ಹೇಗೆ ಹರಡುತ್ತದೆ ಎಂಬುದು ಕೂಡ ಇನ್ನೂ ತಿಳಿಯಬೇಕಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆದರೆ, ಜನರು ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮೊದಲಾದ ಕ್ರಮಗಳನ್ನು ಅನುಸರಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ವಿಧಾನಸಭೆಯ ಎರಡು ಮತ್ತು ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಜನರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ಎಡವುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಬದುಕಿನ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಒಳಿತು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!